ಮಂಡ್ಯ: ಮಾನಹಾನಿ ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರನ್ನು ಬಂಧನದ ಆದೇಶ ಇಲ್ಲದಿದ್ದರೂ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂಲಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪ್ರಕರಣವೊಂದರ ಸಂಬಂಧ ಇಬ್ಬರು ಪತ್ರಕರ್ತರ ವಿರುದ್ಧ ಬಂಧನ ವಾರೆಂಟ್ ಇಲ್ಲದಿದ್ದರೂ, ಪೊಲೀಸರು ಬಲವಂತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಮಾತನಾಡಿ, ಇಬ್ಬರು ಪತ್ರಕರ್ತರ ಪೈಕಿ ಒಬ್ಬರಿಗೆ ಬಂಧನ ವಾರೆಂಟ್ ಜಾರಿಯಾಗಿಲ್ಲ. ಮತ್ತೊಬ್ಬರಿಗೆ ಮೊದಲ ಮೂರು ಸಮನ್ಸ್ ಕೂಡ ತಲುಪಿಲ್ಲ. ಹೀಗಿದ್ದರೂ ಹೇಗೆ ನೀವು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೀರಾ? ಎಂದು ಪ್ರಶ್ನಿಸಿದರು.
ಮನವಿ ಸ್ವೀಕರಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹಲವು ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಾನು ಪತ್ರಕರ್ತರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುತ್ತೇನೆ ಎಂದು ಹೇಳಿದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕೆ.ಸಿ.ಮಂಜುನಾಥ್, ಕೃಷ್ಣಸ್ವರ್ಣಸಂದ್ರ, ಕೆ.ಎನ್.ರವಿ ನವೀನ್ ಚಿಕ್ಕಮಂಡ್ಯ, ಲೋಕೇಶ್, ಜೆ.ಎಂ.ಬಾಲಕೃಷ್ಣ, ಬಸವರಾಜ ಹೆಗ್ಗಡೆ, ಶ್ರೀನಿವಾಸ್, ಆನಂದ್, ನಂದನ್, ಚನ್ನಮಾದೇಗೌಡ, ರಾಘವೇಂದ್ರ, ಇತರರು ಉಪಸ್ಥಿತರಿದ್ದರು.