ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಆಗಿರುವ ಸಚಿವ ಕೆ.ಜೆ ಜಾರ್ಜ್, ಚಿಕ್ಕಮಗಳೂರು – ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕು ವ್ಯಾಪ್ತಿಯ ಶಾನುವಳ್ಳಿ, ನಿಲುವಾಗಿಲು ಹಾಗೂ ಸೂರ್ಯ ದೇವಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿ, ಮತಯಾಚನೆ ಮಾಡಿದ್ದಾರೆ. ಕೆ.ಜೆ ಜಾರ್ಜ್ ಮತಯಾಚನೆ ಕಾಂಗ್ರೆಸ್ ಮುಖಂಡರು ಮತ್ತು ಸಾವಿರಾರು ಬೆಂಬಲಿಗರು ಸಾಥ್ ನೀಡಿದ್ದಾರೆ. ಇದೇ ವೇಳೆ ಬೇರೆ ಬೇರೆ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲೂ ಪ್ರಚಾರ ಮಾಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್, ಕಾಂಗ್ರೆಸ್ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲ್ಲಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಮಂಜುನಾಥ ಭಂಡಾರಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸೇರಿದಂತೆ ಹಲವು ನಾಯಕರು, ಮುಖಂಡರು ಭಾಗಿಯಾಗಿದ್ದರು.

ಇತ್ತ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ತಂತ್ರಗಾರಿಕೆ ಮಾಡಿರುವ ಕೆ.ಜೆ ಜಾರ್ಜ್, ಸರ್ವಜ್ಞ ನಗರ ವ್ಯಾಪ್ತಿಯಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದಾರೆ. ತಮ್ಮದೇ ಉಸ್ತುವಾರಿ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಅಬ್ಬರದ ಜೊತೆಗೆ ಸ್ವಕ್ಷೇತ್ರ ಸರ್ವಜ್ಞ ನಗರ ಸೇರಿದಂತೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲೂ ಗೆಲ್ಲಿಸುವ ಕಸರತ್ತು ಮಾಡಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕ್ರೈಸ್ತ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಆದರೆ ಕಾಂಗ್ರೆಸ್ ಪಕ್ಷ ಮನ್ಸೂರ್ ಅಲಿ ಖಾನ್‌ಗೆ ಟಿಕೆಟ್ ನೀಡಿದ್ದು, ಪಕ್ಷದ ಅಭ್ಯರ್ಥಿ ಪರ ಕೆ.ಜೆ ಜಾರ್ಜ್ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಮಲೆನಾಡು ಚಿಕ್ಕಮಗಳೂರು ಹಾಗು ಉಡುಪಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದ ಜನರಿದ್ದು, ಕ್ರೈಸ್ತ ಸಮುದಾಯ ಸೇರಿದಂತೆ ಎಲ್ಲಾ ವರ್ಗದ ಮತ ಸೆಳೆಯುವ ಹಾಗೆ ಜಾರ್ಜ್ ಕೆಲಸ ಮಾಡುತ್ತಿದ್ದಾರೆ ಎನ್ನಬಹುದು.
ರಾಜ್ಯದಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯಕ್ಕೆ ಸೇರಿದ ಲಕ್ಷಾಂತರ ಮತದಾರರು ಇದ್ದು, ಸಂಪೂರ್ಣ ಕ್ರೈಸ್ತ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್ ಭಾರೀ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನು ಸಂಫೂರ್ಣವಾಗಿ ಬಳಸಿಕೊಳ್ತಿರೋ ಕಾಂಗ್ರೆಸ್ ಪಕ್ಷ, ಎಲ್ಲೆಲ್ಲಿ ಕ್ರೈಸ್ತ ಸಮುದಾಯದ ಮತದಾರರು ಹೆಚ್ಚಾಗಿದ್ದಾರೋ ಆ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿಸುವ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದೆ.
