• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಆರ್ಥಿಕ ದುಸ್ಥಿತಿಯೂ ಆಡಳಿತ ವೈಫಲ್ಯವೂ

ನಾ ದಿವಾಕರ by ನಾ ದಿವಾಕರ
May 6, 2024
in Top Story, ದೇಶ, ರಾಜಕೀಯ, ವಾಣಿಜ್ಯ
0
ಆರ್ಥಿಕ ದುಸ್ಥಿತಿಯೂ ಆಡಳಿತ ವೈಫಲ್ಯವೂ
Share on WhatsAppShare on FacebookShare on Telegram

——ನಾ ದಿವಾಕರ—–
ಸಾಧನೆಗಳಿಲ್ಲದ ಸರ್ಕಾರ ಮತ್ತೊಮ್ಮೆ ಕೋಮು ರಾಜಕಾರಣಕ್ಕೆ ಮೊರೆ ಹೋಗುತ್ತಿರುವುದು ಸ್ಪಷ್ಟ

ADVERTISEMENT

2024ರ ಲೋಕಸಭಾ ಚುನಾವಣೆಗಳು ಘೋಷಣೆಯಾದಾಗ ಕೇಂದ್ರ ಬಿಜೆಪಿ ಸರ್ಕಾರ ತನ್ನ ಹತ್ತು ವರ್ಷದ ಸಾಧನೆಗಳನ್ನೇ ಪ್ರಧಾನ ಅಸ್ತ್ರವನ್ನಾಗಿ ಬಳಸಿಕೊಂಡು, ಮತದಾರರ ಮುಂದೆ ಹೋಗುವ ಇಚ್ಛೆ ವ್ಯಕ್ತಪಡಿಸಿತ್ತು. ಆದರೆ ಎರಡು ಹಂತಗಳ ಚುನಾವಣೆಗಳು ಮುಗಿಯುತ್ತಿರುವ ವೇಳೆಗೆ ಪಕ್ಷದ ಪ್ರಚಾರ ವೈಖರಿ ಮತ್ತು ರಾಜಕೀಯ ನಿರೂಪಣೆಗಳು ದಿಕ್ಕು ಬದಲಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನೂ ಸೇರಿದಂತೆ ಬಿಜೆಪಿ ನಾಯಕರು ಮತ್ತೊಮ್ಮೆ ಹಿಂದುತ್ವ-ಮುಸ್ಲಿಂ ವಿರೋಧಿ ಧೋರಣೆ ಮತ್ತು ಕೋಮು ಧೃವೀಕರಣದತ್ತ ಹೊರಳುತ್ತಿದ್ದಾರೆ. ಆರ್ಥಿಕವಾಗಿ ಭಾರತವನ್ನು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಮಾಡುವ 2014ರ ಭರವಸೆ ಕೇವಲ ಹಾಳೆಗಳ ಮೇಲೆ ಉಳಿದಿದ್ದು, ಹತ್ತು ವರ್ಷಗಳ ಆಳ್ವಿಕೆಯಲ್ಲಿ ಸರ್ಕಾರವು ಕೈಗೊಂಡ ಆರ್ಥಿಕ ಸುಧಾರಣೆಯೆಲ್ಲವೂ ಮೇಲ್ಪದರದ ಔದ್ಯಮಿಕ ಸಾಮ್ರಾಜ್ಯಕ್ಕೆ ಲಾಭದಾಯಕವಾಗಿದೆ. ತಳಮಟ್ಟದ ಸಮಾಜದ ಜೀವನ-ಜೀವನೋಪಾಯದ ಮಾರ್ಗಗಳು ಇನ್ನೂ ಸಹ ದುರ್ಗಮವಾಗಿದೆ.

2014-24ರ ಆಳ್ವಿಕೆಯಲ್ಲಿ ನರೇಂದ್ರ ಮೋದಿ ಸರ್ಕಾರ ಅನುಸರಿಸಿದ ಆಪ್ತ ಬಂಡವಾಳಶಾಹಿ ಆರ್ಥಿಕ ನೀತಿಗಳು ಪ್ರಧಾನವಾಗಿ ಔದ್ಯಮಿಕ ಜಗತ್ತಿನ ವಿಸ್ತರಣೆಗೆ ಅನುಕೂಲಗಳನ್ನು ಕಲ್ಪಿಸಿದ್ದು, ನವ ಉದಾರವಾದಿ ನೀತಿಗಳು ಸೃಷ್ಟಿಸುತ್ತಿರುವ ಅಸಮಾನತೆಗಳನ್ನು ಹೋಗಲಾಡಿಸುವ ಯಾವುದೇ ಪ್ರಯತ್ನಗಳನ್ನು ಗುರುತಿಸಲಾಗುವುದಿಲ್ಲ. ಬದಲಾಗಿ ತಳಮಟ್ಟದ ಸಮಾಜದಲ್ಲಿ ಹೆಚ್ಚಾಗುತ್ತಿರುವ ಬಡವ-ಸಿರಿವಂತರ ಅಂತರವನ್ನು ಮರೆಮಾಚುವ ಸಲುವಾಗಿ ಕೆಲವು ಜನಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತವನ್ನು ವಿಕಾಸದ ಹಾದಿಯಲ್ಲಿ ಕೊಂಡೊಯ್ಯುವ ದೃಢ ಸಂಕಲ್ಪದೊಂದಿಗೆ 2024ರ ಚುನಾವಣೆಗಳನ್ನು “ವಿಕಸಿತ ಭಾರತ” ಘೋಷಣೆಯಡಿ ಎದುರಿಸುತ್ತಿರುವ ಬಿಜೆಪಿ, ವಾಸ್ತವದಲ್ಲಿ ತಳಮಟ್ಟದ ಜನತೆಯ ಜೀವನ-ಜೀವನೋಪಾಯವನ್ನು ಉತ್ತಮಪಡಿಸಿರುವ ಯಾವುದೇ ದತ್ತಾಂಶಗಳನ್ನು ಒದಗಿಸಲಾಗುತ್ತಿಲ್ಲ. ಹಾಗಾಗಿಯೇ ಮತ್ತೊಮ್ಮೆ ಕೋಮು ಧೃವೀಕರಣದತ್ತ ಹೊರಳಿದೆ.

ಹಾಳೆಯಲ್ಲುಳಿದ ಪ್ರಣಾಳಿಕೆ

2014ರ ಪ್ರಣಾಳಿಕೆಯಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಹಾಗೂ ಕೈಗಾರಿಕಾ ವಲಯದಲ್ಲಿ 10 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದ ಬಿಜೆಪಿ ಒಟ್ಟು ಜಿಡಿಪಿಯಲ್ಲಿ ತಯಾರಿಕಾ ವಲಯದ ಪಾಲನ್ನು ಶೇ 17 ರಿಂದ 25ರಷ್ಟು ಹೆಚ್ಚಿಸುವುದಾಗಿ ಹೇಳಿತ್ತು. ಆದರೆ ಇತ್ತೀಚಿನ CMIE ಸಮೀಕ್ಷೆಯ ಪ್ರಕಾರ ಕಳೆದ ಐದು ವರ್ಷಗಳಿಂದ ದೇಶದ ಒಟ್ಟು ದುಡಿಮೆಗಾರರ ಸಂಖ್ಯೆ 40 ಕೋಟಿಗೇ ಸೀಮಿತವಾಗಿದ್ದು, ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿಲ್ಲ. ಕಳೆದ ಐದು ವರ್ಷಗಳಲ್ಲಿ ನಾಲ್ಕು ಕೋಟಿಗೂ ಹೆಚ್ಚು ನಿರುದ್ಯೋಗಿಗಳು ಸೃಷ್ಟಿಯಾಗಿರುವುದನ್ನು ದತ್ತಾಂಶಗಳೇ ಹೇಳುತ್ತವೆ. ತಯಾರಿಕಾ ವಲಯದ ಉತ್ಪಾದನೆ 2016ರಿಂದಲೇ ಕುಸಿಯಲಾರಂಭಿಸಿದ್ದು ಜಿಡಿಪಿಯ ಶೇ 17ರಷ್ಟು ಮಾತ್ರ ಸಾಧಿಸಲು ಸಾಧ್ಯವಾಗಿದೆ. ಒಟ್ಟು ಉದ್ಯೋಗದಲ್ಲಿ ತಯಾರಿಕಾ ವಲಯದ ಪಾಲು 2012ರಲ್ಲಿದ್ದ ಶೇ 12.8ರ ಮಟ್ಟಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಧಾನ್ಯಗಳ ಬೆಲೆ ಶೇ 22ರಷ್ಟು ಹೆಚ್ಚಾಗಿದ್ದರೆ, ಕೃಷಿ-ಕಟ್ಟಡ ಕಾರ್ಮಿಕರ ಕೂಲಿಯ ಪ್ರಮಾಣ ಶೇ 12ರಷ್ಟು ಮಾತ್ರ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳಲ್ಲಿ ನೌಕರರ ಸಂಖ್ಯೆ 2013ರಲ್ಲಿ 17.3 ಲಕ್ಷ ಇದ್ದುದು 2022ರ ವೇಳೆಗೆ 14.6 ಲಕ್ಷಕ್ಕೆ ಕುಸಿದಿದೆ. ಅಂದರೆ ಒಂದು ದಶಕದ ಬಿಜೆಪಿ ಆಳ್ವಿಕೆಯಲ್ಲಿ 2.7 ಉದ್ಯೋಗಗಳು ನಷ್ಟವಾಗಿವೆ. ಇದೇ ಅವಧಿಯಲ್ಲಿ ಗುತ್ತಿಗೆ ನೌಕರರ ಸಂಖ್ಯೆ ಹೆಚ್ಚಾಗಿದ್ದು 2013ರಲ್ಲಿ ಶೇ 19ರಷ್ಟಿದ್ದುದು 2022ರ ವೇಳೆಗೆ ಶೇ 42.5ಕ್ಕೆ ಏರಿದೆ.

