ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕರ್ನಾಟಕದ ಅಡ್ವಾಣಿ ಇದ್ದಂತೆ. ಅವರು ತಳಮಟ್ಟದಿಂದ ಬಿಜೆಪಿ ಕಟ್ಟಿದ್ದಾರೆ. ಆದರೆ, ಅಂತಹವರನ್ನು ವಿಜಯೇಂದ್ರ ಅವರು ಅಧ್ವಾನ ಮಾಡಿದ್ದಾರೆ. ಅವರ ಮಗನಿಗೆ ಟಿಕೆಟ್ ತಪ್ಪಿಸಿದರು. ಇದಕ್ಕೆಲ್ಲ ವಿಜಯೇಂದ್ರ ಕಾರಣ ಎಂದು ಕಿಡಿಕಾರಿದರು.
ಬಸನಗೌಡ ಪಾಟೀಲ ಯತ್ನಾಳ ಅವರು ವಿರೋಧ ಪಕ್ಷಗಳ ಮೇಲೆ ಕಿಡಿ ಕಾರಿದ್ದಕ್ಕಿಂತ ಹೆಚ್ಚು ವಿಜಯೇಂದ್ರ ಮೇಲೆಯೇ ಕಿಡಿಕಾರಿದ್ದು ಹೆಚ್ಚು. ರಾಜ್ಯಕ್ಕೆ ಬರಬೇಕಾದ ಬರ ಪರಿಹಾರದ ಬಗ್ಗೆ ಒಮ್ಮೆಯೂ ದನಿ ಎತ್ತಿಲ್ಲ. ವಿರೋಧ ಪಕ್ಷದ ರಾಜ್ಯ ಅಧ್ಯಕ್ಷರಾಗಿ ತಲೆಯಲ್ಲಿ ವಿಷಯಗಳು ಇಲ್ಲದೇ ಇದ್ದಾಗ ಈ ರೀತಿಯ ಕ್ಷುಲ್ಲಕ ವಿಚಾರಗಳು ಹೆಚ್ಚು ಚಾಲ್ತಿಗೆ ಬರುತ್ತವೆ. ವಿಜಯೇಂದ್ರಗೆ ಅವರ ತಂದೆಯಿಂದಾಗಿ ಈ ಅವಕಾಶ ಸಿಕ್ಕಿದೆಯೇ ಹೊರತು, ಬೇರೆ ಕಾರಣದಿಂದಲ್ಲ.
ತಂದೆ ಬಿಟ್ಟರೇ ನೀವು ದೊಡ್ಡ ಸೊನ್ನೆ. ನಮ್ಮಲ್ಲಿ ಹಿರಿಯರಿಗೆ ವಿರುದ್ಧ ಮಾತನಾಡಿದರೆ, ಪಕ್ಷದಿಂದ ಕಿತ್ತು ಹಾಕುತ್ತಾರೆ. ಆದರೆ, ಈಶ್ವರಪ್ಪ, ಯತ್ನಾಳ್ ಅವರು ಮಾತನಾಡುತ್ತಲೇ ಇದ್ದಾರೆ . ಅವರ ವಿರುದ್ದ ಮೊದಲು ಕ್ರಮ ತೆಗೆದುಕೊಳ್ಳಿ. ಕುರ್ಚಿಗಲ್ಲ ಧೈರ್ಯ ಇರುವುದು, ಅದರ ಮೇಲೆ ಕುಳಿತುಕೊಳ್ಳುವವರಿಗೆ ಎಂದು ಲೇವಡಿ ಮಾಡಿದರು.
ಯಾರೋ ಒಬ್ಬರು ಚೋಟಾ ಸಹಿ ಹಾಕಿದ ಕಾರಣಕ್ಕೆ ಯಡಿಯೂರಪ್ಪ ಅವರ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಈ ಚೋಟಾ ಸಹಿ ಹಾಕಿದವರು ಯಾರು? ಮಧು ಬಂಗಾರಪ್ಪ ಕುರಿತು ಮಾತನಾಡಿದ್ದೀರಿ. ನಾವು ಕ್ಷಮೆ ಬಯಸುವುದಿಲ್ಲ. ನಿಮ್ಮ ಕ್ಷಮೆ ನಮಗೆ ಬೇಡ. ಬದಲಾಗಿ ಪಕ್ಷ ಕಟ್ಟಿದ ಈಶ್ವರಪ್ಪ, ಯತ್ನಾಳ್ ಬಳಿ ಕೇಳಿ ಎಂದು ಸವಾಲು ಹಾಕಿದ್ದಾರೆ.