• Home
  • About Us
  • ಕರ್ನಾಟಕ
Thursday, November 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಆಳ್ವಿಕೆಯ ದಾರ್ಷ್ಟ್ಯವೂ ಸಾಂಸ್ಕೃತಿಕ ಸ್ವಾಯತ್ತತೆಯೂ

ನಾ ದಿವಾಕರ by ನಾ ದಿವಾಕರ
June 17, 2024
in Uncategorized
0
ಆಳ್ವಿಕೆಯ ದಾರ್ಷ್ಟ್ಯವೂ ಸಾಂಸ್ಕೃತಿಕ ಸ್ವಾಯತ್ತತೆಯೂ
Share on WhatsAppShare on FacebookShare on Telegram

ಅಧಿಕಾರ ರಾಜಕಾರಣದ ಜಗತ್ತಿನಲ್ಲಿ ಸಾಂಸ್ಕೃತಿಕ ಸಂಸ್ಥೆಗಳು ಬಳಕೆಯ ನೆಲೆಗಳಾಗಿಯೇ ಪರಿಣಮಿಸುತ್ತವೆ

ADVERTISEMENT

ಭಾರತದ ಪ್ರಜಾಪ್ರಭುತ್ವ (INDIAN DEMOCRACY) ವ್ಯವಸ್ಥೆಯಲ್ಲಿ ಆಳ್ವಿಕೆಯ ಕೇಂದ್ರಗಳನ್ನು ಕಾಡುತ್ತಿರುವ ಒಂದು ಗಾಢ ವ್ಯಸನ ಎಂದರೆ ಅಧಿಕಾರ ವ್ಯಾಮೋಹ ಹಾಗೂ ತತ್ಸಂಬಂಧಿ ಯಜಮಾನಿಕೆಯ ಧೋರಣೆ. ಇದು ಪಾರಂಪರಿಕವಾಗಿ ಬಂದಿರುವ ಗುಣಲಕ್ಷಣಗಳಾಗಿರುವುದರಿಂದ 75 ವರ್ಷಗಳ ಸಂವಿಧಾನಬದ್ಧ ಆಳ್ವಿಕೆ ಕಳೆದರೂ, ಚುನಾಯಿತ ಪಕ್ಷಗಳು ಈ ಗೀಳಿನಿಂದ ಮುಕ್ತವಾಗಿಲ್ಲ. ಆಡಳಿತ ನಿರ್ವಹಣೆಯಲ್ಲಿ ತಮ್ಮ ರಾಜಕೀಯ ಬೆಳವಣಿಗೆಗೆ ಮತ್ತು ಅಸ್ತಿತ್ವಕ್ಕೆ ನೆರವಾಗುವಂತಹ ಎಲ್ಲ ಸಾಮಾಜಿಕ ವಲಯಗಳನ್ನೂ, ಸಾಂಸ್ಕೃತಿಕ ನೆಲೆಗಳನ್ನೂ ಅಧಿಕಾರ ರಾಜಕಾರಣದ ವ್ಯಾಪ್ತಿಗೊಳಪಡಿಸುವ ಮೂಲಕ ಎಲ್ಲ ಸಾಮಾಜಿಕ ಆಯಾಮಗಳನ್ನೂ ನಿಯಂತ್ರಿಸುವ ಮಹತ್ವಾಕಾಂಕ್ಷೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಕಾಣಬಹುದಾದ ಒಂದು ಗೀಳು. ಹಾಗಾಗಿಯೇ ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲ ಸಾಂವಿಧಾನಿಕ, ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ತಮ್ಮ ಬಿಗಿ ಹಿಡಿತ ಸಾಧಿಸುವ ತವಕ ಹಂಬಲ ಕಾಣುತ್ತದೆ.

