ಉತ್ತರಕನ್ನಡ ಜಿಲ್ಲೆಯ (Uttara kannada) ಅಂಕೋಲಾದ ಶಿರೂರು ಗುಡ್ಡಕುಸಿತ (Shiroru land slide) ದುರಂತ ಸಂಭವಿಸಿ 30 ದಿನಗಳೇ ಕಳೆದಿವೆ. ಒಟ್ಟು 11 ಮಂದಿಯ ಸಾವಿಗೆ ಕಾರಣವಾಗಿದ್ದ ದುರ್ಘಟನೆಯಲ್ಲಿ 8 ಮಂದಿ ಶವವಾಗಿ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಕಾರ್ಯ ಇನ್ನೂ ಮುಂದುವರೆದಿದೆ.

ಗಂಗಾವಳಿ ನದಿಯಲ್ಲಿ ಲಾರಿ ಇದೆ ಎನ್ನಲಾದ ಸ್ಥಳದಲ್ಲಿ ಶೋಧಕಾರ್ಯ ತೀವ್ರಗೊಳಿಸಲಾಗಿದೆ. ಕಳೆದೆರಡು ದಿನಗಳಿಂದ ಗಂಗಾವಳಿ ನದಿಯಲ್ಲಿ ಈಶ್ವರ್ ಮಲ್ಪೆ (Eshwar malpe), ನೌಕಾಪಡೆ, NDRF, SDRF ತಂಡಗಳು ಶೋಧ ಕಾರ್ಯವನ್ನ ನಡೆಸುತ್ತಿದ್ದು ಲಾರಿಯೊಂದರ ಕೆಲವೊಂದು ಭಾಗಗಳನ್ನ ಹೊರತೆಗೆಯಲಾಗಿದೆ.
ನೌಕಾಪಡೆ ನದಿಯಲ್ಲಿ ಕೈಗೊಂಡಿದ್ದ ಸೋನಾರ್ ಸ್ಕ್ಯಾನಿಂಗ್ (Sonar scaning) ಆಧರಿಸಿ ಈಶ್ವರ್ ಮಲ್ಪೆ ಹಾಗೂ ನೌಕಾನೆಲೆಯ ಮುಳುಗುತಜ್ಞರು ನದಿಯಾಳದಲ್ಲಿ ಮುಳುಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ನದಿಯಾಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಹಾಗೂ ಕಲ್ಲು ತುಂಬಿದ್ದು ನೀರು ಮಣ್ಣುಮಿಶ್ರಿತವಾಗಿದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಮುಳುಗು ತಜ್ಞರಾದ ಈಶ್ವರ್ ಮಲ್ಪೆ ತಿಳಿಸಿದ್ದಾರೆ.