ದೇಶದಲ್ಲಿ ಲೋಕಸಭೆ ಚುನಾವಣಾ ಪ್ರಚಾರದ ಅಂತಿಮ ಹಂತಕ್ಕೆ ತಲುಪುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಮತದಾರರನ್ನು ಸೆಳೆಯಲು ಅಬ್ಬರದ ಪ್ರಚಾರ ಮಾಡಿದ್ದಾರೆ. ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಚುನಾವಣಾ ಅಖಾಡದಲ್ಲಿ ಅಬ್ಬರದ ಪ್ರಚಾರ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಆರಂಭವಾದ ಬಳಿಕ ಮಾತಿನ ಹಾದಿ ತಪ್ಪಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೆ ತಮ್ಮ ಮಾತನ್ನು ಹರಿ ಬಿಟ್ಟಿದ್ದಾರೆ. ಇನ್ನೊಂದು ಹಂತದ ಮತದಾನ ಮಾತ್ರ ಬಾಕಿಯಿರುವ ಈ ಸಮಯದಲ್ಲಿ ಮತ ಸೆಳೆಯಲು ಪಾಕಿಸ್ತಾವನ್ನು ಎಳೆದು ತಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿ ಎಂದು ಪಾಕಿಸ್ತಾನದಲ್ಲಿ ಪ್ರಾರ್ಥನೆ ಮಾಡಲಾಗ್ತಿದೆ ಎಂದಿದ್ದಾರೆ.

ಪ್ರಗತಿಯಲ್ಲಿರೋ ಭಾರತವನ್ನು ಕಂಡು ಕೆಲವರಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ಕೆಲವರು ಜೂನ್ 4ರಂದು ಅಧಿಕಾರಕ್ಕೆ ಬರೋ ಕನಸು ಕಾಣ್ತಿದ್ದಾರೆ. ಕಾಂಗ್ರೆಸ್ ಹಾಗು ಸಮಾಜವಾದಿ ಪಾರ್ಟಿಗೆ ಪಾಕಿಸ್ತಾನ ಮೂಲದ ಕೈಗಳಿಂದ ಸಹಕಾರ ಸಿಗ್ತಿದೆ. INDIA ಮೈತ್ರಿಕೂಟದ ಗೆಲುವಿಗಾಗಿ ಪಾಕಿಸ್ತಾನದಲ್ಲಿ ಪ್ರಾರ್ಥನೆ ಮಾಡಲಾಗ್ತಿದೆ. ಜಿಹಾದಿಗಳು ಗಡಿ ಆಚೆಯಿಂದ ಕಾಂಗ್ರೆಸ್ ಹಾಗು ಎಸ್ಪಿಗೆ ಬೆಂಬಲ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಮತ್ತು ಎಸ್ಪಿ ‘ವೋಟ್-ಜಿಹಾದ್’ಗೆ ಮನವಿ ಮಾಡುತ್ತಿವೆ ಎಂದಿದ್ದಾರೆ.

ಬಿಹಾರದ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅಮಿತ್ ಷಾ, ಹಿಂದುಳಿದ, ಅತ್ಯಂತ ಹಿಂದುಳಿದ ಸಮಾಜವನ್ನ ಕಾಂಗ್ರೆಸ್ ಪಕ್ಷ ವಿರೋಧಿಸುವ ಕೆಲಸ ಮಾಡಿದೆ. ಕಾಕಾ ಕಾಲೇಲ್ಕರ್ ಆಯೋಗದ ವರದಿ ಹತ್ತಿಕ್ಕಿದ್ದು ಕಾಂಗ್ರೆಸ್. ಹಿಂದುಳಿದ ವರ್ಗಗಳ ಮೀಸಲಾತಿಗೆ ಅಡೆತಡೆ ಸೃಷ್ಟಿಸಿದ್ದು ಕಾಂಗ್ರೆಸ್. ಮಂಡಲ್ ಆಯೋಗ ಬಂದಾಗ ಅದನ್ನ ತಡೆಯುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಮಂಡಲ್ ಆಯೋಗದ ವರದಿಯನ್ನ ಅಂಗೀಕರಿಸಿದಾಗ ರಾಹುಲ್ ಬಾಬಾ ತಂದೆ ರಾಜೀವ್ ಗಾಂಧಿ ವಿರೋಧಿಸಿದ್ರು ಎಂದಿದ್ದಾರೆ.

ಒಟ್ಟಾರೆ ಪಾಕಿಸ್ತಾನ ಬೇರೆ ದೇಶಗಳಿಂದ ನೆರವು ಸಿಗುತ್ತಾ ಎಂದು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಹಾಗು ಸಮಾಜವಾದಿ ಪಾರ್ಟಿಗೆ ಪಾಕಿಸ್ತಾನದಿಂದ ನೆರವು ಸಿಗುತ್ತಿದೆ ಎಂದು ಹೇಳಿರುವುದು ಹಾಸ್ಯಾಸ್ಪದ ಎನಿಸುವಂತಿದೆ. ಅದರಲ್ಲೂ ಓರ್ವ ಪ್ರಧಾನಿ, ಎರಡು ಬಾರಿ ನಿರಂತರವಾಗಿ ದೇಶವನ್ನು ಆಳ್ವಿಕೆ ಮಾಡಿರುವಂತಹ ವ್ಯಕ್ತಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದು ಭಾಷಣ ಮಾಡುತ್ತಿದ್ದಾರೆ ಎನ್ನುವುದೇ ಅಚ್ಚರಿಯ ವಿಚಾರ ಎನ್ನುವಂತಾಗಿದೆ.
ಕೃಷ್ಣಮಣಿ







