ಕಾಲ ಚಕ್ರ ಉರುಳಿದಂತೆ ಸಂಬಂಧಗಳು ಗಟ್ಟಿಯಾಗುತ್ತವೆ. ಇಲ್ಲವೇ ಸಂಬಂಧಗಳು ದೂರ ಆಗುತ್ತವೆ. ಇದು ಕರ್ನಾಟಕದ ರಾಜಕಾರಣ ಪಾಲಿಗೆ ಅಕ್ಷರಶಃ ಸತ್ಯವಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಕರ್ನಾಟಕದಿಂದ ಆಯ್ಕೆಯಾಗಿರುವ ನೂತನ ಸಂಸದರ ಜೊತೆಗೆ ಸಭೆ ನಡೆಸಿ ಕೇಂದ್ರ ಸರ್ಕಾರದಿಂದ ಆಗಬೇಕಿರುವ ಯೋಜನೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಜೊತೆಗೆ ಖಾಸಗಿ ಹೋಟೆಲ್ನಲ್ಲಿ ಸಭೆ ಬಳಿಕ ಔತಣಕೂಟವನ್ನು ಆಯೋಜನೆ ಮಾಡಲಾಗಿತ್ತು. ರಾಜ್ಯದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರು(Members of Parliament), ರಾಜ್ಯಸಭಾ ಸದಸ್ಯರು(Members of the Rajya Sabha), ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಹೆಚ್.ಡಿ ಕುಮಾರಸ್ವಾಮಿ(HD Kumaraswamy), ಪ್ರಹ್ಲಾದ್ ಜೋಶಿ(Prahlad Joshi), ವಿ ಸೋಮಣ್ಣ(V Somanna), ಶೋಭಾ ಕರಂದ್ಲಾಜೆ(Shobha Karandlaje) ಭಾಗಿಯಾಗಿದ್ದರು. ರಾಜ್ಯದ ಸಮಸ್ಯೆಗಳು ಹಾಗು ಅಭಿವೃದ್ಧಿ ಬಗ್ಗೆ ಗಹನವಾದ ಚರ್ಚೆ ನಡೆಸಲಾಯ್ತು. ಈ ಸಭೆಯಲ್ಲಿ ಎಲ್ಲರನ್ನೂ ಸೆಳೆದ ಎರಡು ವಿಚಾರಗಳು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ರಾಜಕಾರಣದಲ್ಲಿ ಸದಾ ಕಾಲ ಹಾವು ಮುಂಗೂಸಿಯಂತೆ ಮಾತಿನಲ್ಲೇ ಸಮರ ಸಾರುವ ಸಿಎಂ ಸಿದ್ದರಾಮಯ್ಯ ಹಾಗು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ರಾಜ್ಯದ ವಿಚಾರ ಬಂದಾಗ ಪರಸ್ಪರ ಕೈಜೋಡಿಸಿದ್ದಾರೆ. ಕುಮಾರಸ್ವಾಮಿ ಕೈ ಕುಲುಕಿದ ಸಿಎಂ ಸಿದ್ದರಾಮಯ್ಯ ಭುಜ ತಟ್ಟಿ ಸ್ವಾಗತ ಮಾಡಿಕೊಂಡಿದ್ದಾರೆ. ‘ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ’ ಸರಿಪಡಿಸಿ, ಸಹಕರಿಸಿ ಎಂದು ಕೇಂದ್ರ ಸಚಿವರು ಹಾಗು ಸಂಸದರಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳನ್ನು ಬಿಡೋಣ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ ಎಂದು ದೆಹಲಿಯ ಸಂಸದರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಆದರೆ ಪಕ್ಕದಲ್ಲೇ ಇದ್ದ ಕುಮಾರಸ್ವಾಮಿ ಅವರನ್ನು ಮಾತನಾಡಿಸದೆ ದ್ವೇಷ ಮುಂದುವರಿಸಿದ್ದಾರೆ.
2018ರಲ್ಲಿ ಪರಸ್ಪರ ಕೈ ಕೈ ಹಿಡಿದುಕೊಂಡು ಜೋಡಿ ಎತ್ತುಗಳು ಎಂದು ರಾಜ್ಯದ ಜನರ ಎದುರು ನಿಂತಿದ್ದ ಕುಮಾರಸ್ವಾಮಿ ಹಾಗು ಡಿ.ಕೆ ಶಿವಕುಮಾರ್ ಪರಸ್ಪರ ರಾಜಕಾರಣದಲ್ಲಿ ಶತ್ರುಗಳಾಗಿ ನಿಂತಿದ್ದಾರೆ. ಇನ್ನು ಶತ್ರುಗಳ ಶತ್ರು ಮಿತ್ರ ಎನ್ನುವ ಮಾತಿನಂತೆ ಕುಮಾರಸ್ವಾಮಿ ಜೊತೆಗೆ ಸಿದ್ದರಾಮಯ್ಯ ಸ್ನೇಹಪೂರ್ವಕ ಹಸ್ತ ಚಾಚಿದ್ದಾರೆ. ಸಭೆಯಲ್ಲಿ ಡಿ.ಕೆ ಶಿವಕುಮಾರ್ ಪಕ್ಕದಲ್ಲೇ ಕೇಂದ್ರ ಸಚಿವ ಕುಮಾರಸ್ವಾಮಿಗೆ ಆಸನದ ವ್ಯವಸ್ಥೆ ಮಾಡಿತ್ತಾದರೂ ಸಭೆಯಲ್ಲಿ ಕುಮಾರಸ್ವಾಮಿ ಜೊತೆಗೆ ಡಿ.ಕೆ ಶಿವಕುಮಾರ್ ಮಾತನಾಡಲಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ ಸೋಲಿಗೆ ಕುಮಾರಸ್ವಾಮಿ ಕಾರಣ ಎಂದು ಡಿಸಿಎಂ ಶಿವಕುಮಾರ್ ಮಾತನಾಡಿಸಲಿಲ್ಲ. ವಿಶೇಷ ಅಂದ್ರೆ ಅದೇ ಡಿ.ಕೆ ಶಿವಕುಮಾರ್ ಸೋಲಿಸಿದ ಮಂಜುನಾಥ್ ಜೊತೆಗೆ ಶಿವಕುಮಾರ್ ಮಾತನಾಡಿದರು.
15 ಹಣಕಾಸು ಆಯೋಗದದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಒತ್ತಡ ಹೇರುವುದು, ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆ ಮೇಲೆ ಒತ್ತಡ ಹಾಕಬೇಕು. ಸಂಸತ್ ಒಳಗೂ ಹೊರಗೂ ರಾಜ್ಯದ ಪರ ಒಗ್ಗಟ್ಟು ಪ್ರದರ್ಶಿಸೋಣ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ ಮೇಲ್ದರ್ಜೆಗೆ ಏರಿಸುವುದು ಜೊತೆಗೆ ಏರ್ಪೋರ್ಟ್ಗೆ Air cargo complex ಪ್ರಸ್ತಾವನೆ ಬಗ್ಗೆಯೂ ಚರ್ಚೆ ನಡೀತು. ಮೈಸೂರು ಅಥವಾ ಹಾಸನಕ್ಕೆ ಮತ್ತೊಂದು IIT ನೀಡಲು ಪ್ರಸ್ತಾವನೆ ಸಲ್ಲಿಸುವುದು ಪಶ್ಚಿಮಘಟ್ಟದ ಜನರಿಗಾಗಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಮನವಿ ಮಾಡುವುದಕ್ಕೂ ತಿಳಿಸಲಾಯ್ತು. ರಾಜ್ಯದ ಪ್ರಮುಖ ರೈಲ್ವೆ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಸಿಗಬೇಕು. ಗ್ರಾಮ ಸಡಕ್ ಯೋಜನೆಗೆ ಮತ್ತಷ್ಟು ಆರ್ಥಿಕ ನೆರವು ಘೋಷಿಸಬೇಕು. ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವುದು. ಘೋಷಿತ ಭದ್ರಾ ಯೋಜನೆಯ 5300 ಕೋಟಿ ಬಿಡುಗಡೆ, ರಾಯಚೂರಿಗೆ ಏಮ್ಸ್ ಆಸ್ಪತ್ರೆ ಮಂಜೂರಾತಿಗೆ ಮನವಿ ಸೇರಿದಂತೆ ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡುವ ಬಗ್ಗೆ ಮಾತುಕತೆ ನಡೀತು.
ರಾಜಕಾರಣ ಬಿಟ್ಟು ರಾಜ್ಯದ ವಿಚಾರ ಎಂದು ಬಂದಾಗ ಸಿಎಂ ಸಿದ್ದರಾಮಯ್ಯ ಸ್ವಪ್ರತಿಷ್ಠೆಯನ್ನು ಪಕ್ಕಕ್ಕೆ ಇಟ್ಟು ಕುಮಾರಸ್ವಾಮಿಯನ್ನು ನಗು ಮೊಗದಲ್ಲೇ ಸ್ವಾಗತ ಮಾಡಿದ್ದಾರೆ. ಆದರೆ ಇತ್ತೀಚಿಗಷ್ಟೇ ಸೋಲಿನ ಕಹಿ ಉಂಡಿರುವ ಡಿ.ಕೆ ಶಿವಕುಮಾರ್ ಮಾತ್ರ ಆ ಸೋಲಿನ ಆಘಾತದಿಂದ ಹೊರ ಬಂದಿಲ್ಲ ಎನ್ನುವುದನ್ನು ತನ್ನ ಮುಖಭಾವದಲ್ಲೇ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಬೇಕು ಎನ್ನುವ ಹಂಬಲ ಇರುವ ಶಿವಕುಮಾರ್ ನಡವಳಿಕೆ ಅನುಕೂಲಕರ ಅಲ್ಲ ಎನ್ನುವಂತಾಗಿದೆ. ರಾಜಕಾರಣವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ.. ಅದರಲ್ಲೂ ರಾಜ್ಯದ ವಿಚಾರ ಎಂದು ಬಂದಾಗ ಎಲ್ಲಾ ದುಷ್ಮನಿ ಮರೆತು ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ಇದನ್ನು ಡಿ.ಕೆ ಶಿವಕುಮಾರ್ ಅರ್ಥ ಮಾಡಿಕೊಳ್ಳಬೇಕಿದೆ ಅಲ್ಲವೇ..? ಕೇಂದ್ರದಿಂದ ಅನುದಾನ ಬರಬೇಕು ಎಂದು ಮಾತನಾಡಿಸದೆ ಮುಖ ತಿರುಗಿಸಿದರೆ ಆದೀತೇ..?