—–ನಾ ದಿವಾಕರ—–
ಅಧಿಕಾರ ರಾಜಕಾರಣದ ಅಭಿಪ್ರಾಯ ಸ್ಪಷ್ಟವಾಗಿದೆ-ಸಾಂಸ್ಕೃತಿಕ ವಲಯ ಸ್ಪಂದಿಸಬೇಕಿದೆ
ಕೆಲವು ದಿನಗಳ ಮುನ್ನ ಸಾಂಸ್ಕೃತಿಕ ಅಕಾಡೆಮಿ-ಪ್ರಾಧಿಕಾರಗಳ ಮುಖ್ಯಸ್ಥರು, ಸದಸ್ಯರು ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಸಭೆ ಸೇರಿರುವುದು ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸಾಹಿತ್ಯ-ರಂಗಭೂಮಿ-ಲಲಿತಕಲೆ ಮೊದಲಾದ ಸಾಂಸ್ಕೃತಿಕ ಜಗತ್ತನ್ನು ಪ್ರತಿನಿಧಿಸುವವರು ಸರ್ಕಾರದೊಡನೆ ಅಥವಾ ಸಚಿವರೊಡನೆ ಚರ್ಚೆ ಸಂವಾದ ನಡೆಸುವುದು ಅಪರಾಧವೇನಲ್ಲ. ಸಂಸ್ಕೃತಿ ಸಚಿವರಾಗಲೀ, ಗೃಹ ಸಚಿವರಾಗಲೀ ಅಥವಾ ಮುಖ್ಯಮಂತ್ರಿಗಳೂ ಈ ಸಂಸ್ಥೆಗಳ ಮುಖ್ಯಸ್ಥರೊಡನೆ ಆರೋಗ್ಯಕರ ಚರ್ಚೆ ನಡೆಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಭೂಮಿಕೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಸಮಾಲೋಚನೆ ನಡೆಸಬಹುದು. ಪ್ರಜಾಪ್ರಭುತ್ವದಲ್ಲಿ ಇದು ಅಗತ್ಯವೂ ಹೌದು. ಸರ್ಕಾರದ ಅನುದಾನ, ನೆರವು ಮತ್ತು ಧನ ಸಹಾಯದೊಡನೆಯೇ ನಡೆಯಬೇಕಾದ ಈ ಸಂಸ್ಥೆಗಳು ಒಂದು ಹಂತದಲ್ಲಿ ಆಡಳಿತಾರೂಢ ಪಕ್ಷದ ಮರ್ಜಿಗೆ ಒಳಗಾಗಿರುವುದು ಅನಪೇಕ್ಷಿತ ಎನಿಸಿದರೂ ವಾಸ್ತವ.
ಆದರೆ ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕಿದೆ. ಸರ್ಕಾರವು ತಾನೆ ಸ್ಥಾಪಿಸುವ ಅಕಾಡೆಮಿ-ಪ್ರಾಧಿಕಾರ ಇತ್ಯಾದಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕ ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಯಾವುದೇ ಚುನಾಯಿತ ಸರ್ಕಾರವಾದರೂ ತನ್ನ ಸೈದ್ಧಾಂತಿಕ ನಿಲುವುಗಳಿಗೆ ಅನುಗುಣವಾಗಿ ಈ ಸಾಂಸ್ಥಿಕ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ರಾಜ್ಯದ ಸಾಂಸ್ಕೃತಿಕ ಜಗತ್ತಿನ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ-ಸಮರ್ಥ ವ್ಯಕ್ತಿಗಳನ್ನು ಸಾಂಸ್ಥಿಕ ಹುದ್ದೆಗಳಿಗೆ ನೇಮಿಸುವುದು ಅನೂಚಾನವಾಗಿ ನಡೆದುಬಂದಿರುವ ಪದ್ಧತಿ. ಇತರ ನಿಗಮ ಮಂಡಲಿಗಳ ಹಾಗೆಯೇ ಈ ಸಂಸ್ಥೆಗಳೂ ಸಹ ಸರ್ಕಾರದಿಂದಲೇ ಸ್ಥಾಪನೆಯಾಗುವುದು ವಾಸ್ತವ. ಆದರೆ ವಾಣಿಜ್ಯಾಸಕ್ತಿಯಿಂದ ಸ್ಥಾಪಿಸಲಾಗುವ ನಿಗಮ ಮಂಡಲಿಗಳಿಗೂ, ಸಾಹಿತ್ಯ-ಕಲೆ-ರಂಗಭೂಮಿ-ಯಕ್ಷಗಾನ-ಲಲಿತಕಲೆ ಇತ್ಯಾದಿ ವಲಯಗಳಲ್ಲಿ ಕಾರ್ಯನಿರ್ವಹಿಸಬೇಕಾದ ಸಾಂಸ್ಕೃತಿಕ ಸಂಸ್ಥೆಗಳಿಗೂ ಅಪಾರ ಅಂತರ ಇರುವುದನ್ನು ಗುರುತಿಸಬೇಕಿದೆ.
