• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಆಳ್ವಿಕೆಯ ನೆಲೆಯಲ್ಲಿ ಪ್ರಜಾತಂತ್ರದ ಧ್ವನಿ

ನಾ ದಿವಾಕರ by ನಾ ದಿವಾಕರ
March 15, 2024
in ಅಂಕಣ, ವಿಶೇಷ
0
ನಾಳೆ ಘೋಷಣೆಯಾಗಲಿದ್ಯಾ ಲೊಕಸಭೆ ಚುನಾವಣಾ ದಿನಾಂಕ ?
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಸಾಂಸ್ಥಿಕ ನೆಲೆಗಳಲ್ಲಿ ಸಂವಿಧಾನವನ್ನು ಜೀವಂತವಾಗಿರಿಸುವುದು ಜನತೆಯ ಆದ್ಯತೆಯಾಗಬೇಕಿದೆ

2024ರ ಚುನಾವಣೆ(Election)ಗಳಲ್ಲಿ ಭಾರತದ ಮತದಾರರು ಎರಡು ಆಯ್ಕೆಗಳನ್ನು ಎದುರಿಸುತ್ತಾರೆ. ಮೊದಲನೆಯದು ನವ ಉದಾರವಾದಿ ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆ ಮತ್ತು ಇದಕ್ಕೆ ಪೂರಕವಾದ ಹಿಂದುತ್ವ-ಬಲಪಂಥೀಯ ರಾಜಕಾರಣ. ಈ ಹಾದಿಯಲ್ಲಿ ಭಾರತ ತನ್ನ 1947ರ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡು ಹೊಸ ಅವತಾರದಲ್ಲಿ ಜಾಗತಿಕ ಮಾರುಕಟ್ಟೆಯ ಒಂದು ಭಾಗವಾಗಿ ರೂಪುಗೊಳ್ಳುತ್ತದೆ. ಈ ರೂಪಾಂತರಗೊಳ್ಳುವ ಭಾರತದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಗ್ರಾಂಥಿಕವಾಗಿ, ಆಚರಣಾತ್ಮಕವಾಗಿ ತನ್ನ ಮೂಲ ಸೆಲೆಯನ್ನು ಉಳಿಸಿಕೊಂಡಂತೆ ಕಂಡರೂ, ಆಂತರಿಕವಾಗಿ ಕಾರ್ಪೋರೇಟ್‌ ಮಾರುಕಟ್ಟೆಗೆ ಅವಶ್ಯವಾದ ಆಡಳಿತ ನೀತಿಗಳನ್ನು ಅಳವಡಿಸುವ ಮೂಲಕ, ದೇಶದ ಬಹುಸಂಖ್ಯೆಯ ಜನತೆಯನ್ನು ಹೊರಗಿಟ್ಟು ಅಭಿವೃದ್ಧಿಯತ್ತ ಸಾಗುವ ಒಂದು ಮಾದರಿಯನ್ನು ಅನುಸರಿಸಲಾಗುತ್ತದೆ.

ಬಿಜೆಪಿ(BJP) ಪ್ರಧಾನವಾಗಿ ಅನುಸರಿಸುವ, ಇತರ ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅನುಕರಿಸುವ ಈ ಅಭಿವೃದ್ಧಿ ಮಾದರಿಯು ಈ ದೇಶದ ಶೇ 80ರಷ್ಟು ಜನಸಂಖ್ಯೆಯನ್ನು ಹೊರಗಿಡುವ ಮೂಲಕ ಕಾರ್ಪೋರೇಟ್‌(Corporate) ಮಾರುಕಟ್ಟೆಯನ್ನು ಪೋಷಿಸುವ, ಬಂಡವಾಳಶಾಹಿಯನ್ನು ಕಾಪಾಡುವ ಒಂದು ರಾಜಕೀಯ(Political) ವ್ಯವಸ್ಥೆಗೆ ಅಡಿಪಾಯವನ್ನು ನಿರ್ಮಿಸುತ್ತದೆ. 2024ರ ಮಹಾ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿಕೂಟ ಖಚಿತವಾಗಿ 400ಕ್ಕೂ ಹೆಚ್ಚು ಸ್ಥಾನವನ್ನು ಗಳಿಸುವ ಬಿಜೆಪಿಯ ಆತ್ಮವಿಶ್ವಾಸಕ್ಕೆ ಈ ಮಾದರಿಯನ್ನು ಅನುಕರಿಸುವ ಕೆಲವು ಪ್ರಾದೇಶಿಕ ಪಕ್ಷಗಳ ಪರೋಕ್ಷ ನೆರವೂ ಕಾರಣ ಎನ್ನುವುದನ್ನು ಗಮನಿಸಬೇಕಿದೆ. ಕರ್ನಾಟಕ(Karnataka)ದ ಜೆಡಿಎಸ್‌(JDS), ಆಂಧ್ರದ ತೆಲುಗುದೇಶಂ, ತಮಿಳುನಾಡಿನ ಅಣ್ಣಾಡಿಎಂಕೆ, ಬಿಹಾರದ ನೀತಿಶ್‌ ಕುಮಾರ್‌(Nitish Kumar) ಅವರ ಜೆಡಿಯು ಕೆಲವು ಉದಾಹರಣೆಗಳು. ಈ ಪಕ್ಷಗಳಿಗೆ ಪ್ರಾದೇಶಿಕ ತಳಹದಿಯ ಒಂದು ಪರ್ಯಾಯ ಆರ್ಥಿಕ ವಿಚಾರಧಾರೆ ಇಲ್ಲದಿರುವುದರಿಂದ, ಬೃಹದಾರ್ಥಿಕತೆಯನ್ನು ಪ್ರತಿನಿಧಿಸುವ ನವ ಉದಾರವಾದವನ್ನೇ ಆಶ್ರಯಿಸುತ್ತವೆ.

ಸೆಕ್ಯುಲರಿಸಂ- ಸಮಾಜವಾದ ಇತ್ಯಾದಿ

ಅಧಿಕಾರ ರಾಜಕಾರಣದ ಅಂಗಳದಲ್ಲಿ ಸೆಕ್ಯುಲರಿಸಂ, ಸಮಾಜವಾದ ಮುಂತಾದ ಉದಾತ್ತ ಆದರ್ಶಗಳು ಕೇವಲ ಘೋಷಣೆಗಳಿಗೆ ಸೀಮಿತವಾಗುವುದರಿಂದ, ಈ ಗುರಿಸಾಧನೆಗೆ ಸ್ಪಷ್ಟ ಮಾರ್ಗಗಳನ್ನು ಸೂಚಿಸುವ ಸಂವಿಧಾನವೂ ಸಹ ಗ್ರಾಂಥಿಕವಾಗಿ ಮಾತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಸ್ವಾತಂತ್ರ್ಯ-ಸಮಾನತೆ-ಸೋದರತ್ವ ಎಂಬ ಸಂವಿಧಾನ ಪೀಠಿಕೆಯ ಧ್ಯೇಯವಾಕ್ಯವನ್ನು ಪುನರುಚ್ಚರಿಸುವುದು, ಪಠಿಸುವುದು ಪಕ್ಷಗಳಿಗೆ ರಾಜಕೀಯ(Political)  ಫ್ಯಾಷನ್‌(Fashion) ಆಗಿದೆ.  ಆದರೆ ತಳಮಟ್ಟದ ಸಮಾಜದಲ್ಲಿ ಅಸಮಾನತೆಗಳನ್ನು ಹೆಚ್ಚಿಸುವ, ವ್ಯಕ್ತಿ ಸ್ವಾತಂತ್ರ್ಯ-ಸಾಮುದಾಯಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸುವ, ಭ್ರಾತೃತ್ವದ ಸೇತುವೆಗಳನ್ನು ಭಗ್ನಗೊಳಿಸುವ ನವ ಉದಾರವಾದಿ-ಬಂಡವಾಳಶಾಹಿ-ಬಲಪಂಥೀಯ ರಾಜಕಾರಣದೊಡನೆ ಹೊಂದಾಣಿಕೆ ಮಾಡಿಕೊಳ್ಳುವಾಗ ಈ ಪಕ್ಷಗಳು ಮೂರೂ ಪದಗಳನ್ನು ಮರೆಯುತ್ತವೆ. ಸೈದ್ಧಾಂತಿಕ ಬದ್ಧತೆ ಮತ್ತು ತಾತ್ವಿಕ ನಿಲುವುಗಳು ಹಿಂಬದಿಗೆ ಸರಿದು, ಅಧಿಕಾರ ರಾಜಕಾರಣವನ್ನು ಆಸ್ವಾದಿಸುವ ಸ್ವಾರ್ಥ ರಾಜಕಾರಣ ಮುನ್ನಲೆಗೆ ಬರುತ್ತದೆ. ಹಾಗಾಗಿಯೇ ವರ್ತಮಾನ ಭಾರತದ ರಾಜಕಾರಣದಲ್ಲಿ ಸಂವಿಧಾನವೂ ಸಹ ಬಳಕೆಯಾಗಬಹುದಾದ ಅಸ್ತ್ರವಾಗಿ ಪರಿಣಮಿಸಿದೆ.

ಭಾರತದ ಮತದಾರರ ಮುಂದಿರುವ ಎರಡನೆ ಆಯ್ಕೆ ಎಂದರೆ 1947ರಲ್ಲಿ ಕಂಡ ಕನಸುಗಳನ್ನು ಸಾಕಾರಗೊಳಿಸುವ ಮಾದರಿ. ಸಂವಿಧಾನದ ಮೂಲ ಆಶಯಗಳನ್ನೇ ಸೂಕ್ಷ್ಮವಾಗಿ ಗಮನಿಸಿದರೂ 2024ರ  ನಂತರದ ಭಾರತ 2014ರ ಮುನ್ನ ಇದ್ದ ಸ್ಥಿತಿಗೆ ಮರಳಬೇಕೋ ಅಥವಾ ಇನ್ನೂ ಕೊಂಚ ಹಿಂದಕ್ಕೆ ನಡೆದು 1980ಕ್ಕೂ ಮುನ್ನ ಇದ್ದ ಸ್ಥಿತಿಗೆ ಮರಳಬೇಕೋ ಎಂಬ ಪ್ರಶ್ನೆ ಕಾಡುತ್ತದೆ. 75 ವರ್ಷಗಳ ಆಳ್ವಿಕೆಯಲ್ಲಿ ಭಾರತ ಎಂದೂ ಸಹ ಪರಿಪೂರ್ಣವಾದ ಸಮಾಜವಾದಿ ರಾಷ್ಟ್ರವಾಗಿರಲಿಲ್ಲ. ಅದರ ಮೂಲ ಅರ್ಥದಲ್ಲಿ ಸೆಕ್ಯುಲರ್‌ ರಾಷ್ಟ್ರವೂ ಅಗಿರಲಿಲ್ಲ. ಈ ಎರಡೂ ಉದಾತ್ತ ಪರಿಕಲ್ಪನೆಗಳನ್ನು ಭಾರತದ ಆಳುವ ವರ್ಗಗಳು ಅಧಿಕಾರ ರಾಜಕಾರಣದ ಒಂದು ಸೇತುವೆಯಾಗಿ ಬಳಸಿಕೊಂಡಿವೆಯೇ ಹೊರತು, ಎರಡೂ ಆಶಯಗಳನ್ನು ತಳಮಟ್ಟದವರೆಗೆ ಆಚರಣಾತ್ಮಕವಾಗಿ ಕೊಂಡೊಯ್ಯಲಿಲ್ಲ. ಆದ್ದರಿಂದಲೇ ಜನಸಾಮಾನ್ಯರಿಗೆ ಈ ಎರಡೂ ಆದರ್ಶಗಳು ಕೇವಲ ಗ್ರಾಂಥಿಕವಾಗಿ ನಿಲುಕುವ ವಸ್ತುಗಳಾಗಿ ಕಂಡವು.

