( ಬಳಕೆಯಾಗುವ ದತ್ತಾಂಶ ಮೂಲಗಳಲ್ಲಿನ ವ್ಯತ್ಯಾಸಗಳೇ ನಿರುದ್ಯೋಗದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತವೆ)
ಅರುಣ್ ಕುಮಾರ್
(ಮೂಲ : Living in denial about unemployment The Hindu 20th July 2024)
(ಲೇಖಕರು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು , ಜೆಎನ್‌ಯು. Indian Economyʼs Greatest Crisis – Impact of the Coronavirus and the Road Ahead -2020 – ಕೃತಿಯ ರಚಯಿತರು)
ಕನ್ನಡಕ್ಕೆ : ನಾ ದಿವಾಕರ
ಭಾರತದಲ್ಲಿ ಕಳೆದ 3-4 ವರ್ಷಗಳಲ್ಲಿ 8 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂಬ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವರದಿಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಪಕ್ಷಗಳು ನಿರುದ್ಯೋಗದ ಬಗ್ಗೆ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುತ್ತಿವೆ ಎಂದು ಆರೋಪಿಸಿದ್ದಾರೆ. ಸಾಕಷ್ಟು ಮೂಲಸೌಕರ್ಯ ಯೋಜನೆಗಳು ಕಾರ್ಯಗತವಾಗುತ್ತಿರುವುದರಿಂದ ಇದು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆಡಳಿತ ಪಕ್ಷವನ್ನು ಕಾಡುತ್ತಿರುವ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ ಎಂಬ ನಿರೂಪಣೆಯನ್ನು (Narratives) ಎದುರಿಸುವ ಒಂದು ಪ್ರಯತ್ನ ಇದಾಗಿದ್ದು, ಕಳೆದ ಜುಲೈನಲ್ಲಿ ಸಿಟಿ ಗ್ರೂಪ್‌ನಂತಹ ಹಣಕಾಸು ಸಂಸ್ಥೆಗಳಿಂದ ಬಂದ ವರದಿಗಳಿಗೆ ಪ್ರತಿಕ್ರಿಯೆಯಾಗಿದೆ. ಈ ವರದಿಯು ಭಾರತದಲ್ಲಿ ಉದ್ಯೋಗ ಸೃಷ್ಟಿಯ ಅಸಮರ್ಪಕತೆಯನ್ನು ಸೂಚಿಸುತ್ತದೆ.
ವ್ಯತಿರಿಕ್ತ ವರದಿಗಳು ಮತ್ತು ಹೇಳಿಕೆಗಳು
ಜುಲೈ 7 ರಂದು ಬಿಡುಗಡೆಯಾದ ಆರ್‌ಬಿಐ ದತ್ತಾಂಶ ಕೈಪಿಡಿಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಇದನ್ನು ‘ದಿ ಇಂಡಿಯಾ ಕೆಎಲ್ಇಎಂಎಸ್ ಡೇಟಾಬೇಸ್’ ಎಂದೂ ಕರೆಯಲಾಗುತ್ತದೆ.̈ (KLEMS- ಬಂಡವಾಳ, ಶ್ರಮ, ಇಂಧನ , ಭೌತಿಕ ವಸ್ತು ಮತ್ತು ಸೇವೆ ) ಭಾರತೀಯ KLEMS ದತ್ತಾಂಶ ಮೂಲದ 2024ರ ಆವೃತ್ತಿಯನ್ನು ರೂಪಿಸಲು ಬಳಸಲಾಗುವ ಪ್ರಕ್ರಿಯೆಗಳು, ಕಾರ್ಯವಿಧಾನಗಳು ಮತ್ತು ಧೋರಣೆಗಳನ್ನು ಆರ್‌ಬಿಐ ದತ್ತಾಂಶ ಕೈಪಿಡಿಯೂ ಅನುಕರಿಸುತ್ತದೆ. ಈ ದತ್ತಾಂಶ ಮೂಲವು ಒಟ್ಟು ಮೌಲ್ಯವರ್ಧನೆ, ಉತ್ಪಾದನೆಯ ಒಟ್ಟು ಮೌಲ್ಯ, ಕಾರ್ಮಿಕ ಉದ್ಯೋಗ, ಕಾರ್ಮಿಕ ಗುಣಮಟ್ಟ, ಬಂಡವಾಳ ಸಂಗ್ರಹ , ಬಂಡವಾಳ ಸಂಯೋಜನೆಯ ಅಳತೆಗಳನ್ನು ಮಾನದಂಡವಾಗಿ ಬಳಸಿ ತಯಾರಿಸಲ್ಪಟ್ಟಿರುತ್ತದೆ. ಈ ದತ್ತಾಂಶ ಮೂಲವು ಇಡೀ ಭಾರತೀಯ ಆರ್ಥಿಕತೆಯನ್ನು ಒಳಗೊಂಡಿರುವ 27 ಕೈಗಾರಿಕೆಗಳನ್ನು ಒಳಗೊಂಡಿರುತ್ತದೆ.
