ರಾಜ್ಯದಲ್ಲಿ ಲೋಕಸಭಾ ಚುನಾವಣಾ ಬಿರುಸು ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ತನ್ನದೇ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರೆ, ಬಿಜೆಪಿ ನಾಯಕರು ಮೋದು ಗ್ಯಾರಂಟಿ ಎಂದು ಹೇಳುತ್ತಾ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ನಡುವೆ ಮೊನ್ನೆ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿಜಯಪುರದಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದ್ದು, ಭಾರೀ ವೈರಲ್ ಆಗಿತ್ತು. ಆ ಬಳಿಕ ಮೋದಿ ಸರ್ಕಾರ ಕೊಟ್ಟ ಗ್ಯಾರಂಟಿಯಿಂದ ಅನುಕೂಲ ಅನ್ನೋ ವಿಡಿಯೋ ಕೂಡ ವೈರಲ್ ಆಗಿದೆ. ಅಂದರೆ ಆ ವಿದ್ಯಾರ್ಥಿ ಹೇಳಿದ್ದು ಕಾಂಗ್ರೆಸ್ ಗ್ಯಾರಂಟಿಯೋ..? ಮೋದಿ ಗ್ಯಾರಂಟಿಯೋ ಅನ್ನೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಪ್ರತಿಧ್ವನಿ ಫ್ಯಾಕ್ಟ್ ಚೆಕ್ ಮಾಡುವ ಕೆಲಸ ಮಾಡಿದೆ.

ಕಾಂಗ್ರೆಸ್ ಚೀಪ್ ಗಿಮಿಕ್ ಪ್ರಚಾರ ಎಂದ ಬಿಜೆಪಿ..!
ದ್ವಿತೀಯ ಪಿಯುಸಿಯಲ್ಲಿ ಱಂಕ್ (Rank) ಪಡೆದುಕೊಂಡ ವಿದ್ಯಾರ್ಥಿ ವೇದಾಂತ್ ಹೇಳಿಕೆಯನ್ನು ಬಳಸಿಕೊಂಡು ಕರ್ನಾಟಕ ಕಾಂಗ್ರೆಸ್ Congress Karnataka ಇದೆಂಥಾ ಚೀಪ್ ಪೊಲಿಟಿಕ್ಸ್ ಮಾಡುತ್ತಿದೆ ನೋಡಿ. ವಿದ್ಯಾರ್ಥಿ ವೇದಾಂತ್ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಸರ್ಕಾರದ ಫಸಲ್ ಭಿಮಾ ಯೋಜನೆಯ ಲಾಭದ ಕುರಿತು ಹಾಗು ಅದರಿಂದ ಆದ ಅನುಕೂಲದ ಬಗ್ಗೆ ವಿವರಿಸಿದ್ದರೆ, ಅದನ್ನು ಕಟ್ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ಱಂಕ್ (Rank) ಬಂದಿರುವಂತೆ ಎಂದು ಬಿಂಬಿಸಿಕೊಳ್ಳುತ್ತಿದೆ ಮಜಾವಾದಿ ಸರ್ಕಾರ. ವೇದಾಂತ್‌ಗೆ (Vedanth) ಅಭಿನಂದನೆ ಸಲ್ಲಿಸಬೇಕಾದ ಸಿದ್ದರಾಮಯ್ಯ (Siddaramaiah) ಕೂಡ, ಐಟಿ ಸೆಲ್ ಕೊಟ್ಟ ವಿಡಿಯೋ ಬಳಸಿ ಟೂಲ್ ಕಿಟ್ ಪ್ರಚಾರ ಪಡೆದುಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದೆ.

ಬಿಜೆಪಿ ಟೀಕೆಗೆ ತಿರುಗೇಟು ಕೊಟ್ಟ ಕಾಂಗ್ರೆಸ್ ಪಕ್ಷ..!
ಗೃಹಲಕ್ಷ್ಮಿ ಯೋಜನೆ ನೆರವಾಗುವ ಬಗ್ಗೆ ವಿದ್ಯಾರ್ಥಿ ಹೇಳಿದ್ದನ್ನು ಎಡಿಟ್ ಮಾಡಿರುವುದು ಕರ್ನಾಟಕ ಬಿಜೆಪಿ (BJP Karnataka ) ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ತಿಂಗಳಿಗೆ ₹2000, ಕೇಂದ್ರದ ಕಿಸಾನ್ ಸಮ್ಮಾನ್ (Kisan Samman) ಯೋಜನೆಯಲ್ಲಿ 3 ತಿಂಗಳಿಗೆ ₹2000 ಬರುತ್ತದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ವಾರ್ಷಿಕ ₹24,000 ಬಂದರೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ವಾರ್ಷಿಕ ₹8000 ಬರುತ್ತದೆ. ಯಾವ ಸರ್ಕಾರದ ಯೋಜನೆಯಿಂದ ಜನರ ಬದುಕು ಹಸನಾಗಿದೆ ಎನ್ನುವುದು ಜಗತ್ತಿಗೆ ತಿಳಿದಿದೆ. ಗೊಬ್ಬರದ ಬೆಲೆ ಏರಿಸಿ ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಸಿಯುವ ಕೇಂದ್ರ ಸರ್ಕಾರದ ಅಯೋಗ್ಯತನ ಜನತೆಗೆ ಅರ್ಥವಾಗಿದೆ. ನಿಮ್ಮ ಬೂಟಾಟಿಕೆಯ ರಾಜಕಾರಣವನ್ನು ಜನ ತಿರಸ್ಕರಿಸುವುದು ನಿಶ್ಚಿತ ಎಂದು ಬಿಜೆಪಿ ವಿರುದ್ಧ ಕೆಂಡಕಾರಿದೆ.

