ಭಾರತದಂತಹ ಸಂವಿಧಾನ ಬದ್ಧ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರವನ್ನು ಹೊರತುಪಡಿಸಿ ಸಾಕಷ್ಟು ಸಂವಿಧಾನ ಬದ್ಧವಾದ ಸಂಸ್ಥೆಗಳು ಕಾರ್ಯ ನಿರ್ವಹಣೆ ಮಾಡುತ್ತವೆ. ಅಂತಹ ಸಂಸ್ಥೆಗಳ ಸಾಲಿಗೆ ಸೇರುವುದು ಚುನಾವಣಾ ಆಯೋಗ ಕೂಡ ಒಂದು. ಯಾವುದೇ ರಾಜ್ಯ ಅಥವಾ ಇಡೀ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಆದಾಗ ಚುನಾವಣಾ ಆಯೋಗ ಆಡಳಿತ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಅಧಿಕಾರಿಗಳ ವರ್ಗಾವಣೆಯಿಂದ ಇಡಿದು ಎಲ್ಲಾ ಕೆಲಸಗಳು ಚುನಾವಣಾ ಆಯೋಗ ಹೇಳಿದಂತೆಯೇ ನಡೆಯಬೇಕು. ಸರ್ಕಾರಗಳು ತಟಸ್ಥವಾಗಿ ಇರಬೇಕಾಗುತ್ತದೆ. ಚುನಾವಣಾ ಆಯೋಗ ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ, ಮಾಡುವಂತಿಲ್ಲ.
2 ಕೋಟಿ ಹಣ ಸಿಕ್ಕಿದ್ದು ಎಲ್ಲಿ..? ಯಾರದ್ದು ಆ ಹಣ..?
ಬೆಂಗಳೂರಿನ ETA ಮಾಲ್ ಬಳಿ ಕಾರನ್ನು ಚುನಾವಣಾ ಅಧಿಕಾರಿಗಳು ತಡೆದು ತಪಾಸಣೆ ಮಾಡಿದ್ದರು. ಆ ವೇಳೆ 2 ಕೋಟಿ (Two Crore) ಹಣ ಪತ್ತೆಯಾಗಿತ್ತು. ದೊಡ್ಡ ಮೊತ್ತ ಆಗಿದ್ದರಿಂದ ಚುನಾವಣಾ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದರು. ಆ ಬಳಿಕ ಭಾರತೀಯ ಜನತಾ ಪಾರ್ಟಿ, ಆ ಹಣ ಬಿಜೆಪಿಗೆ ಸೇರಿದ್ದು, ಅದನ್ನು ಮಲ್ಲೇಶ್ವರದ ಕೆನರಾ ಬ್ಯಾಂಕ್ ಬ್ರಾಂಚ್ನಿಂದ ಡ್ರಾ ಮಾಡಿದ್ದೇವೆ. ಮಾರ್ಚ್ 27ರಂದು ಡ್ರಾ ಮಾಡಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಟ್ಟಿದ್ದೆವು. ಇದೀಗ ಕೊಡಗು – ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಿಗೆ ಕಳುಹಿಸಿ ಕೊಡಲಾಗ್ತಿತ್ತು ಎಂದು ಮಾಹಿತಿ ನೀಡಿ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದು ಕಾಂಗ್ರೆಸ್ ಕಣ್ಣು ಕೆಂಪಾಗುವಂತೆ ಮಾಡಿದೆ.
ಕಾಂಗ್ರೆಸ್ ಸರ್ಕಾರ ಆಗ್ರಹ ಏನು..? ಆಕ್ರೋಶ ಯಾಕೆ..?
ನಿನ್ನೆ ಮಧ್ಯಾಹ್ನ ಬಿಜೆಪಿಗೆ ಸೇರಿದೆ ಹಣ ಸಿಕ್ಕಿದೆ, ಚುನಾವಣಾ ಅಧಿಕಾರಿಗಳು ಐಟಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಐಟಿ ಅಧಿಕಾರಿಗಳು ಶರವೇಗದಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿ ಹೇಳಿದಂತೆ ಮಾರ್ಚ್ 27ರಂದು ಕೆನರಾ ಬ್ಯಾಂಕ್ನಿಂದ 2 ಕೋಟಿ ಹಣವನ್ನು ತೆಗೆದುಕೊಂಡಿದ್ದೆವು. ಅದರಲ್ಲಿ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ನಿನ್ನೆವರೆಗೆ ಎರಡು ಕೋಟಿ ರೂಪಾಯಿ ಉಳಿದಿದೆ. ಮೈಸೂರು, ಮಂಗಳೂರು ಕ್ಷೇತ್ರಕ್ಕೆ ಹಣ ಕಳಿಸುತ್ತಿದ್ದೇವೆ. ನಮ್ಮಲ್ಲಿ ಬ್ಯಾಂಕ್, ಡಿಜಿಟಲ್ ವ್ಯವಸ್ಥೆ ಇಲ್ಲ ಎಂದು ನಿನ್ನೆ ಐಟಿ ಅಧಿಕಾರಿಗಳಿಗೆ ಬಿಜೆಪಿ ಪತ್ರ ಕೊಟ್ಟಿದೆ. ಅದರ ಆಧಾರದ ಮೇಲೆ ಐಟಿ ಅಧಿಕಾರಿಗಳು ಹಣಕ್ಕೆ ಸೂಕ್ತ ದಾಖಲೆ ಇದೆ ಎಂದು ಪರಿಗಣಿಸಿ ಹಣ ವಾಪಸ್ ಕೊಟ್ಟಿದ್ದಾರೆ. ಇದು ಅಕ್ರಮ ಎನ್ನುವುದು ಕಾಂಗ್ರೆಸ್ ಆರೋಪ.
‘2 ಕೋಟಿ ರೂಪಾಯಿ ಹವಾಲ ಹಣ ವರ್ಗಾವಣೆ ಆಗಿದೆ..’
ನಾನು ಏಳು ಚುನಾವಣೆ ಮಾಡಿದ್ದೇನೆ. ಅಕೌಂಟ್ ಮೂಲಕ ಚುನಾವಣೆಗೆ ಖರ್ಚು ಮಾಡಬೇಕು. 50 ಸಾವಿರ ಮೇಲೆ ಹಣ ಕ್ಯಾಷ್ ವ್ಯವಹಾರ ಮಾಡಬಾರದು. ಇದು ಸರ್ಕಾರದ ನಿಯಮ ಕೂಡ ಇದೆ. ಹಾಗಿದ್ದರೂ 2 ಕೋಟಿ ಹಣವನ್ನು ಚುನಾವಣಾ ಖರ್ಚಿಗೆ ಕ್ಯಾಷ್ ಕೊಟ್ಟಿದ್ದು ಹೇಗೆ..? ಇದು ಪ್ರಜಾಪ್ರಭುತ್ವದ ಮೇಲೆ ಸರ್ಜಿಕಲ್ ಸ್ಟ್ರೈಕ್ ಆಗಿದೆ. ಹವಾಲಾ ದುಡ್ಡು ಟ್ರಾನ್ಸ್ಫರ್ ಆಗಿದೆ. ನಾವು ಕೂಡ ಇದೆ ರೀತಿಯಲ್ಲಿ ವ್ಯವಹಾರ ಮಾಡಿದ್ರೆ ನಡೆಯುತ್ತಾ..? ಎಂದು ಕೃಷ್ಣಬೈರೇಗೌಡ ವಾಗ್ದಾಳಿ ಮಾಡಿದ್ದಾರೆ. ಇನ್ನು ಈ ರೀತಿ ದಾಖಲೆ ತೋರಿಸಿ ಹಣವನ್ನು ವಾಪಸ್ ಪಡೆದುಕೊಂಡಿರುವ ಕ್ರಮ ಅಕ್ರಮ ಎಂದು ಸಚಿವ ಕೃಷ್ಣಬೈರೇಗೌಡ ಟೀಕಿಸಿದ್ದಾರೆ.
ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ಯಾ ಆಯೋಗ..?
ಸಚಿವ ಕೃಷ್ಣಬೈರೇಗೌಡ ಚುನಾವಣಾ ಆಯೋಗಕ್ಕೆ ತನಿಖೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಸೀಜ್ ಆದ ಹಣವನ್ನ ವಾಪಸ್ ಕೊಟ್ಟಿದ್ದೇಕೆ..? ಎಂದು ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದ್ದಾರೆ. ಸೀಜ್ ಆದ 2 ಕೋಟಿ ಹಣವನ್ನು ವಾಪಸ್ ಕೊಟ್ಟಿದ್ದಾರೆ. ಕೇವಲ ಎರಡೇ ಗಂಟೆಯಲ್ಲಿ ಹೀಗೆ ಮಾಡಿದ್ದು ಹೇಗೆ..? ಐಟಿ ಅಧಿಕಾರಿಗಳು ಆದೇಶ ಮಾಡಿದ್ದು ಹೇಗೆ..? ಇದರ ಬಗ್ಗೆ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಹೇಳಿರುವುದನ್ನು ನೋಡಿದಾಗ ಸ್ವತಂತ್ರವಾಗಿ ಕೆಲಸ ಮಾಡಬೇಕಿರುವ ಚುನಾವಣಾ ಆಯೋಗ ಅಖಾಡಕ್ಕೆ ಇಳಿಯಬೇಕಿದೆ. ಆಗಿರುವ ಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನ್ಯಾಯಬದ್ಧವಾಗಿರುವುದನ್ನು ಮಾಡಬೇಕಿದೆ. ಮುಂದೆ ಏನಾಗುತ್ತೆ ಅನ್ನೋದ್ರ ಮೇಲೆ ಆಯೋಗದ ನ್ಯಾಯನಿಷ್ಠೆ ನಿರ್ಧಾರ ಆಗಲಿದೆ.
ಕೃಷ್ಣಮಣಿ