ರಾಜ್ಯಪಾಲರ ಹುದ್ದೆ ಘನತೆಗೆ ಕುಂದುಂಟು ಮಾಡಿತೇ ಬಿಜೆಪಿ..?
ರಾಜ್ಯಪಾಲರು ಹಾಗು ರಾಷ್ಟ್ರಪತಿ ಎಂದರೆ ಸಾಂವಿಧಾನಿಕ ಹುದ್ದೆ. ಒಮ್ಮೆ ರಾಜ್ಯಪಾಲರು ಅಥವಾ ರಾಷ್ಟ್ರಪತಿಯಾಗಿ ಅಧಿಕಾರ ನಡೆಸಿದವರು ಬಹುತೇಕ ಪಕ್ಷ ರಾಜಕಾರಣದಿಂದ ದೂರ ಉಳಿಯುತ್ತಾರೆ. ಪಕ್ಷಾತೀತವಾಗಿ ಕೆಲಸ ಮಾಡುವ ಉದ್ದೇಶದಿಂದ ಪಕ್ಷಕ್ಕೆ ರಾಜೀನಾಮೆ ನೀಡಿ ಸಾಂವಿಧಾನಿಕ ಹುದ್ದೆಗೇರಿದ ಬಳಿಕ ನಿವೃತ್ತಿ ಜೀವನ ನಡೆಸುವ ಸಾಧ್ಯತೆಯೇ ಹೆಚ್ಚು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಹುದ್ದೆಗಳಿಗೂ ಸಕ್ರಿಯ ರಾಜಕಾರಣಿಗಳನ್ನೇ ನೇಮಕ ಮಾಡುತ್ತಿದ್ದು, ಪಕ್ಷಾತೀತವಾಗಿ ಕೆಲಸ ಮಾಡಬೇಕಿದ್ದ ರಾಜ್ಯಪಾಲರು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರಾ..? ಅನ್ನೋ ಅನುಮಾನ ಮೂಡಿಸುವಂತೆ ನಡೆದುಕೊಳ್ತಿದ್ದಾರೆ.
ಚುನಾವಣಾ ರಾಜಕೀಯಕ್ಕೆ ತೆಲಂಗಾಣ ರಾಜ್ಯಪಾಲೆ..
ತೆಲಂಗಾಣ ರಾಜ್ಯಪಾಲೆಯಾಗಿರುವ ತಮಿಳ್ ಸಾಯಿ ಸುಂದರ್ರಾಜನ್ ಸಾಂವಿಧಾನಿಕ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪುದುಚೆರಿ ಲೆಫ್ಟಿನೆಂಟ್ ಗೌವರ್ನರ್ ಆಗಿಯೂ ಕೆಲಸ ಮಾಡ್ತಿದ್ದ ತಮಿಳ್ ಸಾಯಿ ಸುಂದರ್ ರಾಜನ್ ಆ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. 62 ವರ್ಷದ ತಮಿಳ್ ಸಾಯಿ ಚುನಾವಣಾ ರಾಜಕೀಯಕ್ಕೆ ಮರಳಲು ಬಯಸಿದ್ದಾರೆ ಎನ್ನಲಾಗ್ತಿದೆ. 5 ವರ್ಷ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆಯಾಗಿದ್ದ ತಮಿಳ್ ಸಾಯಿ ಸುಂದರ್ರಾಜನ್ ಆ ಬಳಿಕ ರಾಜ್ಯಪಾಲರಾಗಿದ್ದರು. 2021ರಲ್ಲಿ ಪುದುಚೆರಿ ಲೆಫ್ಟಿನೆಂಟ್ ಗೌವರ್ನರ್ ಆಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿತ್ತು.

ತಮಿಳುನಾಡಲ್ಲೂ ರಾಜ್ಯಪಾಲರ ಜೊತೆ ಸಂಘರ್ಷ..
ತಮಿಳುನಾಡು ರಾಜ್ಯಪಾಲರಾಗಿರುವ R.N ರವಿ ರಾಜ್ಯ ಸರ್ಕಾರದ ನಿರ್ಧಾರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ತಮ್ಮ ನಡೆಯನ್ನು ಮುಂದುವರಿಸಿದ್ದಾರೆ. ಸಚಿವ ಕೆ.ಪೊನ್ಮುಡಿ ಅವರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಿದ್ದು, ರಾಜ್ಯಪಾಲರು ಸಿಎಂ ಎಂ.ಕೆ ಸ್ಟಾಲಿನ್ ನಿರ್ಧಾರವನ್ನು ತಿರಸ್ಕರಿಸಿದ್ದಾರೆ. ಮುಖ್ಯಮಂತ್ರಿ ತನಗೆ ಇಚ್ಛೆ ಬಂದವರನ್ನು ಮಂತ್ರಿ ಮಂಡಳಕ್ಕೆ ನೇಮಕ ಮಾಡಿಕೊಳ್ಳುವ ಅಧಿಕಾರ ಹೊಂದಿದ್ದಾರೆ. ಇದನ್ನು ಪ್ರಶ್ನಿಸಲು ಯಾರಿಗೂ ಅಧಿಕಾರ ಇರುವುದಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಸಚಿವ ಸಂಪುಟದ ಆಯ್ಕೆ ಮಾಡುವ ಅಧಿಕಾರವಿಲ್ಲ. ಆದರೂ ತಮ್ಮ ಮಿತಿಯನ್ನು ರಾಜ್ಯಪಾಲರು ದಾಟಿದ್ದಾರೆ ಎನ್ನಲಾಗ್ತಿದೆ. ಇತ್ತೀಚಿಗೆ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಪೊನ್ಮುಡಿ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ತಮಿಳುನಾಡು ಸರ್ಕಾರ.

ಪಂಜಾಬ್, ಕೇರಳ ರಾಜ್ಯಪಾಲರಿಗೂ ಚಾಟಿ ಬೀಸಿದ್ದ ಸುಪ್ರೀಂಕೋರ್ಟ್..!
ಪಂಜಾಬ್ ಹಾಗು ಕೇರಳ ರಾಜ್ಯಪಾಲರೂ ಕೂಡ ಸರ್ಕಾರದ ನಿರ್ಧಾರವನ್ನು ಒಪ್ಪದೆ ಸಹಿ ಹಾಕದೆ ವಾಪಸ್ ಕಳುಹಿಸುವ ನಿರ್ಧಾರ ಮಾಡಿದ್ದರು. ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ಮಾಡಿದ್ದ ಸುಪ್ರೀಂಕೋರ್ಟ್, ರಾಜ್ಯಪಾಲರು ಬಿಲ್ಗೆ ಸಹಿ ಹಾಕದೆ ಇಟ್ಟುಕೊಳ್ಳುವ ಯಾವುದೇ ಅಧಿಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಜೊತೆಗೆ ಬೆಂಕಿಯೊಂದಿಗೆ ಸರಸ ಆಡುವ ಪ್ರಯತ್ನ ಬೇಡ ಎಂದು ಹೇಳಿತ್ತು. ಇನ್ನು ಕೇರಳ ರಾಜ್ಯಪಾಲರು ಸರ್ಕಾರ ಬಿಲ್ ಪಾಸ್ ಮಾಡಿ ರಾಜ್ಯಪಾಲರ ಸಹಿಗೆ ಕಳುಹಿಸಿದಾಗ ಸಹಿ ಮಾಡದೆ ಇದ್ದ ಪ್ರಕರಣವನ್ನು ಇತ್ಯರ್ಥ ಮಾಡಿದ್ದ ಸುಪ್ರೀಂಕೋರ್ಟ್, ರಾಜ್ಯಪಾಲರ ಅಧಿಕಾರ ಕಾನೂನು ಮಾಡುವುದನ್ನು ತಡೆಯುವುದಲ್ಲ ಎಂದು ಚಾಟಿ ಬೀಸಿತ್ತು.

ರಾಜ್ಯಪಾಲರು ಎಂದರೆ ಸಾಂವಿಧಾನಿಕ ಹುದ್ದೆಯಾಗಿದ್ದು ಪಕ್ಷಾತೀತವಾಗಿ ಕೆಲಸ ಮಾಡುವ ಮನಸ್ಥಿತಿ ಇರಬೇಕಿದೆ. ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ಮನಸ್ಥಿತಿ ಇದ್ದವರನ್ನು ರಾಜ್ಯಪಾಲರನ್ನಾಗಿ ಮಾಡಿದರೆ ಮಾತ್ರ ಸಂವಿಧಾನದ ರಕ್ಷಣೆ ಆಗಲಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘರ್ಷ ಮಿತಿ ಮೀರುವ ಸಾಧ್ಯತೆ ಇದೆ.