ಬಾರುಕೋಲು ರಂಗಸ್ವಾಮಿ ಅವರ 40ನೆಯ ಜನ್ಮದಿನಂದು ಮಂಡಿಸಿದ ಉಪನ್ಯಾಸದ ಲೇಖನ ರೂಪ
05 ಜೂನ್ 2024
ಭಾರತದ ರಾಜಕಾರಣದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ವಿದ್ಯಮಾನ ಎಂದರೆ ರಾಜಕೀಯ ಪಕ್ಷಗಳು ಹಾಗೂ ನಾಯಕರು ಅನುಕರಿಸುವ/ಅನುಸರಿಸುವ ತತ್ವ ಅಥವಾ ಸಿದ್ಧಾಂತಗಳು. ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಆದ ತಾತ್ವಿಕ ನೆಲೆಗಳನ್ನು ಹೊಂದಿರುತ್ತವೆ. ಅಧಿಕಾರ ರಾಜಕಾರಣದ ವ್ಯಾಪ್ತಿಯಿಂದ ಹೊರತಾಗಿಯೂ ತಮ್ಮ ತಾತ್ವಿಕತೆಯನ್ನು ಕಾಪಾಡಿಕೊಂಡು ಜನಮಾನಸದ ನಡುವೆ ತತ್ವಾಧಾರಿತ ರಾಜಕಾರಣದ ಬಗ್ಗೆ ಸಂವಾದದಲ್ಲಿ ತೊಡಗಿರುತ್ತವೆ. ಮಾರ್ಕ್ಸ್ , ಗಾಂಧಿ, ಲೋಹಿಯಾ, ಜೆಪಿ, ಅಂಬೇಡ್ಕರ್, ಪೆರಿಯಾರ್ ಮುಂತಾದ ಅನೇಕ ದಾರ್ಶನಿಕ ನಾಯಕರು ಬಿಟ್ಟುಹೋಗಿರುವ ತತ್ವಗಳನ್ನು ತಮ್ಮ ಸಮಕಾಲೀನ ರಾಜಕಾರಣದ ಅನುಕೂಲತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಿ ಬಂದಿರುವ ಬಂಡವಾಳಿಗ ಪಕ್ಷಗಳು (ಬೂರ್ಷ್ವಾ ಪಕ್ಷಗಳು) ಕಾಲಕಾಲಕ್ಕೆ ಈ ತತ್ವಗಳ ನಮ್ಯತೆಯನ್ನು (elasticity) ಬಳಸಿಕೊಳ್ಳುತ್ತಾ ಅಧಿಕಾರ ರಾಜಕಾರಣದ ಒಂದು ಭಾಗವಾಗಿ ಉಳಿದುಕೊಂಡು ಬೆಳೆಯುತ್ತಾ ಬಂದಿವೆ. ಭಾರತದ ಉದ್ದಗಲಕ್ಕೂ ಬಹುಮುಖ್ಯವಾಗಿ ಲೋಹಿಯಾ ತತ್ವಗಳಿಗೆ ಬದ್ಧವಾಗಿರುವ ಪಕ್ಷಗಳು ಜಾತಿ ಕೇಂದ್ರಿತ ರಾಜಕಾರಣದ ಕೇಂದ್ರ ಬಿಂದುಗಳಾಗಿವೆ.
ಮತ್ತೊಂದು ನೆಲೆಯಲ್ಲಿ ಮಾರ್ಕ್ಸ್ವಾದಿ ಆಲೋಚನೆಗಳನ್ನು ಅಳವಡಿಸಿಕೊಂಡು ಕೆಲವೊಮ್ಮೆ Dogmatic ಆಗಿ, ಕೆಲವೊಮ್ಮೆ ತಾತ್ವಿಕವಾಗಿ ಅನುಕರಿಸುವ ಎಡಪಕ್ಷಗಳು ತಮ್ಮ ಎಡಪಂಥಿಯ ಸೈದ್ಧಾಂತಿಕ ನೆಲೆಗಳಲ್ಲೇ ಈವರೆಗೂ ಚುನಾವಣಾ ರಾಜಕಾರಣದ ಭಾಗವಾಗಿ ಉಳಿದುಕೊಂಡಿವೆ. ಅಂಕಿಸಂಖ್ಯೆಗಳನ್ನು ಗಮನಿಸುವಾಗ, 18ನೆಯ ಲೋಕಸಭೆಯಲ್ಲಿ ಎಡಪಕ್ಷಗಳು ಕೇವಲ 9 ಸಂಸದರನ್ನು ಹೊಂದಿದ್ದರೂ, ತಮ್ಮ ಸೈದ್ಧಾಂತಿಕ ಸ್ಪಷ್ಟತೆಯನ್ನು, ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವುದು ಸ್ಪಷ್ಟ. ಮಾರ್ಕ್ಸ್ವಾದದ ಬಗ್ಗೆ Dogmatic ಆಗದೆ ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭ-ಸನ್ನಿವೇಶಗಳಿಗೆ ಪೂರಕವಾಗಿ ಮಾರ್ಕ್ಸ್ನ ವರ್ಗ ಸಂಘರ್ಷ ಮತ್ತು ಸಮತಾವಾದದ ಆಶಯಗಳನ್ನು ಭಾರತದ ಸಮಾಜಕ್ಕೆ ಅನ್ವಯಿಸಿಕೊಂಡು, ಅನುಸಂಧಾನ ನಡೆಸುವ ಜವಾಬ್ದಾರಿ ಎಡಪಕ್ಷಗಳ ಮೇಲಿದೆ. ಚುನಾವಣಾ ರಾಜಕಾರಣದಲ್ಲಿ ಈ ಅನುಸಂಧಾನವನ್ನು ಕಾಣಬಹುದಾದರೂ, ಮೂಲ ಸೈದ್ಧಾಂತಿಕ ನೆಲೆಯಲ್ಲಿ ಎಡಪಕ್ಷಗಳು ತಮ್ಮ ಕೋಶೀಕರಣಕ್ಕೊಳಗಾದ (Celluralised) ಸ್ಥಿತಿಯಿಂದ ಇನ್ನೂ ಪೂರ್ಣಪ್ರಮಾಣದಲ್ಲಿ ಹೊರಬಂದಿಲ್ಲದಿರುವುದು ವಾಸ್ತವ.
ತತ್ವ ಮತ್ತು ಸಿದ್ದಾಂತಗಳ ನಡುವೆ
ತತ್ವ ಮತ್ತು ಸಿದ್ಧಾಂತ , ಇವೆರಡರ ನಡುವಿನ ವ್ಯತ್ಯಾಸವನ್ನು ಸಮಕಾಲೀನ ಯುಗದ ಯುವ ಸಮೂಹ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಿದೆ. ತತ್ವ ಎನ್ನುವುದು ಒಂದು ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ನಡಿಗೆಯ ಮಾದರಿ. ವ್ಯಕ್ತಿ, ಪಕ್ಷ ಅಥವಾ ಸಂಘಟನೆ ಯಾವ ಮಾರ್ಗದಲ್ಲಿ ಸಾಗಬೇಕು, ಯಾವ ಸಾಮಾಜಿಕ ಆಶಯಗಳನ್ನು ಹೊಂದಿರಬೇಕು, ಸಾಂಸ್ಕೃತಿಕವಾಗಿ ಯಾವ ನೆಲೆಗಳನ್ನು ಅವಲಂಬಿಸಬೇಕು, ಸಾಮಾಜಿಕ ಸಂಘರ್ಷದಲ್ಲಿ ಯಾವ ಮಾರ್ಗ ಅನುಸರಿಸಬೇಕು, ಸಮಾಜ ಸುಧಾರಣೆಗಳಿಗೆ ಹೇಗೆ ತೆರೆದುಕೊಳ್ಳಬೇಕು ಇತ್ಯಾದಿ. ಗಾಂಧಿ, ಲೋಹಿಯಾ ಮತ್ತು ಒಂದು ನೆಲೆಯಲ್ಲಿ ಅಂಬೇಡ್ಕರ್ ಅವರ ತಾತ್ವಿಕ ನೆಲೆಗಳನ್ನೂ ಈ ಚೌಕಟ್ಟಿನೊಳಗೆ ವ್ಯಾಖ್ಯಾನಿಸಬಹುದು. ಮತ್ತೊಂದೆಡೆ ಸಿದ್ದಾಂತ ಎನ್ನುವುದು ಒಂದು ವಿಶಾಲ ಸಂರಚನೆಗೊಳಗಾದ, ಆಳವಾದ ವೈಚಾರಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವ ತತ್ವ ಅಥವಾ ತಾತ್ವಿಕ ನೆಲೆ. ಅರ್ಥಾತ್ ಎಲ್ಲ ತಾತ್ವಿಕ ನೆಲೆಗಳಿಗೂ ಎಲ್ಲ ಕಾಲಗಳಲ್ಲೂ ಸೈದ್ಧಾಂತಿಕ ಚೌಕಟ್ಟುಗಳನ್ನು ನಿರ್ಮಿಸಲಾಗುವುದಿಲ
ಅದೇ ವೇಳೆ ಸೈದ್ದಾಂತಿಕ ನೆಲೆಯಲ್ಲಿ ನಿಂತಾಗ ಎಲ್ಲ ತಾತ್ವಿಕತೆಯನ್ನೂ ವಿಮರ್ಶಿಸದೆ ಒಪ್ಪಿಕೊಳ್ಳಲೂ ಆಗುವುದಿಲ್ಲ. ಏಕೆಂದರೆ ಸೈದ್ಧಾಂತಿಕ ಮಾದರಿಗಳಲ್ಲಿ ಗುರಿ, ಗುರಿ ಸಾಧನೆಯ ಮಾರ್ಗೋಪಾಯಗಳು ಹಾಗೂ ಅದಕ್ಕೆ ಅನುಸರಿಸಬೇಕಾದ ಕಾರ್ಯಸೂಚಿಗಳು ಸ್ಪಷ್ಟವಾಗಿರುತ್ತವೆ. ಅದಕ್ಕೊಂದು ರಾಜಕೀಯ ಸ್ವರೂಪವೂ ಇರುತದೆ. ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ತೊಡೆದುಹಾಕುವುದರಿಂದ ಸಂಪತ್ತಿನ ಸಮಾನ ಹಂಚಿಕೆಯವರೆಗೆ ಶೋಷಿತ-ದಮನಿತ ಜನತೆ ಅನುಸರಿಸಬೇಕಾದ ಕಾರ್ಯಮಾರ್ಗಗಳಿಗೆ ಒಪ್ಪಿತ ಸಿದ್ದಾಂತದ ಚೌಕಟ್ಟಿನೊಳಗೇ ಆರ್ಥಿಕ-ಸಾಂಸ್ಕೃತಿಕ-ಸಾಮಾಜಿಕ ಮಾದರಿಗಳನ್ನು ನಿರ್ವಚಿಸುವುದು ಯಾವುದೇ ಸಿದ್ಧಾಂತದ ಆದ್ಯತೆಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಭಾರತದ ಸಂದರ್ಭದಲ್ಲಿ ಮಾರ್ಕ್ಸ್ವಾದವನ್ನು, ಕೆಲವು ಮಿತಿಗಳೊಂದಿಗೆ ಅಂಬೇಡ್ಕರ್ವಾದವನ್ನು , ಸೈದ್ಧಾಂತಿಕ ಚೌಕಟ್ಟಿನೊಳಗೆ ಹೊಂದಿಸಬಹುದು. ಮಾರ್ಕ್ಸ್ ವರ್ಗ ಸಂಘರ್ಷದ ನೆಲೆಯಲ್ಲಿ, ವರ್ತಮಾನ, ಇತಿಹಾಸ ಹಾಗೂ ಭವಿಷ್ಯವನ್ನು ಗತಿತಾರ್ಕಿಕ ಭೌತವಾದದ ನೆಲೆಯಲ್ಲಿ ವ್ಯಾಖ್ಯಾನಿಸುವುದರ ಮೂಲಕ ಸಮಾಜದೊಳಗಿನ ಶೋಷಣೆ ಮತ್ತು ಅಸಮಾನತೆಗಳನ್ನು ಹೋಗಲಾಡಿಸಲು ಒಂದು ವೈಜ್ಞಾನಿಕ ತಳಹದಿಯನ್ನು ಒದಗಿಸುತ್ತಾರೆ. ಶತಮಾನಗಳನ್ನು ದಾಟಿದರೂ ಈ ಸೈದ್ದಾಂತಿಕ ನೆಲೆಗಳು ಚರ್ಚೆಗೊಳಗಾಗುತ್ತಲೇ ಇರುವುದು ಮಾರ್ಕ್ಸ್ನ ಸಾರ್ವಕಾಲಿಕತೆಯನ್ನು ನಿರೂಪಿಸುತ್ತದೆ. ಭಾರತದ ಸಂದರ್ಭದಲ್ಲಿ ಮಾರ್ಕ್ಸ್ವಾದವನ್ನು ಇಲ್ಲಿನ ಸಾಮಾಜಿಕ-ಸಾಂಸ್ಕೃತಿಕ ಭೂಮಿಕೆಯಲ್ಲಿ ಮರುನಿರ್ವಚಿಸುವ ಅಗತ್ಯತೆಯೂ ಇದೆ. ಕೈಗಾರಿಕಾ ಬಂಡವಾಳದ ಯುಗದ ಆಲೋಚನಾ ವಿಧಾನವನ್ನು ಅದೇ ತಾತ್ವಿಕ ನೆಲೆಗಟ್ಟಿನಲ್ಲಿ ಡಿಜಿಟಲ್ ಯುಗದ ಸಮಾಜದ ನಡುವೆ ಇಟ್ಟು ನಿರ್ವಚಿಸುವ ಒಂದು ಸಾಹಸವನ್ನು ಮಾಡಲೇಬೇಕಿದೆ.
ಸಮಾಜವಾದಿ-ದಲಿತ ರಾಜಕಾರಣ
ದಲಿತ ರಾಜಕಾರಣದ ಸಂಕಥನಗಳಲ್ಲಿ ಪ್ರಧಾನವಾಗಿ ಬಳಸಲಾಗುವ ಅಂಬೇಡ್ಕರ್ವಾದವು ಸುಸ್ಪಷ್ಟವಾದ ತಾತ್ವಿಕ-ತತ್ವಾಧಾರಿತ ನೆಲೆಗಳನ್ನು ಒದಗಿಸಿದರೂ, ಅಂಬೇಡ್ಕರ್ ಸ್ವತಃ ಅಪೇಕ್ಷಿಸುವಂತಹ ಸಮ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಸಿದ್ಧ ಮಾದರಿಗಳನ್ನು ಒದಗಿಸುವುದಿಲ್ಲ. ಕಾರಣವೇನೆಂದರೆ ಅಂಬೇಡ್ಕರ್ ಸಮಾಜದೊಳಗಿನ ಅಸಮಾನತೆಯ ನೆಲೆಗಳನ್ನು, ಅದರ ಕಾರಣಗಳನ್ನು ಚಾರಿತ್ರಿಕವಾಗಿ ಶೋಧಿಸಿ, ಭಾರತದ ಜಾತಿ ವ್ಯವಸ್ಥೆಯ ಒಳಸುಳಿಗಳನ್ನು ತೆರೆದಿಡುತ್ತಾರೆ. ಈ ಅಸಮಾನತೆಗಳನ್ನು ಹೋಗಲಾಡಿಸಲು ಸಾಂವಿಧಾನಿಕ ಮಾರ್ಗದ ಪರಿಹಾರೋಪಾಯಗಳನ್ನು ಸೂಚಿಸುತ್ತಾರೆ. ಆದರೆ ಸಂಘಟನಾತ್ಮಕವಾದ ಒಂದು ಕಾರ್ಯೋಪಾಯಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ವ್ಯಾಖ್ಯಾನಿಸುವುದಿಲ್ಲ. ಇದಕ್ಕೆ ಕಾರಣವೂ ಇದೆ. ಅಂಬೇಡ್ಕರ್ ಬಂಡವಾಳಶಾಹಿಯ ಲಕ್ಷಣಗಳನ್ನು ಅರಿತು, ಕಾರ್ಮಿಕರ ಹಿತದೃಷ್ಟಿಯಿಂದ ಸಮಾಜವನ್ನು ನೋಡುತ್ತಲೇ, ಪ್ರತಿಯೊಂದು ಜಾತಿಯೂ ಒಂದು ವರ್ಗ ಎಂಬ ಸರಳೀಕೃತ ಅಭಿಪ್ರಾಯಕ್ಕೆ ಬರುತ್ತಾರೆ. ಆದರೆ ಮೂಲತಃ ಸಮಾಜದಲ್ಲಿ ವರ್ಗಗಳು ಸೃಷ್ಟಿಯಾಗಲು ಕಾರಣವಾಗುವ ಉತ್ಪಾದನಾ ಸಂಬಂಧಗಳು, ಉತ್ಪಾದನಾ ಸಲಕರಣೆಗಳ ಮೇಲಿನ ಒಡೆತನದ ಸ್ವರೂಪ ಹಾಗೂ ಉತ್ಪಾದಕೀಯ ಶಕ್ತಿಗಳ ಅಧೀನತೆಯನ್ನು ಆರ್ಥಿಕ ನೆಲೆಯಲ್ಲಿ ವ್ಯಾಖ್ಯಾನಿಸಲು ಹೋಗುವುದಿಲ್ಲ. ಇದು ಅಂಬೇಡ್ಕರ್ ಅವರಲ್ಲಿ ನಾವು ಗುರುತಿಸಬಹುದಾದ ಮಿತಿಗಳೇ ಹೊರತು, ಕೊರತೆಗಳೇನಲ್ಲ.
