ಭಾರತೀಯ ಜನತಾ ಪಾರ್ಟಿ ನಾಯಕರು 28 ಕ್ಷೇತ್ರದಲ್ಲಿ ಗೆಲ್ಲುವ ಮಾತನಾಡ್ತಿದ್ದಾರೆ. ಆದರೆ 24 ಕ್ಷೇತ್ರದಲ್ಲಿ ಗೆದ್ದೇ ಗೆಲ್ತೀವಿ ಎಂದು ಎನ್ಡಿಎ (NDA) ಮೈತ್ರಿಕೂಟದ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ಇದು ಲೋಕಸಭಾ ಚುನಾವಣೆ ಆಗಿರುವ ಕಾರಣದಿಂದ ಎಲ್ಲರೂ ನರೇಂದ್ರ ಮೋದಿ ನಾಯಕತ್ವಕ್ಕೆ ಮತ ನೀಡುತ್ತಾರೆ ಎನ್ನುವುದು ಬಿಜೆಪಿ ಹಾಗು ಎನ್ಡಿಎ ನಾಯಕರಲ್ಲಿ ಮನೆ ಮಾಡಿರುವ ಆತ್ಮವಿಶ್ವಾಸ. ಆದರೆ ಅವರ ಒಳಗೆ ಸಣ್ಣದಾಗಿ ಕಾಡುತ್ತಿರುವ ಆತಂಕ ಎಂದರೆ ರಾಜ್ಯ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು. ಮಹಿಳಾ ಮತದಾರರು ಗ್ಯಾರಂಟಿ ಹಣಕ್ಕೆ ಮಾರು ಹೋಗಿ ಮತ ನೀಡದಿದ್ದರೆ ಏನು ಮಾಡುವುದು ಅನ್ನೋ ಆತಂಕದಲ್ಲಿ ಚುನಾವಣೆ ಮಾಡುತ್ತಿದ್ದಾರೆ.
ಮಹಿಳೆಯರು ಮನಸ್ಸು ಮಾಡಿದ್ರೆ ಕಾಂಗ್ರೆಸ್ಗೆ ಲಾಭ..!
ಕಾಂಗ್ರೆಸ್ ಸರ್ಕಾರ ಸಾಲ ಮಾಡಿದ್ಯೋ.. ಹಾಗೆ ಕೊಡ್ತಿದ್ಯೋ ಅನ್ನೋದು ಬೇರೆ ಸಂಗತಿ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದ್ದಂತೆ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದು ಗ್ರಾಮೀಣ ಭಾಗದ ಮಹಿಳೆಯರ ಮನಸ್ಸು ಗೆದ್ದಿರುವುದು ಸುಳ್ಳಲ್ಲ. ಗಂಡನಿಗೆ ಹೊರೆಯಾಗುತ್ತಿದೆ, ಹೆಂಡತಿಗೆ 2 ಸಾವಿರ ಕೊಡ್ತಿದ್ದಾರೆ ಎಂದು ವಿರೋಧ ಪಕ್ಷಗಳು ಹೇಳುತ್ತಿದ್ದರೂ ಮಹಿಳೆಯರು ಯಾವುದನ್ನು ಸ್ವೀಕಾರ ಮಾಡುತ್ತಾರೆ. ನಮ್ಮ ಗಂಡನಿಗೆ ತೊಂದರೆ ಆಗ್ತಿದೆ, ರಾಜ್ಯದ ಸಾಲ ಏರಿಕೆ ಆಗ್ತಿದೆ ಎನ್ನುವುದನ್ನು ಒಪ್ಪಿಕೊಂಡು ಗ್ಯಾರಂಟಿ ವಿರುದ್ಧ ಮತ ಚಲಾವಣೆ ಮಾಡ್ತಾರೆ ಅನ್ನೋ ನಂಬಿಕೆ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರಲ್ಲಿ ಇಲ್ಲ. ಇದು ಹಿನ್ನಡೆ ಆಗುವ ಭೀತಿಯನ್ನು ಹೆಚ್ಚು ಮಾಡಿದೆ.
ರಾಜ್ಯದಲ್ಲಿ ಮೋದಿ ವರ್ಚಸ್ಸು ಕುಗ್ಗಿರುವ ಲೆಕ್ಕಾಚಾರ!
ನರೇಂದ್ರ ಮೋದಿ (Narendra Modi) ವರ್ಚಸ್ಸು ತೋರಿಸಿ ಮತ ಗಳಿಸುವುದು ರಾಜ್ಯ ಬಿಜೆಪಿ (BJP) ನಾಯಕರ ನಿರ್ಧಾರ ಆಗಿರುತ್ತಿತ್ತು. ಆದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಬಹುತೇಕ ಕ್ಷೇತ್ರಗಳಿಗೆ ಭೇಟಿ ನೀಡಿ ಅಬ್ಬರದ ಪ್ರಚಾರ ಮಾಡಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲೆಲ್ಲಿ ರ್ಯಾಲಿ (Rally) ಮಾಡಿದ್ದರು, ಆ ಕ್ಷೇತ್ರಗಳಲ್ಲೂ ಬಿಜೆಪಿ ಸೋತಿರುವುದು ಬಿಜೆಪಿ ನಾಯಕರ ಆತಂಕವನ್ನು ದುಪ್ಪಟ್ಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ ಎನ್ನುವುದನ್ನು ಕಾಂಗ್ರೆಸ್ ಜನರಿಗೆ ಮುಟ್ಟಿಸುವಲ್ಲಿ ಸಫಲವಾಗಿದೆ ಎನ್ನುವುದು ಬಿಜೆಪಿ ನಾಯಕರ ಆತಂಕದಲ್ಲೇ ಎದ್ದು ಕಾಣಿಸುತ್ತಿದೆ.
ಚುನಾವಣಾ ಬಾಂಡ್ ಹಗರಣದ ಹೊಡೆತದ ಭೀತಿ!
ರಾಜಕಾರಣದಲ್ಲಿ ಯಾರೂ ಸಾಚಾಗಳು ಅಲ್ಲ ಅನ್ನೋದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ಸಾರಿ ಸಾರಿ ಹೇಳುವ ಕೆಲಸ ಮಾಡಿದ್ದಾರೆ. ದೇಶದಲ್ಲಿ ಮಾಹಿತಿ ಹಕ್ಕು ಕಾನೂನು (Right To Information Act – 2005) ಇದ್ದರೂ ಚುನಾವಣಾ ಬಾಂಡ್ (Electoral Bond) ಮಾಹಿತಿ ಹಕ್ಕು ಕಾನೂನು ವ್ಯಾಪ್ತಿಯಲ್ಲಿ ಬಾರದಂತೆ ತಡೆದು ಕಳೆದ 5 ವರ್ಷಗಳ ಕಾಲ ರಾಜಕೀಯ ಪಕ್ಷಗಳಿಗೆ ದೇಣಿಗೆ ತೆಗೆದುಕೊಂಡಿದ್ದಾರೆ. ಎಲ್ಲಾ ಪಕ್ಷಗಳಿಗೂ ದೇಣಿಗೆ ಬಂದರೂ ಬಿಜೆಪಿಗೆ ಸಿಂಹಪಾಲು. ಅಷ್ಟೇ ಅಲ್ಲದೆ IT, ED, CBI ಸ್ವತಂತ್ರ ಸಂಸ್ಥೆಗಳ ಮೂಲಕ ದಾಳಿ ಮಾಡಿಸಿಯೂ ದೇಣಿಗೆ ಸಂಗ್ರಹ ಮಾಡಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ಬಲವಾಗಿ ಪ್ರತಿಪಾದಿಸುತ್ತಿದೆ. ಚುನಾವಣಾ ಬಾಂಡ್ ಅನ್ನೋದು ಸಂವಿಧಾನ ವಿರೋಧಿ ಎಂದಿರುವುದು ಬಿಜೆಪಿ ಪಾಲಿಗೆ ನುಂಗಲಾರದ ಬಿಸಿತುಪ್ಪ.