ಸಂಸ್ಕೃತಿ ಚಿಂತನೆಯ ನೆಲೆಗಳು
ಸಾಂಸ್ಕೃತಿಕ ಸಂಸ್ಥೆಗಳು ಲಾಭದಾಯಕ ಸ್ಥಾವರಗಳಲ್ಲ. ಅಲ್ಲಿ ಹುದ್ದೆಗಳನ್ನು ಅಲಂಕರಿಸುವ ವ್ಯಕ್ತಿಗಳು ಸ್ವ-ಹಿತಾಸಕ್ತಿಯನ್ನು ಬದಿಗಿಟ್ಟು, ತಮ್ಮ ಸಂಕುಚಿತ ಜಾತಿ-ಮತ-ಧರ್ಮ ಇತ್ಯಾದಿಗಳ ಅಸ್ಮಿತೆಗಳನ್ನು ಕಳಚಿಟ್ಟು, ತಾವು ಸಂಪಾದಿಸಿರುವ ಸಾಮಾಜಿಕ ಸ್ಥಾನಮಾನ ಅಥವಾ ಆರ್ಥಿಕ ಅಂತಸ್ತುಗಳನ್ನು ಮರೆತು, ಕನ್ನಡ-ಕರ್ನಾಟಕ ಸಂಸ್ಕೃತಿಯ ಬೆಳವಣಿಗೆಗಾಗಿ, ಸಮಾಜದ ಸಾಂಸ್ಕೃತಿಕ ಅಭ್ಯುದಯವನ್ನು ಸಾಧಿಸುವುದಕ್ಕಾಗಿ ಶ್ರಮಿಸಬೇಕಾಗುತ್ತದೆ. ನಿಗಮ-ಮಂಡಲಿಗಳಂತೆ ಈ ಸಂಸ್ಥೆಗಳ ಪದಾಧಿಕಾರಿಗಳು ಸರ್ಕಾರಕ್ಕೆ ಉತ್ತರದಾಯಿಯಾಗಬೇಕಿಲ್ಲ, ಬದಲಾಗಿ ಸಮಾಜಕ್ಕೆ ಉತ್ತರದಾಯಿಯಾಗುತ್ತಾರೆ. ಸರ್ಕಾರದ ಅನುದಾನ-ಧನ ಸಹಾಯ ಪಡೆದರೂ ಸಹ ಅದರ ಸದ್ವಿನಿಯೋಗವಾಗುವುದು ಸಾಂಸ್ಕೃತಿಕ ನೆಲೆಗಳ ವಿಸ್ತಾರದಲ್ಲಿ ಹಾಗೂ ಅಲ್ಲಿ ಕಾಣಬಹುದಾದ ಬೌದ್ಧಿಕ ಚಿಂತನೆಗಳ ವಿಸ್ತರಣೆಯಲ್ಲಿ. ಅಕಾಡೆಮಿ-ಪ್ರಾಧಿಕಾರಗಳ ಮುಖ್ಯಸ್ಥರು ಹಾಗೂ ಸದಸ್ಯರು ಸಮಾಜವನ್ನು ಪ್ರತಿನಿಧಿಸುವ ಪರಿಚಾರಕರೇ ಹೊರತು ಸಾಂಸ್ಥಿಕ ವಾರಸುದಾರರಲ್ಲ.
