
ಚೆನ್ನೈನ ಕಸದ ತೊಟ್ಟಿಯಿಂದ ₹ 5 ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್ ಪತ್ತೆಯಾಗಿದ್ದು, ಸ್ವಚ್ಛತಾ ಕಾರ್ಮಿಕರ ತೀವ್ರ ಶೋಧದ ಫಲವಾಗಿ ಅದರ ಮಾಲೀಕರಿಗೆ ಮರಳಿದೆ. ನಗರದ ನಿವಾಸಿ ದೇವರಾಜ್ ಎಂಬುವರು ಆಕಸ್ಮಿಕವಾಗಿ ಹಾರದ ಬಾಕ್ಸ್ ನ್ನು ಕಸದ ತೊಟ್ಟಿಗೆ ಎಸೆದಿದ್ದರು.
ಇದು ಅವರ ಮಗಳಿಗೆ ಅವರ ತಾಯಿಯಿಂದ ಮದುವೆಯ ಉಡುಗೊರೆಯಾಗಿದ್ದು ಮದುವೆಯ ದಿನಾಂಕ ಮುಂದಿನ ತಿಂಗಳಿನಲ್ಲಿ ನಿಗದಿ ಆಗಿತ್ತು. ತಮ್ಮ ತಪ್ಪಿನ ಅರಿವಾದ ಕೂಡಲೇ ದೇವರಾಜ್ ಅಧಿಕಾರಿಗಳನ್ನು ಸಂಪರ್ಕಿಸಿದರು. ತ್ಯಾಜ್ಯ ನಿರ್ವಹಣೆಗಾಗಿ ಚೆನ್ನೈ ಕಾರ್ಪೊರೇಷನ್ ಗುತ್ತಿಗೆ ಪಡೆದಿರುವ ಉರ್ಬಸರ್ ಸುಮೀತ್ ಅವರ ಚಾಲಕ ಜೆ. ಆಂಥೋನಿಸಾಮಿ ನೇತೃತ್ವದಲ್ಲಿ ಸಮೀಪದ ತೊಟ್ಟಿಗಳ ಹುಡುಕಾಟವನ್ನು ಪ್ರಾರಂಭಿಸಲಾಯಿತು. ಹಿರಿಯ ಅಧಿಕಾರಿಗಳು ಸಹ ಶೋಧ ಕಾರ್ಯವನ್ನು ಮೇಲ್ವಿಚಾರಣೆ ಮಾಡಿದರು.
ತೀವ್ರ ಹುಡುಕಾಟದ ಬಳಿಕ ಕಸದ ತೊಟ್ಟಿಯೊಳಗೆ ಕಸದ ರಾಶಿಯ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಹಾರ ಪತ್ತೆಯಾಗಿದೆ. ದೇವರಾಜ್ ಅವರು ಕ್ಷಿಪ್ರವಾಗಿ ಸ್ಪಂದಿಸಿ ಬೆಲೆಬಾಳುವ ನೆಕ್ಲೇಸ್ ಹಿಂಪಡೆಯಲು ಸಹಕರಿಸಿದ ಅಂಥೋನಿಸಾಮಿ ಹಾಗೂ ಕಸ ಸಂಗ್ರಹ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.