ಆದರೂ ಎಷ್ಟೇ ಅನಪೇಕ್ಷಿತ ಲಕ್ಷಣಗಳಿದ್ದರೂ 2014ರ ಮುಂಚಿನ ಭಾರತವನ್ನಾದರೂ ಉಳಿಸಿಕೊಳ್ಳುವ ಒಂದು ಅಸಹಾಯಕ ಮನಸ್ಥಿತಿ ಜನಸಾಮಾನ್ಯರಲ್ಲಿ ಕಾಣುತ್ತಿದೆ. 1980ರ ಮುಂಚಿನ ಭಾರತವನ್ನು ಮರಳಿ ಕಟ್ಟುವ ಉದ್ದೇಶವನ್ನಾಗಲೀ, ಕಾರ್ಯಸೂಚಿಯನ್ನಾಗಲೀ, ಕೊಂಚ ಮಟ್ಟಿಗೆ ಎಡಪಕ್ಷಗಳನ್ನು ಹೊರತುಪಡಿಸಿ, ಯಾವುದೇ ರಾಜಕೀಯ ಪಕ್ಷಗಳೂ ಹೊಂದಿಲ್ಲ ಎನ್ನುವುದು ವಾಸ್ತವ. ಏಕೆಂದರೆ ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣ ಭಾರತದಲ್ಲಿ ಬೇರು ಬಿಡುವ ಮುನ್ನ ಇದ್ದ ಸಾಮಾಜಿಕ ಸ್ಥಿತಿಗತಿಗಳನ್ನು ಮರಳಿ ಸ್ಥಾಪಿಸುವ ದುಸ್ಸಾಹಸಕ್ಕೆ ಯಾವ ಪಕ್ಷಗಳೂ ಮುಂದಾಗುವುದಿಲ್ಲ. 1947-80ರ ಕಾಲಘಟ್ಟದಲ್ಲಿ ಅಲ್ಪಸ್ವಲ್ಪ ಉಸಿರಾಡುತ್ತಿದ್ದ ಸೆಕ್ಯುಲರಿಸಂ ಎಂಬ ಪರಿಕಲ್ಪನೆ ಅಥವಾ ಸಮಾಜವಾದ ಎಂಬ ಮಾದರಿ, ಎರಡೂ ತಾತ್ವಿಕ ನೆಲೆಗಳನ್ನು ಸಂಪೂರ್ಣವಾಗಿ ಮರೆತಿರುವ 21ನೆಯ ಶತಮಾನದ ರಾಜಕೀಯ ವ್ಯವಸ್ಥೆ ಇಂದು ಉಳ್ಳವರನ್ನು ಪೋಷಿಸುವ, ಇಲ್ಲದವರನ್ನು ಶೋಷಣೆಗೊಳಪಡಿಸುವ ಸ್ವಾತಂತ್ರ್ಯಪೂರ್ವ ಸ್ಥಿತಿಗೆ ಮರಳಿದೆ. ಇದನ್ನು ನವ ವಸಾಹತುಶಾಹಿ ಎಂದೂ ಕರೆಯಲಾಗುತ್ತದೆ.

ಬಂಡವಾಳ-ಮಾರುಕಟ್ಟೆಯ ಪರಿಧಿಯಲ್ಲಿ

ಕಳೆದ 75 ವರ್ಷಗಳಿಂದಲೂ ದೇಶದ ಆಳ್ವಿಕೆಯನ್ನು ನಿರ್ವಹಿಸಿರುವ ಬಂಡವಾಳಿಗ ಪಕ್ಷಗಳಿಗೆ ಸಮಾನತೆ ಒಂದು ಘೋಷವಾಕ್ಯವಾಗಿದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ತಳಮಟ್ಟದ ಜನಸಾಮಾನ್ಯರ ನಡುವೆ ಸೃಷ್ಟಿಯಾಗಬಹುದಾದ ಅಸಮಾಧಾನಗಳನ್ನು, ಹತಾಶೆ-ಆಕ್ರೋಶಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅಥವಾ ಅಲ್ಲಿ ಉಗಮಿಸಬಹುದಾದ ಬಂಡಾಯ ಪ್ರವೃತ್ತಿಯನ್ನು ನಿಗ್ರಹಿಸಲು ಪ್ರಜಾಪ್ರಭುತ್ವವಾದಿ ಸರ್ಕಾರಗಳಿಗೆ ಎರಡು ಆಯ್ಕೆಗಳಿರುತ್ತವೆ. ಮೊದಲನೆಯದು ಜನಕಲ್ಯಾಣ ಆರ್ಥಿಕ ನೀತಿಗಳ ಮೂಲಕ ಜನತೆಯನ್ನು ಸಂತುಷ್ಟಿಗೊಳಿಸಿ, ಸಮಾಧಾನಪಡಿಸುವುದು. ಎರಡನೆಯದು ಬಡಜನತೆ ಅವರ ದೈನಂದಿನ ಬದುಕು, ಜೀವನ-ಜೀವನೋಪಾಯದ ದುರವಸ್ಥೆಯನ್ನೂ ಮರೆತು ಜಾತಿ, ಧರ್ಮ, ಭಾಷೆ ಮುಂತಾದ ಭಾವನಾತ್ಮಕ ವಿಚಾರಗಳತ್ತ ಗಮನಹರಿಸುವಂತೆ ಮಾಡುವುದು. ಈ ಎರಡೂ ಮಾರ್ಗಗಳನ್ನು ನಿರ್ದೇಶಿಸುವ ನಿಟ್ಟಿನಲ್ಲಿ ತಮ್ಮ ಪ್ರಣಾಳಿಕೆಗಳನ್ನು ಸಿದ್ಧಪಡಿಸುವ ರಾಜಕೀಯ ಪಕ್ಷಗಳು, ಇದನ್ನೂ ಮೀರಿ ವ್ಯಕ್ತವಾಗುವ ಪ್ರತಿರೋಧಗಳನ್ನು ಹತ್ತಿಕ್ಕಲು ಸಾಂವಿಧಾನಿಕ ಶಾಸನ-ಕಾನೂನುಗಳನ್ನೇ ಬಳಸುತ್ತವೆ.

