ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಚಾರದಲ್ಲಿ ಅಮಿತ್ ಷಾ ಮಾತುಗಳಿಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಾಲು ಸಾಲು ಪೋಸ್ಟ್ ಹಾಕಿದ್ದು, ಸುಳ್ಳು, ಕೊಳಕು ರಾಜಕೀಯ ಬಿಡಿ, ಪರಿಹಾರ ಕೊಡಿ ಅಂತ ಕಿಡಿಕಾರಿದ್ದಾರೆ. ನಾನು ಕೊಡುವ ಸತ್ಯವನ್ನ ಸುಳ್ಳೆಂದು ನೀವು ಸಾಬೀತು ಮಾಡಿದರೆ, ನಾನು ರಾಜಕೀಯದಿಂದಲೇ ನಿವೃತ್ತಿ ಆಗ್ತೀನಿ ಅಂತ ಸವಾಲು ಎಸೆದಿದ್ದಾರೆ. ನೀವು ಹೇಳುತ್ತಿರುವುದು ಸುಳ್ಳಾದರೆ ನೀವೇನು ಮಾಡ್ತೀರಾ..? ನಿಮಗೇ ಬಿಟ್ಟಿದ್ದು ಅಂತ ಸಿದ್ದರಾಮಯ್ಯ ಕಟು ಮಾತುಗಳಲ್ಲಿ ಟೀಕಿಸಿದ್ದಾರೆ.

ಅಮಿತ್‌ಷಾ ಅವರೇ, ನೀವು ಕೊಟ್ಟ ಒಂದು ವಾರದ ಆಶ್ವಾಸನೆಯ ನಂತರ ಮೂರು ತಿಂಗಳುಗಳು ಉರುಳಿ ಹೋಗಿದೆ. ಈಗ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದು ಕರ್ನಾಟಕಕ್ಕೆ ನೀವು ಮಾಡಿರುವ ಘನಘೋರ ಅನ್ಯಾಯವನ್ನು ಮುಚ್ಚಿ ಹಾಕಲು ಸುಳ್ಳಿನ ಮೊರೆ ಹೋಗಿದ್ದೀರಿ. ಈಗಲೂ ಕಾಲ ಮಿಂಚಿಲ್ಲ ಬರಪೀಡಿತರ ಜನರ ಬದುಕಿನ ಜೊತೆ ಕೊಳಕು ರಾಜಕೀಯ ಮಾಡಲು ಹೋಗದೆ, ತಕ್ಷಣ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿ. ಅಂತ ಒಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಅಮಿತ್‌ಷಾ ಅವರೇ ನಾವು ನಿರೀಕ್ಷಿಸಿದಂತೆಯೇ ಕರ್ನಾಟದಲ್ಲಿ ನಿಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ಸುಳ್ಳುಗಳ ಮೂಲಕವೇ ಉದ್ಘಾಟಿಸಿದ್ದೀರಿ. ಇದಕ್ಕಾಗಿ ಅಭಿನಂದನೆಗಳು ಎಂದು ವ್ಯಂಗ್ಯವಾಡಿದ್ದಾರೆ. ‘ರಾಜ್ಯ ಸರ್ಕಾರ ಮೂರು ತಿಂಗಳು ವಿಳಂಬವಾಗಿ ಬರ ಪರಿಹಾರ ಕೋರಿ ಮನವಿ ಸಲ್ಲಿಸಿತ್ತು. ಅಷ್ಟರಲ್ಲಿ ಚುನಾವಣೆ ಘೋಷಣೆ ಆಗಿರುವ ಕಾರಣ ಪರಿಹಾರ ನೀಡಲು ಸಾಧ್ಯವಾಗಿಲ್ಲ’ ಎಂಬ ಅಪ್ಪಟ ಸುಳ್ಳನ್ನು ರಾಮನಗರದ ಚುನಾವಣಾ ಪ್ರಚಾರ ಸಭೆಯಲ್ಲಿ ನೀವು ಹೇಳಿದ್ದೀರಿ. ಈ ಸುಳ್ಳನ್ನು ಹೇಳುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿ ಆದರೂ ಕುಟುಕಲಿಲ್ಲವೇ..? ಈ ನಿಮ್ಮ ಸುಳ್ಳಿಗೆ ನಿಮಗೆ ಇಷ್ಟವಾಗಿರುವ ‘ಕ್ರೊನಾಲಜಿ’ಯಲ್ಲಿಯೇ ಉತ್ತರ ನೀಡುತ್ತೇನೆ ಎಂದು ಟಾಂಟ್ ಮಾಡಿದ್ದಾರೆ.