ಇದೇ ಪ್ರಮೇಯವನ್ನು ಲೋಹಿಯಾವಾದಕ್ಕೂ ನಾವು ವಿಸ್ತರಿಸಲು ಸಾಧ್ಯವಿದೆ. ಭಾರತದ ಸಂದರ್ಭದಲ್ಲಿ ಅತ್ಯವಶ್ಯವಾಗಿ ಗುರುತಿಸಬೇಕಾದ ಜಾತಿ ಕೇಂದ್ರಿತ ಶೋಷಣೆಯ ನೆಲೆಗಳನ್ನು ಅರ್ಥೈಸುವಲ್ಲಿ ಲೋಹಿಯಾ ಯಶಸ್ವಿಯಾಗುತ್ತಾರೆ. ಆದರೆ ಈ ಶೋಷಿತರ ವಿಮೋಚನೆಯ ಹಾದಿಯಲ್ಲಿ ಎದುರಾಗುವ ಊಳಿಗಮಾನ್ಯ ವ್ಯವಸ್ಥೆ, ಅದನ್ನು ಪೋಷಿಸುವ ಆಧುನಿಕ ಬಂಡವಾಳಶಾಹಿ ಹಾಗೂ ಇವೆರಡನ್ನೂ ಒಂದೇ ಸ್ತರದಲ್ಲಿಟ್ಟು ಬೆಳೆಸುವ ಪಿತೃಪ್ರಧಾನತೆಯನ್ನು ಎದುರಿಸಲು ಅಗತ್ಯವಾದ ಸೈದ್ಧಾಂತಿಕ ಚೌಕಟ್ಟು ಲೋಹಿಯಾ/ಅಂಬೇಡ್ಕರ್ವಾದದಲ್ಲಿ ಗುರುತಿಸುವುದು ಕಷ್ಟ. ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಭಾರತದ ಮೊಟ್ಟಮೊದಲ ಸ್ತ್ರೀವಾದಿ ಎಂದು ಗುರುತಿಸಬಹುದಾದರೂ , ಸಮಕಾಲೀನ ಸ್ತ್ರೀವಾದಿ ಚಳುವಳಿಗೆ ಇರುವ ಮಿತಿಗಳನ್ನು ಗಮನಿಸಿದಾಗ ಅಲ್ಲಿಯೂ ಸಹ ಒಂದು ಸೈದ್ಧಾಂತಿಕ ಚೌಕಟ್ಟಿನ ಕೊರತೆ ಇರುವುದನ್ನು ಗಮನಿಸಬಹುದು. ಹಾಗಾಗಿಯೇ ಕಟ್ಟಾ ಲೋಹಿಯಾವಾದಿಗಳೂ, ಅಂಬೇಡ್ಕರ್ವಾದಿಗಳೂ ಕೆಲವೊಮ್ಮೆ ಸ್ವಾಯತ್ತ ಸ್ತ್ರೀವಾದಿ ಸಂಘಟನೆಗಳೂ ಸಹ ಬಿಜೆಪಿ-ಆರೆಸ್ಸೆಸ್ನ ಸೈದ್ಧಾಂತಿಕ ಸೆಳೆತಕ್ಕೆ ಸುಲಭ ತುತ್ತಾಗುವುದನ್ನು ಕಾಣಬಹುದು. ತಾತ್ವಿಕ ನೆಲೆಗಳನ್ನು ದಾಟಿ ಸೈದ್ಧಾಂತಿಕ ಚೌಕಟ್ಟನ್ನು ನಿರ್ಮಿಸದಿರುವ ಯಾವುದೇ ಜನಾಂದೋಲನಗಳಲ್ಲಿ ಈ ಕೊರತೆಯನ್ನು ಗುರುತಿಸಬಹುದು. ಆಮ್ ಆದ್ಮಿ ಪಕ್ಷ , ಬಹುಜನ ಸಮಾಜ ಪಕ್ಷ ರಾಜಕೀಯ ನಿದರ್ಶನಗಳಾಗಿ ಕಾಣುತ್ತವೆ.
ನಿದರ್ಶನ ರೂಪದಲ್ಲಿ ಹೇಳುವುದಾದರೆ, ಇತ್ತೀಚೆಗೆ ನಿಧನರಾದ ಹಿರಿಯ ರಾಜಕೀಯ ನಾಯಕರೊಬ್ಬರು ತಾವು ಪಕ್ಷಾಂತರಿಯಾದರೂ ತತ್ವಾಂತರಿ ಆಗಲಿಲ್ಲ ಎಂದು ಪದೇಪದೇ ಹೇಳುತ್ತಿದ್ದರು. ನಿಜ ಅವರು ನಂಬಿದ ಬೌದ್ಧ ತತ್ವಗಳಿಗೆ, ಅಂಬೇಡ್ಕರ್ ತತ್ವಗಳಿಗೆ ಕೊನೆಯವರೆಗೂ ನಿಷ್ಠೆಯಿಂದಲೇ ಇದ್ದರು. ಆದರೆ ಅಧಿಕಾರ ರಾಜಕಾರಣಕ್ಕೆ ಬಂದಾಗ ಆರೆಸ್ಸೆಸ್ ಪ್ರೇರಿತ ಹಿಂದುತ್ವದ ಸೈದ್ಧಾಂತಿಕ ನೆಲೆಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡು ಎರಡು ಪೀಳಿಗೆಯ ಯುವ ಸಂಕುಲವನ್ನು ಜನಸಂಘ-ಬಿಜೆಪಿ ಪಾಳಯಕ್ಕೆ ಸಮರ್ಪಿಸಿದ್ದರು. ಸೈದ್ಧಾಂತಿಕ ರಾಜಕಾರಣಕ್ಕೆ ತೆರೆದುಕೊಂಡವರಲ್ಲಿ ಈ ದ್ವಂದ್ವ ಕಾಣುವುದಿಲ್ಲ. ವರ್ತಮಾನದ ರಾಜಕಾರಣದಲ್ಲಿ ಲೋಹಿಯಾವಾದ-ಸಮಾಜವಾದಕ್ಕೆ ಬದ್ಧತೆ ತೋರುವ ಉತ್ತರ ಭಾರತದ ಎಲ್ಲ ಪಕ್ಷಗಳೂ ಇದೇ ಸುಳಿಗೆ ಸಿಲುಕಿವೆ. ತತ್ವಾಧಾರಿತ ರಾಜಕಾರಣಕ್ಕೆ ಸೈದ್ಧಾಂತಿಕ ಸ್ಪರ್ಶ ನೀಡದೆ ಹೋದರೆ, ಯಾವುದೋ ಒಂದು ಸ್ಥಾಪಿತ ಸಿದ್ಧಾಂತಕ್ಕೆ ಮಣಿಯುವ ಮೂಲಕ ಅಧಿಕಾರ ರಾಜಕಾರಣದ ಫಲಾನುಭವಿಗಳಾಗಲು ಬಯಸುವುದು ಸಾಮಾನ್ಯವಾಗಿ ಕಾಣಬಹುದಾದ ಲಕ್ಷಣ. ನೀತಿಶ್ ಕುಮಾರ್, ಪಾಸ್ವಾನ್, ಮಾಯಾವತಿ ಈ ಎಲ್ಲ ನಾಯಕರು ಇದೇ ರಾಜಕೀಯ ಮಾರ್ಗವನ್ನು ಅನುಸರಿಸಿದ್ದಾರೆ.
