ಬೆಂಗಳೂರು:2024ರ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ರೈತರಿಂದ ಖರೀದಿಸ್ಪಲಟ್ಟ ಉಂಡೆ ಕೊಬ್ಬರಿಯ ಮೊತ್ತವನ್ನು ರೈತರ ಖಾತೆಗೆ ಪಾವತಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, “ಕೊಬ್ಬರಿ ಖರೀದಿಸಿದ ರೈತರಿಗೆ ಸುಮಾರು 346.50 ಕೋಟಿ ರೂ. ಮೊತ್ತವನ್ನು ಅವರ ಖಾತೆಗೆ ನೇರವಾಗಿ ಪಾವತಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಸುಮಾರು 24,600 ರೈತರಿಗೆ ಹಣವನ್ನು ಪಾವತಿಸಲಾಗಿದೆ. ಬಾಕಿ ಉಳಿದ ಸುಮಾರು 2,438 ರೈತರ ಖಾತೆಗೆ ಅಂದಾಜು 31.64ಕೋಟಿ ಬಾಬ್ತನ್ನು ಪಾವತಿಸಬೇಕಾಗಿದೆ” ಎಂದು ಹೇಳಿದ್ದಾರೆ.2024ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಸುಮಾರು 27,000 ರೈತರಿಂದ ಒಟ್ಟು 3,15,000 ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಟ ಬೆಂಬಲ ಬೆಲೆಯಡಿಯಲ್ಲಿ ಖರೀದಿಸಲಾಗಿತ್ತು.
ಈ ಸಂಬಂಧ ಒಟ್ಟು ಬಾಬ್ತು ರೂ.378 ಕೋಟಿಗಳನ್ನು ತುಮಕೂರಿನ ಕೊಬ್ಬರಿ ಬೆಳೆಗಾರರಿಗೆ ಪಾವತಿಸಬೇಕಾಗಿತ್ತು.ಆಗಸ್ಟ್ 05ರವರೆಗೆ ಸುಮಾರು ಶೇ.92ರಷ್ಟು ರೈತರ ಖಾತೆಗೆ ನೇರವಾಗಿ ಪಾವತಿಸಲಾಗಿದೆ ಎಂದಿದ್ದಾರೆ.
ಕೇಂದ್ರದಲ್ಲಿನ ನೆಫೆಡ್ ಸಂಸ್ಥೆಯಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಮೊತ್ತ ರೂ.691 ಕೋಟಿಗಳನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲು ಕ್ರಮ ಜರುಗಿಸಬೇಕೆಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಸಚಿವ ಸೋಮಣ್ಣ ಇದೇ ವೇಳೆ ತಿಳಿಸಿದ್ದಾರೆ.