ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಮೋದಿಯವರ (Narendra Modi) ವಿರುದ್ಧ ಜನಾದೇಶ ಇರುವುದು ಸ್ಪಷ್ಟವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಫಲಿತಾಂಶ ಹೊರ ಬಿದ್ದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮೋದಿ ಅವರ ನೈತಿಕ ಹಾಗೂ ರಾಜಕೀಯ ಸೋಲು. ಈ ಬಾರಿ ಜನರು ಗೆದ್ದಿದ್ದಾರೆ. ಇದು ಪ್ರಜಾಪ್ರಭುತ್ವದ ಗೆಲುವು. ಇದು ಮೋದಿ ಹಾಗೂ ಜನರ ನಡುವಿನ ಯುದ್ಧ ಎಂದು ನಾವು ಮೊದಲೇ ಹೇಳಿದ್ದೇವು. ಜನ ಯಾರಿಗೂ ಪೂರ್ಣ ಬಹುಮತ ನೀಡಿಲ್ಲ. ಒಬ್ಬ ವ್ಯಕ್ತಿಯ ಮುಖ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಿದೆ. ಆದರೆ, ಬಿಜೆಪಿಯನ್ನು ಜನರು ಸೋಲಿಸಿದ್ದಾರೆ ಎಂದು ಹೇಳಿದ್ದಾರೆ.
ನಾವು ಮತದಾರನ ತೀರ್ಪು ಗೌರವಿಸುತ್ತೇವೆ. ಮೋದಿ ನೇತೃತ್ವದ ಎನ್ಡಿಎಗೆ ದೊಡ್ಡ ನಷ್ಟ ಆಗಿದೆ. ಚುನಾವಣೆ ಪ್ರಚಾರದ ವೇಳೆ ಮೋದಿ ಸುಳ್ಳುಗಳನ್ನ ಹೇಳಿದ್ದಾರೆ. ಆಡಳಿತರೂಢ ಸರ್ಕಾರ ಹೆಜ್ಜೆ ಹೆಜ್ಜೆಗೂ ನಮಗೆ ಅಡ್ಡಿ ಮಾಡುತ್ತಿದ್ದರು. ನಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದರು. ನಮ್ಮ ಬಣದ ನಾಯಕರ ಮೇಲೆ ದಾಳಿ ಮಾಡಿಸಿದ್ದರು. ಆದರೆ, ಎಲ್ಲದಕ್ಕೂ ಮತದಾರ ಉತ್ತರ ನೀಡಿದ್ದಾನೆ ಎಂದು ಹೇಳಿದ್ದಾರೆ.
ಸರ್ಕಾರಿ ಸಂಸ್ಥೆಗಳನ್ನು ದಬ್ಬಾಳಿಕೆಯಿಂದ ತಾವು ಹೇಳಿದಂತೆ ನಡೆಸಿಕೊಳ್ಳುತ್ತಿದ್ದರು. ಹೀಗಾಗಿಯೇ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ. ಕಾಂಗ್ರೆಸ್ ಹಾಗೂ ಇಂಡಿಯಾ ಘಟ ಬಂಧನ್ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿದೆ ಎಂದು ಹೇಳಿದ್ದಾರೆ.