ಅಧಿಕಾರ ರಾಜಕಾರಣದ ನೆಲೆಯಲ್ಲಿ
ಈ ಚಂಚಲತೆ (volatility) ಅಥವಾ ನಮ್ಯತೆಯು (flexibility) ಅಧಿಕಾರ ರಾಜಕಾರಣದಲ್ಲಿ ಅವಕಾಶವಾದಕ್ಕೆ ತಕ್ಕ ಭೂಮಿಕೆಯನ್ನು ಒದಗಿಸುತ್ತದೆ. ಬಂಡವಾಳಗಾರರಿಂದಲೇ ನಿರ್ದೇಶಿಸಿ, ನಿಯಂತ್ರಿಸಿ, ನಿರ್ವಹಿಸಲ್ಪಡುವ ಬೂರ್ಷ್ವಾ ಪ್ರಜಾಪ್ರಭುತ್ವದಲ್ಲಿ ಬಹುತೇಕ ತಾತ್ವಿಕ ನೆಲೆಗಳು ಅಂತಿಮವಾಗಿ ಅಧಿಕಾರ ಕೇಂದ್ರಗಳಲ್ಲಿ ಅಸ್ತಿತ್ವ ಕಂಡುಕೊಳ್ಳುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಭಾರತದಲ್ಲಿ ಇಂದಿಗೂ ಬಲವಾಗಿರುವ ರೈತ ಚಳುವಳಿಯೂ ಸಹ ಬಹುಮುಖ್ಯವಾಗಿ ಲೋಹಿಯಾವಾದ ಮತ್ತು ಸಮಾಜವಾದಿ ತತ್ವಗಳಿಂದ ಪ್ರೇರಣೆ ಪಡೆದರೂ, ಒಂದು ಸೈದ್ಧಾಂತಿಕ ನೆಲೆ ಇಲ್ಲದಿರುವುದರಿಂದಲೇ ರೈತ ಸಂಘಟನೆಗಳಿಗೆ ಸ್ಪಷ್ಟ ರಾಜಕೀಯ ನಿಲುವು ಇಲ್ಲದಾಗಿದೆ. ಹಾಗಾಗಿಯೇ ಬಹುಪಾಲು ರೈತ ಚಳುವಳಿಗಳಲ್ಲಿ “ ಕೃಷಿ ಕಾರ್ಮಿಕರು ” ಅಸ್ತಿತ್ವ ಹೊಂದಿರುವುದಿಲ್ಲ. ಇಲ್ಲಿ ಉಂಟಾಗುವ ವರ್ಗಹಿತಾಸಕ್ತಿ ಸಂಘರ್ಷಕ್ಕೆ ಈ ತಾತ್ವಿಕ ನೆಲೆಗಳಲ್ಲಿ ಉತ್ತರವೂ ದೊರೆಯುವುದಿಲ್ಲ. ಮಾರ್ಕ್ಸ್ವಾದದ ಸೈದ್ಧಾಂತಿಕ ನೆಲೆಯಲ್ಲಿ ಕಾಣಬಹುದಾದ ಸಾಮಾಜಿಕ ವೈರುಧ್ಯಗಳನ್ನು, ಆರ್ಥಿಕ ವಿರೋಧಾಭಾಸಗಳನ್ನು ಸಮಾಜವಾದಿ ನೆಲೆಯಲ್ಲಿ ಗುರುತಿಸಲು ವಿಫಲವಾಗಿರುವುದರಿಂದಲೇ ಲೋಹಿಯಾ-ಅಂಬೇಡ್ಕರ್ವಾದಿಗಳು ಯಾವುದೋ ಒಂದು ರೀತಿಯಲ್ಲಿ ಬಲಪಂಥೀಯ ಸೈದ್ಧಾಂತಿಕ ನೆಲೆಗಳಲ್ಲಿ ಆಶ್ರಯ ಪಡೆದುಕೊಳ್ಳುವಂತಾಗುತ್ತದೆ. ಕ್ರಮವಾಗಿ ನೀತಿಶ್-ಮಾಯಾವತಿ ಇಲ್ಲಿ ಸ್ಪಷ್ಟ ಉದಾಹರಣೆಗಳಾಗಿ ಕಾಣುತ್ತಾರೆ. ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಹ ಇದೇ ದ್ವಂದ್ವವನ್ನು ಎದುರಿಸುತ್ತದೆ.
ಅಂಬೇಡ್ಕರ್ ಪರಿನಿರ್ವಾಣ ಹೊಂದಿ 70 ವರ್ಷಗಳೇ ಕಳೆಯುತ್ತಾ ಬಂದರೂ ಭಾರತದಲ್ಲಿ ಇಂದಿಗೂ ಸಹ ದಲಿತ ರಾಜಕಾರಣವನ್ನು ಒಂದು ಸ್ಪಷ್ಟ ಸೈದ್ಧಾಂತಿಕ ನೆಲೆಯಲ್ಲಿ ಏಕೆ ಸ್ಥಾಪಿಸಲಾಗಿಲ್ಲ ? ಈ ಪ್ರಶ್ನೆಗೆ ಇಂದು ಉತ್ತರ ಶೋಧಿಸಬೇಕಿದೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷ ಅಥವಾ ಕಾನ್ಷೀರಾಮ್ ಅವರ ತಾತ್ವಿಕ ನೆಲೆಗಳು ಅಂಬೇಡ್ಕರ್ವಾದವನ್ನು ತತ್ವಶಃ ಅನುಸರಿಸುತ್ತಲೇ ಬಂದಿದ್ದರೂ, ಮಾಯಾವತಿ ನೆಲದ ವಾಸ್ತವಗಳನ್ನು ಅರಿಯುವುದರಲ್ಲಿ ವಿಫಲವಾಗುತ್ತಲೇ ಇದ್ದಾರೆ. ಉತ್ತರಪ್ರದೇಶವನ್ನು ಇಂದಿಗೂ ಕಾಡುತ್ತಿರುವ ಊಳಿಗಮಾನ್ಯ-ಪಿತೃಪ್ರಧಾನತೆ ಮತ್ತು ಜಾಗತಿಕರಣ ಯುಗದ ನವಉದಾರವಾದಿ ಕಾರ್ಪೋರೇಟ್ ಬಂಡವಾಳಶಾಹಿಯು ನಿರ್ದಿಷ್ಟವಾಗಿ ಹಿಂದಿ ಬೆಲ್ಟ್ ರಾಜ್ಯಗಳ, ಸಾಮಾನ್ಯವಾಗಿ ಇಡೀ ಭಾರತದ, ದುಡಿಯುವ ವರ್ಗಗಳ ಮೇಲೆ ಸಾಧಿಸಿರುವ ಹಿಡಿತಕ್ಕೆ ಕಾರಣಗಳೇನು ? ಅಂದಿನ ಕೈಗಾರಿಕಾ-ಹಣಕಾಸು ಬಂಡವಾಳ, ಇಂದಿನ ಡಿಜಿಟಲ್ ಕಾರ್ಪೊರೇಟ್ ಬಂಡವಾಳ. ಈ ಬಂಡವಾಳದ ವಾರಸುದಾರ ಶಕ್ತಿಗಳು ಉತ್ಪಾದನೆಯ ಮೂಲಗಳ ಮೇಲೆ ಒಡೆತನ ಸಾಧಿಸುತ್ತಲೇ, ಉತ್ಪಾದನಾ ಸಲಕರಣೆಗಳನ್ನು ವಶಪಡಿಸಿಕೊಂಡು, ಉತ್ಪಾದಕೀಯ ಶಕ್ತಿಗಳ ಮೇಲೆ ಯಜಮಾನಿಕೆ ಸಾಧಿಸುತ್ತದೆ. ಅಂತಿಮವಾಗಿ ಬಂಡವಾಳಶಾಹಿ ಮಾರುಕಟ್ಟೆಗೆ ಅದೀನವಾಗುತ್ತದೆ. ನವ ಉದಾರವಾದಿ ಆರ್ಥಿಕತೆ ಇದನ್ನೇ ಪೋಷಿಸುತ್ತದೆ. ಉತ್ತರಪ್ರದೇಶದ ಯೋಗಿ ಮಾಡೆಲ್ ಎಂಬ ಅಭಿವೃದ್ಧಿ ಮಾದರಿ, ಮೋದಿಯವರ ಗುಜರಾತ್ ಮಾಡೆಲ್ನ ಹಾಗೆ ಇದೇ ಮಾರ್ಗವನ್ನು ಅನುಸರಿಸುತ್ತದೆ.