ಆರ್‌ಬಿಐ ಇದನ್ನು ಬಿಡುಗಡೆ ಮಾಡಿದ ಕೂಡಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಣಕಾಸು ಸಂಸ್ಥೆಗಳ ವರದಿಗಳಿಗೆ ಪ್ರತಿಯಾಗಿ ತನ್ನದೇ ಆದ ವರದಿಯನ್ನು ಹೊರತಂದಿದೆ. “ನಾವು ಕೃಷಿಯನ್ನು ಹೊರತುಪಡಿಸಿದರೂ, ಉತ್ಪಾದನೆ ಮತ್ತು ಸೇವೆಗಳಲ್ಲಿ ಸೃಷ್ಟಿಯಾದ ಒಟ್ಟು ಉದ್ಯೋಗಗಳ ಸಂಖ್ಯೆ 2014-23ರ ಅವಧಿಯಲ್ಲಿ 8.9 ಕೋಟಿ ಮತ್ತು 2004-2014ರ ಅವಧಿಯಲ್ಲಿ 6.6 ಕೋಟಿಯಷ್ಟಾಗಿದೆ ” ಎಂದು ಎಸ್‌ಬಿಐ ವರದಿಯಲ್ಲಿ ಹೇಳಲಾಗಿದೆ. “ಭಾರತದಲ್ಲಿ ಒಟ್ಟು ಕಾರ್ಮಿಕ ಬಲವು 59.7 ಕೋಟಿಯಷ್ಟಿದೆ, ಇದು ಇತ್ತೀಚೆಗೆ ಬಿಡುಗಡೆಯಾದ ASUSE [ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ] ಸಮೀಕ್ಷೆಯ ಪ್ರಕಾರ ಸೂಚಿಸಲಾಗಿರುವ 56.8 ಕೋಟಿಗೆ ಸಮನಾಗಿದೆ. ಈ ಒಟ್ಟು ಕಾರ್ಮಿಕ ಶಕ್ತಿಯ ಸಂಖ್ಯೆಯು ಖಾಸಗಿ ಉದ್ಯೋಗ ಸಮೀಕ್ಷೆಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ ” ಎಂದು ಎಸ್‌ಬಿಐ ತನ್ನ ವರದಿಯಲ್ಲಿ ಹೇಳಿದೆ. ಆದಾಗ್ಯೂ, ಉದ್ಯೋಗ ಮತ್ತು ನಿರುದ್ಯೋಗದ ದತ್ತಾಂಶವನ್ನು ಪ್ರಕಟಿಸುವ ಖಾಸಗಿ ದತ್ತಾಂಶ ಸಂಗ್ರಹಣಾ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಜುಲೈನಲ್ಲಿ ವರದಿ ಮಾಡಿದಂತೆ, ಜೂನ್ 2024 ರಲ್ಲಿ, ನಿರುದ್ಯೋಗ ದರವು ಹಿಂದಿನ ತಿಂಗಳಲ್ಲಿದ್ದ ಶೇಕಡಾ 7ರಿಂದ ಎಂಟು ತಿಂಗಳ ಗರಿಷ್ಠ ಮಟ್ಟದ ಶೇಕಡಾ 9.2 ಕ್ಕೆ ಏರಿದೆ. ಇದು ಬೃಹತ್ ಉದ್ಯೋಗ ಸೃಷ್ಟಿಯ ಅಧಿಕೃತ ನಿರೂಪಣೆಗೆ ವ್ಯತಿರಿಕ್ತವಾಗಿ ಕಾಣುತ್ತದೆ.
