ನವದೆಹಲಿ: ದೇಶದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್‌ಗಳು (Exit Polls) ಹೊರ ಬಿದ್ದಿದ್ದು, ಈ ಬಾರಿಯೂ ಎನ್ ಡಿಎ ಗೆಲುವು ಸಾಧಿಸಲಿದೆ ಎಂದು ಹೇಳಿವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿ, ಮತದಾರರಿಗೆ ಹಾಗೂ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ, ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಅವಕಾಶವಾದಿ ವಿಪಕ್ಷಗಳ ಒಕ್ಕೂಟಕ್ಕೆ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ. ಇಂಡಿಯ (INDIA) ಬಣ ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ. ದೇಶದ ಜನರು ಎನ್ ಡಿಎ ಸರ್ಕಾರವನ್ನು ಮರು ಆಯ್ಕೆ ಮತ ಚಲಾಯಿಸಿದ್ದಾರೆ. ಜನರು ನಮ್ಮ ಸಾಧನೆಯನ್ನು ನೋಡಿದ್ದಾರೆ. ನಮ್ಮ ಕೆಲಸವು ಬಡವರ ಮತ್ತು ದೀನದಲಿತರ ಜೀವನದಲ್ಲಿ ಹೊಸ ಬದಲಾವಣೆಯನ್ನು ತಂದಿದೆ ಎಂದು ಮೋದಿ ಬರೆದುಕೊಂಡಿದ್ದಾರೆ.
ಇಂಡಿಯ ಬಣಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂಬ ನಂಬಿಕೆಯಿದೆ. ಅವರು ಇನ್ನಾದರೂ ಮತದಾರರೊಂದಿಗೆ ಬೆರೆಯಬೇಕು” ಎಂದು ಮೋದಿ ಬರೆದುಕೊಂಡಿದ್ದಾರೆ.
ಆ ಬಣದವರು ಜಾತಿವಾದಿಗಳು, ಕೋಮುವಾದಿಗಳು ಮತ್ತು ಭ್ರಷ್ಟರು. ಬೆರಳೆಣಿಕೆಯ ರಾಜವಂಶಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಈ ಒಕ್ಕೂಟವು ರಾಷ್ಟ್ರಕ್ಕೆ ಭವಿಷ್ಯದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ವಿಫಲವಾಗಿದೆ. ಮೋದಿಯನ್ನು ಅಧಿಕಾರದಿಂದ ಇಳಿಸಬೇಕೆಂಬ ಒಂದೇ ಧ್ಯೇಯವನ್ನಿಟ್ಟುಕೊಂಡು ಅವರು ಚುನಾವಣಾ ಪ್ರಚಾರ ಮಾಡಿದರು. ಇಂತಹ ಪ್ರತಿಗಾಮಿ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ನಾರಿ ಶಕ್ತಿ’, ದೇಶದ ಯುವಕರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಕ್ಕಾಗಿ ಪ್ರಧಾನಿ ಶ್ಲಾಘಿಸಿದರು. ನಾನು ಭಾರತದ ನಾರಿ ಶಕ್ತಿ ಮತ್ತು ಯುವಶಕ್ತಿಯನ್ನು ವಿಶೇಷವಾಗಿ ಪ್ರಶಂಸಿಸಲು ಬಯಸುತ್ತೇನೆ. ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರನ್ನು ಶ್ಲಾಘಿಸಲು ಬಯಸುತ್ತೇನೆ. ಭಾರತದ ಉದ್ದ ಮತ್ತು ಅಗಲದಾದ್ಯಂತ ಉಷ್ಣ ಅಲೆ ಕಾಡುತ್ತಿದೆ. ಅದನ್ನು ಲೆಕ್ಕಿಸದೆ ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಜನರಿಗೆ ಸೂಕ್ಷ್ಮವಾಗಿ ವಿವರಿಸಿ ಮತ ಚಲಾಯಿಸುವಂತೆ ಪ್ರೇರೇಪಿಸಿದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ನಮ್ಮ ಕಾರ್ಯಕರ್ತರೇ ನಮ್ಮ ದೊಡ್ಡ ಶಕ್ತಿ ಎಂದು ಮೋದಿ ಬರೆದುಕೊಂಡಿದ್ದಾರೆ.