ಇದನ್ನು ಭೇದಿಸುವುದೇ ಆದರೆ ಲೋಹಿಯಾವಾದಿ ಸಮಾಜವಾದಿ ಪಕ್ಷಗಳಿಗೆ ಅಥವಾ ಅಂಬೇಡ್ಕರ್ವಾದಿ ಬಹುಜನ ಸಮಾಜ ಪಕ್ಷ-ಆರ್ಪಿಐ ಪಕ್ಷಗಳಿಗೆ ಒಂದು ಸಿದ್ಧಾಂತದ ಅವಶ್ಯಕತೆ ಇದೆ. ಈ ಪಕ್ಷಗಳು ತತ್ವಾಧಾರಿತವೇ ಹೊರತು ಸಿದ್ಧಾಂತ ಆಧಾರಿತವಲ್ಲ ಎನ್ನುವುದನ್ನು ಗಮನಿಸಬೇಕು. ಸಮ ಸಮಾಜ ಮತ್ತು ಸಮಾನತೆ ತತ್ವಗಳನ್ನು ಸಾಕಾರಗೊಳಿಸಬೇಕಾದರೆ ಈ ತತ್ವಗಳ ಅಡಿಯಲ್ಲೇ ಬಂಡವಾಳ-ಬಂಡವಾಳಗಾರ-ಬಂಡವಾಳಶಾಹಿ ಮತ್ತು ಇವುಗಳ ಹಿಡಿತದಲ್ಲಿರುವ ಸಮಾಜದ ಆರ್ಥಿಕ ನೆಲೆಗಳನ್ನು ಭೇದಿಸಬೇಕು. ಅಲ್ಲಿ ಎದುರಾಗುವ ಜಾತಿ ವೈರುಧ್ಯಗಳನ್ನು ಸಮರ್ಪಕವಾಗಿ ಎದುರಿಸಲು ಅಂಬೇಡ್ಕರ್-ಲೋಹಿಯಾ ಖಂಡಿತವಾಗಿಯೂ ನೆರವಾಗುತ್ತಾರೆ. ಆದರೆ ವರ್ಗವೈರುಧ್ಯಗಳಿಗೆ ಮುಖಾಮುಖಿಯಾದಾಗ ಈ ತತ್ವಗಳು ಸಂಪೂರ್ಣವಾಗಿ ನೆರವಾಗುವುದಿಲ್ಲ. ಇಲ್ಲಿ ಮಾರ್ಕ್ಸ್ವಾದದ ಸೈದ್ಧಾಂತಿಕ ನೆಲೆಗಳು ಬಹಳ ಮುಖ್ಯವಾಗುತ್ತದೆ. ಜಾತಿ ಶೋಷಣೆ, ಮಹಿಳಾ ದೌರ್ಜನ್ಯ ಹಾಗೂ ಸಾಮಾಜಿಕ ಅಸಮಾನತೆಗಳನ್ನು ವರ್ಗಪ್ರಜ್ಞೆಯ ಸೈದ್ದಾಂತಿಕ ನೆಲೆಯಲ್ಲಿ ಗ್ರಹಿಸಬೇಕಾದರೆ ಮಾರ್ಕ್ಸ್-ಅಂಬೇಡ್ಕರ್-ಲೋಹಿಯಾ ಅನುಸಂಧಾನ ಅತ್ಯವಶ್ಯವಾಗುತ್ತದೆ.
ಸೈದ್ದಾಂತಿಕ ರಾಜಕಾರಣದ ತುರ್ತು
ಇಲ್ಲಿ ನಮಗೆ ಸೈದ್ಧಾಂತಿಕ ರಾಜಕಾರಣದ ತುರ್ತು ಎದ್ದು ಕಾಣುತ್ತದೆ. ಅಧಿಕಾರ ರಾಜಕಾರಣದ ಮಾರ್ಗೋಪಾಯಗಳನ್ನು ನಿರ್ದೇಶಿಸುವ ತಾತ್ವಿಕ ನೆಲೆಗಳೊಂದಿಗೇ, ಈ ರಾಜಕಾರಣದ ಮೂಲಕ ನಾವು ಅಪೇಕ್ಷಿಸುವ ಸಮಾಜ ಸುಧಾರಣೆ, ಕ್ರಾಂತಿಕಾರಿ ಬದಲಾವಣೆ ಮತ್ತು ಜಾತಿ-ಲಿಂಗತ್ವ ಶೋಷಣೆಯಿಂದ ಮುಕ್ತವಾದ ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ರೂಪಿಸಬೇಕಾದರೆ ನಾವು ಸಾಮಾನ್ಯವಾಗಿ ಅನುಸರಿಸುವ ಸಮಾನತೆಯ ಮಾರ್ಗಗಳಿಗೆ ಒಂದು ಸೈದ್ಧಾಂತಿಕ ಚೌಕಟ್ಟು ನೀಡಲೇಬೇಕಾಗುತ್ತದೆ. ಅಧಿಕಾರ ರಾಜಕಾರಣದ ಪರಿಸರದಲ್ಲಿ ಇದು ಏಕೆ ಸಾಧ್ಯವಾಗುತ್ತಿಲ್ಲ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ? ಬಲಪಂಥೀಯ ಹಿಂದುತ್ವ ಸಿದ್ಧಾಂತವನ್ನು ವಿಸ್ತರಿಸಲು ಅಗತ್ಯವಾದ ಕಾರ್ಯಕರ್ತರ ಪಡೆಗಳನ್ನು (Cadres) ಬಿಜೆಪಿ-ಆರೆಸ್ಸೆಸ್ ವ್ಯವಸ್ಥಿತವಾಗಿ ಬೆಳೆಸುತ್ತಲೇ ಬಂದಿರುವುದಲ್ಲದೆ ಈ Cadreಗಳು ಆಡಳಿತ ವ್ಯವಸ್ಥೆಯ ಆಯಕಟ್ಟಿನ ಜಾಗಗಳನ್ನು ಆಕ್ರಮಿಸಲೂ ನೆರವಾಗಿವೆ.