ಈ ಆಳ್ವಿಕೆಯ ಮಾದರಿಯನ್ನೇ ಭಾರತ ವಿವಿಧ ಪಕ್ಷಗಳ ಮುಂದಾಳತ್ವದಲ್ಲಿ ಅನುಭವಿಸಿದೆ. 1970ರ ದಶಕದಲ್ಲಿ ತಳಸಮಾಜವನ್ನು ಕಾಡಿದ್ದ ತಳಮಳ ಹಾಗೂ ಆತಂಕಗಳಿಗೂ, 2024ರಲ್ಲಿ ಕಾಣುತ್ತಿರುವ ತಲ್ಲಣಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ಬಡತನ, ಹಸಿವು, ನಿರುದ್ಯೋಗ, ಗ್ರಾಮೀಣ ಕೃಷಿ ಸಮಸ್ಯೆ, ಶಿಕ್ಷಣ-ಆರೋಗ್ಯದ ಕೊರತೆ, ಜಾತಿ ಶೋಷಣೆ, ಮಹಿಳಾ ದೌರ್ಜನ್ಯ ಈ ಎಲ್ಲ ಸಮಸ್ಯೆಗಳು ಹೊಸ ರೂಪಾಂತರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಜನಾಂದೋಲನಗಳ ನಡುವೆಯೂ ಈ ಜ್ವಲಂತ ಸಮಸ್ಯೆಗಳೇ ಪ್ರಧಾನವಾಗಿ ಕಾಣುತ್ತಿರುವುದನ್ನೂ ಗಮನಿಸಬಹುದು. ಆದರೆ ಕಳೆದ ಐದು ದಶಕಗಳ “ಬಂಡವಾಳಶಾಹಿ ಅಭಿವೃದ್ಧಿ ಮಾದರಿ” ಯ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರಬಲವೂ ಆಗಿರುವುದರಿಂದ, ಈ ಮಧ್ಯಮ ವರ್ಗದ ಸಮಾಜವು ತಳಸಮಾಜದ ತಲ್ಲಣಗಳಿಗೆ ವಿಮುಖವಾಗಿ, ಅಸಮಾನತೆಯನ್ನು ಹೆಚ್ಚಿಸುವ ನವ ಉದಾರವಾದಿ-ಬಲಪಂಥೀಯ ರಾಜಕಾರಣಕ್ಕೆ ಬೆಂಗಾವಲಾಗಿ ನಿಂತಿದೆ. ಬಹುತೇಕ ಪ್ರಾದೇಶಿಕ ಪಕ್ಷಗಳು ಈ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲು ಬದ್ಧವಾಗಿವೆ.

ಶೋಷಿತ ಸಮುದಾಯಗಳಿಗೆ, ಮಹಿಳೆಯರಿಗೆ ಹಾಗೂ ಅವಕಾಶವಂಚಿತರಿಗೆ ಆರ್ಥಿಕವಾಗಿ, ಸಾಮಾಜಿಕ ನೆಲೆಯಲ್ಲಿ ಸಮಾನ ಅವಕಾಶಗಳನ್ನು ನೀಡುವ ಆಡಳಿತ ನೀತಿಗಳು ಜನಸಾಮಾನ್ಯರಿಗೆ ಆದರಣೀಯವಾಗಿ ಕಾಣುವುದು ಸಹಜ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸುತ್ತಿರುವ ಗ್ಯಾರಂಟಿ ಯೋಜನೆಗಳು ಮತ್ತು ಸಂವಿಧಾನಬದ್ಧ ಮೀಸಲಾತಿ ಮುಂತಾದ ಸವಲತ್ತುಗಳು ಈ ಸಮಾನಾವಕಾಶಗಳ ಅಡಿಪಾಯವೂ ಆಗಿರುತ್ತದೆ. ಆದರೆ ಇದು ಸಮಾನತೆಯತ್ತ ಸಾಗಲು ನೆರವಾಗಬಹುದಾದ ಒಂದು ಮಾರ್ಗ ಮಾತ್ರ ಎಂಬ ವಾಸ್ತವವನ್ನು ತಳಸಮಾಜದ ಜನತೆ ಅರ್ಥಮಾಡಿಕೊಳ್ಳಬೇಕಿದೆ. ಡಾ. ಅಂಬೇಡ್ಕರ್ ಆಶಿಸಿದ ಸಮಾನತೆಯನ್ನು ಸಾಕಾರಗೊಳಿಸಬೇಕಾದರೆ, ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ “ನಗದೀಕರಣದ ಆರ್ಥಿಕತೆ” (Monetisation Economy)ಯನ್ನು ವಿರೋಧಿಸಲೇಬೇಕು. ನಗದೀಕರಣ ಎಂಬ ಸುಂದರ ಪದದ ಹಿಂದೆ ದೇಶದ ಎಲ್ಲ ಸಾರ್ವಜನಿಕ ಸಂಪತ್ತು, ಸಂಪನ್ಮೂಲಗಳನ್ನೂ ಕಾರ್ಪೋರೇಟ್‌ ಮಾರುಕಟ್ಟೆಯ ವಶಕ್ಕೆ ಒಪ್ಪಿಸುವ ಕರಾಳ ಜಗತ್ತು ಇರುವುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಬೇಕಿದೆ.

ನಾಳಿನ ದಿನಗಳನ್ನು ಗಮನಿಸುತ್ತಾ

ಆದರೆ 2024ರ ಚುನಾವಣೆಗಳ ಸಂಭಾವ್ಯ ಚಿತ್ರಣದತ್ತ ಗಮನಹರಿಸಿದಾಗ ಯಾವುದೇ ಬಂಡವಾಳಿಗ ಪಕ್ಷಗಳೂ ಈ ಆರ್ಥಿಕತೆಗೆ ಪರ್ಯಾಯವಾದ ಒಂದು ನೀತಿಯನ್ನು ಜನರ ಮುಂದಿಡುವುದು ಕಾಣುತ್ತಿಲ್ಲ. ಭಾರತದ ತಳಸಮುದಾಯಗಳನ್ನು ಪ್ರಧಾನವಾಗಿ ಪ್ರತಿನಿಧಿಸುವಂತಹ ಬಹುಜನ ಸಮಾಜ ಪಕ್ಷವೂ ಸಹ, ಈ ಸಮುದಾಯಗಳಿಗೆ ಮಾರಕವಾಗಿರುವ, ನವ ಉದಾರವಾದ-ಬಂಡವಾಳಶಾಹಿ ಆರ್ಥಿಕತೆಯ ವಿರುದ್ಧ ಸೊಲ್ಲೆತ್ತುವುದಿಲ್ಲ. ಈ ಆರ್ಥಿಕತೆಗೂ ಬಿಜೆಪಿ ಅನುಸರಿಸುತ್ತಿರುವ ಬಹುಸಂಖ್ಯಾವಾದದ ಬಲಪಂಥೀಯ-ಹಿಂದುತ್ವ ರಾಜಕಾರಣಕ್ಕೂ ನೇರ ಸಂಬಂಧ ಇರುವುದನ್ನು ಗಮನಿಸುತ್ತಲೂ ಇಲ್ಲ. ಶಿಕ್ಷಣ, ಆರೋಗ್ಯ, ಯೋಗಕ್ಷೇಮ, ಮೂಲ ಸೌಕರ್ಯ ಮತ್ತು ತಳಮಟ್ಟದ ಆರ್ಥಿಕ ಸಂರಚನೆಗಳನ್ನು ಕಾರ್ಪೋರೇಟ್‌ ಮಾರುಕಟ್ಟೆಯ ವಶಕ್ಕೆ ಒಪ್ಪಿಸುವುದು ಸಮಾನತೆಯ ಆಶಯವನ್ನೇ ಮಣ್ಣುಗೂಡಿಸಿದಂತಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದ ಮೊದಲ ಆರು ದಶಕಗಳಲ್ಲಿ ತಳಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಿದ್ದ ಸಮಾನವಾವಕಾಶಗಳನ್ನೂ ಸಹ ಕಾರ್ಪೋರೇಟೀಕರಣ ಪ್ರಕ್ರಿಯೆ ನುಂಗಿಹಾಕುತ್ತದೆ. ಈ ಪ್ರಕ್ರಿಯೆಯನ್ನು ನಿರ್ದೇಶಿಸುವ ಬಲಪಂಥೀಯ ರಾಜಕಾರಣವು ಇದರಿಂದ ಸೃಷ್ಟಿಯಾಗುವ ಸಾಮಾಜಿಕ ಅಸಮತೋಲನ-ಸಾಂಸ್ಕೃತಿಕ ಪಲ್ಲಟಗಳನ್ನೇ ಬಳಸಿಕೊಂಡು, ಸಮಾಜವನ್ನು ಶಾಶ್ವತವಾಗಿ ವಿಭಜಕ ಮತೀಯವಾದದ ಕಡೆಗೆ ಕೊಂಡೊಯ್ಯುತ್ತದೆ.

ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಯ ನಂತರದಲ್ಲಿ ದೇಶಾದ್ಯಂತ ಸೃಷ್ಟಿಯಾಗಿರುವ ಉನ್ಮಾದ ಹೆಚ್ಚು ಹೆಚ್ಚಾಗಿ ತಳಸಮುದಾಯಗಳನ್ನೇ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಸಂವಿಧಾನವನ್ನು ಆದರಿಸುವ/ಆರಾಧಿಸುವ ಯಾವುದೇ ರಾಜಕೀಯ ಪಕ್ಷ ಮರು ಆಲೋಚನೆ ಮಾಡಬೇಕಿದೆ. ಎಲ್ಲರನ್ನೂ ಒಳಗೊಳ್ಳುವ ಔನ್ನತ್ಯದೊಂದಿಗೆ ಭಾರತದ ಸಮಸ್ತ ಜನತೆಯನ್ನೂ ಸಮಾನ ನೆಲೆಯಲ್ಲಿ ಪ್ರಗತಿಯತ್ತ ಕರೆದೊಯ್ಯುವ ಸಾಂವಿಧಾನಿಕ ಆಶಯಗಳಿಗೆ ವ್ಯತಿರಿಕ್ತವಾಗಿ, ನಿರ್ದಿಷ್ಟವಾಗಿ ಇಡೀ ಸಮುದಾಯಗಳನ್ನೇ ʼ ಹೊರಗಿಡುವ ʼ ಆರ್ಥಿಕ-ಸಾಂಸ್ಕೃತಿಕ ನೀತಿಗಳಿಗೆ ಮಾನ್ಯತೆ ನೀಡುವ ರಾಜಕೀಯ ವ್ಯವಸ್ಥೆಗೆ ದೇಶವು ತೆರೆದುಕೊಳ್ಳುತ್ತಿರುವಾಗ, ಸೆಕ್ಯುಲರಿಸಂ-ಸಮಾಜವಾದ-ಸಮಾನತೆಯ ಬಗ್ಗೆ ಮಾತನಾಡುವ ಪಕ್ಷಗಳು ತಮ್ಮ ಸೈದ್ಧಾಂತಿಕ ನಿಲುಮೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕಿದೆ. ಇಂತಹ ಪಕ್ಷ ಅಥವಾ ರಾಜಕೀಯ ನಾಯಕರನ್ನು ಕಟ್ಟಕಡೆಯ ವ್ಯಕ್ತಿಯೂ ಪ್ರಶ್ನಿಸುವ ಅನಿವಾರ್ಯತೆ ಇಂದು ಎದುರಾಗಿದೆ.

