ಬೆಂಗಳೂರು: ʼಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರುʼ ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ 2 ದಿನಗಳ ಅದ್ಧೂರಿ ʼಕುಂದಾಪ್ರ ಕನ್ನಡ ಹಬ್ಬʼವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ.17ರ ಸಂಜೆ 5ಕ್ಕೆ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.3ರಲ್ಲಿರುವ ವೈಟ್ ಪೆಟಲ್ಸ್‌ನಲ್ಲಿ ಆ. 17 ಮತ್ತು 18ರಂದು ನಡೆಯಲಿರುವ ಈ ಹಬ್ಬದ ಕುರಿತು ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ಅವರು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಶನಿವಾರ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಊರ ಗೌರವದ ಸನ್ಮಾನ ಇರಲಿದೆ. ಅಂದು ಮುಖ್ಯ ಅತಿಥಿಗಳಾಗಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ಮಾರಣಕಟ್ಟೆ ಎಂ.ಎಸ್. ಮಂಜ ಚಾರಿಟಬಲ್ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ.ಲಿ. ಎಂಡಿ ಕಿಶೋರ್ ಕುಮಾರ್ ಹೆಗ್ಡೆ ಇರಲಿದ್ದಾರೆ.
ಭಾನುವಾರ ಸಂಜೆ 5ರ ಸಮರೋಪ ಸಮಾಂಭದಲ್ಲಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಡಾ.ಮಾಲತಿ ಕೆ. ಹೊಳ್ಳ ಅವರಿಗೆ ಊರ ಗೌರವದ ಸನ್ಮಾನ ಇರಲಿದೆ. ಆ ದಿನ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಎಂ.ಆರ್.ಜಿ. ಸಮೂಹದ ಅಧ್ಯಕ್ಷ ಕೆ.
ಪ್ರಕಾಶ್ ಶೆಟ್ಟಿ, ಯುನಿವರ್ಸಲ್ ಗ್ರೂಪ್‌ನ ಉಪೇಂದ್ರ ಶೆಟ್ಟಿ, ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ಸೌತ್ ಫೀಲ್ಡ್ ಪೇಂಟ್ಸ್ ಪ್ರೈ. ಲಿ. ಎಂಡಿ ಶಿವರಾಮ ಹೆಗ್ಡೆ, ಚೆಪ್ ಟಾಕ್‌ನ ಗೋವಿಂದಬಾಬು ಪೂಜಾರಿ ಇರಲಿದ್ದಾರೆ.ಒಂದು ಲಕ್ಷ ಜನರು ಸೇರುವ ನಿರೀಕ್ಷೆಇದು ಕುಂದಾಪ್ರ ಕನ್ನಡ ಹಬ್ಬವಾದರೂ ಸಮಸ್ತ ಕನ್ನಡಿಗರ ಸಂಭ್ರಮ.ಹೀಗಾಗಿ ಈ ಹಬ್ಬಕ್ಕೆ ನಾವು ಎಲ್ಲರನ್ನೂ ಆಹ್ವಾನಿಸುತ್ತಿದ್ದು, ಎರಡು ದಿನಗಳ ಹಬ್ಬದಲ್ಲಿ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ.
ಒಂದು ಸಾವಿರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಅದಾಗ್ಯೂ ಅನುಕೂಲದ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ಮೂಲಕ ಆಗಮಿಸುವುದು ಉತ್ತಮ. ಶನಿವಾರ ಮಧ್ಯಾಹ್ನ 2ರಿಂದ ರಾತ್ರಿ 10.30 ಮತ್ತು ಭಾನುವಾರ ಬೆಳಗ್ಗೆ 9.30ರಿಂದ ರಾತ್ರಿ 10.30ರ ವರೆಗೆ ನಿರಂತರ ಕಾರ್ಯಕ್ರಮಗಳಿದ್ದು, ಈ ಹಬ್ಬಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ ಎಂದು ದೀಪಕ್ ಹೇಳಿದರು.
ಹಬ್ಬಕ್ಕೆ ತಾರಾ ಮೆರುಗುಕುಂದಾಪುರ ಕನ್ನಡ ಹಬ್ಬದಲ್ಲಿ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಅವರನ್ನೂ ಆಹ್ವಾನಿಸಲಾಗಿದ್ದು, ಅವರೂ ಬರುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.ಇದೇ ಮೊದಲುಈ ಹಬ್ಬ ಕುಂದಾಪುರ ಸಂಸ್ಕೃತಿಯನ್ನು ವಿಶೇಷ ರೀತಿಯಲ್ಲಿ ಪ್ರಸ್ತುತಿ ಪಡಿಸುವ ಪ್ರಯತ್ನ. ಆ ಪೈಕಿ ಪ್ರಮುಖ ಆಕರ್ಷಣೆ ಆಗಿ ಜೋಡಾಟ ಇರಲಿದೆ. ಇದು ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಒಂದೇ ಪ್ರಸಂಗ ಏಕಕಾಲದಲ್ಲಿ ಎರಡು ರಂಗಸ್ಥಳಗಳಲ್ಲಿ ಸ್ಪರ್ಧೆಯ ಮೇಲೆ ನಡೆಯುವ ಈ ಪ್ರದರ್ಶನವನ್ನು ನೋಡಲು ಊರಿನಿಂದಲೇ 2 ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ ಭಾನುವಾರ ಸಂಜೆ 7.30ಕ್ಕೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಂದ ʼರವಿ ಬಸ್ರೂರ್ ನೈಟ್ಸ್ʼ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಇರಲಿದೆ.