( ಆಧಾರ : Live Law – ಅಮಿಷಾ ಶ್ರೀವಾಸ್ತವ – 6 ಏಪ್ರಿಲ್ 2024)
ಅನುವಾದ : ನಾ ದಿವಾಕರ
( ಕಳೆದ ಹತ್ತು ವರ್ಷಗಳಲ್ಲಿ ದೇಶದ ಇತರ ನಾಗರಿಕ ವಲಯಗಳಲ್ಲಿ ಆಗಿರುವಂತೆಯೇ ನ್ಯಾಯಾಂಗ ವ್ಯವಸ್ಥೆಯಲ್ಲೂ ವಕೀಲ ಸಮುದಾಯದ ನಡುವೆ ಅಸ್ಮಿತೆಯ ಗೋಡೆಗಳು ಸೃಷ್ಟಿಯಾಗಿವೆ. ರಾಜಕೀಯ ಸಿದ್ಧಾಂತಗಳು ನ್ಯಾಯವಾದಿಗಳನ್ನೂ ಪ್ರಭಾವಿಸಿದ್ದು, ಅನೇಕ ಸಂದರ್ಭಗಳಲ್ಲಿ ವಕೀಲರು, ವಕೀಲರ ಸಂಘಗಳು ಒಂದು ನಿರ್ದಿಷ್ಟ ಸಿದ್ಧಾಂತದ ಪರ ಅಥವಾ ಗುಂಪಿನ ಪರ ವಹಿಸಿರುವುದು ಸಾಮಾನ್ಯ ಸಂಗತಿಯಾಗಿದೆ. ಇತ್ತೀಚೆಗೆ ಚುನಾವಣಾ ಬಾಂಡ್ ಹಗರಣದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ನ ಚಾರಿತ್ರಿಕ ತೀರ್ಪಿನ ನಂತರ, 600ಕ್ಕೂ ಹೆಚ್ಚು ವಕೀಲರು ಸುಪ್ರೀಂಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು ʼ ಕೆಲವು ನಿರ್ದಿಷ್ಟ ಹಿತಾಸಕ್ತಿಯ ಗುಂಪುಗಳು ʼ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿವೆ ಎಂದು ಆರೋಪಿಸಿದ್ದರು. ನ್ಯಾಯಾಂಗದ ತೀರ್ಪುಗಳನ್ನು ಪ್ರಭಾವಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆಪಾದಿಸಿದ್ದರು. ಚುನಾವಣಾ ಬಾಂಡ್ ತೀರ್ಪಿನ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ ಈ ಅರ್ಜಿಯ ಹಿಂದಿರುವ ಹಿತಾಸಕ್ತಿಯನ್ನು ಗ್ರಹಿಸುವುದು ಕಷ್ಟವೇನಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರ ಉಪನ್ಯಾಸ ಸಮಯೋಚಿತವಾಗಿದ್ದು, ನ್ಯಾಯಾಂಗದ ಸದಸ್ಯರಿಗೆ ಮಾತ್ರವಲ್ಲದೆ, ನಾಗರಿಕರಿಗೂ ಕಣ್ತೆರೆಸುವಂತಿದೆ. ಲೈವ್ ಲಾ ಬ್ಲಾಗ್ನಲ್ಲಿ ಪ್ರಕಟವಾಗಿರುವ ವರದಿಯ ಅನುವಾದ ಇಲ್ಲಿದೆ )
ಭಾರತದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ನ್ಯಾಯಾಲಯದ ತೀರ್ಪುಗಳ ಬಗ್ಗೆ ವಕೀಲರು ಪ್ರತಿಕ್ರಿಯಿಸುವ ಪ್ರವೃತ್ತಿಯಿಂದ ನಾನು ತುಂಬಾ ತೊಂದರೆಗೀಡಾಗಿದ್ದೇನೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ. ನ್ಯಾಯಾಂಗದ ಸಮಗ್ರತೆಯನ್ನು ಕಾಪಾಡಲು ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯಲು ಸ್ವತಂತ್ರ ಬಾರ್ ಮತ್ತು ಬಾರ್ ಸಂಘಗಳನ್ನು ನಿರ್ವಹಿಸುವ ನಿರ್ಣಾಯಕ ಮಹತ್ವವನ್ನು ಸಿಜೆಐ ಒತ್ತಿ ಹೇಳಿದ್ದಾರೆ.