ಒಂದು ವೈಜ್ಞಾನಿಕ ಸೈದ್ಧಾಂತಿಕ ನೆಲೆ ಇದ್ದರೂ ಸಹ ಈ Cadre building ಇತ್ತೀಚಿನ ವರ್ಷಗಳಲ್ಲಿ ಎಡಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ಮೂರು ದಶಕಗಳ ಕಾಲ ಆಡಳಿತ ನಡೆಸಿದ ಪಶ್ಚಿಮಬಂಗಾಲದಲ್ಲಿ ಈ ಕೊರತೆಯನ್ನು ಸ್ಪಷ್ಟವಾಗಿ ಕಾಣಬಹುದು. ಯಾವುದೇ ಸೈದ್ಧಾಂತಿಕ ಚೌಕಟ್ಟಿಗೆ ಒಳಪಡದ ಲೋಹಿಯಾವಾದ-ಸಮಾಜವಾದ-ಅಂಬೇಡ್ಕರ್ವಾದದ ರಾಜಕೀಯ ಪಕ್ಷಗಳಿಗೆ Cadre building ಒಂದು ಆದ್ಯತೆಯೇ ಆಗುವುದಿಲ್ಲ. ಇಲ್ಲಿ ಕೇವಲ ನಿರ್ದಿಷ್ಟ ನಾಯಕತ್ವದ ಹಿಂಬಾಲಕರು ಸೃಷ್ಟಿಯಾಗುತ್ತಾರೆ. ಈ ಮಾರ್ಗದಲ್ಲಿ ಸುಪ್ರೀಂ ನಾಯಕರು ಉಗಮಿಸುತ್ತಾರೆ, ಅವರ ಸುತ್ತ ಪ್ರಭಾವಳಿಗಳು ಬೆಳೆದುಕೊಳ್ಳುತ್ತವೆ, ನಾಯಕತ್ವದ ಆರಾಧನೆ ರೂಢಿಯಾಗುತ್ತದೆ. ಅವರ ಮಾರ್ಗದರ್ಶನವೇ ಪಕ್ಷದ ಕಾರ್ಯಸೂಚಿಗಳಾಗಿಬಿಡುತ್ತದೆ. ಅಂಬೇಡ್ಕರ್ ಇದನ್ನು ಬಯಸದೆ ಇದ್ದರೂ ದಲಿತ ಚಳುವಳಿಗಳಲ್ಲಿ, ಅಂಬೇಡ್ಕರ್ವಾದದ ಪಕ್ಷಗಳಲ್ಲಿ ಇದೇ ಮಾದರಿಯನ್ನು ಇಂದಿಗೂ ಅನುಸರಿಸಲಾಗುತ್ತದೆ. ಪಕ್ಷಗಳ ಕಾರ್ಯಕರ್ತರ ಪಕ್ಷ ನಿಷ್ಠೆ, ತತ್ವ ನಿಷ್ಠೆ ಎರಡೂ ಸಹ ನಾಯಕತ್ವದ ಇಚ್ಚೆಗನುಸಾರವಾಗಿ ಬದಲಾಗುತ್ತಿರಬೇಕಾಗುತ್ತದೆ. ಇಲ್ಲಿ ಸೃಷ್ಟಿಯಾಗುವ Intellectual bankruptcy, ಅಂದರೆ ಬೌದ್ಧಿಕ ದಿವಾಳಿತನ ಅಧಿಕಾರ ರಾಜಕಾರಣದ ಅಂಗಳದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸಮಯಸಾಧಕತನ ಇತ್ಯಾದಿಗಳಿಗೆ ಕಾರಣವಾಗುತ್ತದೆ.
ಭಾರತದಲ್ಲಿ ನಾವು ಗುರುತಿಸಬಹುದಾದ ಬಹುದೊಡ್ಡ ಕೊರತೆ ಎಂದರೆ ಸೈದ್ಧಾಂತಿಕ ರಾಜಕಾರಣ. ಸಾಮಾನ್ಯ ರಾಜಕೀಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲಾಗುವ ಸೈದ್ಧಾಂತಿಕ ರಾಜಕಾರಣ ಮೂಲತಃ ತತ್ವಾಧಾರಿತ ರಾಜಕೀಯವೇ ಆಗಿರುತ್ತದೆ. ಸ್ಪಷ್ಟ ಸಿದ್ಧಾಂತಗಳಡಿ ಸಕ್ರಿಯ ರಾಜಕಾರಣದಲ್ಲಿರುವ ಎಡಪಕ್ಷಗಳು ಭಾರತೀಯ ಸಮಾಜದ ಒಳಸ್ತರದ ಪದರಗಳನ್ನು ಭೇದಿಸುವಲ್ಲಿ ಪೂರ್ಣ ಯಶಸ್ಸನ್ನು ಕಂಡಿಲ್ಲವೆಂದೇ ಹೇಳಬಹುದು. ಜಾತಿ, ಉಪಜಾತಿ, ಬುಡಕಟ್ಟು ಸಮಾಜಗಳಲ್ಲಿ ಸೃಷ್ಟಿಯಾಗುವ ವೈರುಧ್ಯಗಳನ್ನು ವರ್ಗಪ್ರಜ್ಞೆಯ ನೆಲೆಯಲ್ಲಿಟ್ಟು ನೋಡುವ ಮೂಲಕ, ಅಲ್ಲಿನ ಸಾಂಸ್ಕೃತಿಕ ಸೆಲೆಗಳನ್ನು ತಲುಪುವ ಹಾದಿಯಲ್ಲಿ ಎಡಪಕ್ಷಗಳು ಬಹುದೂರ ಸಾಗಬೇಕಿದೆ. ಇಲ್ಲಿ ಢಾಳಾಗಿ ಕಾಣುವ ತಾತ್ವಿಕ ನೆಲೆಗಳೆಲ್ಲವೂ ಅಧಿಕಾರ ರಾಜಕಾರಣದಲ್ಲಿ ತಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಂಡು ಶಿಥಿಲವಾಗುತ್ತಲೇ ಹೋಗುತ್ತವೆ. ಈ ಪ್ರಕ್ರಿಯೆಯ ಮೂಲ ಫಲಾನುಭವಿ ಎಂದರೆ ಹಿಂದುತ್ವ ರಾಜಕಾರಣ ಮತ್ತು ಅದನ್ನು ನಿರ್ದೇಶಿಸುವ ಬಿಜೆಪಿ-ಆರೆಸ್ಸೆಸ್ ಹಾಗೂ ಬಲಪಂಥೀಯ ರಾಜಕೀಯ. ಇದರ ಆಶ್ರಯದಲ್ಲೇ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ, ಊಳಿಗಮಾನ್ಯ ಧೋರಣೆಯನ್ನು ಉಳಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳು.
ಅಂತಿಮವಾಗಿ
ಈ ನಿರ್ವಾತದಲ್ಲೇ ವರ್ತಮಾನ ಭಾರತದ ಯುವ ಸಮೂಹ ಸೈದ್ಧಾಂತಿಕ ರಾಜಕಾರಣದತ್ತ ಸಾಗಬೇಕಿದೆ. ಇಲ್ಲಿ ಸೃಷ್ಟಿಯಾಗುವ ಬೌದ್ಧಿಕ ನೆಲೆಗಳಲ್ಲಿ ಮಾರ್ಗದರ್ಶಕರಾಗಿ ರೂಪುಗೊಳ್ಳುವ ವ್ಯಕ್ತಿ-ಸಂಸ್ಥೆ-ಸಂಘಟನೆಗಳು ಕೇವಲ ಹಿಂಬಾಲಕರನ್ನು ಸೃಷ್ಟಿಸದೆ, ಸೈದ್ಧಾಂತಿಕ ಕಾರ್ಯಪಡೆಗಳನ್ನು ಅಂದರೆ Cadreಗಳನ್ನು ಸೃಷ್ಟಿಸಬೇಕಾಗುತ್ತದೆ. ಇದಕ್ಕೆ ಅತ್ಯವಶ್ಯವಾಗಿ ಬೇಕಾಗಿರುವುದು ಮುಕ್ತ ಅಧ್ಯಯನ, ಸಂವಾದ, ಸಂಕಥನ ಹಾಗೂ ಇತಿಹಾಸಕ್ಕೆ ಮುಖಾಮುಖಿಯಾಗುತ್ತಲೇ ಎಲ್ಲ ತಾತ್ವಿಕ-ಸೈದ್ಧಾಂತಿಕ ನೆಲೆಗಳೊಡನೆಯೂ ಅನುಸಂಧಾನ ನಡೆಸುವ ಮನಸ್ಥಿತಿ. “ ತೆರೆದ ಮನದಿಂದ ಬಾಗಿಲು ತೆರೆದಾಗ ಒಳನುಗ್ಗುವ ಬದಲಾವಣೆಯ ಗಾಳಿ ಅಲ್ಲಿನ ವಾತಾವರಣವನ್ನು ತಿಳಿಗೊಳಿಸುತ್ತದೆ. ಅಲ್ಲಿ ಎಲ್ಲರೂ-ಎಲ್ಲ ತತ್ವ ಸಿದ್ಧಾಂತಗಳೂ ಪ್ರಸ್ತುತವಾಗುತ್ತವೆ. ಈ ವಾತಾವರಣದಲ್ಲಿ ಯುವ ಸಮೂಹ ಗ್ರಹಿಸಬಹುದಾದ ತಾತ್ವಿಕ-ಸೈದ್ಧಾಂತಿಕ ಚಿಂತನೆಗಳನ್ನು ಮೊನಚುಗೊಳಿಸುವ ಜವಾಬ್ದಾರಿ ಹಿರಿಯ ತಲೆಮಾರಿನ ಮೇಲಿದೆ ”.
ನಮ್ಮ ನಡುವೆ ಬಾಗಿಲು ತೆರೆಯುವವರಿದ್ದಾರೆ ಆದರೆ ಮನಸ್ಸನ್ನು ತೆರೆಯುವವರಿಗೆ ನಿರ್ಬಂಧಗಳನ್ನು ಒಡ್ಡಲಾಗುತ್ತದೆ. ಏಕಮುಖೀ ಅಧ್ಯಯನ ಮತ್ತು ಚಿಂತನೆ ಭಾರತದ ಬಹುಮುಖೀ-ಬಹುಸಾಂಸ್ಕೃತಿಕ ಚರಿತ್ರೆ ಹಾಗೂ ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಯಾವುದೇ ರೀತಿಯಲ್ಲೂ ನೆರವಾಗುವುದಿಲ್ಲ ಎಂಬ ಪರಿಜ್ಞಾನ ನಮ್ಮಲ್ಲಿರಲೇಬೇಕು. ತತ್ವಬದ್ಧ-ಸಿದ್ಧಾಂತಬದ್ಧ ರಾಜಕಾರಣಿಗಳು ಹಾಗೂ ಸಮಾಜದ ಬುದ್ಧಿಜೀವಿ ವರ್ಗ, Intellectual clasş ಈ ಅರಿವನ್ನು ತಮ್ಮಲ್ಲೇ ಮೂಡಿಸಿಕೊಳ್ಳಬೇಕು. ಇದು ವರ್ತಮಾನ ಭಾರತದ ತುರ್ತು. ದೇಶದ ಜನಸಂಖ್ಯೆಯಲ್ಲಿ ಶೇ 50ರಷ್ಟಿರುವ ಯುವ ಸಂಕುಲ ಈ ವಾಸ್ತವವನ್ನು ಅರಿಯುವಂತೆ ಮಾಡುವುದು ಹಿರಿ ತಲೆಮಾರಿನ ನೈತಿಕ ಹೊಣೆ, ಸಾಮಾಜಿಕ ಜವಾಬ್ದಾರಿ, ರಾಜಕೀಯ ಕರ್ತವ್ಯ.
-೦-೦-೦-೦-