
ನವ ಉದಾರವಾದಿ ಕಾರ್ಪೋರೇಟೀಕರಣ ಹಾದಿಯಲ್ಲಿ ಬಜೆಟ್ ಒಂದು ಸಾಂತ್ವನದ ಹೆಜ್ಜೆ ಮಾತ್ರ
ನಾ ದಿವಾಕರ
ಭಾಗ 1
ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಬಜೆಟ್ ಎಂಬ ಪ್ರಕ್ರಿಯೆ ಸಮಾಜದ ಎರಡು ವರ್ಗಗಳಲ್ಲಿ ಅತಿಯಾದ ಉತ್ಸಾಹವನ್ನು ಉಂಟುಮಾಡುತ್ತದೆ. ಮೊದಲನೆಯದು ತಮ್ಮ ಬಂಡವಾಳದ ವಿಸ್ತರಣೆಗಾಗಿ ಆಳ್ವಿಕೆಯ ಆರ್ಥಿಕ ನೀತಿಯನ್ನೇ ಅವಲಂಬಿಸುವ ಕಾರ್ಪೋರೇಟ್ ಮಾರುಕಟ್ಟೆ. ಎರಡನೆಯದು ಅಭಿವೃದ್ಧಿ ರಾಜಕಾರಣದ ಪ್ರಧಾನ ಫಲಾನುಭವಿಗಳಾದ ಸಮಾಜದ ಮಧ್ಯಮ ವರ್ಗದ ಜನತೆ. ಈ ಎರಡೂ ವರ್ಗಗಳನ್ನು ಸಂತೃಪ್ತಗೊಳಿಸಿಬಿಟ್ಟರೆ, ಎಲ್ಲ ಮಾಧ್ಯಮಗಳೂ ಭಟ್ಟಂಗಿಗಳಂತೆ ಬಜೆಟ್ ಎಂಬ ಕಡತದ ಉತ್ಸವ ನಡೆಸಲು ಮುಂದಾಗಿಬಿಡುತ್ತವೆ. ಸಾರ್ವಜನಿಕ ವೇದಿಕೆಯಲ್ಲಿ ನಿಂತಾಗಲೇ ನೆಲ ನೋಡದ ವಿದ್ವತ್ ವಲಯ-ವಿದ್ವಾಂಸರ ಕೂಟ ಟಿವಿ ವಾಹಿನಿಗಳ ಕೋಣೆಗಳಲ್ಲಿ ಕುಳಿತು ಈ ಹಣಕಾಸು ಸಮತೋಲನದ ವಾರ್ಷಿಕ ಕಸರತ್ತನ್ನು ತಮ್ಮ ಮೂಗಿನ ನೇರಕ್ಕೆ, ಸರ್ಕಾರದ ಮುನ್ನೋಟಕ್ಕೆ ಚ್ಯುತಿಯಾಗದ ಹಾಗೆ ವಿಶ್ಲೇಷಿಸುತ್ತಾರೆ. ಇದು ಕಳೆದ ಮೂರು ದಶಕಗಳ ನವ ಉದಾರವಾದಿ ಯುಗದಲ್ಲಿ ಭಾರತ ಕಂಡಿರುವ ವಾಸ್ತವ. 2024 ಇದಕ್ಕೆ ಹೊರತಾಗಿರಲು ಸಾಧ್ಯವೇ ಇಲ್ಲ.
ಕಳೆದ ಚುನಾವಣೆಗಳಲ್ಲಿ ತಳಸಮಾಜ ಅನುಭವಿಸುವ ಬಡತನ, ಹಸಿವು, ನಿರ್ಗತಿಕತೆ ಹಾಗೂ ನಿತ್ಯ ಬದುಕಿನ ಜಂಜಾಟಗಳ ಮೂಲ ಕಾರಣವೇ ಬೆಲೆ ಏರಿಕೆ ಮತ್ತು ನಿರುದ್ಯೋಗ ಎಂಬ ಸ್ಪಷ್ಟ ಸಂದೇಶವನ್ನು ಸ್ವೀಕರಿಸುತ್ತಲೇ ಅವಕಾಶವಾದಿ ಮೈತ್ರಿಕೂಟಗಳ ಮೂಲಕ ಅಧಿಕಾರ ಗ್ರಹಣ ಮಾಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಈ ಬಜೆಟ್ ಎರಡು ರೀತಿಯಲ್ಲಿ ನಿರ್ಣಾಯಕವಾಗಿತ್ತು. ಮೊದಲನೆಯದಾಗಿ ಈ ಸಮಸ್ಯೆಗಳಿಂದ ಜರ್ಝರಿತರಾಗಿರುವ ತಳಮಟ್ಟದ ಸಮಾಜಕ್ಕೆ ಸಾಂತ್ವನ ನೀಡುವ ರೀತಿಯಲ್ಲಿ ಕೆಲವು ಉಪಕ್ರಮಗಳನ್ನು ಜಾರಿಗೊಳಿಸುವುದು. ಮುಂಬರುವ ಕೆಲವು ರಾಜ್ಯ ಚುನಾವಣೆಗಳ ದೃಷ್ಟಿಯಿಂದ ಇದು ರಾಜಕೀಯ ಅನಿವಾರ್ಯತೆಯಾಗಿತ್ತು. ಎರಡನೇ ನಿರ್ಣಾಯಕ ಅಂಶ ಎಂದರೆ ಜಿಡಿಪಿ ಇತ್ಯಾದಿಗಳ ಉತ್ಪ್ರೇಕ್ಷಿತ ಅಂಕಿಅಂಶಗಳ ಹೊರತಾಗಿಯೂ ಕಾರ್ಪೋರೇಟ್ ವಲಯದಲ್ಲಿ ಸೃಷ್ಟಿಯಾಗಿದ್ದ ತಲ್ಲಣಗಳನ್ನು ಸರಿಪಡಿಸಲು ಬಂಡವಾಳ ಮತ್ತು ಮಾರುಕಟ್ಟೆಯ ಸಮತೋಲನವನ್ನು ಕಾಪಾಡಿಕೊಳ್ಳುವುದು.
ನವ ಉದಾರವಾದ-ಬಜೆಟ್ ಸ್ವರೂಪ
ಭಾರತದ ಆರ್ಥಿಕತೆ ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ಮೂಲ ಕಾರಣ ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಸರಬರಾಜು ಬದಿಯ ಆರ್ಥಿಕ ನೀತಿಗಳನ್ನು (Supply side economic policies) ಅನುಸರಿಸುತ್ತಿರುವುದೇ ಆಗಿದೆ. ಅರ್ಥವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ತಳಸಮಾಜದ ದುಡಿಯುವ ವರ್ಗಗಳ ಹಾಗೂ ಉತ್ಪಾದಕ ಸಮುದಾಯಗಳ ತಮ್ಮ ಆದಾಯ ಕುಸಿತದ ಪರಿಣಾಮವಾಗಿ ಈ ಜನರ ಖರೀದಿ ಸಾಮರ್ಥ್ಯವು ಕುಸಿದಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯ ಕೊರತೆ ಹೆಚ್ಚಾಗುತ್ತಲೇ ಇದೆ. ಅನೇಕ ಅರ್ಥಶಾಸ್ತ್ರಜ್ಞರು ಆರ್ಥಿಕತೆಯನ್ನು ಬೇಡಿಕೆ ಬದಿಯ ನೀತಿಗಳ ( Demand side economy) ಮೂಲಕ ನಿರ್ವಹಿಸಲು ಕರೆ ನೀಡುತ್ತಲೇ ಇದ್ದರೂ, ಅಮಾರ್ತ್ಯಸೆನ್ ಅವರಂತಹ ತಜ್ಞರ ಅಭಿಪ್ರಾಯವನ್ನೂ ಬಿಜೆಪಿ ಸರ್ಕಾರ ಕಡೆಗಣಿಸುತ್ತಲೇ ಬಂದಿದೆ. ಇದರ ಪರಿಣಾಮ ಮಾರುಕಟ್ಟೆಗೆ ಸರಕು-ಸೇವೆ ಸರಬರಾಜು ಮಾಡುವ ಕಾರ್ಪೋರೇಟ್ ಶಕ್ತಿಗಳು ಮೇಲ್ಮುಖಿ ಚಲನೆ ಕಾಣುತ್ತಿದ್ದರೆ ತಳಮಟ್ಟದಲ್ಲಿ ಬೇಡಿಕೆ ಸೃಷ್ಟಿಸುವ ಜನಸಾಮಾನ್ಯರ ಬದುಕು ಕುಸಿಯುತ್ತಲೇ ಇದೆ. ಸೇವಾ ವಲಯದ ಬದಲು ಉತ್ಪಾದನಾ ವಲಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದರೆ ಈ ಕುಸಿತವನ್ನು ತಪ್ಪಿಸಬಹುದು, ತಳಸಮಾಜದ ಜನತೆಯ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಬಹುದು. ತನ್ಮೂಲಕ ಆರ್ಥಿಕತೆಯಲ್ಲಿ ಬೇಡಿಕೆಯ ಪ್ರಮಾಣವನ್ನೂ ಹೆಚ್ಚಿಸಬಹುದು. ಈ ವಿವೇಕಯುತ ಸಲಹೆಗೆ ಕೊನೆಗೂ ಕೇಂದ್ರ ಸರ್ಕಾರ ಮನ್ನಣೆ ನೀಡಿರುವ ಕೇಂದ್ರ ಬಜೆಟ್ ಈ ಬಾರಿ ಉತ್ಪಾದಕ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕೆಲವು ಕ್ರಮಗಳನ್ನು ಘೋಷಿಸಿದೆ.
ಆದಾಗ್ಯೂ 2024-25ರ ವಾರ್ಷಿಕ ಬಜೆಟ್ ತಳಮಟ್ಟದ ಸಮಾಜಕ್ಕೆ ಏನಾದರೂ ಸಾಂತ್ವನ ನೀಡುವುದೇ ಎಂದು ಗಮನಿಸಿದಾಗ, ನಿರಾಸೆಯೇ ಹೆಚ್ಚು. ಏಕೆಂದರೆ ಮೇಲ್ನೋಟಕ್ಕೆ ಕಾಣುವ ಬಜೆಟ್ ಘೋಷಣೆಗಳು ವಾಸ್ತವಿಕವಾಗಿ ಖರ್ಚುವೆಚ್ಚಗಳ ನೆಲೆಯಲ್ಲಿ ವ್ಯತಿರಿಕ್ತವಾಗಿ ಕಾಣುತ್ತವೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಯಾವುದೇ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ “ ತೆರೆದಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚು ” ಎಂಬ ಸೂತ್ರವನ್ನು ಗುರುತಿಸಬಹುದು. ಈ ಬಜೆಟ್ ಸಹ ಹೊರತೇನಲ್ಲ. ಬಜೆಟ್ ಪೂರ್ವದ ಆರ್ಥಿಕ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಗುರುತಿಸಲಾದ ನಿರುದ್ಯೋಗ, ಉದ್ಯೋಗಾವಕಾಶಗಳ ಕೊರತೆ ಮತ್ತು ಅಸಂಘಟಿತ ಕಾರ್ಮಿಕರ ಅಸ್ಥಿರತೆಗಳನ್ನು ಸರಿಪಡಿಸುವ ಜವಾಬ್ದಾರಿ ವಿತ್ತ ಮಂತ್ರಿಗಳಿಗೆ ಪ್ರಧಾನವಾಗಿ ಕಾಣಬೇಕಿತ್ತು. ಈ ಎರಡೂ ಸಮಸ್ಯೆಗಳಿಗೆ ಮೂಲ ಕಾರಣವನ್ನು ಶಿಕ್ಷಣದ ಖಾಸಗೀಕರಣ ಮತ್ತು ಉತ್ಪಾದಕ ಕ್ಷೇತ್ರಗಳ ಕಾರ್ಪೋರೇಟೀಕರಣದಲ್ಲಿ ಗುರುತಿಸಬಹುದು. ಈ ಎರಡೂ ಸಮಸ್ಯೆಗಳನ್ನು ನಿವಾರಿಸದೆ, ಸಾರ್ವಜನಿಕ ಉತ್ಪಾದಕ ವಲಯದಲ್ಲಿ ಉತ್ಪಾದನೆಯನ್ನು/ಉದ್ಯೋಗಾವಕಾಶಗಳನ್ನು ಹೆಚ್ಚಿಸದೆ ಹೋದರೆ ಬಹುಶಃ ನಿರುದ್ಯೋಗ ಸಮಸ್ಯೆ ಪೂರ್ತಿಯಾಗಿ ಬಗೆಹರಿಯುವುದಿಲ್ಲ.
ಯುವ ಸಮುದಾಯಕ್ಕೆ ಹೆಚ್ಚು ನೀಡಲಾಗಿದೆ ಎಂದು ವಿತ್ತಸಚಿವರು ಹೇಳಿದ್ದರೂ, ವಾಸ್ತವವಾಗಿ ಇದು ಕೌಶಲಾಭಿವೃದ್ಧಿಯನ್ನು ದಾಟಿ ಬೇರೇನನ್ನೂ ಸಾಧಿಸುವುದಿಲ್ಲ. ತಳಮಟ್ಟದ ಸಮಾಜದಲ್ಲಿ ಉನ್ನತ ಶಿಕ್ಷಣದ ಅವಕಾಶವನ್ನೇ ಕಳೆದುಕೊಳ್ಳುತ್ತಿರುವ ಒಂದು ಬೃಹತ್ ಯುವ ಸಮುದಾಯವನ್ನು ಬ್ಯಾಂಕ್ ಸಾಲಗಳ ಮುಖಾಂತರ ಸಾಲಗಾರರನ್ನಾಗಿ ಮಾಡುವ ನೀತಿಯನ್ನು ಸರ್ಕಾರ ಘೋಷಿಸಿದೆ. ಮತ್ತೊಂದೆಡೆ ಸಾರ್ವತ್ರಿಕ ಶಿಕ್ಷಣದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 1.25 ಲಕ್ಷ ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ ಇದು 9 ಸಾವಿರ ಕೋಟಿ ರೂ ಹೆಚ್ಚಾಗಿದೆ. ಕಳೆದ ವರ್ಷದ 1.16 ಲಕ್ಷಕೋಟಿ ರೂ ಯೋಜಿತ ವೆಚ್ಚದಲ್ಲಿ ಸರ್ಕಾರ ಖರ್ಚು ಮಾಡಿರುವುದು 1.08 ಲಕ್ಷ ಕೋಟಿ ರೂ ಮಾತ್ರ. ಅಂದರೆ ಯುವ ಸಮೂಹದಲ್ಲಿ ಕೌಶಲಾಭಿವೃದ್ಧಿಯನ್ನು ಸಾಧಿಸುವ ಮೂಲಕ ಉದ್ಯೋಗ ಮಾರುಕಟ್ಟೆಗೆ ಉತ್ತೇಜನ ನೀಡುವ ಆರ್ಥಿಕ ನೀತಿಯಲ್ಲಿ, ಉದ್ಯೋಗಕ್ಕೆ ಪ್ರವೇಶ ನೀಡಲು ಬೇಕಾದ ಶಿಕ್ಷಣವನ್ನೇ ಅಲಕ್ಷಿಸಲಾಗಿದೆ. ಈ ಮುಸುಕಿನೊಳಗಿನ ವಾಸ್ತವವನ್ನು ಅರಿಯಬೇಕಿದೆ.
ಉದ್ಯೋಗ-ಮಾರುಕಟ್ಟೆಯ ವಾಸ್ತವಗಳು
ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಬರಾಜು ಪ್ರೇರಿತ ನೀತಿಗಳತ್ತ ಬಜೆಟ್ ಗಮನಹರಿಸಿದ್ದರೂ, ಉತ್ಪಾದನಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ಮತ್ತೊಮ್ಮೆ ಖಾಸಗಿ ಕಾರ್ಪೋರೇಟ್ ವಲಯವನ್ನೇ ಅವಲಂಬಿಸಲಾಗಿದೆ. ಈ ಔದ್ಯಮಿಕ ಕ್ಷೇತ್ರಕ್ಕೆ ಒದಗಿಸಲಾಗುವ ಮೂಲ ಸೌಕರ್ಯಗಳು ಮತ್ತು ಬಂಡವಾಳವನ್ನು ಒದಗಿಸುವ ಬ್ಯಾಂಕಿಂಗ್ ಸೌಲಭ್ಯಗಳು ಪುನಃ ಕಾರ್ಪೋರೇಟ್ ಮಾರುಕಟ್ಟೆಯನ್ನು ಉತ್ತೇಜಿಸುವ ನಿಟ್ಟಿನಲ್ಲೇ ಸಾಗುತ್ತವೆ. ಬಜೆಟ್‌ನಲ್ಲಿ ವಿತ್ತಸಚಿವರು ಉದ್ಯೋಗ ಸಂಬಂಧಿತ ಉತ್ತೇಜಕ ಯೋಜನೆಯ ಮೂರು ಮಾದರಿಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲನೆಯದು ಭವಿಷ್ಯ ನಿಧಿ ಸಂಸ್ಥೆಯೊಡನೆ ಸಂಯೋಜಿತವಾದ ಉದ್ಯಮಗಳಲ್ಲಿ ಮೊದಲ ಸಲ ಉದ್ಯೋಗ ಪಡೆಯುವ 15 ಸಾವಿರ ರೂ ಸಂಬಳದವರೆಗಿನ ಉದ್ಯೋಗಿಗಳಿಗೆ ಮೊದಲ ತಿಂಗಳ ವೇತನವನ್ನು ಸರ್ಕಾರವೇ ಕೊಡುವಂತಹುದು. ಎರಡನೆಯದು ಉತ್ಪಾದನಾ ವಲಯದಲ್ಲಿ ಮೊದಲ ಸಲ ಉದ್ಯೋಗ ಪಡೆಯುವವರಿಗೆ ವೇತನ ಸಬ್ಸಿಡಿಯನ್ನು ಒದಗಿಸುವುದು. ಇದನ್ನು ಉದ್ಯೋಗಿ ಮತ್ತು ಉದ್ಯೋಗದಾತ ಸಮನಾಗಿ ಪಡೆಯುತ್ತಾರೆ. ಮೂರನೆಯದು ಹೆಚ್ಚುವರಿ ಉದ್ಯೋಗವನ್ನು ಒದಗಿಸುವ ಉದ್ಯೋಗದಾತರು ಅವರು ಭವಿಷ್ಯ ನಿಧಿಗೆ ಪಾವತಿಸಬೇಕಾದ ಮೊತ್ತದ ಪೈಕಿ ತಿಂಗಳಿಗೆ 3000 ರೂಗಳಂತೆ ಸರ್ಕಾರವೇ ಎರಡು ವರ್ಷಗಳ ಕಾಲ ಭರಿಸುವುದು.
ಇಷ್ಟೇ ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ 60 ಸಾವಿರ ರೂ ವೆಚ್ಚದಲ್ಲಿ 1000 ಕೈಗಾರಿಕಾ ತರಬೇತಿ ಕೆಂದ್ರಗಳನ್ನು ಸ್ಥಾಪಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಾನವಾಗಿ ಭರಿಸುವ ಯೋಜನೆಯನ್ನೂ ಘೋಷಿಸಲಾಗಿದೆ. 21 ರಿಂದ 24 ವರ್ಷದವರೆಗಿನ ಯುವಜನರಿಗೆ 12 ತಿಂಗಳ ಕಾಲ ಪ್ರಧಾನಮಂತ್ರಿ ಇಂಟರ್ನ್‌ಷಿಪ್ ಮೂಲಕ ಮಾಸಿಕ 5000 ರೂಗಳನ್ನು ಒದಗಿಸುವುದಾಗಿ ಹೇಳಲಾಗಿದೆ. ಐದು ವರ್ಷಗಳ ಅವಧಿಯಲ್ಲಿ 4.1 ಕೋಟಿ ಯುವಜನರನ್ನು ಫಲಾನುಭವಿಗಳಾಗಿಸುವ 2 ಲಕ್ಷ ಕೋಟಿ ರೂಗಳ ಉದ್ಯೋಗ ಯೋಜನೆಯನ್ನೂ ಘೋಷಿಸಲಾಗಿದೆ. ಮುಂದಿನ ಒಂದು ದಶಕದಲ್ಲಿ ಕೃಷಿಯೇತರ ವಲಯಗಳಲ್ಲಿ ಪ್ರತಿ ವರ್ಷ ಸೃಷ್ಟಿಯಾಗುವ 81 ಲಕ್ಷ ಉದ್ಯೋಗಗಳನ್ನು ಸರಿದೂಗಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಅಂಕಿಅಂಶಗಳು ಬಹಳ ರೋಚಕವಾಗಿ ಕಾಣುವುದಾದರೂ , ವಾಸ್ತವವಾಗಿ ಈ ಯೋಜನೆಗಳಡಿ ಸೃಷ್ಟಿಯಾಗುವ ಉದ್ಯೋಗಗಳು ಸಬ್ಸಿಡಿಯ ಅವಧಿ ಮುಗಿದ ನಂತರವೂ ಮುಂದುವರೆಯುವ ಸಾಧ್ಯಗಳು ಬಹಳ ಕಡಿಮೆ. ಈ ಮಾಧ್ಯಮಿಕ ಅವಧಿಯಲ್ಲಿ ಉದ್ಯೋಗ ಕಳೆದುಕೊಳ್ಳುವವರ ಅಪಾರ ಸಂಖ್ಯೆಯೇ ಹಲವು ಜಟಿಲ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಒಂದು ವೇಳೆ ಸರ್ಕಾರವು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಲುವಾಗಿಯೇ 2 ಲಕ್ಷ ಕೋಟಿ ರೂ ವಿನಿಯೋಗಿಸುವುದೇ ಆದರೆ , ನರೇಗಾ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸುವ ಮೂಲಕ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬಾರದೇಕೆ ? ನರೇಗಾ ಯೋಜನೆಯಲ್ಲಿ ವೇತನದ ಅರ್ಹತೆಗೆ ಇರುವ ದಿನಮಿತಿಯನ್ನು 100ಕ್ಕಿಂತಲೂ ಹೆಚ್ಚಿಸಬಾರದೇಕೆ ? ಶ್ರಮ ತೀವ್ರತೆ ಇರುವ ಕ್ಷೇತ್ರಗಳಲ್ಲಿ ಲಾಭದಾಯಕ ಸಾರ್ವಜನಿಕ ಉದ್ಯಮಗಳು ಹಾಗೂ ಕೈಗಾರಿಕೆಗಳು ಹೆಚ್ಚಿನ ಬಂಡವಾಳ ಹೂಡುವಂತೆ ಯೋಜಿಸಬಾರದೇಕೆ ? ಸರಬರಾಜು ಬದಿಯ ಆರ್ಥಿಕ ಕಾರ್ಯತಂತ್ರದಲ್ಲಿ ಕಾಣುವ ಮೂಲಭೂತ ದೋಷ ಎಂದರೆ, ಕೃಷಿಯೇತರ ವಲಯದಲ್ಲಿನ ಕಾರ್ಮಿಕರ ಬೇಡಿಕೆ ಈಗಾಗಲೇ ವಾರ್ಷಿಕವಾಗಿ ಸುಮಾರು 80 ಲಕ್ಷ ಮೊದಲ ಬಾರಿಯ ಉದ್ಯೋಗಿಗಳನ್ನು ಆಕರ್ಷಿಸಲು ಸಾಕಾಗುತ್ತದೆ ಎಂದು ಭಾವಿಸುವುದು. ಅಷ್ಟೇ ಅಲ್ಲದೆ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಲಾಭದಾಯಕತೆಯ ಬಗ್ಗೆ ಯಾವುದೇ ಕಾಳಜಿಯೇ ಇಲ್ಲದೆ , ವೇತನ ಸಬ್ಸಿಡಿಗಳು ಮತ್ತು ಕಾರ್ಮಿಕರ ಕೌಶಲ್ಯ ಅಭಿವೃದ್ಧಿಗಳು ಮಾತ್ರ , ಸಣ್ಣ ಮತ್ತು ದೊಡ್ಡ ಉದ್ಯಮಗಳನ್ನು ವೇತನದಾರರ ಉದ್ಯೋಗ ವಿಸ್ತರಿಸಲು ಪ್ರೇರೇಪಿಸುತ್ತದೆ ಎಂದು ಭಾವಿಸುವುದು. ಈ ತಪ್ಪು ಗ್ರಹಿಕೆಯಿಂದ ರೂಪಿಸಲಾಗಿರುವ ನೂತನ ಉದ್ಯೋಗಾವಕಾಶಗಳ ಯೋಜನೆಗಳು ದೀರ್ಘಕಾಲದಲ್ಲಿ ಫಲ ಕೊಡದೆಯೂ ಹೋಗಬಹುದು.