ಕರ್ನಾಟಕದ ಸಂದರ್ಭದಲ್ಲಿ ಸಾಂಸ್ಕೃತಿಕ ವಲಯದ ಮೇಲೆ ರಾಜಕೀಯ ಛಾಯೆ ಇರುವುದು ಕಳೆದ ನಾಲ್ಕೈದು ದಶಕಗಳಿಂದ ಗುರುತಿಸಬಹುದಾದ ಲಕ್ಷಣವಾದರೂ, ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಹಿಂದುತ್ವ ರಾಜಕಾರಣದ ಆಲೋಚನೆಗಳನ್ನು ಪೋಷಿಸುವ ಸಲುವಾಗಿಯೇ ಸಾಂಸ್ಕೃತಿಕ ವಲಯದ ಎಲ್ಲ ಕೇಂದ್ರಗಳಲ್ಲೂ ಪಕ್ಷವು ತನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ತಳಪಾಯ ಹಾಕಿತ್ತು. ಬಹುತೇಕ ಅಕಾಡೆಮಿಗಳು, ಪ್ರಾಧಿಕಾರಗಳು, ರಂಗ ಸಮಾಜ, ರಂಗಾಯಣವನ್ನೂ ಸೇರಿದಂತೆ ಎಲ್ಲವೂ ಹಿಂದುತ್ವದ ತಾತ್ವಿಕ ನೆಲೆಗಳನ್ನು ವಿಸ್ತರಿಸುವ ಕೇಂದ್ರಗಳಾಗಿದ್ದವು. ಮೈಸೂರು ರಂಗಾಯಣ ಈ ನಿಟ್ಟಿನಲ್ಲಿ ಒಂದು ಪ್ರಯೋಗ ಶಾಲೆಯಾಗಿ ಪರಿವರ್ತನೆಯಾಗಿದ್ದನ್ನೂ ಗಮನಿಸಿದ್ದೇವೆ. ರಂಗಾಯಣದ ಸ್ವಾಯತ್ತತೆ ಮತ್ತು ಸಂಸ್ಕೃತಿ ಸೂಕ್ಷ್ಮತೆಗಳನ್ನೂ ಬದಿಗೊತ್ತಿ ಎಡ-ಬಲ ಸಿದ್ಧಾಂತಗಳ ಘರ್ಷಣೆಗಳನ್ನು ಸೃಷ್ಟಿಸಿ, ರಂಗಭೂಮಿಯನ್ನು ಸೈದ್ಧಾಂತಿಕ ಕರ್ಮಭೂಮಿಯನ್ನಾಗಿ ಪರಿವರ್ತಿಸುವ ಪ್ರಯತ್ನಗಳಿಗೆ ಮೈಸೂರು ರಂಗಾಯಣ ಸಾಕ್ಷಿಯಾಗಿತ್ತು.

ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ

ಕಳೆದ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವು ಜಯಶಾಲಿಯಾದಾಗ ಕರ್ನಾಟಕದ ಸಂಸ್ಕೃತಿ-ಸೂಕ್ಷ್ಮ ಮನಸುಗಳು ಕೊಂಚ ನಿರಾಳವಾದವು. ಕಾರಣ ಎಂದರೆ ಕರ್ನಾಟಕದ ಸಮನ್ವಯ ಸಂಸ್ಕೃತಿಯ ಮೂಲ ನೆಲೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಕ್ರಿಯವಾಗಿದ್ದ ಸಾವಿರಾರು ಸಾಹಿತಿ, ಕಲಾವಿದರಿಗೆ ಸಾಂಸ್ಕೃತಿಕ ವಲಯದ ಸ್ವಾಯತ್ತತೆಯನ್ನು ಮರಳಿ ಪಡೆಯುವ ಭರವಸೆ ಮೂಡಿತ್ತು. ರಾಷ್ಟ್ರಕವಿ ಕುವೆಂಪು ಆಶಯದಂತೆ ಕರ್ನಾಟಕವನ್ನು “ ಸರ್ವ ಜನಾಂಗದ ಶಾಂತಿಯ ತೋಟ ”ವನ್ನಾಗಿ ಪುನರ್‌ ನಿರ್ಮಾಣ ಮಾಡಲು ಮತದಾರರು ನೀಡಿದ ಅಮೂಲ್ಯ ಮತಗಳು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ, ಸರ್ಕಾರವು ಈ ಮಹತ್ಕಾರ್ಯಕ್ಕೆ ಅವಶ್ಯವಾದ ಸಾಂಸ್ಕೃತಿಕ ಸ್ವಾಯತ್ತತೆಯನ್ನು ಪುನರ್‌ ಸ್ಥಾಪಿಸುವ ಭರವಸೆಯೂ ಸಹ ರಾಜ್ಯದ ಜನತೆಯಲ್ಲಿ ಮೂಡಿತ್ತು.

ಆದರೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ತನ್ನ ಈ ನೈತಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸದಿರುವುದು ಸಾಂಸ್ಕೃತಿಕ ವಲಯವನ್ನು ವಿಚಲಿತಗೊಳಿಸಿದೆ. ಈಗ ರಾಜ್ಯದ ಸಾಂಸ್ಕೃತಿಕ ವಲಯವು ಮತ್ತೊಮ್ಮೆ ಅನಪೇಕ್ಷಿತ ಕಾರಣಗಳಿಗಾಗಿ ಸಾರ್ವಜನಿಕ ಚರ್ಚೆಗೆ ಗುರಿಯಾಗಿದೆ. ಅಧಿಕಾರ ರಾಜಕಾರಣವು ಬಹುತೇಕವಾಗಿ ಬಂಡವಾಳಶಾಹಿ ವ್ಯವಸ್ಥೆಯು ರೂಪಿಸುವ ಹಾದಿಯಲ್ಲೇ ಸಾಂಸ್ಕೃತಿಕ ವಲಯವನ್ನೂ ನಿರ್ವಹಿಸುವುದು ಸ್ವಾಭಾವಿಕವೇ ಆದರೂ , ಪ್ರಗತಿಪರ-ಸಮಾಜವಾದಿ ಹಣೆಪಟ್ಟಿ ಹೊತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಿಂದ ಕೊಂಚ ಭಿನ್ನವಾಗಿರಬಹುದು ಎಂಬ ನಿರೀಕ್ಷೆ ಕೆಲವರಲ್ಲಾದರೂ ಇತ್ತು. ಕನಿಷ್ಠ ಪಕ್ಷ ಸಾಹಿತ್ಯ, ಕಲೆ ಮತ್ತು ರಂಗಭೂಮಿಯ ಸಾಂಸ್ಥಿಕ ನೆಲೆಗಟ್ಟಿನಲ್ಲಿ ಪ್ರಜಾಸತ್ತಾತ್ಮಕ ಸೂಕ್ಷ್ಮತೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಕೆಲವು ಸಕಾರಾತ್ಮಕ ಹೆಜ್ಜೆಗಳನ್ನಿಡಬಹುದು ಎಂಬ ನಿರೀಕ್ಷೆಯಿತ್ತು.

ಆದರೆ ಕಾಂಗ್ರೆಸ್‌ ಸರ್ಕಾರವೂ ಸಹ ಸಾಂಸ್ಕೃತಿಕ ಸಾಂಸ್ಥೀಕರಣ ಪ್ರಕ್ರಿಯೆಯಲ್ಲಿ ತನ್ನ ರಾಜಕೀಯ ಧೋರಣೆಗಳನ್ನೇ ಅನುಸರಿಸುವ ಮೂಲಕ ಅಕಾಡೆಮಿ, ಪ್ರಾಧಿಕಾರ, ರಂಗಸಮಾಜದಂತಹ ಸಾಂಸ್ಥಿಕ ನೆಲೆಗಳತ್ತ ದಿವ್ಯ ನಿರ್ಲಕ್ಷ್ಯ ವಹಿಸಿದ್ದು ಅಕ್ಷಮ್ಯ. ಭಾಷಿಕ, ಸಾಂಸ್ಕೃತಿಕ ಹಾಗೂ ಸಾಮುದಾಯಿಕ ಪ್ರಪಂಚದ ತಳಮಟ್ಟದಲ್ಲಿ ಸಮಾಜದ ಅಂತಃಸತ್ವವನ್ನು ಅರಿತು, ಅಲ್ಲಿರಬಹುದಾದ ಸಾಮಾಜಿಕ ತಲ್ಲಣಗಳನ್ನು, ತುಮುಲಗಳನ್ನು ಅರಿತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಈ ಸಂಸ್ಥೆಗಳ ಮೇಲಿರುತ್ತದೆ. ಆಳ್ವಿಕೆಯ ಸಿದ್ಧಾಂತಗಳಾಗಲೀ, ಆಡಳಿತಾರೂಢ ರಾಜಕಾರಣದ ತಾತ್ವಿಕ ನೆಲೆಗಳಾಗಲೀ ಈ ಸಂಸ್ಥೆಗಳನ್ನು ಪ್ರಭಾವಿಸದ ರೀತಿಯಲ್ಲಿ ಸ್ವಾಯತ್ತ ಅಸ್ತಿತ್ವವನ್ನು ಕಲ್ಪಿಸುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಆದ್ಯತೆಯಾಗಬೇಕು. ಅಗಲೇ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಜನಸಮುದಾಯಗಳು ಹಾಗೂ ಅವರನ್ನು ಆವರಿಸುವ ಸಾಂಸ್ಕೃತಿಕ ನೆಲೆಗಳಲ್ಲಿ ನಮ್ಮ ಬಹುತ್ವ ಸಂಸ್ಕೃತಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ.

ವಿಷಾದ ಎಂದರೆ ಭಾರತದ ಅಧಿಕಾರ ರಾಜಕಾರಣದಲ್ಲಿ ಈ ಸಾಂಸ್ಕೃತಿಕ ಪ್ರಪಂಚವನ್ನೂ ತಮ್ಮ ಅಧಿಕಾರ ವ್ಯಾಪ್ತಿಯ ಅಥವಾ ಮಾರುಕಟ್ಟೆ ವ್ಯಾಪ್ತಿಯ ಒಳಗೇ ಸೇರಿಸಿಕೊಳ್ಳುವ ಸರ್ಕಾರಗಳು, ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕ ಮಾಡುವಾಗ ತಮ್ಮವರನ್ನೋ, ತಮ್ಮ ನಿಕಟವರ್ತಿಗಳನ್ನೋ ಅಥವಾ ತಮ್ಮ  ರಾಜಕೀಯ ನಿಲುವುಗಳಿಗೆ ನಿಲುಕವವರನ್ನೋ ನೇಮಿಸುತ್ತವೆ. ಹಾಗಾಗಿಯೇ ಸಾಂಸ್ಕೃತಿಕ ಸಂಸ್ಥೆಗಳ ಹುದ್ದೆಗಳೆಲ್ಲವೂ ಫಲಾನುಭವಿಗಳ, ವ್ಯಕ್ತಿಗತ ಹಿತಾಸಕ್ತಿಗಳ “ ಆಯಕಟ್ಟಿನ ಜಾಗಗಳಾಗಿಬಿಡುತ್ತವೆ ”.                           ಈ ಸಾಂಸ್ಥಿಕ ಹುದ್ದೆಗಳಿಗೆ ದುಂಬಾಲು ಬೀಳುವ ವ್ಯಕ್ತಿಗಳಿಗೇನೂ ಕೊರತೆ ಇರುವುದಿಲ್ಲ. ಆದರೆ ಸಮಾಜದ ಒಳಿತಿನ ದೃಷ್ಟಿಯಿಂದ, ಸಾಂಸ್ಕೃತಿಕ-ಸಾಹಿತ್ಯಕ ಔನ್ನತ್ಯದ ದೃಷ್ಟಿಯಿಂದ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಕಾಂಗ್ರೆಸ್‌ ಸರ್ಕಾರ ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸದಿರುವುದು ದುರಂತ. ರಂಗಾಯಣದಂತಹ ಸಂಸ್ಕೃತಿ-ಸೂಕ್ಷ್ಮ ಸಂಸ್ಥೆಗಳಿಗೆ ಒಂದು ವರ್ಷದ ಅನಂತರವೂ ನಿರ್ದೇಶಕರನ್ನು ನೇಮಿಸದೆ ಇರುವುದು ಸರ್ಕಾರದ ಅಸೂಕ್ಷ್ಮತೆಗೆ ಸಾಕ್ಷಿ.

ಸಾಂಸ್ಕೃತಿಕ ವಲಯದ ಸ್ವಾಯತ್ತತೆ

ಅಳೆದೂ ಸುರಿದೂ ಪೂರೈಸಲಾದ ಅಕಾಡೆಮಿ-ಪ್ರಾಧಿಕಾರಗಳ ಆಯ್ಕೆ-ನೇಮಕಾತಿ ಪ್ರಕ್ರಿಯೆಗೆ ಈಗಲಾದರೂ ಚಾಲ್ತಿ ದೊರೆತಿದೆ. ಲೋಕಸಭಾ ಚುನಾವಣೆಗಳ ತಡೆಗೋಡೆಯನ್ನು ದಾಟಿ ಈಗ ಮೈದಾನ ತೆರೆದಿದ್ದು, ಎಲ್ಲ ಸಾಂಸ್ಕೃತಿಕ ಸಂಸ್ಥೆಗಳಿಗೆ ಕ್ರಿಯಾಶೀಲ ಚಾಲನೆ ನೀಡುವ ಅವಕಾಶ ಮುಕ್ತವಾಗಿದೆ. ವಿಷಾದ ಎಂದರೆ  ಈ ಸಾಂಸ್ಕೃತಿಕ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯಲ್ಲೂ  ಅಧಿಕಾರ ರಾಜಕಾರಣದ ಯಜಮಾನಿಕೆ ಸಂಸ್ಕೃತಿ ಢಾಳಾಗಿ ಕಾಣಬಹುದಿತ್ತು. ಅಧಿಕಾರ ವಹಿಸಿಕೊಂಡು ಒಂದು ವರ್ಷ ಕಳೆದ ಮೇಲಾದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಾಂಸ್ಕೃತಿಕ ಕ್ರಿಯಾಶೀಲತೆಗೆ ಅವಕಾಶ ಕೊಡುತ್ತದೆ ಎಂಬ ಸಂಸ್ಕೃತಿ-ಚಿಂತಕರ ನಂಬಿಕೆ ಹುಸಿಯಾಗುತ್ತಿದೆ. ಬಿಜೆಪಿಯ ಸಾಂಸ್ಕೃತಿಕ ರಾಜಕಾರಣಕ್ಕಿಂತಲೂ ನಾವೇನೂ ಭಿನ್ನವಾಗಿಲ್ಲ ಎಂದು ಸಾಕ್ಷೀಕರಿಸಲೋ ಎಂಬಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಎಲ್ಲ ಅಕಾಡೆಮಿ, ಪ್ರಾಧಿಕಾರ ಮತ್ತಿತರ ಸಾಂಸ್ಕೃತಿಕ ಸಂಸ್ಥೆಗಳ ಮುಖ್ಯಸ್ಥರೊಡನೆ-ಸದಸ್ಯರೊಡನೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಮಾಲೋಚನೆ ನಡೆಸಿದ್ದಾರೆ.