“ಒಂದು ಸಂಸ್ಥೆಯಾಗಿ, ನಮ್ಮ ಬಾಹುಗಳು ವಿಶಾಲವಾಗಿವೆ. ಪ್ರಶಂಸೆ ಮತ್ತು ಟೀಕೆ ಎರಡನ್ನೂ ಸ್ವೀಕರಿಸಲು ನಾವು ಸಿದ್ಧರಿದ್ದೇವೆ; ಹೂಗುಚ್ಛಗಳು ಮತ್ತು ಟೀಕಾಸ್ತ್ರಗಳು ಪತ್ರಿಕೋದ್ಯಮದ ಸುದ್ದಿಗಳ ಮೂಲಕ, ರಾಜಕೀಯ ವ್ಯಾಖ್ಯಾನ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟವಾಗಿರಬಹುದು. ಆದರೆ ಬಾರ್ ಅಸೋಸಿಯೇಷನ್ನ ಸದಸ್ಯರಾಗಿ, ವರ್ಷಗಳ ತರಬೇತಿ ಮತ್ತು ಅನುಭವ ಹೊಂದಿರುವವರು, ನ್ಯಾಯಾಲಯದ ತೀರ್ಪುಗಳಿಗೆ ಪ್ರತಿಕ್ರಿಯಿಸುವಾಗ ಮತ್ತು ಕಾನೂನು ಚರ್ಚೆಗಳಲ್ಲಿ ತೊಡಗುವಾಗ ನೀವು ಸಾಮಾನ್ಯ ವ್ಯಕ್ತಿಗಳಂತೆ ವರ್ತಿಸಲಾಗುವುದಿಲ್ಲ, ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು . ಇತ್ತೀಚೆಗೆ ಬಾರ್ ಅಸೋಸಿಯೇಷನ್ ಸದಸ್ಯರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸುವ ಮತ್ತು ನ್ಯಾಯಾಲಯ ನೀಡಿದ ತೀರ್ಪುಗಳ ಬಗ್ಗೆ ಪ್ರತಿಕ್ರಿಯಿಸುವ ಪ್ರವೃತ್ತಿಯಿಂದ ನಾನು ತುಂಬಾ ತೊಂದರೆಗೀಡಾಗಿದ್ದೇನೆ ” ಎಂದು ಸಿಜೆಐ ಹೇಳಿದ್ದಾರೆ.
ನಾಗಪುರದ ಹೈಕೋರ್ಟ್ ಬಾರ್ ಅಸೋಸಿಯೇಷನ್ (HCBA) ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಿಜೆಐ ಡಿ.ವೈ. ಚಂದ್ರಚೂಡ್ ಕಾನೂನು ವೃತ್ತಿಯ ವಿವಿಧ ಅಂಶಗಳನ್ನು ಪರಿಶೀಲಿಸುವ ಬಗ್ಗೆ ಉಪನ್ಯಾಸ ನೀಡಿದ್ದು ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ವಕೀಲರ ಪಾತ್ರವನ್ನು ಒತ್ತಿ ಹೇಳಿದ್ದಾರೆ. ನ್ಯಾಯಾಲಯ ಮತ್ತು ಸಂವಿಧಾನದ ನಿಷ್ಠೆಯನ್ನು ಮೀರಿ ರಾಜಕೀಯ ಹಿತಾಸಕ್ತಿಗೆ ಅವಕಾಶ ನೀಡದಂತೆ ಮುಖ್ಯ ನ್ಯಾಯಮೂರ್ತಿ ವಕೀಲರಿಗೆ ಎಚ್ಚರಿಕೆ ನೀಡಿದ್ದಾರೆ.
” ನಮ್ಮಂತಹ ಚಲನಶೀಲ ಹಾಗೂ ಮುಕ್ತ ಸಂವಾದಕ ಪ್ರಜಾಪ್ರಭುತ್ವದಲ್ಲಿ, ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ರಾಜಕೀಯ ಸಿದ್ಧಾಂತ ಮತ್ತು ಒಲವು ಹೊಂದಿರುತ್ತಾರೆ.. ಅರಿಸ್ಟಾಟಲ್ ಹೇಳುವಂತೆ, ಮಾನವರು ರಾಜಕೀಯ ಜೀವಿಗಳು. ವಕೀಲರೂ ಇದಕ್ಕೆ ಹೊರತಾಗಿಲ್ಲ. ಆದಾಗ್ಯೂ, ಬಾರ್ ಸದಸ್ಯರ ಅತ್ಯುನ್ನತ ನಿಷ್ಠೆ ಪಕ್ಷಪಾತಿ ಹಿತಾಸಕ್ತಿಯಿಂದ ಕೂಡಿರುವುದು ತರವಲ್ಲ. ಬದಲಾಗಿ ನ್ಯಾಯಾಲಯ ಮತ್ತು ಸಂವಿಧಾನದೊಂದಿಗೆ ಇರಬೇಕು. ಅನೇಕ ಮಜಲುಗಳಲ್ಲಿ ಸ್ವತಂತ್ರ-ಸ್ವಾಯತ್ತ ಬಾರ್ಗಳ ಇರುವಿಕೆಯೇ ಕಾನೂನಿನ ನಿಯಮ ಮತ್ತು ಸಾಂವಿಧಾನಿಕ ಆಡಳಿತವನ್ನು ರಕ್ಷಿಸಲು ನೈತಿಕ ಭೂಮಿಕೆಯಾಗಿರುತ್ತದೆ ” ನ್ಯಾ ಚಂದ್ರಚೂಡ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಬಾರ್ ಸದಸ್ಯರು ನ್ಯಾಯಾಲಯದ ಪ್ರಥಮ ಮತ್ತು ಅಗ್ರಗಣ್ಯ ಅಧಿಕಾರಿಗಳಾಗಿದ್ದು, ಕಾನೂನು ಸಂಕಥನಗಳಲ್ಲಿ, ಸಂವಾದಗಳಲ್ಲಿ ಘನತೆ ಮತ್ತು ಸತ್ಯವನ್ನು ಪ್ರತಿಪಾದಿಸುವ ಜವಾಬ್ದಾರಿ ಹೊಂದಿರುತ್ತಾರೆ ಎಂದು ಹೇಳಿರುವ ನ್ಯಾ. ಚಂದ್ರಚೂಡ್, ಪತ್ರಿಕೆಗಳಲ್ಲಿನ ಅಭಿಪ್ರಾಯಗಳು, ಸುದ್ದಿ ತುಣುಕುಗಳು, ಮಾಧ್ಯಮ ಪ್ರದರ್ಶನಗಳು ಮತ್ತು ಸಾರ್ವಜನಿಕ ಉಪನ್ಯಾಸಗಳಂತಹ ವೇದಿಕೆಗಳ ಮೂಲಕ ನ್ಯಾಯಾಲಯದ ತೀರ್ಪುಗಳನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ನ್ಯಾಯಾಂಗ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
“ಈ ಅರ್ಥದಲ್ಲಿ, ಬಾರ್ ಅಸೋಸಿಯೇಷನ್ ನ್ಯಾಯಾಲಯ ಮತ್ತು ನಾಗರಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ಪಾತ್ರವನ್ನು ನಿರ್ವಹಿಸುವಲ್ಲಿ ಬಾರ್ ಅಸೋಸಿಯೇಷನ್ಗಳು ಕಾನೂನಿನ ಪರಿಕಲ್ಪನೆಗಳನ್ನು ಮತ್ತು ಪೂರ್ವನಿದರ್ಶನಗಳನ್ನು ಸಾರ್ವಜನಿಕರಿಗೆ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಭಾಷಾಂತರಿಸಬಹುದು. ಇದರಿಂದ ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ನಮ್ಮ ತೀರ್ಪುಗಳ ನಿಜವಾದ ಉದ್ದೇಶದ ಬಗ್ಗೆ ಜನಸಾಮಾನ್ಯರಲ್ಲಿ ಆಳವಾದ ತಿಳುವಳಿಕೆಯನ್ನು ಬೆಳೆಸುತ್ತದೆ ” ಎಂದು ಅವರು ಹೇಳಿದ್ದಾರೆ. ಚುನಾವಣಾ ಬಾಂಡ್ ಪ್ರಕರಣದ ಮರುಪರಿಶೀಲನೆ ಕೋರಿ ಪತ್ರ ಬರೆದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನ್ಯಾಯಮೂರ್ತಿ ಚಂದ್ರಚೂಡ್ ಅವರು ನ್ಯಾಯಾಧೀಶರ ನಡುವಿನ ಸ್ನೇಹವನ್ನು ಪ್ರತಿಬಿಂಬಿಸುವ ಮೂಲಕ ಉಪನ್ಯಾಸ ನೀಡುತ್ತಾ, ಭಿನ್ನಾಭಿಪ್ರಾಯಗಳ ಹೊರತಾಗಿಯೂ ನ್ಯಾಯಾಧೀಶರ ನಡುವೆ ಪರಸ್ಪರ ಗೌರವ ಮತ್ತು ಸ್ನೇಹವನ್ನು ಇರುವುದನ್ನು ಸಹ ನ್ಯಾಯಾಧೀಶರೊಂದಿಗಿನ ಮಾತುಕತೆಗಳ ಕೆಲವು ಪ್ರಸಂಗಗಳ ಮೂಲಕ ವ್ಯಾಖ್ಯಾನಿಸಿದ್ದಾರೆ. ನಾಗಪುರದ ಬಾರ್ನಲ್ಲಿ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಮುಖ್ಯ ನ್ಯಾಯಮೂರ್ತಿಗಳು, ಕಾನೂನು ವಲಯದಲ್ಲಿನ ಹಿರಿಯ ಸದಸ್ಯರಿಂದ ಪಡೆದ ಅಮೂಲ್ಯ ಕಲಿಕೆಯ ಕ್ಷಣಗಳನ್ನು ನೆನೆಯುತ್ತ ಅಂತಹ ಅನುಭವಗಳಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಭಾವುಸಾಹೇಬ್ ಬೋಬ್ಡೆ ಮತ್ತು ವಿ.ಆರ್.ಮನೋಹರ್ ಅವರಂತಹ ಕಾನೂನು ದಿಗ್ಗಜರಿಗೆ ಗೌರವ ಸಲ್ಲಿಸಿದ ನ್ಯಾ ಚಂದ್ರಚೂಡ್, ಅವರಿಂದ ಅವರು ಕಾನೂನು ಅರಿವನ್ನು ಮಾತ್ರವಲ್ಲದೆ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಕಾರ್ಯತಂತ್ರದ ಜಾಣ್ಮೆಯನ್ನೂ ಪಡೆದಿರುವುದಾಗಿ ಹೆಮ್ಮೆಯಿಂದ ಹೇಳಿದರು.
ವಕೀಲ ಸಮುದಾಯವು ನಾಗಪುರ ಮತ್ತು ಮುಂಬೈ ನಡುವೆ ಓಡಾಡುವುದರ ಮೂಲಕ ತಮ್ಮ ಮಹತ್ತರ ಕೊಡುಗೆ ಸಲ್ಲಿಸಿರುವುದನ್ನು ಸ್ಮರಿಸಿದ ನ್ಯಾ. ಡಿ.ವೈ. ಚಂದ್ರಚೂಡ್, ನಾಗಪುರದ ಕಾನೂನು ದಿಗ್ಗಜರು ಮುಂಬೈನ ಕಾನೂನು ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿರುವುದನ್ನು ಪ್ರಶಂಸಿಸುತ್ತಲೇ “ಸ್ಥಾನಮಾನವನ್ನು ಪರಿಗಣಿಸದೆ ಶ್ರೇಣೀಕರಣವನ್ನು ಪರಿಗಣಿಸದೆ ವಿಚಾರಗಳ ಈ ವಿನಿಮಯವು ಒಂದು ಸಂಸ್ಥೆಯಾಗಿ ಹೈಕೋರ್ಟಿನ ಸ್ಥಿರತೆಗೆ ಉತ್ತೇಜಕವಾಗಿದೆ ” ಎಂದು ನಂಬುವುದಾಗಿ ಮುಖ್ಯನ್ಯಾಯಾಧೀಶರು ಹೇಳಿದ್ದಾರೆ.
ಬಾರ್ ಅಸೋಸಿಯೇಷನ್ಗಳ ನಿರ್ಣಾಯಕ ಕಾರ್ಯವನ್ನು ಒತ್ತಿಹೇಳಿದ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್, ನ್ಯಾಯಾಲಯ ಮತ್ತು ಅದರ ಅಧಿಕಾರ ವಲಯದೊಂದಿಗೆ ದೈನಂದಿನ ಆಧಾರದ ಮೇಲೆ ನೇರವಾಗಿ ತೊಡಗಿಸಿಕೊಳ್ಳುವಲ್ಲಿ ವಕೀಲರ ಪ್ರತಿನಿಧಿಗಳಾಗಿ ಬಾರ್ ಅಸೋಸಿಯೇಷನ್ಗಳ ಮಹತ್ತರ ಪಾತ್ರವನ್ನು ಒತ್ತಿಹೇಳಿದರು. ನ್ಯಾಯಾಲಯವನ್ನು ಪ್ರಜಾಸತ್ತಾತ್ಮಕಗೊಳಿಸುವಲ್ಲಿ ಮತ್ತು ಕಾನೂನು ವೃತ್ತಿಪರರು ಎದುರಿಸುತ್ತಿರುವ ದೈನಂದಿನ ವಾಸ್ತವಗಳಿಗೆ ನ್ಯಾಯಾಂಗವು ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಬಾರ್ ಮತ್ತು ನ್ಯಾಯಪೀಠದ ನಡುವೆ ಸಂವಾದವನ್ನು ಬೆಳೆಸುವಲ್ಲಿ ಬಾರ್ ಅಸೋಸಿಯೇಷನ್ ಗಳ ಪಾತ್ರವನ್ನು ಮುಖ್ಯ ನ್ಯಾಯಮೂರ್ತಿ ಶ್ಲಾಘಿಸಿದರು.
ಆದಾಗ್ಯೂ ನ್ಯಾಯಮೂರ್ತಿ ಚಂದ್ರಚೂಡ್ ಅವರು ಬಾರ್ ಅಸೋಸಿಯೇಷನ್ಗಳು ವಕೀಲರ ತಕ್ಷಣದ ಕಾಳಜಿಗಳಿಗೆ ಪ್ರಾಶಸ್ತ್ಯ ನೀಡುವುದನ್ನೂ ಮೀರಿ ವಿಶಾಲವಾದ ಸಾಂಸ್ಥಿಕ ಜವಾಬ್ದಾರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ವಕೀಲರ ಸಂಘಗಳು ಕಾನೂನು ವೃತ್ತಿಯಲ್ಲಿ ವಕೀಲರ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ನ್ಯಾಯಾಲಯಗಳನ್ನು ಎಲ್ಲಾ ನಾಗರಿಕರಿಗೆ ನಿಲುಕುವಂತೆ ಮಾಡಲು ಹಾಗೂ ನಾಗರಿಕರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸಲು ಗಮನ ಹರಿಸಬೇಕಿದೆ ಎಂದು ಅವರು ಹೇಳಿದರು. ವಿದರ್ಭ ಪ್ರದೇಶದ ಹಳ್ಳಿಗಳ ನಿವಾಸಿಗಳಿಗೆ ಕಾನೂನು ಪರ ಸಂಪನ್ಮೂಲಗಳನ್ನು ಒದಗಿಸುವ HCBA ನಾಗಪುರ ಶಾಖೆಯ ನೇತೃತ್ವದ ಕಾನೂನು ನೆರವು ಯೋಜನೆ “ನ್ಯಾಯಧೂತ್” ನಂತಹ ಉಪಕ್ರಮಗಳನ್ನು ನ್ಯಾಯಮೂರ್ತಿ ಚಂದ್ರಚೂಡ್ ಶ್ಲಾಘಿಸಿದರು. ಕಾನೂನು ಕೌಶಲ್ಯಗಳನ್ನು ತೀಕ್ಷ್ಣಗೊಳಿಸುವಲ್ಲಿ ಮತ್ತು ನ್ಯಾಯಕ್ಕಾಗಿ ಪ್ರತಿಪಾದಿಸುವಲ್ಲಿ ಅವರ ಮಹತ್ವವನ್ನು ಎತ್ತಿ ತೋರಿಸುವ ಮೂಲಕ ಇಂತಹ ಪ್ರಯತ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಅವರು ಬಾರ್ ಅಸೋಸಿಯೇಷನ್ನಿನ ಯುವ ಸದಸ್ಯರಲ್ಲಿ ಆಗ್ರಹಿಸಿದರು.
ಕಾನೂನು ವೃತ್ತಿಯಲ್ಲಿ ಮಹಿಳೆಯರ ಪ್ರಾತಿನಿಧ್ಯವು ಹೆಚ್ಚುತ್ತಿರುವ ಪ್ರಕ್ರಿಯೆಯನ್ನು ಅನುಮೋದಿಸಿದ ಮುಖ್ಯ ನ್ಯಾಯಮೂರ್ತಿಗಳು, ಬಾರ್ ಅಸೋಸಿಯೇಷನ್ಗಳಲ್ಲಿ ತಮ್ಮ ಉಪಸ್ಥಿತಿಯನ್ನು ಪ್ರತಿಪಾದಿಸಲು ಮತ್ತು ನಾಯಕತ್ವದ ಸ್ಥಾನಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳಾ ವಕೀಲರನ್ನು ಪ್ರೋತ್ಸಾಹಿಸಿದರು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ಬಾರ್ ಅಸೋಸಿಯೇಷನ್ಗಳಲ್ಲಿ ಹೆಚ್ಚು ಅಂತರ್ಗತ ಮತ್ತು ಸಮಾನತೆಯ ವಾತಾವರಣ ಉಂಟುಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಂವಿಧಾನದ ಅಂತರ್ಗತ ಮನೋಭಾವವನ್ನು ಪ್ರಚೋದಿಸುವ ಮೂಲಕ ಮತ್ತು ಅವರ ಹಿನ್ನೆಲೆ ಅಥವಾ ವೃತ್ತಿಗಳನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಕಾನೂನು ವೃತ್ತಿಪರರ ಜವಾಬ್ದಾರಿಯನ್ನು ಒತ್ತಿ ಹೇಳಿದರು.