
ರಾಜ್ಯದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಜಿದ್ದಿಗೆ ಬಿದ್ದಂತೆ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರು ಒಂದು ಕಡೆಯಿಂದ ಪಾದಯಾತ್ರೆ ನಾಡುತ್ತಾ ಸಾಗುತ್ತಿದೆ. ಕಾಂಗ್ರೆಸ್ ನಾಯಕರು ಒಂದು ದಿನ ಮುಂಚೆಯೇ ಜನಾಂದೋಲನ ಸಭೆ ಮಾಡುತ್ತಾ ವಿರೋಧ ಪಕ್ಷಗಳಿಗೆ ಪ್ರಶ್ನೆಗಳನ್ನು ಮಾಡುತ್ತಾ ಮುಜುಗರ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮಾರನೆ ದಿನ ಮೈತ್ರಿ ನಾಯಕರು ಉತ್ತರದ ಜೊತೆಗೆ ಮರು ಪ್ರಶ್ನೆ ಮಾಡುತ್ತ ಇದೀಗ ಮಂಡ್ಯ ತಲುಪಿದ್ದಾರೆ. ಆದರೆ ವಿರೋಧ ಪಕ್ಷಗಳು ಹಾಗು ಸ್ವತಃ ಆಡಳಿತರೂಢ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ಯಾ..? ಅನ್ನೋ ಅನುಮಾನ ಮೂಡುವಂತೆ ಮಾಡುತ್ತಿದೆ.

ವಿರೋಧ ಪಕ್ಷಗಳ ನಾಯಕರು ಮುಡಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಮುಡಾದಲ್ಲಿ ಸಿಎಂ ಪತ್ನಿಗೆ 14 ಸೈಟ್‌ಗಳನ್ನು ಕೊಡಲಾಗಿದೆ ಎನ್ನುವುದು ಬಿಜೆಪಿ ನಾಯಕರ ಆರೋಪ. ಆದರೆ ಆ ಸೈಟ್‌ಗಳನ್ನು ಕೊಟ್ಟಿದ್ದು ಯಾವ ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರ. ಸರ್ಕಾರ ಇದ್ದಾಗ ತಾವೇ ಸೈಟ್‌ಗಳನ್ನು ಕೊಟ್ಟು ಇದೀಗ ವಿರೋಧ ಪಕ್ಷಕ್ಕೆ ಬಂದಾಗ ಆರೋಪ ಮಾಡುತ್ತಾ ಪಾದಯಾತ್ರೆ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡುತ್ತದೆ. ಸಿದ್ದರಾಮಯ್ಯ ಪತ್ನಿಗೆ ಸೈಟ್ ಕೊಟ್ಟಿರುವುದು ಅಕ್ರಮವಾಗಿದ್ದರೆ ಅದನ್ನು ವಾಪಸ್ ಪಡೆದುಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಆದರೆ ವ್ಯಕ್ತಿ ತೇಜೋವಧೆ ಮಾಡುತ್ತ ಪಾದಯಾತ್ರೆ ಮಾಡುತ್ತಿರುವುದು ಸರಿಯಲ್ಲ ಎನಿಸುತ್ತದೆ.

ಒಂದು ಸರ್ಕಾರ ಆಡಳಿತ ನಡೆಸುವಾಗ ಪ್ರಶ್ನೆ ಮಾಡುವ ಅವಕಾಶ ಕಳೆದುಕೊಳ್ಳುತ್ತದೆ. ಆ ಪ್ರಶ್ನೆಗೆ ಉತ್ತರವನ್ನು ಹೇಳುವ ಜವಾಬ್ದಾರಿ ಆ ಸರ್ಕಾರದ ಮೇಲೆಯೇ ಇರುತ್ತದೆ. ಹಾಗಾಗಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಮಾಡುತ್ತ ಊರಿಂದ ಊರಿಗೆ ಹೋಗುವುದು ಕೂಡ ಅಸಹ್ಯಕರವಾಗಿದೆ. ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುವ ಉಪಮುಖ್ಯಮಂತ್ರಿಗಳು ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗೆ ಹಾಕುವ ಕೆಲಸ ಮಾಡಬೇಕೇ ಹೊರತು, ಆರೋಪ ಮಾಡುವುದು ತರವೇ..? ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮೀ ಯೋಜನೆಯ ಹಣ ಹಾಕಿಲ್ಲ ಎಂದು ಎಲ್ಲಾ ಸಭೆಗಳಲ್ಲೂ ಜನರು ಕಿಡಿಕಾರುತ್ತಿದ್ದಾರೆ. ಹೀಗಿರುವಾಗ ವಿರೋಧ ಪಕ್ಷಗಳ ವಿರುದ್ಧ ಜನಾಂದೋಲನ ಸಭೆ ನಿರಾರ್ಥಕ ಎನ್ನಬಹುದು.

ವಿರೋಧ ಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ವಾಲ್ಮೀಕಿ ನಿಗಮದಲ್ಲಿ 87 ಕೋಟಿ ರೂಪಾಯಿ ಹಗರಣ ಆಗಿದೆ ಎಂದು. ಆದರೆ ವಿರೋಧ ಪಕ್ಷಗಳ ಪಾದಯಾತ್ರೆ ಮುಡಾ ಕಡೆಗೆ ಸಾಗಿದೆ. ಅದರ ಬದಲು ವಾಲ್ಮೀಕಿ ನಿಗಮದ ಹಗರಣದ ತನಿಖೆ ಹಾಗು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಆಗ್ರಹ ಮಾಡಿದ್ದರೆ ಒಳಿತಾಗುತ್ತಿತ್ತು. ರಾಜ್ಯದ ಜನರ ತೆರಿಗೆ ಹಣವಾದರೂ ಬರುವ ಸಾಧ್ಯತೆ ಇತ್ತು. ಆದರೆ ವಿರೋಧ ಪಕ್ಷಗಳಿಗೆ ಸರ್ಕಾರ ಒಪ್ಪಿಕೊಂಡಿರುವ ಹಗರಣದ ಮೇಲೆ ಆಸಕ್ತಿಯೇ ಇಲ್ಲದಂತಾಗಿದೆ. ಉಪಮುಖ್ಯಮಂತ್ರಿ ವಿರೋಧ ಪಕ್ಷಗಳನ್ನು ಕೆಣಕುತ್ತಾ ಮುಡಾ ಕಡೆಗೆ ಹೆಜ್ಜೆ ಹಾಕುವಂತೆ ಮಾಡುತ್ತಿದ್ದಾರೆ. ಉಪಮುಖ್ಯಮಂತ್ರಿಯ ತಾಳಕ್ಕೆ ತಕ್ಕಂತೆ ವಿರೋಧ ಪಕ್ಷಗಳು ಹೋರಾಟ ನಡೆಯುತ್ತಿದೆ ಎನ್ನುವ ಆರೋಪವೂ ಇದೆ. ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ ಅನ್ನೋದನ್ನು ಕಾದು ನೋಡ್ಬೇಕು. ಸದ್ಯಕ್ಕಂತ ಹೋರಾಟ ದಿಕ್ಕು ತಪ್ಪಿದೆ ಅನ್ನೋದು ಸತ್ಯ.
ಕೃಷ್ಣಮಣಿ