ಹಾಗಾಗಿಯೇ ಸಾಂಸ್ಕೃತಿಕ ವಲಯದ ಸಂಸ್ಥೆಗಳು ಸ್ವಾಯತ್ತವಾಗಿರಬೇಕು ಎಂದು ಆಶಿಸಲಾಗುತ್ತದೆ. ಇವು ಸ್ವತಂತ್ರ ಸಂಸ್ಥೆಗಳಲ್ಲ ಎಂದ ಮಾತ್ರಕ್ಕೆ ಸ್ವಾಯತ್ತತೆಯನ್ನು ಕಳೆದುಕೊಳ್ಳಬೇಕು ಎಂದೇನಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎನ್ಸಿಇಆರ್ಟಿ, ಐಎಚ್ಆರ್ಸಿ ಮುಂತಾದ ಶೈಕ್ಷಣಿಕ ಸಂಸ್ಥೆಗಳನ್ನು, ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ), ಎಫ್ಟಿಐಐ ಹಾಗೂ ಇತರ ಸಾಹಿತ್ಯ-ಕಲಾ ಅಕಾಡೆಮಿಗಳನ್ನು ಹೇಗೆ ತನ್ನ ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದೆ ಎಂಬುದನ್ನು ಗಮನಿಸುತ್ತಲೇ ಬಂದಿದ್ದೇವೆ. ಇದರಿಂದ ಈ ಸಂಸ್ಥೆಗಳು ಹೇಗೆ ತಮ್ಮ ಸೃಜನಶೀಲತೆಯನ್ನು ಕಳೆದುಕೊಂಡು ಅಧಿಕಾರಶಾಹಿ ಕೇಂದ್ರಗಳಾಗಿವೆ ಎನ್ನುವುದನ್ನೂ ಗುರುತಿಸಿದ್ದೇವೆ. ಅಧಿಕಾರ ರಾಜಕಾರಣದ ಸ್ವಾರ್ಥ ಹಿತಾಸಕ್ತಿಗಳು ಹಾಗೂ ಆಳ್ವಿಕೆಯ ತಾತ್ವಿಕ ದಾಳಿಗಳಿಗೆ ಸಿಲುಕಿ ಈ ಸಂಸ್ಥೆಗಳು ತಮ್ಮ ಸ್ವಂತಿಕೆ-ಸ್ವಾಯತ್ತತೆ ಎರಡನ್ನೂ ಕಳೆದುಕೊಂಡು ನಿಂತಿವೆ. ಕರ್ನಾಟಕದಲ್ಲೂ ಹಿಂದಿನ ಸರ್ಕಾರದ ಆಳ್ವಿಕೆಯಲ್ಲಿ ರಂಗಾಯಣದಂತಹ ಉನ್ನತಾದರ್ಶ ಸಂಸ್ಥೆಯೂ ಹೇಗೆ ಸೈದ್ಧಾಂತಿಕ ರಾಜಕಾರಣದ ಪ್ರಯೋಗಶಾಲೆಯಾಗಿತ್ತು ಎನ್ನುವ ದೃಷ್ಟಾಂತ ನಮ್ಮ ಮುಂದಿದೆ.