ಆಳ್ವಿಕೆಯ ನೆಲೆಯಲ್ಲಿ ಈ ಸಂಸ್ಥೆಗಳ ಮುಖ್ಯಸ್ಥರೊಡನೆ ಔಪಚಾರಿಕ ಮಾತುಕತೆ ನಡೆಸುವುದು ತಪ್ಪೇನಲ್ಲ. ಆದರೆ ಇದು ಸರ್ಕಾರದ ಕೆಲಸ, ಪಕ್ಷದ ಕೆಲಸವಲ್ಲ. ಹಾಗಾಗಿ ಇಂತಹ ಸಭೆಯಲ್ಲೂ ಸಹ ಸಾಂಸ್ಥಿಕ ಸ್ವಾಯತ್ತತೆಯನ್ನು ಕಾಪಾಡುವಂತಹ ವಿಶ್ವಾಸ ಮೂಡಿಸುವುದು ಸರ್ಕಾರದ ನೈತಿಕ ಜವಾಬ್ದಾರಿ. ಆದರೆ ಈ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿರುವುದರ ಔಚಿತ್ಯವೇನು ? ಅಧಿಕಾರ ರಾಜಕಾರಣದ ಹೊಸ್ತಿಲನ್ನು ಮೆಟ್ಟದೆಯೇ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಜನಸಾಮಾನ್ಯರ ನಡುವೆ ನಿಂತು ನಿಭಾಯಿಸಬೇಕಾದ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು ಆಡಳಿತಾರೂಢ ಪಕ್ಷದ ಕಚೇರಿಯಲ್ಲಿ ಕೈಕಟ್ಟಿ ಕುಳಿತು ಉತ್ತರದಾಯಿಯಾಗುವುದು ಅನಪೇಕ್ಷಿತ ವರ್ತನೆಯಾಗಿ ಕಾಣುತ್ತದೆ.  ಇದಕ್ಕಿಂತಲೂ ಹೆಚ್ಚು ಬಾಧಿಸುವುದು “ಈ ಹುದ್ದೆಗಳು ರಾಜಕಾರಣಕ್ಕೆ ಮೆಟ್ಟಿಲುಗಳಾಗಿದ್ದು ಕೈ ಮತ್ತು ಬಾಯಿ ಶುದ್ಧವಾಗಿರಬೇಕು ” ಎಂಬ ಉಪಮುಖ್ಯಮಂತ್ರಿಯ ಉವಾಚ.

