ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಮೂಲಕ ಜನರಿಗೆ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗ್ತಿದೆ. ಅದರಲ್ಲೂ ವಿದ್ಯುತ್ ನಷ್ಟ ಉಂಟಾಗಬಾರದು ಎನ್ನುವ ಕಾರಣಕ್ಕೆ ಕಳೆದ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿ ತೆಗೆದುಕೊಂಡು ಅದಕ್ಕಿಂತ 5 ಯೂನಿಟ್ ಹೆಚ್ಚಾಗಿ ಕೊಡುವ ನಿರ್ಧಾರ ಮಾಡಲಾಗಿದೆ. ಆದರೆ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಲಾಗಿದೆ.
ಕಳೆದ ಬಿಜೆಪಿ ಸರ್ಕಾರ ಚುನಾವಣೆಗೆ ಹೋಗುವ ಮೊದಲೇ ವಿದ್ಯುತ್ ದರ ಏರಿಕೆಗೆ ಸಮ್ಮತಿ ಕೊಟ್ಟು ಚುನಾವಣಾ ಕಾರಣಕ್ಕಾಗಿ ತಡೆ ಹಿಡಿದಿತ್ತು. ಆ ಬಳಿಕ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ದರ ಏರಿಕೆ ಜಾರಿ ಆಗಿತ್ತು. ಆ ದರ ಏರಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಧವಿಲ್ಲ ಎಂದು ಸಚಿವ ಕೆ.ಜೆ ಜಾರ್ಜ್ ತಿರುಗೇಟು ನೀಡಿದ್ದಾರೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಗೃಹಬಳಕೆ ಗ್ರಾಹಕರಿಗೆ ಪ್ರತಿ ಯೂನಿಟ್ ದರ 7.70 ರೂಪಾಯಿ ಇತ್ತು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 5.90 ರೂಪಾಯಿ ಇದೆ ಎಂದಿದ್ದಾರೆ.
ನಮ್ಮ ಸರ್ಕಾರ ಗ್ಯಾರೆಂಟಿ ಯೋಜನೆಯಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್ ತನಕ ಉಚಿತ ವಿದ್ಯುತ್ ನೀಡುತ್ತಿದೆ. ಸರಾಸರಿ ಬಳಕೆ ಮೇಲ್ಪಟ್ಟ ಬಳಕೆಗೆ ವಿದ್ಯುತ್ ದರಗಳು ಕಡಿಮೆ ಆಗಿವೆ. ನಿಮ್ಮ ಸರ್ಕಾರದಲ್ಲಿ ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್ 9.15 ರೂಪಾಯಿ ಇತ್ತು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ಯೂನಿಟ್ 8 ರೂಪಾಯಿ ಇದೆ. ನಿಮ್ಮ ಸರ್ಕಾರದಲ್ಲಿ ಕೈಗಾರಿಕೆ ಬಳಕೆದಾರರಿಗೆ ಪ್ರತಿ ಯೂನಿಟ್ 7.60 ಪೈಸೆ ಇತ್ತು. ಈಗಿನ ಸರ್ಕಾರದಲ್ಲಿ ಪ್ರತಿ ಯೂನಿಟ್ 6.90 ಪೈಸೆ ಇದೆ. ಇದೀಗ ನೀವೇ ಹೇಳಿ ಯಾವ ಸರ್ಕಾರದಲ್ಲಿ ವಿದ್ಯುತ್ ದರ ಜಾಸ್ತಿ ಇದೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಚುನಾವಣಾ ಹಿತದೃಷ್ಟಿಯಿಂದ ಜನರನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡಿದೆ. ಆದರೆ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ. ಸುಳ್ಳು ಆರೋಪ ಮಾಡುವುದನ್ನು ಬಿಜೆಪಿ ಬಿಡಬೇಕು ಎಂದು ಒತ್ತಾಯಿಸಿದೆ.