ಈ ವ್ಯತಿರಿಕ್ತ ವರದಿಗಳು ಮತ್ತು ಹೇಳಿಕೆಗಳಿಂದ ನಾಗರಿಕರು ಏನು ಅರ್ಥಮಾಡಿಕೊಳ್ಳಬೇಕು ? ನಿರುದ್ಯೋಗವು ಒಂದು ಪ್ರಮುಖ ಸಮಸ್ಯೆಯಾಗಿದೆ ಎಂದು ತಳಮಟ್ಟದ ವರದಿಗಳು ಸೂಚಿಸುತ್ತವೆ. ಫೆಬ್ರವರಿಯಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು 60,000 ಕಾನ್ಸ್‌ಟೇಬಲ್ ಆಯ್ಕೆ ಮಾಡಲು ಸುಮಾರು 47 ಲಕ್ಷ ಅರ್ಜಿದಾರರು ಪರೀಕ್ಷೆಗೆ ಹಾಜರಾಗಿದ್ದರು. 2022 ರಲ್ಲಿ, ರೈಲ್ವೆ ನೇಮಕಾತಿ ಮಂಡಳಿಯ ತಾಂತ್ರಿಕೇತರ ವರ್ಗಗಳ ನೇಮಕಾತಿ ಪರೀಕ್ಷೆಗೆ 1.25 ಕೋಟಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. 2022 ರಲ್ಲಿ ಅಗ್ನಿಪಥ್ ಯೋಜನೆಯನ್ನು ಘೋಷಿಸಿದಾಗ ಬಿಹಾರ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದವು. ವಾಸ್ತವವಾಗಿ, ವಿದ್ಯಾವಂತ ಯುವಕರ ಪರಿಸ್ಥಿತಿ ಭೀಕರವಾಗಿದೆ, ಆದರೂ ಅವರು ಜನಸಂಖ್ಯಾ ಲಾಭಾಂಶದ (Demographic dividend) ಮುಂಚೂಣಿಯಲ್ಲಿರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ನಿರುದ್ಯೋಗದ ವ್ಯಾಪ್ತಿಯ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಕ್ಕೆ ಕಾರಣ ಇದನ್ನು ಅಳೆಯಲು ಬಳಸಲಾದ ವಿವಿಧ ದತ್ತಾಂಶ ಮೂಲಗಳಲ್ಲಿರುವ ವ್ಯತ್ಯಾಸಗಳೇ ಆಗಿವೆ. ಇದನ್ನು ಪುನರ್ ಪರಿಶೀಲಿಸುವ ಅವಶ್ಯಕತೆ ಇದೆ..
KLEMS ದತ್ತಾಂಶಗಳು
ಇತ್ತೀಚೆಗೆ ಉಲ್ಲೇಖಿಸಲಾದ KLEMS ದತ್ತಾಂಶವು ಭಾರತದ ಆರ್ಥಿಕತೆಯಲ್ಲಿ ಉತ್ಪಾದಕತೆಯ ಬೆಳವಣಿಗೆಯನ್ನು ಗಮನಿಸಲು ಹಾಗೂ ಮೌಲ್ಯಮಾಪನ ಮಾಡಲು ಸಮಗ್ರ ಮಾಪನ ಸಾಧನವಾಗಿದೆ. ಇದು ಉದ್ಯೋಗವನ್ನು ಅಂದಾಜು ಮಾಡುವುದಿಲ್ಲ ಆದರೆ ಲಭ್ಯವಿರುವ ಅಧಿಕೃತ ದತ್ತಾಂಶವನ್ನು ಬಳಸುತ್ತದೆ. ಕಾರ್ಮಿಕರ ಒಳಹರಿವಿನ ಪ್ರಮಾಣವನ್ನು ಅಳೆಯುವ ಸಲುವಾಗಿ ಇದು 1983 ಮತ್ತು 2011-12 ರ ನಡುವೆ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ನಡೆಸಿದ ಉದ್ಯೋಗ ಮತ್ತು ನಿರುದ್ಯೋಗ ಸಮೀಕ್ಷೆಗಳನ್ನು (EUS) ಮತ್ತು ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (PLFS) ಯನ್ನು ಬಳಸುತ್ತದೆ. ಸ್ಪಷ್ಟವಾಗಿ, KLEMS ದತ್ತಾಂಶವು PLFS ಮತ್ತು ASUES ಸಮೀಕ್ಷೆಗಳ ಅಧಿಕೃತ ದತ್ತಾಂಶವನ್ನು ಆಧರಿಸಿದೆ. ಇದನ್ನು ಗಮನಿಸಿದರೆ, KLEMSನ ಉದ್ಯೋಗ ಸರಣಿಯು ಸರ್ಕಾರಿ ಸಂಸ್ಥೆಗಳು ನೀಡುವ ಒಟ್ಟು ಉದ್ಯೋಗದ ಅಂಕಿಅಂಶಗಳಿಂದ ಏಕೆ ಭಿನ್ನವಾಗಿರುತ್ತದೆ? ಹಾಗಾಗಿ ಪ್ರಧಾನಿಯಾಗಲೀ ಅಥವಾ ಎಸ್‌ಬಿಐ ಆಗಲೀ KLEMS ದತ್ತಾಂಶಗಳನ್ನು ಉದ್ಯೋಗ ದತ್ತಾಂಶದ ಸ್ವತಂತ್ರ ಮೂಲವಾಗಿ ಉಲ್ಲೇಖಿಸುವಂತಿಲ್ಲ. ಅಧಿಕಾರಿಗಳು ಮತ್ತು ಅರ್ಥಶಾಸ್ತ್ರಜ್ಞರು ಸರ್ಕಾರದ ಅಥವಾ ಪ್ರಧಾನಮಂತ್ರಿಗಳ ದಾರಿತಪ್ಪಿಸಿದ್ದಾರೆ ಎಂದೇ ಹೇಳಬೇಕಾಗುತ್ತದೆ.
ವಿವಿಧ ಮೂಲಗಳು ಉದ್ಯೋಗದ ಬಗ್ಗೆ ವ್ಯಾಪಕವಾಗಿ ವ್ಯತಿರಿಕ್ತವಾದ ಅಂದಾಜುಗಳನ್ನು ಏಕೆ ನೀಡುತ್ತವೆ ? ಭಾರತದ ಆರ್ಥಿಕತೆಯ ಅತ್ಯಂತ ಸಂಕೀರ್ಣ ರಚನೆ ಮತ್ತು ವಿಶ್ವಾಸಾರ್ಹ ದತ್ತಾಂಶದ ಕೊರತೆಯೇ ಇದಕ್ಕೆ ಕಾರಣ ಎನ್ನಬಹುದು. ಭಾರತವು ಮೂಲತಃ ಸಂಘಟಿತ ಮತ್ತು ಅಸಂಘಟಿತ ವಲಯಗಳನ್ನು ಒಳಗೊಂಡಿದೆ. ಸಂಘಟಿತ ವಲಯದ ದತ್ತಾಂಶವು ಶಾಸನಬದ್ಧವಾಗಿ ಪ್ರಕಟವಾದ ವಾರ್ಷಿಕ ದತ್ತಾಂಶದಿಂದ ಲಭ್ಯವಿದೆ. ಶೇ.94ರಷ್ಟು ಕಾರ್ಮಿಕರನ್ನು ಹೊಂದಿರುವ ಅಸಂಘಟಿತ ವಲಯಕ್ಕೆ ಇದು ಅನ್ವಯಿಸುವುದಿಲ್ಲ. ಬೇರೆ ಯಾವುದೇ ದೊಡ್ಡ ದೇಶದಲ್ಲಿ ದತ್ತಾಂಶ ವಿರಳವಾಗಿರುವ ಇಷ್ಟು ದೊಡ್ಡ ಅಸಂಘಟಿತ ವಲಯವಿಲ್ಲ. ಈ ವಲಯವು ಬಹುಶಃ 11 ಕೋಟಿ ಕೃಷಿ ಘಟಕಗಳು ಮತ್ತು 6.5 ಕೋಟಿ MSMË (ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು) ಘಟಕಗಳನ್ನು ಒಳಗೊಂಡಿದೆ. ಅವುಗಳನ್ನು ವಾರ್ಷಿಕವಾಗಿ ಸಮೀಕ್ಷೆ ಮಾಡುವುದು ಕಷ್ಟಕರ.
ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ASUSE ಸಮೀಕ್ಷೆಯ ಮೂಲಕ ನಿಯತಕಾಲಿಕವಾಗಿ ದತಾಂಶವನ್ನು ಸಂಗ್ರಹಿಸಲಾಗುತ್ತದೆ. ವಾರ್ಷಿಕವಾಗಿ ASUSE ಸಮೀಕ್ಷೆಯನ್ನು ಹೊರತರಲು ಸರ್ಕಾರ ಈಗ ಬದ್ಧವಾಗಿದೆ. ಆದರೆ ASUSE ಸಮೀಕ್ಷೆಯ ದತ್ತಾಂಶವು ಜನಗಣತಿ ಮತ್ತು ನಗರ ಚೌಕಟ್ಟಿನ ಸಮೀಕ್ಷೆಯ (UFS) ದತ್ತಾಂಶವನ್ನು ಅವಲಂಬಿಸಿದೆ. 2011 ರಿಂದ ಯಾವುದೇ ಜನಗಣತಿ ನಡೆದಿಲ್ಲ ಮತ್ತು UFS ದತ್ತಾಂಶವು 2012-17 ಕ್ಕೆ ಸಂಬಂಧಿಸಿದ್ದಂತೆ ಮಾತ್ರ ಲಭ್ಯವಿದೆ. ಆದ್ದರಿಂದ, ಹಳೆಯ ದತ್ತಾಂಶವನ್ನು ಬಳಸಲಾಗುತ್ತಿದೆ.
ಸಾಮಾನ್ಯವಾಗಿ, ಪ್ರಸ್ತುತ ದತ್ತಾಂಶದ ಅನುಪಸ್ಥಿತಿಯಲ್ಲಿ, ಹಿಂದಿನ ದತ್ತಾಂಶವು ಸ್ವೀಕಾರಾರ್ಹವಾಗಿರಬೇಕು. ಆದರೆ 2016-2024ರ ಅವಧಿಯ ಆರ್ಥಿಕತೆಯು ನಾಲ್ಕು ಆಘಾತಗಳನ್ನು ಎದುರಿಸಿದ ಸಮಯವಾಗಿತ್ತು. 2016 ರಲ್ಲಿ ಅಪನಗದೀಕರಣ(Demonetisation) ಸರಕು ಮತ್ತು ಸೇವಾ ತೆರಿಗೆಯ (GST) ಅನುಷ್ಠಾನ , ಬ್ಯಾಂಕೇತರ ಹಣಕಾಸು ಕಂಪನಿಗಳ (NBFC) ಬಿಕ್ಕಟ್ಟು ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗ. ಈ ಆಘಾತಗಳು ಸಂಭವಿಸಿದಾಗ, ಮಾದರಿಗಾಗಿ (Sample) ಆಘಾತ ಪೂರ್ವದ ದತ್ತಾಂಶಗಳನ್ನು ಬಳಸುವುದರಿಂದ ರಚನಾತ್ಮಕ ಬದಲಾವಣೆಗಳ ಕಾರಣ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಈ ನಾಲ್ಕು ಆಘಾತಗಳು ನಿರ್ದಿಷ್ಟವಾಗಿ ಅಸಂಘಟಿತ ವಲಯದ ಮೇಲೆ ಪರಿಣಾಮ ಬೀರಿವೆ, ಇದನ್ನು ASUSE ಸಮೀಕ್ಷೆ ಅಂದಾಜಿಸಲು ಪ್ರಯತ್ನಿಸುತ್ತದೆ. ಈ ಅವಧಿಯಲ್ಲಿ ಚರ ಬಂಡವಾಳದ (Working capital) ಕೊರತೆಯಿಂದಾಗಿ ಅನೇಕ ಘಟಕಗಳು ಮುಚ್ಚಲ್ಪಟ್ಟವು. ಸಾವಿರಾರು ಕಾರ್ಮಿಕರು ವಲಸೆ ಹೋದರು, ಪಟ್ಟಣಗಳು ಮತ್ತು ಹಳ್ಳಿಗಳ ವ್ಯಾಪ್ತಿಯು ಬದಲಾದವು. ಹೀಗಾಗಿ, 2011 ರ ಜನಗಣತಿಯನ್ನು ಆಧರಿಸಿದ ಮಾದರಿ ಸೂಕ್ತವಲ್ಲ. ಮುಚ್ಚಲ್ಪಟ್ಟ ಉದ್ಯಮಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ, ಹಾಗಾಗಿ ಉಳಿದಿರುವ ಘಟಕಗಳು ಮಾತ್ರ ಮಾದರಿಯ ಭಾಗವಾಗಿರುತ್ತವೆ. ASUSE-2024 ವರದಿಯಲ್ಲಿ “… 16,382 FSUಗಳನ್ನು (ಗ್ರಾಮೀಣ ಪ್ರದೇಶದಲ್ಲಿ 8,495 ಮತ್ತು ನಗರಗಳಲ್ಲಿ 7,887) ಸಮೀಕ್ಷೆ ಮಾಡಲಾಗಿದೆ ಹಾಗೂ ಸಮೀಕ್ಷೆ ನಡೆಸಿದ ಒಟ್ಟು ಸಂಸ್ಥೆಗಳ ಸಂಖ್ಯೆ 4,58,938 (ಗ್ರಾಮೀಣ ಪ್ರದೇಶಗಳಲ್ಲಿ 2,58,296 ಮತ್ತು ನಗರ ಪ್ರದೇಶಗಳಲ್ಲಿ 2,00,642). ASUSE-2022-23 ರ ಸಮೀಕ್ಷೆಯು 6.50 ಕೋಟಿ ಉದ್ಯಮಗಳ ಅಂದಾಜು ನೀಡುತ್ತದೆ ” ಎಂದು ಹೇಳಲಾಗಿದೆ.
ಈ ಆಘಾತಗಳಿಂದಾಗಿ, ಗ್ರಾಮೀಣ-ನಗರ ಅನುಪಾತ ಮತ್ತು ಸಣ್ಣ ಮತ್ತು ದೊಡ್ಡ ಘಟಕಗಳ ಅನುಪಾತವು ಬದಲಾಗುತ್ತಲೇ ಇರುವುದರಿಂದ ಈ ಸಮೀಕ್ಷೆಗಳಲ್ಲಿ ಸಂಸ್ಥೆಗಳ ಸಂಖ್ಯೆ ಮತ್ತು ಅವುಗಳಲ್ಲಿನ ಉದ್ಯೋಗಕ್ಕೆ ಹೆಚ್ಚಿನ ಒಲವು ತೋರುತ್ತವೆ.
PLFS ಮತ್ತು CMIE ನಡುವಿನ ವ್ಯತ್ಯಾಸಗಳು
PLFS ವ್ಯಾಪಕವಾಗಿ ಉಲ್ಲೇಖಿಸಲಾಗುವ ಮತ್ತೊಂದು ಅಧಿಕೃತ ದತ್ತಾಂಶ ಮೂಲವಾಗಿದೆ. ಇದು CMIE ದತ್ತಾಂಶದಿಂದ ಬಹಳಷ್ಟು ಭಿನ್ನವಾಗಿ ಕಾಣುತ್ತದೆ. ಈ ವರದಿಯಲ್ಲಿ ಯಾರನ್ನು ಉದ್ಯೋಗಿಗಳೆಂದು ಪರಿಗಣಿಸಲಾಗುತ್ತದೆ ಎಂದು ನಿಷ್ಕರ್ಷೆ ಮಾಡುವ ವ್ಯಾಖ್ಯಾದಲ್ಲಿಯೇ ವ್ಯತ್ಯಾಸಗಳು ಕಂಡುಬರುತ್ತವೆ. CMIE ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ವ್ಯಾಖ್ಯಾನವನ್ನು ಅಳವಡಿಸಿಕೊಳ್ಳುತ್ತದೆ ಮತ್ತು ಕೆಲಸದಿಂದ ಆದಾಯವನ್ನು ಪಡೆಯುವವರನ್ನು ಮಾತ್ರ ಉದ್ಯೋಗಿಗಳೆಂದು ಪರಿಗಣಿಸುತ್ತದೆ. PLFS ಸಮೀಕ್ಷೆಯು ಆದಾಯ ಸಿಗದಿದ್ದರೂ ಕೆಲಸ ಮಾಡುತ್ತಿರುವವರನ್ನು ಪರಿಗಣಿಸುತ್ತದೆ. ಆದ್ದರಿಂದ ಉಚಿತ ದುಡಿಮೆ ಮಾಡುವವರು ಅಥವಾ ಹೊಲ-ಗದ್ದೆಗಳಲ್ಲಿ ಕೆಲಸವಿಲ್ಲದೆ ಕುಳಿತಿರುವವರನ್ನೂ ಸಹ ಉದ್ಯೋಗದಲ್ಲಿರುವವರು ಎಂದು ಪರಿಗಣಿಸುತ್ತದೆ.
ತತ್ಪರಿಣಾಮವಾಗಿ, ಕಳೆದ ಕೆಲವು ವರ್ಷಗಳಲ್ಲಿ, PLFS ಸುಮಾರು ಶೇಕಡಾ 50-55 ರಷ್ಟು ಶ್ರಮಶಕ್ತಿಯ ಭಾಗವಹಿಸುವಿಕೆಯನ್ನು ದಾಖಲಿಸಿದೆ. ಆದರೆ CMIE ಸಮೀಕ್ಷೆಯು ಈ ಅಂಕಿ ಅಂಶವು ಶೇಕಡಾ 40-45ರಷ್ಟಿದೆ ಎಂದು ಹೇಳುತ್ತದೆ. ಅಂದರೆ ಇವೆರಡರ ನಡುವೆ ಸುಮಾರು 90 ದಶಲಕ್ಷದಷ್ಟು ವ್ಯತ್ಯಾಸವಿದೆ. ಇಲ್ಲಿ ಪ್ರತಿ ವ್ಯಕ್ತಿಯೂ ಯಾವುದಾದರೂ ಒಂದು ಕೆಲಸವನ್ನು ಮಾಡಿಯೇ ತೀರುತ್ತಾರಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಉದಾಹರಣೆಗೆ, ಲಕ್ಷಾಂತರ ಗೃಹಿಣಿಯರು ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, PLFS ಸಮೀಕ್ಷೆಯು ಅಗೋಚರ ಹಾಗೂ ಪೂರ್ಣ ಉದ್ಯೋಗ ಇಲ್ಲದ ಕೆಲಸಗಾರರನ್ನು ಪರಿಗಣಿಸುತ್ತದೆ. ಆದ್ದರಿಂದ PLFSಗೆ ಸಂಬಂಧಿಸಿದಂತೆ ಹೇಳುವುದಾದರೆ ಬಹುತೇಕ ಯಾರೂ ಸಹ ನಿರುದ್ಯೋಗಿಗಳಾಗಿ ಇರುವುದಿಲ್ಲ. ಮತ್ತೊಂದೆಡೆ ಎಷ್ಟು ಜನರು ಕೆಲಸ ಹುಡುಕುವ ಪ್ರಯತ್ನವನ್ನೇ ಕೈಬಿಟ್ಟಿದ್ದಾರೆ ಎಂದು CMIE ಸಮೀಕ್ಷೆ ತಿಳಿಸುತ್ತದೆ. ಇದನ್ನು ನಿರುದ್ಯೋಗ ಎಂದೇ ಪರಿಗಣಿಸಬೇಕಾಗುತ್ತದೆ. ಆದರೆ ಅಧಿಕೃತ ಅಂಕಿಅಂಶಗಳು ಇದನ್ನು ಗುರುತಿಸುವುದಿಲ್ಲ.
ದೇಶದಲ್ಲಿ ಯುವಕರು ಕೆಲಸ ಪಡೆಯಲು ಹೆಣಗಾಡುತ್ತಿದ್ದಾರೆ ಮತ್ತು ಪರೀಕ್ಷೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ವಾಸ್ತವ ವರದಿಗಳಿಂದಲೇ ನಿರುದ್ಯೋಗದ ತಳಮಟ್ಟದ ಪರಿಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಸರ್ಕಾರ ಇದನ್ನು ನಿರಾಕರಿಸುತ್ತಿದೆ. ಇತ್ತೀಚೆಗೆ ಅಧಿಕಾರಿಗಳು ಲೋಪಗಳನ್ನೊಳಗೊಂಡ ದತ್ತಾಂಶವನ್ನು ಬಳಸುವುದರಿಂದ ಉಂಟಾಗುವ ಸಮಸ್ಯೆಗಳನ್ನು ಅಲ್ಲಗಳೆಯುತ್ತಿದ್ದಾರೆ ಅಥವಾ ಉದ್ಯೋಗವನ್ನು ಸ್ವತಂತ್ರವಾಗಿ ಅಂದಾಜು ಮಾಡದ ಆರ್‌ಬಿಐನ KLEMS ದತ್ತಾಂಶದ ಬಳಕೆಯನ್ನೂ ಅಲ್ಲಗಳೆಯುತ್ತಿದ್ದಾರೆ. ಹೆಚ್ಚುತ್ತಿರುವ ಯುವಕರ ಹತಾಶೆ ಮತ್ತಷ್ಟು ಉಲ್ಬಣಿಸದ ಹಾಗೆ ಸಮಸ್ಯೆಯನ್ನು ಒಪ್ಪಿಕೊಂಡು ಏಕೆ ಕಾರ್ಯನಿರ್ವಹಿಸಬಾರದು?
-೦-೦-೦-೦-