ಬಿಜೆಪಿ-ಕಾಂಗ್ರೆಸ್ ಕಿತ್ತಾಟ.. ಸತ್ಯ ಯಾವುದು..? ಲಾಭ ಆಗಿದ್ಹೇಗೆ..?
ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ ವೇದಾಂತ್ ಗೃಹಲಕ್ಷ್ಮೀ ಯೋಜನೆಯಿಂದ ನೆರವು ಸಿಕ್ಕಿತು ಎಂದು ಹೇಳಿರುವುದು ಒಂದೇ ಒಂದೇ ಬಾರಿ. ನ್ಯೂಸ್ ಫಸ್ಟ್ (News First) ಸುದ್ದಿ ವಾಹಿನಿ ಪತ್ರಕರ್ತ ಮಾತನಾಡಿಸುವಾಗ ಮನೆಯ ಹಿನ್ನೆಲೆಯನ್ನು ಕೇಳಿದ್ದಾರೆ. ಆ ವೇಳೆ ಆ ವಿದ್ಯಾರ್ಥಿ ಕೊರೊನಾ (Corona) ಸಮಯದಲ್ಲಿ ಅಪ್ಪ ತೀರಿಕೊಂಡರು. ಅಮ್ಮ ಮೊದಲಿಗೆ ಕೂಲಿಗೆ ಹೋಗ್ತಿದ್ರು. ಆದರೆ ಇತ್ತೀಚಿಗೆ ಅವ್ವನಿಗೆ ಕೂಲಿಗೂ ಹೋಗಲು ಸಾಧ್ಯವಾಗ್ತಿರಲಿಲ್ಲ. ಆ ಸಮಯದಲ್ಲಿ ರಾಜ್ಯ ಸರ್ಕಾರ ಕೊಡ್ತಿರುವ 2 ಸಾವಿರ ರೂಪಾಯಿ ಅನುಕೂಲ ಆಯ್ತು ಎಂದಿದ್ದಾನೆ. ಸರ್ಕಾರದ ಗೃಹಲಕ್ಷ್ಮೀ(Gruhalakshmi) ಯೋಜನೆಯಿಂದ ಅನುಕೂಲ ಆಯ್ತಾ ಎಂದು ಬಿಡಿಸಿ ಕೇಳಿದಾಗ ಹೌದು, ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರದಿಂದ ಅನುಕೂಲ ಆಯ್ತು ಎಂದಿದ್ದಾನೆ.

ಈ ಬಾಲಕನ ಹೇಳಿಕೆಯಿಂದ ಕಾಂಗ್ರೆಸ್ ನಾಯಕರು ಹಾಗು ಕಾರ್ಯಕರ್ತರು ಸಹಜವಾಗಿಯೇ ಉತ್ತೇಜನಗೊಂಡಿದ್ದರು. ಆ ಬಾಲಕನ ಹೇಳಿಕೆಯನ್ನು ಎಲ್ಲಾ ಕಡೆಯಲ್ಲು ಶೇರ್ ಮಾಡಿದ್ದರು. ಮುಗ್ದವಾಗಿ ಮುಕ್ತವಾಗಿ ಮಾತನಾಡಿದ್ದು ಸಾಕಷ್ಟು ಜನರ ಮನಸ್ಸನ್ನು ಕಾಡಿತ್ತು. ಸರ್ಕಾರದ ಗ್ಯಾರಂಟಿ ಬಗ್ಗೆ ಸಹಜವಾಗಿಯೇ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗುವ ಸಂಭವ ಇದೆ ಎನ್ನುವುನದನ್ನು ಮನಗಂಡ ಬಿಜೆಪಿ ನಾಯಕರು ಅದೇ ವಿಡಿಯೋವನ್ನು ತಿರುಚಿ ಮೋದಿ ಸರ್ಕಾರದ ಗ್ಯಾರಂಟಿ ಎನ್ನುವ ರೀತಿಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವುದು ಗೊತ್ತಾಗಿದೆ. ಎಲ್ಲರಿಗೂ ಆ ವಿದ್ಯಾರ್ಥಿ ಹೇಳಿರುವುದು ಸತ್ಯವೋ..? ಬಿಜೆಪಿ ಹೇಳುತ್ತಿರುವುದು ಸತ್ಯವೋ ಎನ್ನುವ ಗೊಂದಲ ಮೂಡಿದಾಗ ಒಂದು ಕಡೆಗೆ ಹೋಗುವ ಮನಸ್ಸುಗಳನ್ನು ತಡೆಯುವ ಉದ್ದೇಶ ಇದರ ಹಿಂದಿದೆ ಎನ್ನಬಹುದು.
ಕೃಷ್ಣಮಣಿ