ಕೃಷಿ ವಲಯದಲ್ಲಿ ಮಹತ್ತರವಾದ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಬಿಜೆಪಿ ಸರ್ಕಾರದ 2014ರ ಭರವಸೆಗಳು ಇನ್ನೂ ಮರೀಚಿಕೆಯಾಗಿ ಉಳಿದಿದ್ದು, ರೈತಾಪಿಗೆ ಮಾರಕವಾಗಬಹುದಾಗಿದ್ದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರೈತ ಮುಷ್ಕರದ ಪರಿಣಾಮವಾಗಿ ರದ್ದುಪಡಿಸಲಾಗಿದೆ. 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ನಿರೀಕ್ಷೆಯೂ ಹುಸಿಯಾಗಿದೆ. ರೈತರ ಮಾಸಿಕ ಆದಾಯವನ್ನು 8,058 ರೂಗಳಿಂದ 22,610 ರೂಗಳಿಗೆ ಹೆಚ್ಚಿಸುವ ಮೋದಿ ಸರ್ಕಾರದ ಭರವಸೆ ಹುಸಿಯಾಗಿರುವುದೇ ಅಲ್ಲದೆ 2014-22ರ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು ಬಜೆಟ್‌ ವೆಚ್ಚದಲ್ಲಿ ಕೃಷಿ ವಲಯದ ಮೇಲಿನ ಸಾರ್ವಜನಿಕ ವೆಚ್ಚ ಪ್ರಮಾಣವೂ 2019ರ ನಂತರ ಸತತವಾಗಿ ಕುಸಿಯುತ್ತಿದ್ದು ರೈತರ ನೈಜ ವೇತನ ವರ್ಷಕ್ಕೆ ಶೇ 1ರಷ್ಟೂ ಹೆಚ್ಚಾಗಿಲ್ಲ.

2014ರ ಪ್ರಣಾಳಿಕೆಯಲ್ಲಿ ಮಧ್ಯಮ ವರ್ಗಗಳಿಗೆ ತೆರಿಗೆ ರಿಯಾಯಿತಿ ನೀಡುವ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ, ಜಿಎಸ್‌ಟಿ ಜಾರಿಯಾದ ನಂತರ ಕಪ್ಪುಹಣದ ಚಲಾವಣೆಯನ್ನು ನಿಯಂತ್ರಿಸಿ ಒಟ್ಟು ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದಾಗಿಯೂ ಹೇಳಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಸಾಮಾನ್ಯ ನಾಗರಿಕರು ಪಾವತಿಸುವ ತೆರಿಗೆಯ ಪ್ರಮಾಣ ಕಾರ್ಪೋರೇಟ್‌ ತೆರಿಗೆಗಿಂತಲೂ ಹೆಚ್ಚಾಗಿರುವುದು ಇತ್ತೀಚಿನ ಅಂಕಿಅಂಶಗಳಲ್ಲಿ ಸ್ಪಷ್ಟವಾಗಿದೆ. ದೇಶದ ಒಟ್ಟು ತೆರಿಗೆ ಸಂಗ್ರಹದಲ್ಲಿ ಸಾಮಾನ್ಯ ಜನತೆ ಪಾವತಿಸುವ ತೆರಿಗೆಯ ಪಾಲು ಶೇ 20.8 ರಿಂದ ಶೇ . 30.2ಕ್ಕೆ ಏರಿಕೆಯಾಗಿದ್ದರೆ ಕಾರ್ಪೋರೇಟ್‌ ತೆರಿಗೆಯ ಪಾಲು ಇದೇ ಅವಧಿಯಲ್ಲಿ ಶೇ. 34.5ರಿಂದ ಶೇ. 27.2ಕ್ಕೆ ಕುಸಿದಿದೆ. ಆಕ್ಸ್‌ಫಾಮ್‌ ಸಮೀಕ್ಷೆಯ ಅನುಸಾರ ದೇಶದ ಒಟ್ಟು ಸಂಪತ್ತಿನ ಶೇ 77ರಷ್ಟನ್ನು ಮೇಲ್ಪದರದ ಶೇ 10ರಷ್ಟು ಉದ್ಯಮಿಗಳು ಹೊಂದಿದ್ದಾರೆ. 2015-22ರ ಅವಧಿಯಲ್ಲಿ ಒಟ್ಟು ಸಂಗ್ರಹಿತ ತೆರಿಗೆಯಲ್ಲಿ ರಾಜ್ಯಗಳ ಪಾಲು ಶೇ. 34.8 ರಿಂದ ಶೇ. 29.6ಕ್ಕೆ ಕುಸಿದಿದೆ.

ನವ ಉದಾರವಾದದ ಕರಾಳ ಛಾಯೆ

ನವ ಉದಾರವಾದಿ ಆರ್ಥಿಕ ನೀತಿಯಲ್ಲಿ ಪ್ರಧಾನವಾಗಿ ಕಾಣುವುದು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ಕಾರ್ಪೋರೇಟೀಕರಣ. Monetisation ಎಂದು ಕರೆಯಲಾಗುವ ನಗದೀಕರಣ ಪ್ರಕ್ರಿಯೆಯ ಮೂಲಕ 2022-25ರ ಅವಧಿಯಲ್ಲಿ ಆರು ಲಕ್ಷ ಕೋಟಿ ರೂಗಳನ್ನು ಗಳಿಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಇದರಿಂದ ಬರುವ ಹಣವನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುವುದೆಂದೂ, ಇದು ಖಾಸಗೀಕರಣವಲ್ಲ, ಸಾರ್ವಜನಿಕ ಆಸ್ತಿಯನ್ನು ಭೋಗ್ಯಕ್ಕೆ ನೀಡುವ ನೀತಿ ಎಂದೂ ಕೇಂದ್ರ ಸರ್ಕಾರ ಘೋಷಿಸಿತ್ತು. ಅಷ್ಟೇ ಅಲ್ಲದೆ ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ಉದ್ದಿಮೆಗಳನ್ನು ಮಾತ್ರ ನಗದೀಕರಣಕ್ಕೆ ಪರಿಗಣಿಸುವುದಾಗಿ ಹೇಳಿತ್ತು. ಆದರೆ ವಾಸ್ತವದಲ್ಲಿ ಲಾಭದಾಯಕ ಸಾರ್ವಜನಿಕ ಉದ್ದಿಮೆಗಳಾದ SAIL , GAIL , ONGC , ರೈಲ್ವೆ ಇಲಾಖೆ ಮತ್ತು ಇದರ ಸಾರ್ವಜನಿಕ ಉದ್ದಿಮೆಗಳನ್ನೂ ನಗದೀಕರಣಗೊಳಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಯಲ್ಲಿ ಬರುವ 26,700 ಕಿಲೋಮೀಟರ್‌ ಹೆದ್ದಾರಿ ನಿರ್ಮಾಣವನ್ನು ಕಾರ್ಪೋರೇಟ್‌ ಉದ್ದಿಮೆಗೆ ನೀಡಲಾಗಿದ್ದು, ಸರ್ಕಾರ ಇದರಿಂದ 1.6 ಲಕ್ಷ ಕೋಟಿ ಆದಾಯ ಗಳಿಸುವುದಾಗಿ ಹೇಳಿದೆ. ಆದರೆ ವಾಸ್ತವಿಕ ಅಂದಾಜುಗಳ ಪ್ರಕಾರ ಕೇಂದ್ರ ರಸ್ತೆ ಸಾರಿಗೆ ಇಲಾಖೆಯೇ ಹೇಳುವಂತೆ ಇದರಿಂದ 8 ಲಕ್ಷ ಕೋಟಿ ರೂ ಆದಾಯ ಬರಬೇಕಿದೆ. ಶೇ 25ರಷ್ಟು ರೈಲ್ವೆ ಮಾರ್ಗಗಳು, ಶೇ 27ರಷ್ಟು ರಸ್ತೆಗಳನ್ನು ನಗದೀಕರಣ ಪ್ರಕ್ರಿಯೆಗೊಳಪಡಿಸಲಾಗುತ್ತಿದ್ದು ಇದು ಆರ್ಥಿಕತೆಯ ಕಾರ್ಪೋರೇಟೀಕರಣದ ಸ್ಪಷ್ಟ ನಿದರ್ಶನವಾಗಿದೆ.

