ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ.ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಷಡ್ಯಂತ್ರ ನಡೆದಿದೆ. ಪ್ರಕರಣ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪು ತಿಂದವರು ನೀರು ಕುಡಿಯಬೇಕು ತಪ್ಪು ಮಾಡಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಈಗಾಗಲೇ ಪಕ್ಷದ ಅಧ್ಯಕ್ಷರಾದ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜೊತೆಗೆ ಪ್ರಜ್ವಲ್ ರೇವಣ್ಣನನ್ನು ಈಗಾಗಲೇ ಪಕ್ಷದಿಂದ ಅಮಾನತು ಮಾಡಿದ್ದೇವೆ. ಏಪ್ರಿಲ್ 21 ನೇ ತಾರೀಖು ಪೆನ್ ಡ್ರೈವ್ ಹಂಚಿಕೆ ಆಗಿದೆ. ಏಪ್ರಿಲ್ 22ಕ್ಕೆ ಪೋಲಿಸ್ ಠಾಣೆಗೆ ದೂರು ಕೂಡ ದಾಖಲಾಗಿದೆ. ಎಸ್ಐಟಿ ತಂಡ ಈಗ ತನಿಖೆ ಮಾಡುತ್ತಿದೆ ಕೆ.ಆರ್ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ ರೇವಣ್ಣ ಅವರನ್ನೂ ಕೂಡ ಬಂಧಿಸಿದೆ. ಅಶ್ಲೀಲ ವೀಡಿಯೋಗಳನ್ನು ಯಾರೂ ಹಂಚಬಾರದು ಎಂದು ಈಗಾಗಲೇ ಎಸ್ಐಟಿ ತಂಟ ಪ್ರಕಟಣೆ ಹೊರಡಿಸಿದೆ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಅವರ ಪೋಷಣೆಯಿಂದಲೇ ನಡೆಯುತ್ತಿರುವುದು, ಸಎಸ್ಐಟಿ ತಂಡವನ್ನ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದರ ಸಂಪೂರ್ಣ ನೇತೃತ್ವವನ್ನು ಉಪ ಮುಖ್ಯಮಂತ್ರಿಗಳು ವಹಿಸಿದ್ದಾರೆ. ಯಾರನ್ನ ಎ1 ಮಾಡಬೇಕು ಯಾರನ್ನ ಎ2 ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಡಿ. ಕೆ ಶಿವಕುಮಾರ್ ಅವರನ್ನ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಒತ್ತಾಯಿಸಿದರು.
ದೇವೇಗೌಡರಿಗೆ ಈ ವಿಚಾರ ಗೊತ್ತಿಲ್ಲ, ಈ ವಿಚಾರದಲ್ಲಿ ಕುಮಾರಸ್ವಾಮಿ ಆಗಲಿ, ದೇವೇಗೌಡರಾಗಲಿ ಅವರನ್ನು ತರುವುದು ಸರಿಯಲ್ಲ. ನಾಳೆ ಈ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು