ಬೆಂಗಳೂರು: ಗುರುವಾರ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 305 ವಿದ್ಯುತ್ ಕಂಬಗಳು ಧರೆಗುರುಳಿದ್ದು, 57 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾನಿಗೊಳಗಾಗಿವೆ. ಭಾರೀ ಗಾಳಿ- ಮಳೆಗೆ ವಿದ್ಯುತ್ ಮೂಲಸೌಕರ್ಯ ಹಾನಿಗೊಂಡಿದ್ದು, ದುರಸ್ಥಿ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ 305 ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ 25.62 ಲಕ್ಷ ರೂ. ಹಾಗೂ ಟಿಸಿಗಳು ಹಾನಿಗೊಳಗಾಗಿದ್ದರಿಂದ 86.20 ಲಕ್ಷ ರೂ. ನಷ್ಟವಾಗಿದೆ. ಮತ್ತು 18 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಯಾಗಿದ್ದು, 6.67 ಲಕ್ಷ ರೂ. ನಷ್ಟವಾಗಿದೆ. ಒಟ್ಟಾರೆಯಾಗಿ ಗುರುವಾರ ಸುರಿದ ಮಳೆಗೆ ಬೆಸ್ಕಾಂಗೆ 118.50 ಲಕ್ಷ ರೂ. ನಷ್ಟ ಉಂಟಾಗಿದೆ.

ಬೆಸ್ಕಾಂ ಅಭಿಯಂತರರು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ಪೂರೈಕೆ ಪುನಾರಂಭಗೊಂಡಿದೆ. ಕೆಲ ಪ್ರದೇಶದಲ್ಲಿ ಭಾರೀ ಗಾಳಿಗೆ ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಮುರಿದಿರುವ ಕಂಬಗಳ ಬದಲಾವಣೆ ಮಾಡಿ, ಆದಷ್ಟು ಬೇಗ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.