ಸಾಂಸ್ಕೃತಿಕ ವಲಯವನ್ನು ಪ್ರತಿನಿಧಿಸುವ ಸಂವೇದನಾಶೀಲ ಮನಸುಗಳು ರಾಜಕಾರಣಿಗಳಿಂದ ಕೈ-ಬಾಯಿ ಶುದ್ಧತೆಯ ಬಗ್ಗೆ ಹೇಳಿಸಿಕೊಳ್ಳಬೇಕೇ ? ಇರಲಿ ಬಿಡಿ, ಇಲ್ಲಿ ಯಾವ ರಾಜಕಾರಣ, ಯಾರಿಗಾಗಿ ಮೆಟ್ಟಿಲುಗಳು ಈ ಪ್ರಶ್ನೆಗಳು ಸಹಜವಾಗಿಯೇ ಸಾಂಸ್ಕೃತಿಕ ಜಗತ್ತಿನ ಸೂಕ್ಷ್ಮ ಮನಸ್ಸುಗಳನ್ನು ವಿಚಲಿತಗೊಳಿಸಿವೆ. ಸಮಾಜದ ಸಾಂಸ್ಕೃತಿಕ ನೆಲೆಗಳನ್ನು ಗಟ್ಟಿಗೊಳಿಸುವ ಸಲುವಾಗಿಯೇ ರಚಿಸಲಾಗಿರುವ ಈ ಅಕಾಡೆಮಿ, ಪ್ರಾಧಿಕಾರ, ರಂಗ ಸಮಾಜ ಮೊದಲಾದ ಸಂಸ್ಥೆಗಳು ಯಾವ ರಾಜಕಾರಣದ ಮೆಟ್ಟಿಲುಗಳನ್ನು ಹತ್ತಬೇಕಿದೆ ? ಉಪಮುಖ್ಯಮಂತ್ರಿ ಡಿ . ಕೆ. ಶಿವಕುಮಾರ್‌ ಅವರ ಈ    ʼ ಉಪದೇಶ/ಸಲಹೆ ʼ ಏನನ್ನು ಸೂಚಿಸುತ್ತದೆ ? ಈ ಹುದ್ದೆಗಳನ್ನು ಅಲಂಕರಿಸಿರುವವರು ಸರ್ಕಾರದ ಅಧಿಕಾರ ರಾಜಕಾರಣವನ್ನು ಕಾಪಾಡಲು ತಾವು ನಿಂತ ಸಾಂಸ್ಕೃತಿಕ ನೆಲವನ್ನು ಬಲಿಕೊಡಬೇಕು ಎಂದರ್ಥವೇ ? ಅಥವಾ ಸರ್ಕಾರದ ಅಧೀನ ಸಂಸ್ಥೆಗಳಾಗಿ ಕೆಲಸ ಮಾಡಿದರೆ ವ್ಯಕ್ತಿಗತವಾಗಿ ರಾಜಕಾರಣದ ಮೆಟ್ಟಿಲುಗಳನ್ನೇರಬಹುದು ಎಂದರ್ಥವೇ ? ಅಥವಾ ನಿಮಗೆ ಅಥವಾ ನೀವು ಪ್ರತಿನಿಧಿಸುವ ಸಂಸ್ಥೆಗಳಿಗೆ ಸ್ವಾಯತ್ತ ಅಧಿಕಾರ ಇರುವುದಿಲ್ಲ ಎಂಬ ಸೂಕ್ಷ್ಮ ಸಂದೇಶ ಇಲ್ಲಿ ಅಡಗಿದೆಯೇ ? ಬಿಜೆಪಿ ಸರ್ಕಾರ ಹಿಂಬದಿಯಿಂದ ಮಾಡುತ್ತಿದ್ದ ಕೆಲಸವನ್ನು ಕಾಂಗ್ರೆಸ್‌ ನೇರಾನೇರ ಮಾಡಿದೆ. ಎರಡೂ ಅಪಾಯಕಾರಿಯೇ.

ಪ್ರಗತಿಪರತೆಯ ಸಾಂಸ್ಕೃತಿಕ ಆಯಾಮ

 ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಗಾಗಿ ಹೋರಾಡಿದ ಕರ್ನಾಟಕದ ಪ್ರಗತಿಪರ ಮನಸುಗಳಿಗೆ ಕಾಂಗ್ರೆಸ್‌ ಸರ್ಕಾರದ ಈ ನಡೆ ಆಘಾತಕಾರಿಯಾಗಿ ಕಾಣುತ್ತದೆ. ಈಗಿನ ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕವಾಗಿರುವ ಸದಸ್ಯರೆಲ್ಲರನ್ನೂ ʼ ಪ್ರಗತಿಪರ ʼ ಸಮಾಜದ ಪ್ರತಿನಿಧಿಗಳೆಂದೇ ಭಾವಿಸುವುದು ಸ್ವಾಭಾವಿಕ. ಈ ಸದಸ್ಯರು ಸಾಂಸ್ಥಿಕ ಸ್ವಾಯತ್ತತೆಯನ್ನು ಕಾಪಾಡಲು ಕಟಿಬದ್ಧರಾಗಿದ್ದಲ್ಲಿ ರಾಜಕೀಯ ಅಧಿಕಾರ ಕೇಂದ್ರಗಳ ಹೊಸ್ತಿಲನ್ನು ದಾಟಿ ಒಳಪ್ರವೇಶ ಮಾಡುವುದು ಸರ್ವಥಾ ಸಮರ್ಥನೀಯವಾಗಲಾರದು. ಕಾಂಗ್ರೆಸ್‌ ಪಕ್ಷಕ್ಕೆ ಅಥವಾ ಸರ್ಕಾರಕ್ಕೆ ಇತ್ತೀಚಿನ ಚುನಾವಣಾ ಹಿನ್ನಡೆಯ ದೃಷ್ಟಿಯಿಂದ ಇಂತಹ ಉಪಕ್ರಮ ರಾಜಕೀಯ ಅನಿವಾರ್ಯ ಎನಿಸಬಹುದು. ಸರ್ಕಾರದ/ಪಕ್ಷದ ಅಸ್ತಿತ್ವ ಮತ್ತು ಭವಿಷ್ಯದ ಉಳಿವಿಗಾಗಿ ಇವೆಲ್ಲವೂ ಸಹಜವಾಗಿ ಸಂಭವಿಸುವ ಘಟನೆಗಳೆಂದೇ ಹೇಳಬಹುದು. ಆದರೆ ಪ್ರಧಾನವಾಗಿ ಕಾಡುವುದು ಅಕಾಡೆಮಿ-ಪ್ರಾಧಿಕಾರಗಳ ಮುಖ್ಯಸ್ಥರ-ಸದಸ್ಯರ (ಇಬ್ಬರನ್ನು ಹೊರತುಪಡಿಸಿ) ಉಪಸ್ಥಿತಿ.

ಈ ನೇಮಕಾತಿ ಪ್ರಕ್ರಿಯೆಗಳು ತಡವಾಗಿಯಾದರೂ ಆರಂಭವಾದ ಮೇಲೆ ಸಂಘಪರಿವಾರದ ಒಲವು ಇರುವ ಕೆಲವು ಮುಖ್ಯಸ್ಥರ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಹಿಂದಿನ ಸರ್ಕಾರವು ನಡೆಸಿದ ಅವಾಂತರಗಳ ಹಿನ್ನೆಲೆಯಲ್ಲಿ ಈ ಆತಂಕಗಳು ಸಹಜವಾಗಿಯೇ ಇದ್ದವು. ರಾಜ್ಯ ಸರ್ಕಾರ ಈ ಆಕ್ಷೇಪಗಳಿಗೆ ಕೂಡಲೇ ಸ್ಪಂದಿಸಿ ಬದಲಿ ನೇಮಕ ಮಾಡಿರುವುದು ಸ್ವಾಗತಾರ್ಹ. ಆದರೆ ಪಕ್ಷದ ಅಧಿಕೃತ ಕಚೇರಿಯಲ್ಲಿ ಈ ಸಾಂಸ್ಕೃತಿಕ ಸಂಸ್ಥೆಗಳ ಸದಸ್ಯರನ್ನು ಕೂರಿಸಿ ಸಮಾಲೋಚನೆ ನಡೆಸುವ  ಕ್ರಮವು ರಾಜ್ಯದ ಸೂಕ್ಷ್ಮ ಸಂವೇದನೆಯ ಸಾಂಸ್ಕೃತಿಕ ಮನಸುಗಳಿಗೆ ಇದು ಏನು ಸಂದೇಶ ನೀಡುತ್ತದೆ ? ಸರ್ಕಾರದ ಯಜಮಾನಿಕೆಗೆ ಒಳಪಟ್ಟ ಸಾಂಸ್ಕೃತಿಕ ಸಂಸ್ಥೆಗಳು ಎಷ್ಟರ ಮಟ್ಟಿಗೆ ಸಾಮಾಜಿಕ ಸೂಕ್ಷ್ಮ ಸಂವೇದನೆಗಳಿಗೆ ಸ್ಪಂದಿಸಲು ಸಾಧ್ಯ ? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ.

ಈ ಸಭೆಯನ್ನು ಆಯೋಜಿಸಿದ ಕಾಂಗ್ರೆಸ್‌ ಪಕ್ಷ ತನ್ನ ತಪ್ಪು ಹೆಜ್ಜೆಗಾಗಿ ಪರಿತಪಿಸುವುದೋ ಇಲ್ಲವೋ ಹೇಳಲಾಗದು. ಏಕೆಂದರೆ ಇದು ಅಧಿಕಾರ ರಾಜಕಾರಣದ ಒಂದು ಪರಂಪರೆ. ನವ ಉದಾರವಾದಿ ಬಂಡವಾಳ ವ್ಯವಸ್ಥೆಯ ಒಂದು ಫಲ. ಆದರೆ ಶಿಸ್ತಿನ ಸಿಪಾಯಿಗಳಂತೆ ಅಧಿಕಾರ ರಾಜಕಾರಣದ ಆವರಣದಲ್ಲಿ ಕುಳಿತು ಆಲಿಸಿದ ಸಾಂಸ್ಕೃತಿಕ ಪ್ರತಿನಿಧಿಗಳು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಾಂಸ್ಕೃತಿಕ ಸಂಸ್ಥೆಗಳ ರಾಜಕೀಕರಣ ಸಮಾಜವನ್ನು ಹಾಗೂ ಸಮಸ್ತ ಸಮಾಜದ ಸಾಂಸ್ಕೃತಿಕ ಭೂಮಿಕೆಗಳನ್ನು ನೈತಿಕವಾಗಿ ಕುಗ್ಗಿಸಿ,  ಅಧೋಗತಿಗೆ ತಳ್ಳುತ್ತದೆ ಎಂಬ ಸೂಕ್ಷ್ಮ ಸಂವೇದನೆ ಈ ಸದಸ್ಯರಿಗೆ ಇರಬೇಕಲ್ಲವೇ ?