2014ರ ಪ್ರಣಾಳಿಕೆಯಲ್ಲಿ ಬಿಜೆಪಿ ಜನಸಾಮಾನ್ಯರನ್ನು ಬೆಲೆ ಏರಿಕೆಯಿಂದ ರಕ್ಷಿಸುವುದೇ ಅಲ್ಲದೆ ಹಣದುಬ್ಬರವನ್ನು ತಗ್ಗಿಸುವುದಾಗಿ ಭರವಸೆ ನೀಡಿತ್ತು. ಅಡುಗೆ ಅನಿಲದ ಬೆಲೆಯನ್ನು 50 ರೂಗಳಷ್ಟು ಹೆಚ್ಚಿಸಿದ್ದ ಯುಪಿಎ ಸರ್ಕಾರದ ನಿರ್ಧಾರವನ್ನು ಖಂಡತುಂಡವಾಗಿ ಟೀಕಿಸಲಾಗಿತ್ತು. ನೂರು ದಿನಗಳೊಳಗಾಗಿ ಹಣದುಬ್ಬರವನ್ನು ನಿಯಂತ್ರಿಸುವ ಆಶ್ವಾಸನೆಯನ್ನೂ ನೀಡಿತ್ತು. ಆದರೆ 2019ರ ಚುನಾವಣೆಗಳಲ್ಲಿ ಬಿಜೆಪಿಯ ಪ್ರಣಾಳಿಕೆಯು ಹಣದುಬ್ಬರದ ಬಗ್ಗೆ ಚಕಾರವೆತ್ತಿರಲಿಲ್ಲ. ಮತ್ತೊಂದೆಡೆ ಅಡುಗೆ ಅನಿಲದ ಬೆಲೆಗಳು ಸತತವಾಗಿ ಏರುತ್ತಲೇ ಇದ್ದು 2014-22ರ ಅವಧಿಯಲ್ಲಿ ಶೇ 22ರಷ್ಟು ಹೆಚ್ಚಳವನ್ನು ದಾಖಲಿಸಲಾಗಿದೆ. ಜನಸಾಮಾನ್ಯರು ಬೆಲೆ ಏರಿಕೆ ಮತ್ತು ಹೆಚ್ಚಿನ ಜಿಎಸ್‌ಟಿ ತೆರಿಗೆಯಿಂದ ತತ್ತರಿಸುತ್ತಿರುವಾಗಲೇ 2016ರಲ್ಲಿ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಯನ್ನು ರದ್ದುಪಡಿಸಿದ ಬಿಜೆಪಿ ಸರ್ಕಾರ 2018ರಲ್ಲಿ ಕಾರ್ಪೋರೇಟ್‌ ತೆರಿಗೆ ದರವನ್ನು ಶೇ 30ರಿಂದ ಶೇ 22ಕ್ಕೆ ಇಳಿಸಿತ್ತು. ಇದರಿಂದ ಎರಡೇ ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ 1.84 ಲಕ್ಷ ಕೋಟಿ ರೂಗಳ ನಷ್ಟವಾಗಿತ್ತು. ಈ ಕಾರ್ಪೋರೇಟ್‌ ಪ್ರೇರಿತ ತೆರಿಗೆ ನೀತಿಯ ಪರಿಣಾಮವಾಗಿ ತಳಮಟ್ಟದ ಸಮಾಜದಲ್ಲಿ ಅಸಮಾನತೆಯು ಹೆಚ್ಚಾಗಿದ್ದು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 107ನೆಯ ಸ್ಥಾನದಿಂದ 2023ರಲ್ಲಿ 111ನೆಯ ಸ್ಥಾನಕ್ಕೆ ಕುಸಿದಿದೆ. ದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಜನಸಂಖ್ಯೆ 