ವೈಜ್ಞಾನಿಕ, ಗುಣಮಟ್ಟದ ಕಾಮಗಾರಿಗೆ ಸಚಿವರ ತಾಕೀತು
ಧಾರವಾಡ, ಜೂನ್.10: ಕಳೆದ ನಾಲ್ಕೈದು ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ನವಲಗುಂದ ತಾಲೂಕಿನಲ್ಲಿ ತುಪ್ಪರಿಹಳ್ಳ ಹಾಗೂ ಬೆಣ್ಣಿಹಳ್ಳದ ಪ್ರವಾಹದಿಂದ ಹಾನಿಗೊಳಗಾದ ಹನಸಿ, ಶಿರಕೋಳ, ಬಳ್ಳೂರ ಗ್ರಾಮಗಳಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಹನಸಿ ಗ್ರಾಮದಲ್ಲಿ ಲಲಿತಾ ಗಂಗಪ್ಪ ಹೆಬ್ಬಳ್ಳಿ, ಗುರಪಾದಪ್ಪ ರುದ್ರಪ್ಪ ಆಯೆಟ್ಟಿ ಹಾಗೂ ಬಸವರಾಜ ಚಂದ್ರಶೇಖರ ಇಂಡಿ ಅವರ ಮನೆಗಳನ್ನು ಪರಿಶೀಲಿಸಿ ಶೀಘ್ರವೇ ಪರಿಹಾರ ಒದಗಿಸಲಾಗುವುದೆಂದು ತಿಳಿಸಿದರು.
ಹನಸಿ ಹಾಗೂ ಶಿರಕೋಳ ಮಧ್ಯದಲ್ಲಿ ತುಪ್ಪರಿ ಹಳ್ಳ ಹರಿವಿನ ತೀವ್ರತೆ ಹಾಗೂ ಹಾನಿಗೀಡಾದ ಪ್ರದೇಶವನ್ನು ಸಚಿವರು ವೀಕ್ಷಿಸಿದರು. ಬಳ್ಳೂರ ಗ್ರಾಮದಲ್ಲಿ ಮಳೆಹಾನಿಗೊಳಗಾದ ವಾಸುದೇವ ಬೆಳ್ಳಿಕಟ್ಟಿ ಹಾಗೂ ರೇಣ್ಣಪ್ಪ ಕುಂಬಾರ ಅವರ ಮನೆಗಳಿಗೆ ಭೇಟಿ ನೀಡಿದರು. ತಿರ್ಲಾಪುರ ಗ್ರಾಮದಿಂದ ಅಳಗವಾಡಿ ಗ್ರಾಮದ ಮದ್ಯ ತುಪ್ಪರಿಹಳ್ಳವು ಬೆಣ್ಣೆಹಳ್ಳಕ್ಕೆ ಕೂಡುವ ಸ್ಥಳವನ್ನು ವೀಕ್ಷಿಸಿದರು.

ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 2019 ರಲ್ಲಿ ಸರಕಾರ ನೀಡಿದ ಅನುದಾನದಲ್ಲಿ ಹೂಳು ತೆಗೆಯುವುದು, ಬದು ಎತ್ತರಿಸುವುದು ಹಾಗೂ ತಡೆಗೋಡೆ ಕಾಮಗಾರಿಗಳನ್ನು ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ಆದರೂ ನೀರು ಗ್ರಾಮಗಳಿಗೆ ಹಾಗೂ ರೈತರ ಜಮೀನುಗಳಿಗೆ ನುಗ್ಗಿ ಸಾಕಷ್ಟು ಹಾನಿಯಾಗುತ್ತಿದೆ. ವೈಜ್ಞಾನಿಕವಾಗಿ ಮೇಲ್ಸೇತುವೆ ಎತ್ತರಿಸುವುದು ಹಾಗೂ ಹಲವೆಡೆ ಬ್ಯಾರೇಜಗಳನ್ನು ನಿರ್ಮಿಸಿ ಮುಂದಿನ ದಿನಗಳಲ್ಲಿ ಜನರಿಗೆ ರೈತರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುವುದು. ಮಳೆಗಾಲದ ನಂತರ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂಬಂಧ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.
ವೈಜ್ಞಾನಿಕ ಹಾಗೂ ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು. ತಾಂತ್ರಿಕತೆ ಅರಿತು ಟೆಂಡರ್ ಕರೆಯುವುದು ಸೂಕ್ತ. ತುಪ್ಪರಿಹಳ್ಳ ಹಾಗೂ ಬೆಣ್ಣಿಹಳ್ಳಗಳಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಸಂಗ್ರಹಿಸಿ ಸದ್ಬಳಕೆಗೆ ಯೋಜನೆ ರೂಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಜಿಲ್ಲಾದಿಕಾರಿ ದಿವ್ಯಪ್ರಭು ಜಿಆರ್‌ಜೆ, ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

25 ಸಾವಿರ ಧನಸಹಾಯ ಮಾಡಿದ ಸಚಿವರು
ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಹಣಸಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಲಲಿತಾ ಗಂಗಪ್ಪ ಹೆಬ್ಬಳ್ಳಿ ಅವರ ಮನೆ ಹಾನಿಗೊಳಗಾಗಿದ್ದು, ಇಂದು ಅವರ ಮನೆಗೆ ಸಚಿವ ಸಂತೋಷ್ ಲಾಡ್ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು. ಇದೇ ವೇಳೆ ವೈಯುಕ್ತಿಕವಾಗಿ ₹25 ಸಾವಿರ ಧನಸಹಾಯ ಮಾಡಿದರು. ಅಲ್ಲದೆ ಮನೆ ಕುಸಿತದಿಂದ ತೊಂದರೆಗೊಳಗಾಗಿರುವ ಇತರ ಮೂವರಿಗೆ ಆರ್ಥಿಕ ಸಹಾಯ ಮಾಡಿದರು.
ನವಲಗುಂದ ತಾಲ್ಲೂಕಿನ ಹಲವು ಭಾಗದಲ್ಲಿ ಮಳೆಯಿಂದಾಗಿ ಮನೆ ಕುಸಿತ ಸೇರಿದಂತೆ ಸಾಕಷ್ಟು ಹಾನಿಯಾಗಿದೆ. ಭೇಟಿ ವೇಳೆ ಕುಸಿತಗೊಂಡ ಮನೆಗಳನ್ನು ವೀಕ್ಷಣೆ ಮಾಡಲಾಯಿತು. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.












