
ಬಜೆಟ್ಗೆ ಪೂರ್ವಭಾವಿಯಾಗಿ ಒಂದು ದಿನ ಮುಂಚೆ ಆರ್ಥಿಕ ಸಮೀಕ್ಷೆ ಮಂಡನೆ ಆಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಈ ಎಕನಾಮಿಕ್ ಸರ್ವೆ ವರದಿಯನ್ನು ಸಂಸತ್‌ನಲ್ಲಿ ಇಂದು ಮಂಡಿಸಿದರು. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ, ಭಾರತದ ಆರ್ಥಿಕ ಪ್ರಗತಿಯ ಓಟವನ್ನು ಚೀನಾ 1980ರಿಂದ 2015ರವರೆಗೆ ಮಾಡಿದ ಸಾಧನೆಗೆ ಹೋಲಿಕೆ ಮಾಡಿದೆ. ಜಿಡಿಪಿ (GDP) ದರ, ಹಣಕಾಸು ಪರಿಸ್ಥಿತಿ ಇತ್ಯಾದಿ ಬಗ್ಗೆ ಆರ್ಥಿಕ ಸಮೀಕ್ಷೆ ಆಶಾದಾಯಕವೆನಿಸುವ ಚಿತ್ರಣ ನೀಡಿದೆ. ಆರ್ಥಿಕ ಬೆಳವಣಿಗೆಯ ಓಟಕ್ಕೆ ತಡೆಯಾಗಿರುವ ಕೆಲ ಅಂಶಗಳ ಬಗ್ಗೆಯೂ ಈ ಸಮೀಕ್ಷೆ ಎಚ್ಚರಿಸುವ ಕೆಲಸ ಮಾಡಿದೆ.
ಪ್ರತೀ ವರ್ಷ 78 ಲಕ್ಷ ಉದ್ಯೋಗಗಳ ಸೃಷ್ಟಿ ಅಗತ್ಯ
ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಬೇಕಾದರೆ 2030ರವರೆಗೂ ಕೃಷಿಯೇತರ ಕ್ಷೇತ್ರದಲ್ಲಿ ಪ್ರತೀ ವರ್ಷ ಸರಾಸರಿಯಾಗಿ 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅವಶ್ಯಕತೆ ಇದೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಅರ್ಧದಷ್ಟು ಭಾರತೀಯರು ಉದ್ಯೋಗಕ್ಕೆ ತಯಾರಿಲ್ಲ
ಆರ್ಥಿಕ ಸಮೀಕ್ಷೆ ಪ್ರಕಾರ ಪ್ರತೀ ಇಬ್ಬರು ಭಾರತೀಯರಲ್ಲಿ ಒಬ್ಬರು ತತ್ ಕ್ಷಣಕ್ಕೆ ಉದ್ಯೋಗಕ್ಕೆ ತಯಾರಾಗಿಲ್ಲ. ಅವರು ಕಾಲೇಜು ಶಿಕ್ಷಣ ಈಗಷ್ಟೇ ಮುಗಿಸಿ ಹೊರಬಂದಿದ್ದಾರೆ ಎನ್ನಲಾಗಿದೆ.
ಸರ್ವಿಸ್ ಸೆಕ್ಟರ್ನಲ್ಲಿ ಈಗಲೂ ಕೂಡ ಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತಿದೆ. ಇದರ ಜೊತೆಗೆ ಕಟ್ಟಡ ನಿರ್ಮಾಣ ವಲಯ ಕೂಡ ಇತ್ತೀಚೆಗೆ ಉದ್ಯೋಗಸೃಷ್ಟಿಯಲ್ಲಿ ಮುಂಚೂಣಿಗೆ ಬರುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ ಉದ್ಯೋಗಸೃಷ್ಟಿ ಕಳೆದ ದಶಕದಲ್ಲಿ ಕಡಿಮೆ ಆಗಿತ್ತು. 2021-22ರಿಂದ ಈಚೆ ಈ ಕ್ಷೇತ್ರದಲ್ಲಿ ಉದ್ಯೋಗಸೃಷ್ಟಿ ಹೆಚ್ಚಾಗುತ್ತಿದೆ ಎಂದು ಈ ವರದಿ ಪ್ರಸ್ತಾಪಿಸಿದೆ.
ಜಿಡಿಪಿ ದರ 2024-25ರಲ್ಲಿ ಶೇ. 6.5ರಿಂದ ಶೇ. 7
2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎಂದು ಐಎಂಎಫ್, ಎಡಿಬಿ ಇತ್ಯಾದಿ ಗ್ಲೋಬಲ್ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ನಾವು ಸಂಭಾವ್ಯ ರಿಸ್ಕ್ ಇತ್ಯಾದಿಯನ್ನು ಗಮನದಲ್ಲಿರಿಸಿಕೊಂಡು ಜಿಡಿಪಿ ದರ ಕನಿಷ್ಠ ಶೇ. 6.5ರಿಂದ 7ರಷ್ಟು ಇರಬಹುದು ಎಂದು ನಿರೀಕ್ಷಿಸುತ್ತಿದ್ದೇವೆ.