2015ರಲ್ಲಿ ಶೇ 14ರಷ್ಟಿದ್ದುದು 2023ರಲ್ಲಿ ಶೇ 16.6ಕ್ಕೆ ಏರಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಕಾರ್ಪೋರೇಟ್‌ ಆರ್ಥಿಕ ನೀತಿಯಿಂದ ದೇಶದ ಬಡಜನತೆ ತತ್ತರಿಸುವಂತಾಗಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ದೇಶದ ಶೇ. 1ರಷ್ಟು ಅತಿ ಶ್ರೀಮಂತರು ಒಟ್ಟು ಸಂಪತ್ತಿನ ಶೇ 40ರಷ್ಟನ್ನು ಹೊಂದಿದ್ದಾರೆ. ಒಟ್ಟು ಆದಾಯದ ಶೇ 22ರಷ್ಟನ್ನು ಈ ಮೇಲ್ಪದರ ಸಿರಿವಂತರೇ ಗಳಿಸುತ್ತಿದ್ದಾರೆ. ದೇಶದ 92 ಕೋಟಿ ವಯಸ್ಕರ ಪೈಕಿ 10 ಸಾವಿರ ಅತಿ ಶ್ರೀಮಂತ ವ್ಯಕ್ತಿಗಳು ಸರಾಸರಿ 22.6 ಶತಕೋಟಿ ರೂಗಳ ಸಂಪತ್ತನ್ನು ಹೊಂದಿದ್ದಾರೆ. ಇದು ದೇಶದ ಸರಾಸರಿಯ 16 ಸಾವಿರ ಪಟ್ಟು ಹೆಚ್ಚಿನ ಪ್ರಮಾಣ. ಬಡತನವನ್ನು ಹೋಗಲಾಡಿಸುವುದರ ಬದಲು ನವ ಉದಾರವಾದಿ ಆರ್ಥಿಕ ನೀತಿಗಳು ಬಡ ಜನರನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿದ್ದು, ಕೋಟ್ಯಧಿಪತಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಒಂದು ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಇರುವ ವ್ಯಕ್ತಿಗಳ ಸಂಖ್ಯೆ 2019-20ರಲ್ಲಿ 1,09,000 ಇದ್ದುದು 2022-23ರ ವೇಳೆಗೆ 2 ಲಕ್ಷ 16 ಸಾವಿರಕ್ಕೆ ಏರಿದೆ. ಅಂದರೆ ಶೇ 97ರಷ್ಟು ಕೋಟ್ಯಧಿಪತಿಗಳು ಹೆಚ್ಚಾಗಿದ್ದಾರೆ. ಇದೇ ಸಂದರ್ಭಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ವೇಳೆಗೆ 450 ಕೋಟ್ಯಧಿಪತಿಗಳು ಚುನಾವಣಾ ಕಣದಲ್ಲಿರುವುದು ಕಾಕತಾಳೀಯ.

ಕಾರ್ಪೋರೇಟ್‌ ಫಲಾನುಭವಿಗಳು

ಅಂದರೆ 2014ರ ನಂತರದ ಹತ್ತು ವರ್ಷಗಳಲ್ಲಿ ಭಾರತ ಕಂಡಿರುವ ಆರ್ಥಿಕ ಫಲಾನುಭವಿಗಳನ್ನು ಕೇವಲ ಮೇಲ್ಪದರದ ಸಮಾಜದಲ್ಲಿ ( Elite society) ಮಾತ್ರ ಕಾಣಬಹುದು. ಆಕ್ಸ್‌ಫಾಮ್‌ ವರದಿಯ ಪ್ರಕಾರ ದೇಶದ ಶೇಕಡಾ 10ರಷ್ಟಿರುವ ಮೇಲ್ಪದರದ ಸಮಾಜವು ರಾಷ್ಟ್ರ ಸಂಪತ್ತಿನ ಶೇ 77ರಷ್ಟು ಪಾಲನ್ನು ಪಡೆದುಕೊಂಡಿದ್ದು 2017ರಲ್ಲಿ ಉತ್ಪಾದನೆಯಾದ ಒಟ್ಟು ಸಂಪತ್ತಿನ ಶೇ 73ರಷ್ಟನ್ನು ಮೇಲ್ಪದರದ ಶೇ 1ರಷ್ಟಿರುವ ಅತಿ ಶ್ರೀಮಂತ ವ್ಯಕ್ತಿಗಳು ಕಬಳಿಸಿದ್ದಾರೆ. ಅತ್ಯಂತ ಬಡತನದಲ್ಲಿ ಬದುಕು ಸವೆಸುತ್ತಿರುವ 67 ಕೋಟಿ ಜನರ ಸಂಪತ್ತು ಕೇವಲ ಶೇ 1ರಷ್ಟು ಹೆಚ್ಚಳವಾಗಿದೆ. ಈ ಅಂಕಿಅಂಶಗಳನ್ನು ಸರ್ಕಾರ ಅಲ್ಲಗಳೆಯುತ್ತದೆ, ನಮ್ಮ ಕಲಿತ ಸಮಾಜವೂ ಸಹ ಈ ನಿರಾಕರಣೆಯನ್ನು ಮೌನವಾಗಿ ಸ್ವೀಕರಿಸುತ್ತದೆ. ಏಕೆಂದರೆ ಕಳೆದ ಹತ್ತು ವರ್ಷಗಳಲ್ಲಿ ವಾಸ್ತವದಿಂದ ದೂರವಾದ ವಾಟ್ಸಾಪ್‌ ವಿಶ್ವವಿದ್ಯಾಲಯದ ಬೌದ್ಧಿಕ ಸರಕುಗಳನ್ನೇ ಪ್ರತಿಶತ ನಂಬುವ ಒಂದು ಕಲಿತ ಜನಸಂಖ್ಯೆಯನ್ನು ಸೃಷ್ಟಿಸಲಾಗಿದೆ.

ಆದರೆ ನೆಲ ಮೂಲದ ವಾಸ್ತವಗಳತ್ತ ಸೂಕ್ಷ್ಮವಾಗಿ ಗಮನಿಸಿದಾಗ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವುದು, ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಬಡಜನತೆ ತತ್ತರಿಸಿ ಹೋಗುತ್ತಿರುವುದು, ನಗರ ಪ್ರದೇಶಗಳಲ್ಲೂ ಸಹ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗುತ್ತಿರುವುದು ಇವೆಲ್ಲವೂ ಢಾಳಾಗಿ ಕಾಣುತ್ತದೆ. ಈ ಹಸಿವು ಮತ್ತು ಬಡತನತ್ತ ಕಣ್ಣುಹಾಯಿಸುವಾಗ ನಮ್ಮ ಮಿದುಳು ನಿಷ್ಪಕ್ಷಪಾತವೂ, ಪಾರದರ್ಶಕವೂ, ಪ್ರಾಮಾಣಿಕವೂ ಆಗಿರಬೇಕು. ಇಲ್ಲವಾದರೆ ಭ್ರಷ್ಟ ರಾಜಕಾರಣ ಹಾಗೂ ಲಾಭಕೋರ ಕಾರ್ಪೋರೇಟ್‌ ಮಾರುಕಟ್ಟೆಯ ಭ್ರಮೆಗಳಿಗೊಳಪಟ್ಟು, ಸರ್ಕಾರದ ನಿರೂಪಣೆಗಳನ್ನೇ ನಂಬಬೇಕಾಗುತ್ತದೆ. 2024ರ ಚುನಾವಣೆಗಳು ನಿರ್ಣಾಯಕವಾಗುವುದು ಸಂವಿಧಾನ ಅಪಾಯದಲ್ಲಿದೆ ಅಥವಾ ಪ್ರಜಾಪ್ರಭುತ್ವ ಇಲ್ಲವಾಗುತ್ತದೆ ಎಂಬ ಕಾರಣಕ್ಕಾಗಿ ಮಾತ್ರವೇ ಅಲ್ಲ. ಸಂವಿಧಾನ ಸುರಕ್ಷಿತವಾಗಿದ್ದರೂ, ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮ ದೇಶದ ಬಹುಸಂಖ್ಯಾತ ದುಡಿಮೆಯ ಜನತೆಗೆ ಮುಂದಿನ ದಿನಗಳು ಕರಾಳವಾಗಿಯೇ ಕಾಣುತ್ತಿವೆ.

ತಮ್ಮ ಏಳು ದಶಕಗಳ ದುಡಿಮೆಯ ಫಲವನ್ನೂ, ಸೃಷ್ಟಿಸಲಾಗಿರುವ ಸಾರ್ವಜನಿಕ ಸಂಪತ್ತನ್ನೂ, ಲಭ್ಯವಿರುವ ನೈಸರ್ಗಿಕ-ಮಾನವ ಸಂಪನ್ಮೂಲಗಳನ್ನೂ ಕಾರ್ಪೋರೇಟ್‌ ಮಾರುಕಟ್ಟೆ ಪರಭಾರೆ ಮಾಡುವ ನವ ಉದಾರವಾದಿ ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಮತದಾರರು ಸೋಲಿಸಬೇಕಿದೆ. ಈ ದೃಷ್ಟಿಯಿಂದ 2024 ನಿರ್ಣಾಯಕವೂ ಆಗಿದೆ.

( ಅಂಕಿ-ಅಂಶಗಳು ಹಾಗೂ ದತ್ತಾಂಶಗಳಿಗೆ ಆಧಾರ Financial Accountability of India – FAN India ವರದಿ )
-೦-೦-೦

Tags: #election #vidhanasabhaelection #2023election #darshandhruvanarayan #rdhruvanarayan #vote #pratidhvani #pratidhvanidigital #pratidhvaninewsBJPCongress PartyEconomic-poor-governanceಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ರಾಹುಲ್‌ ಹೇಳಿದ 400 ವಿಡಿಯೋ ನಟ್ಟಾ ಡಿಸೌಜಾ ಕೊಟ್ಟ ಅಸಲಿ ಕಾರಣ

Next Post

ಕರ್ನಾಟಕದಲ್ಲಿ 2ನೇ ಹಂತದ ‘ಲೋಕ’ ವೋಟಿಂಗ್ ಗೆ ಸಿದ್ಧತೆ.. ಯಾವ್ಯಾವ ಕ್ಷೇತ್ರದಲ್ಲಿ ಮಂಗಳವಾರ ಮತದಾನ ?

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಕರ್ನಾಟಕದಲ್ಲಿ 2ನೇ ಹಂತದ ‘ಲೋಕ’ ವೋಟಿಂಗ್ ಗೆ ಸಿದ್ಧತೆ.. ಯಾವ್ಯಾವ ಕ್ಷೇತ್ರದಲ್ಲಿ ಮಂಗಳವಾರ ಮತದಾನ ?

ಕರ್ನಾಟಕದಲ್ಲಿ 2ನೇ ಹಂತದ 'ಲೋಕ' ವೋಟಿಂಗ್ ಗೆ ಸಿದ್ಧತೆ.. ಯಾವ್ಯಾವ ಕ್ಷೇತ್ರದಲ್ಲಿ ಮಂಗಳವಾರ ಮತದಾನ ?

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada