
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಜಯಂತಿಯ ಪ್ರಯುಕ್ತ ಇಂದು ಮೆಜೆಸ್ಟಿಕ್ ರೈಲು ನಿಲ್ದಾಣದ ಸಮೀಪದಲ್ಲಿರುವ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸ್ವಾತಂತ್ರ್ಯ ಸೇನಾನಿಗೆ ಗೌರವ ಸಮರ್ಪಿಸಿದರು.
ಈ ವೇಳೆ ಸಿಎಂ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡೇ ಭಾಷಣ ಮಾಡಿದ್ದು,ಅಚ್ಚರಿಗೆ ಕಾರಣವಾಯಿತು.
ಬಿಬಿಎಂಪಿವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವೇಳೆ ಅರ್ಚಕರು ಸಿಎಂ ಅವರಿಗೆ ನಿಂಬೆ ಹಣ್ಣು ಕೊಟ್ಟಿದ್ದಾರೆ.ಇದೇ ನಿಂಬೆಹಣ್ಣು ತಗೆದುಕೊಂಡು ಕೈಮುಗಿದ ಸಿಎಂ, ನಿಂಬೆಹಣ್ಣನ್ನು ಇಟ್ಟುಕೊಂಡಿದ್ದಾರೆ. ಬಳಿಕ ವೇದಿಕೆ ಭಾಷಣದುದ್ದಕ್ಕೂ ನಿಂಬೆಹಣ್ಣು ಜೊತೆಯಲ್ಲೇ ಇಟ್ಟುಕೊಂಡಿದ್ದಾರೆ.ಸದ್ಯ ಈ ಘಟನೆಯು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಶ್ರೀಗಳು, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.