ತಾವು ಅಧಿಕಾರಸ್ಥರಿಗೆ ದುಂಬಾಲು ಬಿದ್ದು ಗಿಟ್ಟಿಸಿಕೊಂಡ ಅಥವಾ ಅರ್ಹತೆಯನುಸಾರ ಪಡೆದುಕೊಂಡ ಸಾಂಸ್ಕೃತಿಕ ಜವಾಬ್ದಾರಿಯನ್ನು ನಿಭಾಯಿಸುವ ಹಾದಿಯಲ್ಲಿ ನಿಸ್ಪೃಹತೆ, ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಈ ಸಂಸ್ಥೆಗಳ ಹಾಗೂ ಅದನ್ನು ಪ್ರತಿನಿಧಿಸುವವರ ಮೇಲಿದೆ. ಇಷ್ಟು ಪ್ರಜ್ಞಾವಂತಿಕೆ ನಮ್ಮಲ್ಲಿ ಜಾಗೃತವಾಗಿದ್ದರೆ ಸಾಕು.

Tags: #CMSiddaramaiah #DCMDKShivakumar #modi #PrajwalRevanna RASHOK ##PrajwalRevannaPenDriveCase #jdspratidh#CMSiddaramaiahBJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ನೀನೆ ಇಂದ್ರ – ನೀನೆ ಚಂದ್ರ ಅಂದವರೆಲ್ಲರೂ ಇಂದು ನಾಪತ್ತೆ ?! ದರ್ಶನ್ ರನ್ನ ನೋಡಲು ಯಾರೊಬ್ಬರು ಬರಲಿಲ್ಲವೇಕೆ ?! 

Next Post

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್; ಮನನೊಂದು ಆತ್ಮಹತ್ಯೆಗೆ ಶರಣಾದ ಅಭಿಮಾನಿ?

Related Posts

ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು
Uncategorized

ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

by ಪ್ರತಿಧ್ವನಿ
November 17, 2025
0

ಬೆಂಗಳೂರು: ಸಿಲಿಕಾನ್ ಸಿಟಿಯ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಮಹಿಳೆ ಸೈಬರ್ ವಂಚನೆ ಬಲೆಗೆ ಬಿದ್ದಿದ್ದು, ಬರೋಬ್ಬರಿ 31.83 ಕೋಟಿ ಹಣ ಕಳೆದುಕೊಂಡಿದ್ದಾರೆ. ಇದು ದೇಶದಲ್ಲಿ ಅತಿದೊಡ್ಡ ಸೈಬರ್...

Read moreDetails

ಜಪಾನಿನ ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್..

November 15, 2025
ಟೀಕೆ ಮಾಡುತ್ತಿದ್ದವರು ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿ

ಟೀಕೆ ಮಾಡುತ್ತಿದ್ದವರು ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿ

November 9, 2025
DK Shivakumar: ಜಲ ಯೋಜನೆಗಳ ಬಗ್ಗೆ ಒಂದು ದಿನವೂ ಬಾಯಿ ಬಿಡದ ರಾಜ್ಯದ ಬಿಜೆಪಿ ಸಂಸದರು..

DK Shivakumar: ಜಲ ಯೋಜನೆಗಳ ಬಗ್ಗೆ ಒಂದು ದಿನವೂ ಬಾಯಿ ಬಿಡದ ರಾಜ್ಯದ ಬಿಜೆಪಿ ಸಂಸದರು..

November 6, 2025
ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ

October 30, 2025
Next Post
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್; ಮನನೊಂದು ಆತ್ಮಹತ್ಯೆಗೆ ಶರಣಾದ ಅಭಿಮಾನಿ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್; ಮನನೊಂದು ಆತ್ಮಹತ್ಯೆಗೆ ಶರಣಾದ ಅಭಿಮಾನಿ?

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
Top Story

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

by ಪ್ರತಿಧ್ವನಿ
November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು
Top Story

ಮರೆವುದೆಂತು ಆ ಗಟ್ಟಿ ಜನಪರ ದನಿಯನು

by ನಾ ದಿವಾಕರ
November 20, 2025
Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
Top Story

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

by ಪ್ರತಿಧ್ವನಿ
November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ
Top Story

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು

ಮರೆವುದೆಂತು ಆ ಗಟ್ಟಿ ಜನಪರ ದನಿಯನು

November 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada