
ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಯೊಬ್ಬರು ರೆಕಾರ್ಡ್ ರೂಮ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಶಾಂತಿನಗರ ಬಿಎಂಟಿಸಿ ಕಚೇರಿಯಲ್ಲಿ ನಡೆದಿದೆ. ಮೃತರನ್ನು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಮಹೇಶ್ ಉಕ್ಕಲಿ (42) ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ನೇಮಕಾತಿ ವಿಭಾಗದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.ಇವರು ಕುಟುಂಬದವರೊಂದಿಗೆ ಕೆಂಗೇರಿಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ರೆಕಾರ್ಡ್ ರೂಮ್ನ ಬೀಗ ಪಡೆದಿದ್ದ ಮಹೇಶ್ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಮನೆಗೆ ಬಾರದೆ ಇರುವುದರಿಂದ ಆತಂಕಗೊಂಡ ಕುಟುಂಬಸ್ಥರು ಮಂಗಳವಾರ ಮಧ್ಯಾಹ್ನ ಶಾಂತಿನಗರ ಬಿಎಂಟಿಸಿ ಕಚೇರಿ ಬಳಿ ಬಂದಿ ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣ ಏನು ಎಂದು ಈವರೆಗೂ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