ಮಾರುಕಟ್ಟೆ ಬೇಡಿಕೆ ಮತ್ತು ವರಮಾನ
ಬೇಡಿಕೆ ಮತ್ತು ಖಾಸಗಿ ಬಳಕೆಯ ಪ್ರಮಾಣವನ್ನು ಹೆಚ್ಚಿಸಲು ಬಜೆಟ್‌ನಲ್ಲಿ ಎರಡು ಉಪಕ್ರಮಗಳನ್ನು ಸೂಚಿಸಲಾಗಿದೆ. ಆದಾಯ ತೆರಿಗೆಯಲ್ಲಿ ಕೊಂಚ ವಿನಾಯಿತಿ ನೀಡುವ ಮೂಲಕ ತೆರಿಗೆದಾರರ ಬಳಿ ಹೆಚ್ಚು ಹಣದ ಉಳಿತಾಯವಾಗುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಪರೋಕ್ಷ ತೆರಿಗೆ ಪಾವತಿಯಲ್ಲಿ ಆಗಿರುವ ಹೆಚ್ಚಳವನ್ನು ಗಮನಿಸಿದರೆ ಇನ್ನೂ ಹೆಚ್ಚಿನ ಆದಾಯ ತೆರಿಗೆ ವಿನಾಯಿತಿಗಳನ್ನು ಘೋಷಿಸುವ ಮೂಲಕ ಬೇಡಿಕೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಕುಸಿಯುತ್ತಿರುವ ಕೌಟುಂಬಿಕ ಉಳಿತಾಯವನ್ನೂ ಹೆಚ್ಚಿಸಬಹುದಾಗಿತ್ತು. ಈ ಅವಕಾಶವನ್ನು ವಿತ್ತ ಸಚಿವರು ಕೈಚೆಲ್ಲಿದ್ದಾರೆ. ಎರಡನೆಯದಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಹಾಗಾಗಿ ಆದಾಯ ಮತ್ತು ಮಾರುಕಟ್ಟೆ ಬೇಡಿಕೆ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯನ್ನು ಬಜೆಟ್‌ನಲ್ಲಿ ಗುರುತಿಸಬಹುದು. ಆದರೆ ಉದ್ಯಮಿಗಳಿಗೆ ಉತ್ತೇಜನ ನೀಡುವ ಇಂಟರ್ನ್‌ಷಿಪ್ ಯೋಜನೆಯಿಂದಲೇ ಉದ್ಯೋಗ ಹೆಚ್ಚಾಗುವ ಸಂಭವ ಕಡಿಮೆ.
ಏಕೆಂದರೆ ಕಾರ್ಮಿಕ ಮಾರುಕಟ್ಟೆಯನ್ನು ನೇರವಾಗಿ ಪ್ರಭಾವಿಸುವ ಸಾಮಾಜಿಕ ಆಕಾಂಕ್ಷೆಗಳು ಮತ್ತು ತಂತ್ರಜ್ಞಾನದಲ್ಲಿನ ಬದಲಾವಣೆಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗಿಲ್ಲ. ಮೇಲಾಗಿ ಈ ಯೋಜನೆಯನ್ನು ನೇರಹಾದಿಯಲ್ಲಿ ಜಾರಿಗೊಳಿಸಲಾಗುತ್ತಿಲ್ಲ. ಇದು ಕೇವಲ ನಗರಕೇಂದ್ರಿತ ಉದ್ಯೋಗ ಸೃಷ್ಟಿಯ ಅಲ್ಪಕಾಲಿಕ ಕಾರ್ಯಕ್ರಮವಾಗುವ ಸಾಧ್ಯತೆಗಳಿವೆ. ಇದರಿಂದ ಭವಿಷ್ಯದಲ್ಲಿ ನಿರುದ್ಯೋಗಿಗಳ ಒಂದು ಸಮೂಹವೇ ಸೃಷ್ಟಿಯಾಗುತ್ತದೆ. ಎಂಎಸ್‌ಎಂಇ ಉದ್ಯಮಗಳ ಪುನಶ್ಚೇತನದೊಂದಿಗೆ ಉದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಸಾಲ ಸೌಲಭ್ಯದ ಮಾರ್ಗಗಳನ್ನು ಸುಗಮಗೊಳಿಸಲಾಗಿದ್ದು ಬ್ಯಾಂಕುಗಳು ತಮ್ಮದೇ ಆದ ಮಾದರಿಗಳನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇದಕ್ಕೆ ಪೂರಕವಾಗಿ ಇಂತಹ ಉದ್ದಿಮೆಗಳು ಕಾರ್ಯೋನ್ಮುಖವಾಗಲು ಅಗತ್ಯವಾದ ವಾತಾವರಣವನ್ನೂ ಕಲ್ಪಿಸಬೇಕಿದೆ. ಕೇವಲ ಸಾಲ ಒದಗಿಸಿ, ಉಳಿದ ಅಂಶಗಳಿಗಾಗಿ ಮಾರುಕಟ್ಟೆಯನ್ನು ಅವಲಂಬಿಸುವುದು ಫಲಕಾರಿಯಾಗುವ ಕ್ರಮ ಎನಿಸುವುದಿಲ್ಲ.
( ಮುಂದುವರೆಯುತ್ತದೆ ,,,,)
ತಳಸಮಾಜಕ್ಕೆ ತಲುಪದ ಬಜೆಟ್ ಎಂಬ ಪ್ರಹಸನ
ನವ ಉದಾರವಾದಿ ಕಾರ್ಪೋರೇಟೀಕರಣ ಹಾದಿಯಲ್ಲಿ ಬಜೆಟ್ ಒಂದು ಸಾಂತ್ವನದ ಹೆಜ್ಜೆ ಮಾತ್ರ
ನಾ ದಿವಾಕರ
ಭಾಗ 2
ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಬಜೆಟ್ ಎಂಬ ಪ್ರಕ್ರಿಯೆ ಸಮಾಜದ ಎರಡು ವರ್ಗಗಳಲ್ಲಿ ಅತಿಯಾದ ಉತ್ಸಾಹವನ್ನು ಉಂಟುಮಾಡುತ್ತದೆ. ಮೊದಲನೆಯದು ತಮ್ಮ ಬಂಡವಾಳದ ವಿಸ್ತರಣೆಗಾಗಿ ಆಳ್ವಿಕೆಯ ಆರ್ಥಿಕ ನೀತಿಯನ್ನೇ ಅವಲಂಬಿಸುವ ಕಾರ್ಪೋರೇಟ್ ಮಾರುಕಟ್ಟೆ. ಎರಡನೆಯದು ಅಭಿವೃದ್ಧಿ ರಾಜಕಾರಣದ ಪ್ರಧಾನ ಫಲಾನುಭವಿಗಳಾದ ಸಮಾಜದ ಮಧ್ಯಮ ವರ್ಗದ ಜನತೆ. ಈ ಎರಡೂ ವರ್ಗಗಳನ್ನು ಸಂತೃಪ್ತಗೊಳಿಸಿಬಿಟ್ಟರೆ, ಎಲ್ಲ ಮಾಧ್ಯಮಗಳೂ ಭಟ್ಟಂಗಿಗಳಂತೆ ಬಜೆಟ್ ಎಂಬ ಕಡತದ ಉತ್ಸವ ನಡೆಸಲು ಮುಂದಾಗಿಬಿಡುತ್ತವೆ. ಸಾರ್ವಜನಿಕ ವೇದಿಕೆಯಲ್ಲಿ ನಿಂತಾಗಲೇ ನೆಲ ನೋಡದ ವಿದ್ವತ್ ವಲಯ-ವಿದ್ವಾಂಸರ ಕೂಟ ಟಿವಿ ವಾಹಿನಿಗಳ ಕೋಣೆಗಳಲ್ಲಿ ಕುಳಿತು ಈ ಹಣಕಾಸು ಸಮತೋಲನದ ವಾರ್ಷಿಕ ಕಸರತ್ತನ್ನು ತಮ್ಮ ಮೂಗಿನ ನೇರಕ್ಕೆ, ಸರ್ಕಾರದ ಮುನ್ನೋಟಕ್ಕೆ ಚ್ಯುತಿಯಾಗದ ಹಾಗೆ ವಿಶ್ಲೇಷಿಸುತ್ತಾರೆ. ಇದು ಕಳೆದ ಮೂರು ದಶಕಗಳ ನವ ಉದಾರವಾದಿ ಯುಗದಲ್ಲಿ ಭಾರತ ಕಂಡಿರುವ ವಾಸ್ತವ. 2024 ಇದಕ್ಕೆ ಹೊರತಾಗಿರಲು ಸಾಧ್ಯವೇ ಇಲ್ಲ.
ಸಾಮಾಜಿಕ ಕಾಳಜಿಯ ಕೊರತೆ
ಪ್ರತಿಬಾರಿಯಂತೆ ಈ ಸಲವೂ ಬಜೆಟ್‌ನಲ್ಲಿ ಯುವ ಸಮೂಹ, ಮಹಿಳೆಯರು,ರೈತರು ಮತ್ತು ಬಡಜನತೆಯನ್ನು ಕೇಂದ್ರೀಕರಿಸಲಾಗಿದ್ದರೂ, ವಾಸ್ತವವಾಗಿ ಹೊಸತೇನನ್ನೂ ಕಾಣಲಾಗುವುದಿಲ್ಲ. ಈ ಸಮೂಹಗಳಿಗೆ ನಿರ್ಣಾಯಕವಾಗಿ ಪರಿಣಮಿಸುವಂತಹ ಸಾಮಾಜಿಕ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಒದಗಿಸಿರುವ ಹಣಕಾಸು ಅನುದಾನದಲ್ಲಿ ತೀವ್ರ ಹೆಚ್ಚಳ ಕಂಡುಬರುತ್ತಿಲ್ಲ. ಉದಾಹರಣೆಗೆ ಶಾಲಾ ಶಿಕ್ಷಣಕ್ಕೆ ಕೇವಲ 5000 ಕೋಟಿ ರೂ, ಉನ್ನತ ಶಿಕ್ಷಣಕ್ಕೆ 3000 ಕೋಟಿ ರೂ ಹೆಚ್ಚಿಸಲಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಅಧಿಕ ಶುಲ್ಕ ಹಾಗೂ ಸ್ವಯಂ ಹಣಕಾಸು ಯೋಜನೆಯ ಮೂಲಕ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಂಜೂರಾಗಿರುವ ಮೊತ್ತದಲ್ಲಿ ಕಳೆದ ವರ್ಷಕ್ಕಿಂತಲೂ ಕೇವಲ 1500 ಕೋಟಿ ರೂ ಹೆಚ್ಚಳವಾಗಿದೆ. ನರೇಗಾ ಯೋಜನೆಗೆ ಮಂಜೂರಾಗಿರುವ ಮೊತ್ತವು ಕಳೆದ ಬಜೆಟ್‌ನ ಪರಿಷ್ಕೃತ ಅಂದಾಜಿನಷ್ಟೇ ನಿಧಿಯನ್ನು ಮೀಸಲಿರಿಸಲಾಗಿದೆ. ಪ್ರಸಕ್ತ ಜನಸಂಖ್ಯೆಯ ಆಧಾರದಲ್ಲಿ ಆಹಾರ ಸಬ್ಸಿಡಿ ಮೊತ್ತವನ್ನು ಹೆಚ್ಚಿಸುವ ಅವಶ್ಯಕತೆ ಇದ್ದು, ಬಜೆಟ್‌ನಲ್ಲಿ ಇದನ್ನೂ ನಿರ್ಲಕ್ಷಿಸಲಾಗಿದೆ.
ದುರ್ಬಲ ವರ್ಗಗಳಿಗಾಗಿಯೇ ರೂಪಿಸಲಾಗಿರುವ ಹಲವು ಯೋಜನೆಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಶಾಲೆಗಳಲ್ಲಿ ಬಿಸಿಯೂಟ ಒದಗಿಸುವ ಪೋಷಣ್ ಯೋಜನೆಗೆ ಮೀಸಲಾಗಿರುವ 12647 ಕೋಟಿ ರೂಗಳು 2022-23ರ 12681 ಕೋಟಿ ರೂಗಳ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ. ಆರು ವರ್ಷದ ಕೆಳಗಿನ ಮಕ್ಕಳು, ವಯಸ್ಕ ಹೆಣ್ಣುಮಕ್ಕಳು ಹಾಗೂ ಮೊಲೆಯೂಡಿಸುವ ಗರ್ಭಿಣಿ ಮಹಿಳೆಯರಿಗಾಗಿ ರೂಪಿಸಲಾಗಿರುವ ಸಕ್ಷಮ್ ಅಂಗನವಾಡಿ ಯೋಜನೆಗಾಗಿ 21200 ಕೋಟಿ ರೂ ಒದಗಿಸಲಾಗಿದೆ. 2023-24ರ ಬಜೆಟ್ ಅಂದಾಜಿನಲ್ಲಿ ಇದು 20554 ಕೋಟಿ ರೂಗಳಷ್ಟಿತ್ತು. ಈ ಅಲ್ಪ ಹೆಚ್ಚಳವನ್ನು ಗಮನಿಸಿದಾಗ 2018 ರಿಂದಲೂ ನಿರೀಕ್ಷಿಸಲಾಗುತ್ತಿರುವ ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಿಸುವ ಯಾವುದೇ ಸಾಧ್ಯತೆಗಳು ಇಲ್ಲ ಎಂದೇ ತೋರುತ್ತದೆ. ಆರೋಗ್ಯ ಕ್ಷೇತ್ರವನ್ನೂ ಮತ್ತೊಮ್ಮೆ ಕಡೆಗಣಿಸಲಾಗಿದೆ.
ಸಾಮಾನ್ಯವಾಗಿ ಯಾವುದೇ ಬಜೆಟ್‌ನಲ್ಲಿ ಮಂಜೂರಾದ ಯೋಜನೆಗಳ ವೆಚ್ಚವನ್ನು ಹಿಂದಿನ ಬಜೆಟ್ ಅಂದಾಜಿನೊಡನೆ ಹೋಲಿಸಿ ನೋಡಲಾಗುತ್ತದೆ. ಕಳೆದ ವರ್ಷದ ಪರಿಷ್ಕೃತ ಅಂದಾಜಿನೊಡನೆ ಹೋಲಿಸಿದಾಗ ವಾಸ್ತವ ಚಿತ್ರಣ ಗೋಚರಿಸುವುದಿಲ್ಲ. ಎಕೆಂದರೆ ಪರಿಷ್ಪೃತ ಅಂದಾಜು ನೈಜ ವೆಚ್ಚದ ಪ್ರಮಾಣವನ್ನು ಸೂಚಿಸುತ್ತದೆ. ಇದು ಕಾರ್ಯಕ್ರಮದ ಅನುಷ್ಠಾನದಲ್ಲಿ ಇರುವ ಲೋಪದೋಷಗಳಿಂದ ಕಡಿಮೆಯಾಗಿರುವ ಸಾಧ್ಯತೆಗಳು ಇರುತ್ತವೆ. ಈ ದೃಷ್ಟಿಯಿಂದ ಪ್ರಸಕ್ತ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಾಗಿರುವ ಮೊತ್ತವನ್ನು 2023-24ರ ಬಜೆಟ್‌ಗೆ ಹೋಲಿಸಿದಾಗ ಕೇವಲ ಶೇಕಡಾ 1.98ರಷ್ಟು ಹೆಚ್ಚಾಗಿರುವುದು ಕಂಡುಬರುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಶೇಕಡಾ 1.16, ಪ್ರಧಾನ ಮಂತ್ರಿ- ಜನ ಆರೋಗ್ಯ ಯೋಜನೆಗೆ (ಪಿಎಮ್‌ಜೆಎಐ) ಶೇಕಡಾ 1.14ರಷ್ಟು ಹೆಚ್ಚಳವಾಗಿದೆ. ಆಯುಷ್ಮಾನ್ ಭಾರತ್ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ತಳಮಟ್ಟದವರೆಗೂ ಕೊಂಡೊಯ್ಯಬೇಕಾದರೆ ಈ ಮೊತ್ತ ಅತ್ಯಲ್ಪ ಎನಿಸದಿರದು. ಸರ್ಕಾರದ ಅನುದಾನದಿಂದಲೇ ಕಾರ್ಯಗತವಾಗುವ ಪಿಎಂಜೆಎವೈ ಕಾರ್ಯಕ್ರಮದ ಮೂಲಕ ವಿಕಸಿತ ಭಾರತ 2030ರ ವೇಳೆಗೆ ಉದ್ದೇಶಿತ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಬೇಕಾದರೆ ಈ ಅಲ್ಪಪ್ರಮಾಣದ ಮೊತ್ತ ಸಾಕಾಗುವುದಿಲ್ಲ.
ಅಸಮಾನತೆಗಳ ಮೂಲ ನೆಲೆ
ಈ ಬಜೆಟ್‌ನಲ್ಲಿ ರೈತರು ಮತ್ತು ಬಡಜನತೆಯ ಏಳ್ಗೆಗಾಗಿ ಹೆಚ್ಚಿನ ಒತ್ತುನೀಡಲಾಗಿದೆ ಎಂದು ವಿತ್ತಸಚಿವರು ಹೇಳಿದ್ದರೂ, ಕೃಷಿ ಕ್ಷೇತ್ರದಲ್ಲಿ ರೈತರಿಗೆ ಭರವಸೆ ನೀಡುವಂತಹ ಯಾವುದೇ ಕಾರ್ಯಕ್ರಮಗಳನ್ನು ಘೋಷಿಸಲಾಗಿಲ್ಲ. ರಸಗೊಬ್ಬರ ಸಬ್ಸಿಡಿ ಪ್ರಮಾಣವು ಪ್ರತಿ ವರ್ಷವೂ ಇಳಿಮುಖವಾಗುತ್ತಿದ್ದು ಈ ಬಾರಿಯೂ ಇದೇ ಹಾದಿಯನ್ನು ಅನುಸರಿಸಲಾಗಿದೆ. 2022-23ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿ ಮೊತ್ತ 2.5 ಲಕ್ಷ ಕೋಟಿ ರೂ ಇದ್ದುದು ಈ ವರ್ಷದ ಬಜೆಟ್‌ನಲ್ಲಿ 1.64 ಲಕ್ಷ ಕೋಟಿ ರೂಗಳಿಗೆ ಇಳಿಕೆಯಾಗಿದೆ. ಜೊತೆಗೆ ರೈತ ಸಮುದಾಯದ ದೀರ್ಘಕಾಲಿಕ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಕಾಣಲಾಗುವುದಿಲ್ಲ. ಬಡಜನತೆಗೆ ನೀಡಲಾಗುತ್ತಿದ್ದ ಉಚಿತ ಪಡಿತರಕ್ಕಾಗಿ ಸಬ್ಸಿಡಿ ಮೊತ್ತವನ್ನು 2.05 ಲಕ್ಷ ಕೋಟಿ ರೂಗಳಿಗೆ ಇಳಿಸಲಾಗಿದ್ದು 2022-23ಕ್ಕೆ ಹೋಲಿಸಿದರೆ ಇದು 70 ಸಾವಿರ ಕೋಟಿ ರೂ ಕಡಿಮೆಯಾಗಿದೆ.
ದೇಶದಲ್ಲಿ ಆರ್ಥಿಕ ಅಸಮಾನತೆ ತೀವ್ರವಾಗುತ್ತಿರುವುದನ್ನು ಎಲ್ಲ ಅರ್ಥಶಾಸ್ತ್ರಜ್ಞರೂ ಸ್ಪಷ್ಟವಾಗಿ ಗುರುತಿಸಿದ್ದಾರೆ. ಮತ್ತೊಂದೆಡೆ ಜನಸಾಮಾನ್ಯರಿಂದ ಸಂಗ್ರಹವಾಗುವ ತೆರಿಗೆಯ ಪ್ರಮಾಣವು ಕಾರ್ಪೋರೇಟ್ ತೆರಿಗೆಯನ್ನೂ ಮೀರಿಸಿರುವುದನ್ನು ಅಂಕಿಅಂಶಗಳೇ ಹೇಳುತ್ತವೆ. 2019-20ರ ವಾರ್ಷಿಕ ಅವಧಿಯಲ್ಲಿ ಆದಾಯ ತೆರಿಗೆ ಸಂಗ್ರಹದ ಪ್ರಮಾಣ 4.92 ಲಕ್ಷ ಕೋಟಿರೂಗಳಷ್ಟಿದ್ದರೆ, ಕಾರ್ಪೋರೇಟ್ ತೆರಿಗೆಯು 5.56 ಲಕ್ಷ ಕೋಟಿರೂಗಳಷ್ಟಿತ್ತು. 2019ರಲ್ಲಿ ಕಾರ್ಪೋರೇಟ್ ತೆರಿಗೆ ದರದಲ್ಲಿ ಶೇಕಡಾ 8ರಷ್ಟು ಕಡಿತ ಮಾಡಿದ ನಂತರ ಕಾರ್ಪೋರೇಟ್ ತೆರಿಗೆ ಸಂಗ್ರಹವೂ ಕಡಿಮೆಯಾಗುತ್ತಿದ್ದು 2023-24ರ ವೇಳೆಗೆ ಇದು ಆದಾಯ ತೆರಿಗೆಗಿಂತಲೂ ಕಡಿಮೆಯಾಗಿದೆ. ಈ ವರ್ಷದ ಅಂಕಿಅಂಶಗಳ ಅನುಸಾರ ಆದಾಯ ತೆರಿಗೆ 11.56 ಲಕ್ಷ ಕೋಟಿರೂಗಳಷ್ಟಿದ್ದರೆ ಕಾರ್ಪೋರೇಟ್ ತೆರಿಗೆ 10.42 ಲಕ್ಷ ಕೋಟಿ ರೂಗಳಷ್ಟಾಗಿದೆ. ಅಂದರೆ ಈ ದೇಶದ ಮಧ್ಯಮ ವರ್ಗಗಳು ಮತ್ತು ಜಿಎಸ್‌ಟಿ ಮೂಲಕ ಬಡಜನತೆ ಶ್ರೀಮಂತ ಕಾರ್ಪೋರೇಟ್‌ಗಳಿಗಿಂತಲೂ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದಾರೆ.
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿರುವ ಉದ್ಯಮಗಳ ಪೈಕಿ ಶೇಕಡಾ 5ರಷ್ಟು ಕಂಪನಿಗಳು ಶೇಕಡಾ 97ರಷ್ಟು ಕಾರ್ಪೋರೇಟ್ ತೆರಿಗೆ ಪಾವತಿ ಮಾಡುತ್ತವೆ. ಅವುಗಳ ಪೈಕಿ ಅತಿ ದೊಡ್ಡ 150 ಉದ್ದಿಮೆಗಳು ಶೇಕಡಾ 40ರಷ್ಟು ತೆರಿಗೆ ಪಾವತಿಸುತ್ತವೆ. ಉಳಿದ ಕಂಪನಿಗಳೆಲ್ಲವೂ ಶೂನ್ಯ ತೆರಿಗೆ ಘೋಷಿಸುತ್ತವೆ. ತಜ್ಞರ ಅಭಿಪ್ರಾಯದಲ್ಲಿ ಇದಕ್ಕೆ ಉದ್ದಿಮೆಗಳಿಗೆ ನೀಡಿರುವ ವಿನಾಯಿತಿಗಳು ಒಂದು ಕಾರಣವಾದರೆ ಮತ್ತೊಂದು ಕಾರಣ ಎಂಎಸ್‌ಎಂಇ ಉದ್ದಿಮೆಗಳ ಮೇಲೆ ಇರುವ ಹೆಚ್ಚಿನ ಒತ್ತಡವೂ ಇರಬಹುದು. ಮತ್ತೊಂದು ಅಂಕಿಅಂಶದ ಪ್ರಕಾರ ದೇಶದ 30 ಸಾವಿರಕ್ಕೂ ಹೆಚ್ಚು ಉದ್ದಿಮೆಗಳು ಕಳೆದ ವರ್ಷ 14 ಲಕ್ಷ ಕೋಟಿ ರೂಗಳಿಗಿಂತಲೂ ಹೆಚ್ಚುವರಿ ಲಾಭ ಗಳಿಸಿವೆ. ಈ ಕಾರ್ಪೋರೇಟ್ ಉದ್ದಿಮೆಗಳು ಗಳಿಸಿರುವ 200 ಲಕ್ಷಕೋಟಿ ರೂಗಳಿಂದ ಪಾವತಿಸಲಾಗಿರುವ ತೆರಿಗೆ ಕೇವಲ 10 ಲಕ್ಷ ಕೋಟಿ ರೂ ಮಾತ್ರ. ದೇಶದ ಸಾಮಾನ್ಯ ಜನತೆ ತಮ್ಮ ದುಸ್ತರ ಬದುಕಿನ ನಡುವೆಯೇ ಇದಕ್ಕಿಂತಲೂ ಹೆಚ್ಚಿನ ತೆರಿಗೆ ಪಾವತಿ ಮಾಡಿದ್ದಾರೆ. ಕಾರ್ಪೋರೇಟ್ ತೆರಿಗೆಯನ್ನು ಹೆಚ್ಚಿಸುವುದಿರಲಿ, 2016ರಲ್ಲಿ ರದ್ದುಪಡಿಸಲಾದ ಸಂಪತ್ತಿನ ತೆರಿಗೆಯನ್ನೂ ಸಹ ಮತ್ತೊಮ್ಮೆ ಜಾರಿಗೊಳಿಸುವ ಉದ್ದೇಶ ಸರ್ಕಾರಕ್ಕೆ ಇದ್ದಂತಿಲ್ಲ.
ಇದು ಬಿಜೆಪಿ ಸರ್ಕಾರದ ಮತ್ತು ಸಾಮಾನ್ಯವಾಗಿ ಭಾರತದ ಆಳುವ ವರ್ಗಗಳ ನವ ಉದಾರವಾದಿ ಆರ್ಥಿಕತೆಯ ಲಕ್ಷಣಗಳನ್ನು ಸೂಚಿಸುತ್ತದೆ. ಕಾರ್ಪೋರೇಟ್ ತೆರಿಗೆಯಲ್ಲಿ ಶೇಕಡಾ 8ರಷ್ಟು ಕಡಿತಗೊಳಿಸಿದ್ದರಿಂದ ಐದು ವರ್ಷಗಳಲ್ಲಿ 8 ಲಕ್ಷ ಕೋಟಿ ರೂ ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ. ಇಷ್ಟೆಲ್ಲಾ ರಿಯಾಯಿತಿಗಳ ಹೊರತಾಗಿಯೂ, ಬಂಡವಾಳಿಗರ ಸಂಪತ್ತಿನಲ್ಲಿ ಶೇಕಡಾ 120ರಷ್ಟು ಹೆಚ್ಚಳವಾಗಿದ್ದರೂ ದೇಶದಲ್ಲಿ ಉದ್ಯೋಗಾವಕಾಶಗಳು ಏಕೆ ಹೆಚ್ಚಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವೇ ದೊರೆಯುವುದಿಲ್ಲ. ಮೂಲ ಸೌಕರ್ಯಗಳನ್ನೇ ಕೇಂದ್ರೀಕರಿಸಿದ ಮಾರುಕಟ್ಟೆ ನೀತಿಗಳು ಉತ್ಪಾದನಾ ಕ್ಷೇತ್ರವನ್ನು ಕಡೆಗಣಿಸಿರುವುದೇ ಇದಕ್ಕೆ ಕಾರಣವಾಗಿದೆ. ಈ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳೂ ಸಹ ಅಲ್ಪಕಾಲಿಕ ಪರಿಣಾಮಗಳನ್ನು ಬೀರುವಂತಹುದೇ ಆಗಿದೆ. ಇದೇ ಸಮಯದಲ್ಲಿ ಕೇಂದ್ರದಲ್ಲಿ ಖಾಲಿ ಇರುವ 9.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಯಾವುದೇ ಭರವಸೆಯನ್ನೂ ಸಹ ನೀಡಲಾಗಿಲ್ಲ.
ಶ್ರೀಸಾಮಾನ್ಯನ ವಾಸ್ತವ ನೆಲೆಗಟ್ಟು
ಹಾಗಾಗಿ 2024-25ರ ವಾರ್ಷಿಕ ಬಜೆಟ್ ಮೇಲ್ನೋಟಕ್ಕೆ ಆಶಾದಾಯಕವಾಗಿ ಕಾಣುವುದಾದರೂ, ಆಂತರಿಕವಾಗಿ ದೇಶ ಎದುರಿಸುತ್ತಿರುವ ನಿರುದ್ಯೋಗ, ಬಡತನ ಮತ್ತು ಉದ್ಯೋಗಾವಕಾಶಗಳ ಕೊರತೆಯನ್ನು ನೀಗಿಸುವ ಯಾವುದೇ ದೀರ್ಘಕಾಲಿಕ ಪರಿಹಾರೋಪಾಯಗಳನ್ನು ಸೂಚಿಸುವುದಿಲ್ಲ. ವಿಕಸಿತ ಭಾರತ ತನ್ನ 2047ರ ಅಮೃತ ಕಾಲದ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಾದರೆ ದೇಶದ ತಳಮಟ್ಟದ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳ ನಿವಾರಣೆಯಾಗಬೇಕಿದೆ. ಇದು ನವ ಉದಾರವಾದಿ ಆರ್ಥಿಕತೆಯಲ್ಲಿ ಸುಲಭ ಸಾಧ್ಯವಲ್ಲ. ಏಕೆಂದರೆ ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸಾರಿಗೆ, ರೈಲ್ವೆ-ವಿಮಾನಯಾನ ಮತ್ತಿತರ ಎಲ್ಲ ಜನಾವಶ್ಯಕ ವಲಯಗಳನ್ನೂ ಕಾರ್ಪೋರೇಟೀಕರಣಕ್ಕೊಳಪಡಿಸುತ್ತಿರುವ ಆರ್ಥಿಕ ನೀತಿಗಳು ಬಡ ಜನತೆಯನ್ನು ಶಾಶ್ವತವಾಗಿ ನಿಕೃಷ್ಟ ಬದುಕಿಗೇ ಸೀಮಿತಗೊಳಿಸುತ್ತವೆ. ಮೂಲ ಸಂಪತ್ತು ಮತ್ತು ಸಂಪನ್ಮೂಲಗಳ ಸಮಾನ ಹಂಚಿಕೆಯ ಮಾತು ಒತ್ತಟ್ಟಿಗಿರಲಿ, ಉತ್ಪಾದಿತ ಸಂಪತ್ತು ಮತ್ತು ಅದರಿಂದ ಸೃಷ್ಟಿಯಾಗುವ ಆರ್ಥಿಕ ಸಂಪನ್ಮೂಲಗಳ ನ್ಯಾಯಯುತ ವಿತರಣೆಗೂ ಸಹ ನವ ಉದಾರವಾದ ಅವಕಾಶ ನೀಡುವುದಿಲ್ಲ.