ಈ ಅಪಾಯಗಳನ್ನು ಅರಿತೇ ಕರ್ನಾಟಕದ ಸಾಂಸ್ಕೃತಿಕ ಮನಸುಗಳು ರಾಜ್ಯದ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಗಾಗಿ ಆಗ್ರಹಿಸುತ್ತಲೇ ಬಂದಿವೆ. ಮೈಸೂರಿನಲ್ಲಿರುವ ಪ್ರತಿಷ್ಠಿತ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನೂ ಒಳಗೊಂಡಂತೆ ಕನ್ನಡ ಭಾಷೆ-ಕಲೆ-ಸಂಸ್ಕೃತಿಯನ್ನು ನಿರ್ದೇಶಿಸಿ ಬೆಳೆಸುವ ಎಲ್ಲ ಅಕಾಡೆಮಿ-ಪ್ರಾಧಿಕಾರಗಳೂ ಸಹ ಸ್ವಾಯತ್ತತೆಗಾಗಿ ಹಪಹಪಿಸುತ್ತಿವೆ. ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಮಾತ್ರಕ್ಕೆ ಈ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳಬೇಕು ಎಂದು ಹೇಳುವುದು ಅಕ್ಷಮ್ಯ. ಈ ಸಂಸ್ಥೆಯ ನಿರ್ವಾಹಕರಾಗಿ ನೇಮಕವಾಗುವ ಅಧ್ಯಕ್ಷ-ನಿರ್ದೇಶಕ-ಸದಸ್ಯರು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಿಲ್ಲ. ಸಾಂಸ್ಕೃತಿಕ ಜಗತ್ತಿನ ವಿವಿಧ ಆಯಾಮಗಳನ್ನು ಬಳಸುವ ಮೂಲಕ ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳನ್ನೂ, ಕಳಚಿಹೋಗುತ್ತಿರುವ ಸಮನ್ವಯತೆಯ ನೆಲೆಗಳನ್ನೂ ಸಂರಕ್ಷಿಸುವುದು ಈ ಪದಾಧಿಕಾರಿಗಳ ನೈತಿಕ ಜವಾಬ್ದಾರಿಯಾಗಿರುತ್ತದೆ.
ಹಾಗಾಗಿಯೇ ನಿಗಮ ಮಂಡಲಿಗಳು ಅಪೇಕ್ಷಿಸದ ಸ್ವಾಯತ್ತತೆಯನ್ನು ಸಾಂಸ್ಕೃತಿಕ ಸಂಸ್ಥೆಗಳು ಸಹಜವಾಗಿ ಬಯಸುತ್ತವೆ. ಈ ವಲಯದ ಸಾಂಸ್ಥಿಕ ಸ್ವಾಯತ್ತತೆ ಕುಸಿದಷ್ಟೂ ಸೃಜನಶೀಲತೆಯೂ ಶಿಥಿಲವಾಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಸರ್ಕಾರಕ್ಕೂ ಇರಬೇಕು, ಸಂಸ್ಥೆಯ ನಿರ್ವಾಹಕರಿಗೂ ಇರಬೇಕು. ಆದರೆ ವಾಸ್ತವ ಭಿನ್ನವಾಗಿಯೇ ಇದೆ ಎನ್ನುವುದನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಯುತವಾಗಿ ನಿರೂಪಿಸಿಬಿಟ್ಟಿದೆ. ಕೆಲವು ದಿನಗಳ ಹಿಂದೆ ಸಾಂಸ್ಕೃತಿಕ ವಲಯದ ಎಲ್ಲ ಸಾಂಸ್ಥಿಕ ಪ್ರತಿನಿಧಿಗಳನ್ನು ಕೆಪಿಸಿಸಿ ಕಚೇರಿಗೆ ಆಹ್ವಾನಿಸಿ ಸಭೆ ನಡೆಸುವ ಹಿಂದಿನ ಸರ್ಕಾರದ ಸಾಂಸ್ಕೃತಿಕ ರಾಜಕಾರಣಕ್ಕೆ ಹೊಸ ರಾಜಕೀಯ ಆಯಾಮವನ್ನು ನೀಡಿದೆ. ಕಾಂಗ್ರೆಸ್ ಪಕ್ಷದ ಅಧಿಕೃತ ಕಚೇರಿಯಲ್ಲಿ ನಡೆದ ಸಭೆಗೆ ಅಕಾಡೆಮಿ-ಪ್ರಾಧಿಕಾರದ ಪ್ರತಿನಿಧಿಗಳು ಏಕೆ ಹೋಗಬೇಕಿತ್ತು ಎಂಬ ಪ್ರಶ್ನೆ ಪ್ರಜ್ಞಾವಂತ ಸಂಸ್ಕೃತಿ ಚಿಂತಕರನ್ನು ಕಾಡಲೇಬೇಕಲ್ಲವೇ ? ಈ ಬೆಳವಣಿಗೆಯ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. (ನೋಡಿ: ಆಳ್ವಿಕೆಯ ದಾರ್ಷ್ಟ್ಯವೂ ಸಾಂಸ್ಕೃತಿಕ ಸ್ವಾಯತ್ತತೆಯೂ;
ಸಾಂಸ್ಕೃತಿಕ ರಾಜಕಾರಣದ ಛಾಯೆ
ಈ ನಡುವೆ ಸರ್ಕಾರದ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ “ ಕಾಂಗ್ರೆಸ್ ಪಕ್ಷದ ಕಚೇರಿಗೆ ಸಾಹಿತಿಗಳನ್ನು ಕರೆದು ಸಭೆ ನಡೆಸಿದ್ದು ನಾನೇ, ಅದರಲ್ಲಿ ತಪ್ಪೇನಿದೆ ? ಸಾಹಿತಿಗಳೂ ರಾಜಕಾರಣಿಗಳೇ ಅವರೂ ರಾಜಕಾರಣಕ್ಕೆ ಬರಬಹುದು,,,,,” ಎಂದು ಹೇಳಿರುವುದು ವರದಿಯಾಗಿದೆ. ಇನ್ನೂ ಮುಂದುವರೆದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿಗಳು “ ಅವೆಲ್ಲಾ ಸ್ವಾಯತ್ತ ಸಂಸ್ಥೆಗಳಲ್ಲ,,,,,ಅವರದ್ದೇ ಸಿದ್ದಾಂತ ಇಟ್ಟುಕೊಂಡು ಅವರೂ ರಾಜಕೀಯ ಮಾಡ್ತಾರೆ,,,,,” ಎಂದು ಹೇಳಿರುವುದು ವರದಿಯಾಗಿದೆ. ಈ ರಾಜಕೀಯ ಹೇಳಿಕೆಯ ಹಿಂದಿರುವ ಯಜಮಾನಿಕೆಯ ಮನಸ್ಥಿತಿ ಮತ್ತು ಸರ್ಕಾರದ ಅಸೂಕ್ಷ್ಮ ಧೋರಣೆಯನ್ನು ಖಂಡಿಸಲೇಬೇಕಿದೆ. ಸಾಂಸ್ಕೃತಿಕ ಸಂಸ್ಥೆಗಳು ಸ್ವತಂತ್ರ ಅಲ್ಲದಿರಬಹುದು ಆದರೆ ಅವುಗಳ ಸ್ವಾಯತ್ತತೆಯನ್ನು ಕಾಪಾಡುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಎನ್ನುವುದನ್ನು ಕಾಂಗ್ರೆಸ್ ಸರ್ಕಾರ ಅರಿತಿರಬೇಕಲ್ಲವೇ ?
ಒಂದು ಚುನಾಯಿತ ಸರ್ಕಾರಕ್ಕೆ ತಾನೇ ಸ್ಥಾಪಿಸಿರುವ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಕೊಂಚಮಟ್ಟಿನ ಅಧಿಕಾರ ಇರಬಹುದು ಅಥವಾ ಆ ಸಂಸ್ಥೆಗಳಿಗೆ ನೇಮಕ ಮಾಡುವ ಪೂರ್ಣ ಅಧಿಕಾರವೂ ಇರಬಹುದು. ಇದನ್ನು ಮೀರಿ ಸಾಂಸ್ಕೃತಿಕ ವಲಯವನ್ನು ಬೆಳೆಸುವಷ್ಟು ಮಟ್ಟಿಗೆ ಭಾರತದ ಪ್ರಜಾಪ್ರಭುತ್ವ ಇನ್ನೂ ಪಕ್ವವಾಗಿಲ್ಲ ಎನ್ನುವುದು ಸರ್ವವೇದ್ಯ. ಈ ಸಾಂಸ್ಥಿಕ ಪ್ರತಿನಿಧಿಗಳೊಡನೆ ಸಮಾಲೋಚನೆ ನಡೆಸುವ, ಸಲಹೆ ಸೂಚನೆಗಳನ್ನು ನೀಡುವ, ಮಾರ್ಗದರ್ಶನ ಒದಗಿಸುವ ನೈತಿಕ ಅಧಿಕಾರ ಖಂಡಿತವಾಗಿಯೂ ಸರ್ಕಾರಗಳಿಗೆ ಇರುತ್ತದೆ. ಆದರೆ ಇಂತಹ ಸಭೆಗಳನ್ನು ಎಲ್ಲಿ ನಡೆಸಬೇಕು ಎನ್ನುವುದು ಮುಖ್ಯವಾಗುತ್ತದೆ. ವಿಧಾನಸೌಧದ ಸಭಾಂಗಣಗಳಲ್ಲಿ, ಕನ್ನಡ ಮತ್ತು ಸಂಸ್ಕೃತಿ ಸಚಿವರ ಇಲಾಖೆಯಲ್ಲಿ, ಮುಖ್ಯಮಂತ್ರಿಗಳ ಆಡಳಿತ ಕಚೇರಿಯಲ್ಲಿ ಈ ರೀತಿಯ ಸಭೆಯನ್ನು ನಡೆಸುವುದು ಅಪೇಕ್ಷಿತ. ಆದರೆ ಪಕ್ಷದ ಅಧಿಕೃತ ಕಚೇರಿಯಲ್ಲಿ ನಡೆಸುವುದು ಅಕ್ಷಮ್ಯ, ಅನಪೇಕ್ಷಿತ. ಏಕೆಂದರೆ ಈ ಸಾಂಸ್ಥಿಕ ಪರಿಚಾರಕರು ಪಕ್ಷದ ವಕ್ತಾರರಲ್ಲ, ಸರ್ಕಾರದ ಪ್ರಚಾರಕರೂ ಅಲ್ಲ.
ದುರಂತ ಎಂದರೆ ಉಪಮುಖ್ಯಮಂತ್ರಿಗಳ ನಿಲುವನ್ನು ಸಮರ್ಥಿಸುವ ರೀತಿಯಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರು “ಕಾಂಗ್ರೆಸ್ ಪಕ್ಷವನ್ನು ಸರಿದಾರಿಗೆ ತರುವ ಜವಾಬ್ದಾರಿ ನಮ್ಮಂತಹವರ ಮೇಲಿದ್ದು, ನಾವು ಕೊಳೆಗೇರಿಗೂ, ಕಾಂಗ್ರೆಸ್ ಕಚೇರಿಗೂ ಹೋಗಲು ತಯಾರಿದ್ದೇವೆ” ಎಂದು ಹೇಳಿರುವುದು ವರದಿಯಾಗಿದೆ. (ಪ್ರವಾ ಸಂಪಾದಕೀಯ 18 ಜೂನ್) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿರುವಂತೆ ಸಾಹಿತಿಗಳಿಗೆ ರಾಜಕೀಯ ನಿಷಿದ್ಧವೇನಲ್ಲ ಅವರೂ ರಾಜಕೀಯ ಮಾಡಬಹುದು, ರಾಜಕಾರಣದಲ್ಲಿ ಸಕ್ರಿಯವಾಗಿರಬಹುದು. ಅಕಾಡೆಮಿ ಅಧ್ಯಕ್ಷರಿಗೂ ಇದು ಅನ್ವಯಿಸುತ್ತದೆ. ಆದರೆ ಈ ಸಾಂಸ್ಥಿಕ ಹುದ್ದೆಗಳಲ್ಲಿರುವವರು ಮೂಲತಃ ಸಂಸ್ಕೃತಿ ಪರಿಚಾರಕರೇ ಹೊರತು ರಾಜಕೀಯ ಪ್ರಚಾರಕರಲ್ಲ ಎಂಬ ವಾಸ್ತವವನ್ನು ಅರಿತಿರಬೇಕು. ಕನ್ನಡ ಸಾಹಿತ್ಯ-ಸಾಂಸ್ಕೃತಿಕ ವಲಯದಲ್ಲಿ ಈ ರೀತಿಯ ರಾಜಕೀಯ ವಾಸನೆ ಹೆಚ್ಚಾಗಿರುವುದರಿಂದಲೇ ಸಾಹಿತ್ಯಕ ಮೌಲ್ಯಗಳು ಸತತವಾಗಿ ಕುಸಿಯುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಕಳೆದ ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ ಇದು ಪರಾಕಾಷ್ಠೆ ತಲುಪಿದ್ದನ್ನು ಮೈಸೂರಿನ ರಂಗಾಯಣದ ರಂಪಾಯಣದಲ್ಲಿ ಕಂಡಿದ್ದೇವೆ.
ಸಾಂಸ್ಕೃತಿಕ ಪರಿಚಾರಕರ ಆದ್ಯತೆಗಳು
ಅಕಾಡೆಮಿ-ಪ್ರಾಧಿಕಾರದ ಪದಾಧಿಕಾರಿಗಳು, ಸದಸ್ಯರು ತಮ್ಮದೇ ಆದ ಸಿದ್ಧಾಂತಗಳನ್ನು ಅನುಸರಿಸಲಾಗಲೀ, ತಾವು ಬಯಸಿದ ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿರಲಾಗಲೀ ಅಥವಾ ಪಕ್ಷಗಳ ಅಧಿಕೃತ ಪ್ರಚಾರಕರಾಗಿ ದುಡಿಯುವುದಕ್ಕಾಗಲೀ ಯಾವುದೇ ಆಕ್ಷೇಪಗಳಿಲ್ಲ. ಆದರೆ ಹೀಗೆ ಮುನ್ನಡೆಯುವ ಮುನ್ನ ತಾವು ನಿಂತ ನೆಲವನ್ನು ಒಮ್ಮೆ ನೋಡಿಕೊಳ್ಳಬೇಕಲ್ಲವೇ ? ವ್ಯಕ್ತಿಗತವಾದ ರಾಜಕೀಯ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಲಾಗುವುದಿಲ್ಲ. ಆದರೆ ಆಡಳಿತ ಪಕ್ಷದ ಪ್ರತಿನಿಧಿಗಳಾಗಿ ಸಾಂಸ್ಕೃತಿಕ ಸಂಸ್ಥೆಗಳ ನಿರ್ವಹಣೆಯನ್ನು ನಡೆಸುವುದಾದರೆ ಅಲ್ಲಿ ವಂದಿಮಾಗಧರ , ಭಟ್ಟಂಗಿಗಳ ಲೋಕವೇ ಸೃಷ್ಟಿಯಾಗಿಬಿಡುತ್ತದೆ ಎನ್ನುವ ಎಚ್ಚರಿಕೆ ಇರಬೇಕಲ್ಲವೇ ? ಈ ಸಂಸ್ಥೆಗಳ ಸ್ಥಾಪನೆಯ ಹಿಂದೆ ಇರುವ ಉದಾತ್ತ ಆಲೋಚನೆಗಳನ್ನು ಗೌರವಿಸುವುದೇ ಆದರೆ, ರಾಜಪ್ರಭುತ್ವದ ಪಳೆಯುಳಿಕೆಗಳನ್ನು ಕೊನೆಗೊಳಿಸುತ್ತಾ , ಆಸ್ಥಾನ ಕಲಾವಿದರ ಸಂತತಿಯನ್ನು ಕೊನೆಗಾಣಿಸುವ ಉನ್ನತ ಚಿಂತನೆ ನಮ್ಮಲ್ಲಿರಬೇಕಲ್ಲವೇ ?
ಈ ಎಚ್ಚರಿಕೆ ನಮ್ಮಲ್ಲಿಲ್ಲದೆ ಹೋದರೆ ಆಡಳಿತಪಕ್ಷಗಳು ತಮ್ಮ ಚುನಾವಣಾ ಲಾಭದ ದೃಷ್ಟಿಯಿಂದ ಸಾಂಸ್ಕೃತಿಕ ಸಂಸ್ಥೆಗಳನ್ನು ನಿರ್ವಹಿಸಲಾರಂಭಿಸುತ್ತವೆ. ಕೇಂದ್ರ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಇದನ್ನೇ ಮಾಡುತ್ತಾ ಬಂದಿದೆ. ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲೂ ಇದೇ ಪ್ರಯೋಗವನ್ನು ಮಾಡಿದೆ. ಕಳೆದ ಚುನಾವಣೆಗಳಲ್ಲಿ ಹಿಂದುತ್ವ ರಾಜಕಾರಣವನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಕರ್ನಾಟಕದ ಪ್ರಗತಿಪರ ಮನಸುಗಳು, ಪ್ರಜ್ಞಾವಂತ ಮತದಾರರು ಹಾಗೂ ತಳಸಮುದಾಯಗಳು ಈ ರೀತಿಯ ಪ್ರಯೋಗಗಳಿಂದ ಮುಕ್ತವಾದ ಒಂದು ಆರೋಗ್ಯಕರ ಸಾಂಸ್ಕೃತಿಕ ಲೋಕವನ್ನು ನಿರೀಕ್ಷಿಸುತ್ತಿದ್ದಾರೆ. ರಾಜಕೀಯ ಹಿತಾಸಕ್ತಿಗಾಗಿಯೇ ಅಧಿಕಾರ ಕೇಂದ್ರಗಳ ಮುಂದೆ ಕೈಕಟ್ಟಿ ನಿಲ್ಲುವ ಕೆಲವೇ ವ್ಯಕ್ತಿಗಳತ್ತ ನೋಡುತ್ತಾ ಇಡೀ ಸಾಂಸ್ಕೃತಿಕ ವಲಯವನ್ನೇ ಕಲುಷಿತಗೊಳಿಸುವುದು ಬಿಜೆಪಿಯ ಸಾಂಸ್ಕೃತಿಕ ರಾಜಕಾರಣದ ಮತ್ತೊಂದು ಚಹರೆಯಾಗಿ ಕಾಣುತ್ತದೆ.
ರಾಜ್ಯ ಸರ್ಕಾರದ ಈ ನಡೆಯ ವಿರುದ್ಧ ರಾಜ್ಯದ ಸಾಹಿತ್ಯ-ಸಂಸ್ಕೃತಿ ವಲಯ ಎದ್ದುನಿಲ್ಲಬೇಕಿದೆ. ಈಗಾಗಲೇ ಅಕಾಡೆಮಿ-ಪ್ರಾಧಿಕಾರದ ಹುದ್ದೆಗಳನ್ನು ಅಲಂಕರಿಸಿರುವವರು ಉಪಮುಖ್ಯಮಂತ್ರಿಯವರ ಹೇಳಿಕೆಗೆ ಪ್ರತಿಕ್ರಯಿಸಬೇಕಿದೆ. ಇದು ಅವರ ನೈತಿಕ ಜವಾಬ್ದಾರಿ. “ ನಾವು ನೀವೆಣಿಸದಂತಹವರಲ್ಲ ” ಎಂದು ಖಚಿತವಾಗಿ ಹೇಳುವುದೇ ಆದರೆ ತಮ್ಮ ಸ್ಥಾನಗಳನ್ನು ತ್ಯಜಿಸಿ ಹೊರಬರಬೇಕಾಗುತ್ತದೆ. ಆದರೆ ಈವರೆಗೂ ಈರೀತಿಯ ಮೆಲುದನಿಯೂ ಕೇಳಿಬಂದಿಲ್ಲದಿರುವುದು ಸೋಜಿಗ ಮೂಡಿಸುತ್ತದೆ. ಅಥವಾ ಫಲಾಕಾಂಕ್ಷಿಗಳೋ ಫಲಾನುಭವಿಗಳೋ ಎನಿಸಿಕೊಳ್ಳುವುದಾದರೆ ಸ್ಥಾನಭದ್ರ ಮಾಡಿಕೊಳ್ಳಲು ಅಡ್ಡಿಯಿಲ್ಲ.ಭವಿಷ್ಯದ ತಲೆಮಾರಿಗೆ ಒಂದು ಸ್ಪಷ್ಟ ಸಾಂಸ್ಕೃತಿಕ ಹಾದಿಯನ್ನು ತೋರಬೇಕಾದ ಜವಾಬ್ದಾರಿ ವರ್ತಮಾನದ ಸಮಾಜದ ಹಿರಿಯ ತಲೆಮಾರಿನ ಮೇಲಿದೆ, ಈ ಸಮಾಜದ ಪ್ರಜ್ಞಾವಂತ ಸಾಂಸ್ಕೃತಿಕ ಮನಸುಗಳ ಮೇಲಿದೆ. ಈ ಜವಾಬ್ದಾರಿ ನಿಭಾಯಿಸುವುದರಲ್ಲಿ ನಾವು ವಿಫಲವಾದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ.
-೦-೦-೦-