ಫ್ರೆಂಚ್ ಓಪನ್ (French Open 2024) ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನ್ನು ವಿಶ್ವದ ನಂಬರ್ 1 ಆಟಗಾರ್ತಿ ಇಗಾ ಶ್ವಿಯಾಮ್ ಟೆಕ್ (Iga Swiatek) ಗೆದ್ದು ಬೀಗಿದ್ದಾರೆ.
ಈ ಮೂಲಕ ಸತತ ಮೂರನೇ ಬಾರಿ ಫ್ರೆಂಚ್ ಓಪನ್ ಕಿರೀಟ ಗೆದ್ದ ಸಾಧನೆ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಪೊಲಾಂಡ್ ನ ಇಗಾ ಶ್ವಿಯಾಮ್ಟೆಕ್ ಹಾಗೂ ಇಟಲಿಯ ಜಾಸ್ಮಿನ್ ಪಾವೊಲಿನಿ ಮಧ್ಯೆ ಹೋರಾಟ ನಡೆದಿತ್ತು. ನಿರೀಕ್ಷೆಯಂತೆ ವಿಶ್ವದ ನಂ.1 ಆಟಗಾರ್ತಿ ಶ್ವಿಯಾಮ್ ಅವರು 15ನೇ ಶ್ರೇಯಾಂಕದ ಆಟಗಾರ್ತಿ ವಿರುದ್ಧ ಜಯ ಸಾಧಿಸಿದ್ದಾರೆ.
ಆರಂಭದಿಂದಲೂ ವಿಶ್ವದ ನಂಬರ್ 1 ಆಟಗಾರ್ತಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಯಾವುದೇ ಹಂತದಲ್ಲೂ ಇಗಾ ಶ್ವಿಯಾಮ್ ಟೆಕ್ ತಮ್ಮ ಲಯವನ್ನು ಬಿಟ್ಟು ಕೊಟ್ಟಿರಲಿಲ್ಲ.
ಆರಂಭದಿಂದಲೇ ಒತ್ತಡಕ್ಕೆ ಸಿಲುಕಿದ್ದ ಜಾಸ್ಮಿನ್ ಪಾವೊಲಿನಿ ಅವರ ತಪ್ಪುಗಳನ್ನೇ ಬಂಡವಾಳ ಮಾಡಿಕೊಂಡ 23 ವರ್ಷದ ಇಗಾ ಶ್ವಿಯಾಮ್ಟೆಕ್ ಮೊದಲ ಸುತ್ತನ್ನು 6-2 ಅಂತರದಿಂದ ಗೆದ್ದರು. 2ನೇ ಸುತ್ತಿನಲ್ಲೂ ಉತ್ತಮ ಆಟ ಪ್ರದರ್ಶಿಸಿದರು.
ಪರಿಣಾಮ 2ನೇ ಸುತ್ತಿನಲ್ಲಿ ಜಾಸ್ಮಿನ್ ಪಾವೊಲಿನಿ 1 ಅಂಕ ಗಳಿಸುವ ವೇಳೆಗೆ ಇಗಾ ಶ್ವಿಯಾಮ್ಟೆಕ್ 6 ಅಂಕಗಳನ್ನು ಗಳಿಸಿದ್ದರು. ಈ ಮೂಲಕ 6-2, 6-1 ಅಂತರಗಳ ನೇರ ಸೆಟ್ ಗಳಿಂದ ಗೆದ್ದು ಬೀಗಿದರು.
ಈ ಗೆಲುವಿನ ಮೂಲಕ ಸತತ ಮೂರನೇ ಬಾರಿ ಫ್ರೆಂಚ್ ಓಪನ್ ಗೆದ್ದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ, ನಾಲ್ಕನೇ ಬಾರಿ ಫ್ರೆಂಚ್ ಓಪನ್ ಗೆದ್ದ ಆಟಗಾರ್ತಿ ಎಂಬ ದಾಖಲೆಯನ್ನೂ ಬರೆದರು. ಇಗಾ ಹಿಂದೆ 2020, 2022, 2023 ರಲ್ಲಿ ಟ್ರೋಫಿ ಗೆದ್ದಿದ್ದರು. ಈ ವರ್ಷವೂ ಟ್ರೋಫಿ ಅವರ ಪಾಲಾಗಿದೆ.