ಈ ಗಗನ ಕುಸುಮವನ್ನು ಎಟುಕಿಸಿಕೊಳ್ಳುವ ಪ್ರಯತ್ನದಲ್ಲೇ ಭಾರತದ ಶ್ರೀಸಾಮಾನ್ಯರು ತಮ್ಮ ದೈನಂದಿನ ಬದುಕಿನ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಮುಖ್ಯವಾಹಿನಿಯ ಯಾವುದೇ ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳೂ ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆಯನ್ನು ಪೋಷಿಸುವ ಆರ್ಥಿಕ ನೀತಿಗಳನ್ನು ವಿರೋಧಿಸುವುದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹಾಗಾಗಿಯೇ ವಾರ್ಷಿಕ ಬಜೆಟ್‌ಗೆ ವ್ಯಕ್ತವಾಗುವ ರಾಜಕೀಯ ವಿರೋಧ ಅಥವಾ ಭಿನ್ನಾಭಿಪ್ರಾಯಗಳಲ್ಲೂ, ರಾಜಕೀಯ ಧ್ವನಿಯ ಹೊರತಾಗಿ, ಯಾವುದೇ ಸತ್ವ ಇರುವುದಿಲ್ಲ. ಜನಪರ ಕಾಳಜಿಯೂ ಕಾಣಲಾಗುವುದಿಲ್ಲ. ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಬಜೆಟ್‌ನಲ್ಲಿ ವಿಶೇ಼ಷ ನೆರವು ನೀಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇಡೀ ಮೊತ್ತವನ್ನು ಮೂಲ ಸೌಕರ್ಯಗಳಿಗೆ ಬಳಸುವುದು ಈ ಕಾರ್ಪೋರೇಟ್ ನೀತಿಯ ವಿಸ್ತರಣೆಯಾಗಿ ಕಾಣುತ್ತದೆ. ಐಟಿ ಕ್ಷೇತ್ರದಲ್ಲಿ ದಿನದ ದುಡಿಮೆಯ ಅವಧಿಯನ್ನು 14 ಗಂಟೆಗಳಿಗೆ ಹೆಚ್ಚಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರವೂ ಇದರ ಒಂದು ಭಿನ್ನ ಆಯಾಮವಾಗಿ ಕಾಣುತ್ತದೆ.
ಕಾರ್ಪೋರೇಟ್ ಪ್ರೇರಿತ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಹಜವಾಗಿ ಆಗಬಹುದಾದ ವ್ಯತ್ಯಯಗಳಿಗೆ ಭಾರತ ಸಾಕ್ಷಿಯಾಗುತ್ತಿರುವುದು ಸ್ಪಷ್ಟ. ತಳಮಟ್ಟದ ಸಮಾಜದ ದೃಷ್ಟಿಯಿಂದ ಇಲ್ಲಿ ಸಂಭವಿಸಬಹುದಾದ ಪಲ್ಲಟಗಳಿಗೆ, ಸಾಮಾಜಿಕ-ಆರ್ಥಿಕ ಸಂಕಷ್ಟಗಳಿಗೆ, ಜಟಿಲ ಸವಾಲುಗಳಿಗೆ ಪರಿಹಾರವಾಗಿ ಸರ್ಕಾರಗಳು ಬಜೆಟ್ ಮೂಲಕ ಕೆಲವು ಮೇಲ್ಪದರದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತವೆ. 2024-25ರ ಕೇಂದ್ರ ಬಜೆಟ್‌ನಲ್ಲೂ ಇದೇ ಚಾಣಾಕ್ಷತನವನ್ನು ಗುರುತಿಸಬಹುದು. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಬಜೆಟ್ ಎಂದರೆ ಅದು ಜನಸಾಮಾನ್ಯರ ಪಾಲಿಗೆ ಆಶಾಭಾವನೆಯನ್ನು ಸೃಷ್ಟಿಸುವ ಅಥವಾ ತಾತ್ಕಾಲಿಕ ಸಾಂತ್ವನ ಒಂದು ಆರ್ಥಿಕ ಪ್ರಕ್ರಿಯೆ ಮಾತ್ರ. ಉದಾತ್ತ ಅಥವಾ ಜನಪರ ಎನ್ನಿಸುವ ಯಾವುದೇ ಯೋಜನೆಗಳು ತಳಮಟ್ಟಕ್ಕೆ ತಲುಪುವ ವೇಳೆಗೆ ಜನತೆಯ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿರುತ್ತದೆ. ಅಂತಿಮವಾಗಿ ಈ ಅನುಷ್ಠಾನದ ಜವಾಬ್ದಾರಿ ಇರುವುದು ಅಧಿಕಾರಶಾಹಿಯ ಮೇಲೆ. ಅಧಿಕಾರಶಾಹಿಯ ಒಲವು ಇರುವುದು ಕಾರ್ಪೋರೇಟ್ ಮಾರುಕಟ್ಟೆಯ ಕಡೆಗೆ.
ಇದು ಈ ದೇಶದ ಶ್ರಮಜೀವಿ ವರ್ಗಗಳು ಎದುರಿಸಬೇಕಾದ ಕಟು ವಾಸ್ತವ. ಹೊಸ ಕ್ರಿಮಿನಲ್ ಕಾಯ್ದೆಗಳು, ನೂತನ ಕಾರ್ಮಿಕ ಸಂಹಿತೆಗಳು ಹಾಗೂ ಆಡಳಿತಾತ್ಮಕ ಕ್ರಮಗಳು ನವ ಉದಾರವಾದಿ ಅರ್ಥವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲೇ ರೂಪುಗೊಂಡಿರುವುದರಿಂದ, ಭಾರತದ ದುಡಿಯುವ ವರ್ಗಗಳು, ರೈತ ಸಮುದಾಯ ಹಾಗೂ ಅವಕಾಶ ವಂಚಿತ ಜನತೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವುದರ ಮೂಲಕವೇ ಅಂತಿಮ ನ್ಯಾಯ ಪಡೆಯಬೇಕಿದೆ. ವಾರ್ಷಿಕ ಬಜೆಟ್ ಈ ಉತ್ಕರ್ಷವನ್ನು ಕಡಿಮೆ ಮಾಡುವ ಒಂದು ಪ್ರಕ್ರಿಯೆ ಮಾತ್ರ. 2024ರ ಲೋಕಸಭಾ ಚುನಾವಣೆಗಳಲ್ಲಿ ಮತದಾರರು ತಮ್ಮೊಳಗಿನ ಹತಾಶೆಯನ್ನು ಮತದಾನದ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಹತಾಶೆಯನ್ನು ಶಮನ ಮಾಡುವ ಒಂದು ಪ್ರಯತ್ನ 2024-25ರ ಬಜೆಟ್. ಇದನ್ನೂ ಮೀರಿದ ನಿರೀಕ್ಷೆ ಅನಗತ್ಯ ಎನಿಸುತ್ತದೆ.
-೦-೦-೦-