ಬೆಳಗಾವಿ, ಆಗಸ್ಟ್ 5: ಕೃಷ್ಣಾ ನದಿಯಲ್ಲಿ ಪ್ರವಾಹದಿಂದಾಗಿ ಪ್ರತಿ ಬಾರಿ ನೆರೆ ಹಾವಳಿಗೆ ತುತ್ತಾಗುವ ಗ್ರಾಮಗಳ ಜನರನ್ನು ಶಾಶ್ವತವಾಗಿ ಬೇರೆ ಕಡೆಗೆ ಸ್ಥಳಾಂತರಿಸುವ ಬೇಡಿಕೆ ಕುರಿತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಸೋಮವಾರ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಕಾಗವಾಡ ತಾಲೂಕಿನ ಜೂಗಳ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ಕೃಷ್ಣಾ ನದಿಯಲ್ಲಿ ಪ್ರವಾಹದಿಂದಾಗಿ ಕೆಲವು ಗ್ರಾಮಗಳು ನಿರಂತರವಾಗಿ ಸಮಸ್ಯೆ ಎದುರಿಸುತ್ತಿವೆ. ಶಹಾಪುರ, ಗಂಗಾವತಿ ಮತ್ತು ಜೂಗಳ ಗ್ರಾಮಗಳು ಪ್ರತಿ ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುತ್ತಿವೆ. ಈ ಗ್ರಾಮಗಳಲ್ಲಿ ಸುಮಾರು 3 ಸಾವಿರದಷ್ಟು ಕುಟುಂಬಗಳಿದ್ದು, ಇವರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಗೊಳಿಸುವ ಬಗ್ಗೆ ಒತ್ತಾಯವಿದೆ. ಆದರೆ ಒಮ್ಮೆ ಸ್ಥಳಾಂತರಗೊಂಡ ಬಳಿಕ ಮತ್ತೆ ಅಲ್ಲಿಗೆ ಬಂದು ನೆಲೆಸಬಾರದು. ಈ ಕುರಿತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲು ಆದಷ್ಟು ಬೇಗನೆ ಸಭೆ ಕರೆಯಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.60 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಬಹುತೇಕ ಎಲ್ಲಾ ಜಲಾಶಯಗಳು ತುಂಬಿವೆ. ಕೃಷ್ಣಾ ಮೇಲ್ದಂಡೆ ಜಲಾಶಯಗಳಿಗೆ ಪ್ರತಿ ದಿನ 2ಲಕ್ಷ ಕ್ಯೂಸೆಕ್ಸ್‌ಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೀಡಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುತ್ತಿದೆ. ಬೆಳೆ ಹಾನಿ ಸಮೀಕ್ಷೆ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಸಮೀಕ್ಷೆ ನಡೆಸಿದ ಬಳಿಕ ಪರಿಹಾರವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಒದಗಿಸಲಾಗುವುದು ಎಂದು ಹೇಳಿದರು.
ಈ ಬಾಗದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಹಲವಾರು ಮಂದಿ ಸಂಕಷ್ಟ ಎದುರಿಸುತ್ತಿರುವುದನ್ನು ಗಮನಿಸಲಾಗಿದೆ. ಸಂಕಷ್ಟದಲ್ಲಿರುವವರಿಗೆ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲಿದೆ. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಅವರು ಈ ಸಂದರ್ಭದಲ್ಲಿ ತಿಳಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.