ಕೇರಳದಲ್ಲಿ ಗುಡ್ಡ ಕುಸಿತದಿಂದ ನೂರಾರು ಲೆಕ್ಕಕ್ಕೆ ಸಿಗದಷ್ಟು ಸಾವು ನೋವು ಸಂಭವಿಸಿದ್ದು, ಕಳೆದು ಹೋಗಿರುವ ಜನರನ್ನು ಹುಡುಕುವುದಕ್ಕೂ ಸಾಧ್ಯವಾದ ಪರಿಸ್ಥಿತಿ ನಿರ್ಮಾಣ ಆಗಿದೆ. ನದಿಯೇ ತನ್ನ ಪಥ ಬದಲಿಸಿ ನಾಲ್ಕು ಊರುಗಳನ್ನೂ ನುಂಗಿದ್ದು ಜನರು ಮಣ್ಣಿನಡಿ ಹೂತು ಹೋಗಿದ್ದಾರೆ. ಅದೆಷ್ಟೋ ಕುಟುಂಬಗಳು ಗುರುತು ಸಿಗದೆ ಶವಗಳನ್ನು ಮಣ್ಣು ಮಾಡಲಾಗಿದೆ. ನೂರಾರು ಜನರು ನಿರಾಶ್ರಿತರಾಗಿದ್ದಾರೆ. ಇದೀಗ ಈ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಭಾರತೀಯ ಹೆಮ್ಮೆಯ ಇಸ್ರೋ ಸಂಸ್ಥೆ ಮುಂದಾಗಿದೆ.

ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಿದೆ.. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದೇ ಇಸ್ರೋ SSLV-D3 ಲಾಂಚ್ ಮಾಡಲು ಸಜ್ಜಾಗಿದೆ. Small Satellite Launch Vehicle ಪ್ರಾಯೋಗಿಕ ಉಡಾವಣೆ ಈಗಾಗಲೇ 2 ಬಾರಿ ನಡೆದಿದ್ದು, ಇದು ಅಂತಿಮ ಸುತ್ತಿನ ಪ್ರಾಯೋಗಿಕ ಲಾಂಚ್ ಆಗಲಿದೆ.. ಆಗಸ್ಟ್ 15ರಂದು ಶ್ರೀ ಹರಿಕೋಟದಿಂದ ಬೆಳಗ್ಗೆ 9.17ಕ್ಕೆ ಲಾಂಚ್ ಮಾಡಲಿದ್ದಾರೆ. ಹವಾಮಾನ ವೈಪರೀತ್ಯ ಎದುರಾದರೆ ಉಡಾವಣೆ ದಿನಾಂಕ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.

ಪದೇ ಪದೇ ನೈಸರ್ಗಿಕ ವಿಕೋಪದಿಂದ ನಲುಗಿರುವ ಕೇರಳಕ್ಕೆ ಹೊಸ ರೀತಿಯಲ್ಲಿ ರಕ್ಷಣಾ ಕವಚ ಹೊದಿಸಲು ಇಸ್ರೋ ಸಂಸ್ಥೆ ಮುಂದಾಗಿದೆ. ಕೇರಳದ ವಯನಾಡಲ್ಲಿ ಇಸ್ರೋ ಸ್ಯಾಟ್ ಲೈಟ್ ಸರ್ವೆ ಮಾಡಲು ಮುಂದಾಗಿದ್ದು, ಜಿಯೋಗ್ರಾಫಿಕಲ್ ಸ್ಯಾಟಲೈಟ್ ಸರ್ವೆಯಿಂದ ಮುಂದಿನ ದಿನಗಳಲ್ಲಿ ಆಗುವ ಅನಾಹುತದ ಬಗ್ಗೆ ಮಾಹಿತಿಯನ್ನು ಮುಂಚಿತವಾಗಿಯೇ ನೀಡಲು ಸಹಕಾರಿ ಆಗಲಿದೆ ಎನ್ನಲಾಗಿದೆ. ಯಾವ ಪ್ರದೇಶದಲ್ಲಿ ಭೂಕುಸಿತ ಆಗುತ್ತದೆ..? ಯಾವ ಸಮಯದಲ್ಲಿ ಏನು ಆಗುತ್ತೆ..? ಅನ್ನೋ ಮಾಹಿತಿ ಸಿಗಲಿದೆ ಎನ್ನಲಾಗಿದೆ.

ಈಗಾಗಲೇ ಉತ್ತರಖಂಡ್ನಲ್ಲಿ ಈ ರೀತಿಯ ಸ್ಯಾಟಲೈಟ್ ಸರ್ವೆ ಮಾಡಲಾಗಿದ್ದು, ಇಸ್ರೋ ಯಶಸ್ಸು ಸಾಧಿಸಿದೆ. ಇದೀಗ ಕೇರಳದಲ್ಲೂ ಉತ್ತರಾಖಂಡ್ ಮಾದರಿಯಲ್ಲೇ ಸ್ಯಾಟಲೈಟ್ ಸರ್ವೇ ಮಾಡಲು ಇಸ್ರೋ ಸಂಸ್ಥೆ ತಯಾರಿ ಮಾಡಿಕೊಂಡಿದೆ. ಸ್ವಾತಂತ್ರ್ಯ ದಿನವೇ ಮತ್ತೊಂದು ಸಾಧನೆ ಮುಡಿಗೇರಿಸಿಕೊಳ್ಳಲು ಇಸ್ರೋ ಸಜ್ಜಾಗುತ್ತಿದ್ದು. ಭಾರತೀಯರಾದ ನಮ್ಮೆಲ್ಲರ ಪಾಲಿಗೆ ಶುಭ ದಿನ ಆಗಲಿ ಎಂದು ಪ್ರಾರ್ಥನೆ ಮಾಡಬೇಕಿದೆ.
ಕೃಷ್ಣಮಣಿ