ರಾಜಕೀಯ ಅಧಿಕಾರ ಇಂದು ಕೇವಲ ಜನರನ್ನು ಆಳುವ ಅವಕಾಶ ಕಲ್ಪಿಸುವ ಒಂದು ಹುದ್ದೆಯಾಗಿಲ್ಲ. ನವಉದಾರವಾದ-ಬಂಡವಾಳಶಾಹಿ ಅಭಿವೃದ್ಧಿ ಮಾದರಿಯು ಅಧಿಕಾರ ಕೇಂದ್ರಗಳನ್ನು ಕಾರ್ಪೋರೇಟ್‌ ಮಾರುಕಟ್ಟೆ ಆಧಿಪತ್ಯದ ಭದ್ರಕೋಟೆಗಳನ್ನಾಗಿ ಪರಿವರ್ತಿಸಿದೆ. ಅಭ್ಯರ್ಥಿ ಆಯ್ಕೆಯ ಹಂತದಿಂದ ಕೇಂದ್ರ ಸಚಿವ ಸಂಪುಟ ಹುದ್ದೆಯವರೆಗೂ ಆಯ್ಕೆ ಮತ್ತು ಆದ್ಯತೆಗಳನ್ನು ಕಾರ್ಪೋರೇಟ್‌ ಮಾರುಕಟ್ಟೆಯ ಹಿತಾಸಕ್ತಿಯೇ ನಿರ್ದೇಶಿಸುತ್ತದೆ. ಪಕ್ಷಗಳ ದೃಷ್ಟಿಯಿಂದ ಚುನಾವಣೆಗಳ ಗೆಲುವು ಮಾರುಕಟ್ಟೆ ಶಕ್ತಿಗಳೊಡನೆ ಒಡನಾಟದ ಒಂದು ಸಂಕೇತವಾಗಿಯೇ ಕಾಣುತ್ತದೆ. ಅಭ್ಯರ್ಥಿಯ ಆಯ್ಕೆ ಮತ್ತು ಗೆಲುವಿಗೆ, ಬಂಡವಾಳ ಹೂಡಿಕೆಯ ಸಾಮರ್ಥ್ಯ ಹಾಗೂ ಹೂಡಿದ ಬಂಡವಾಳವನ್ನು ಲಾಭದಾಯಕವಾಗಿ ವಿನಿಯೋಗಿಸುವ ಕ್ಷಮತೆ ಮಾನದಂಡಗಳಾಗಿ ಪರಿಣಮಿಸುತ್ತದೆ. ಇದೀಗ ಸುಪ್ರೀಂಕೋರ್ಟ್‌ ದಯೆಯಿಂದ ಸಾರ್ವಜನಿಕರ ಮುಂದೆ ಅನಾವರಣಗೊಂಡಿರುವ ಚುನಾವಣಾ ಬಾಂಡ್‌ ಪದ್ಧತಿ ಇದರ ಒಂದು ಆಯಾಮವಾಗಿ ಕಾಣುತ್ತದೆ.

ಈ ಸಂದಿಗ್ಧತೆಗಳ ನಡುವೆಯೇ ಭಾರತದ ಮತದಾರರು 2024ರ ಚುನಾವಣೆಗಳನ್ನು ಎದುರಿಸಲಿದ್ದಾರೆ. ಡಾ ಬಿ.ಆರ್‌ ಅಂಬೇಡ್ಕರ್‌ ಪದೇ ಪದೇ ಹೇಳಿರುವಂತೆ ಪ್ರತಿಯೊಬ್ಬ ಮತದಾರನೂ ತನ್ನ ಮತದ ಮೌಲ್ಯವನ್ನು ಅರಿತು, ಮತಚಲಾವಣೆ ಮಾಡಿದಾಗಲೇ ಪ್ರಜಾತಂತ್ರದ ಬುನಾದಿ ಗಟ್ಟಿಯಾಗುತ್ತಾ ಹೋಗುತ್ತದೆ. ನೈತಿಕ ಮೌಲ್ಯಾಧಾರಿತ ರಾಜಕಾರಣದಿಂದ ಕಾರ್ಪೋರೇಟ್‌ ಮೌಲ್ಯಾಧಾರಿತ ರಾಜಕಾರಣಕ್ಕೆ ಹೊರಳಿರುವ ವರ್ತಮಾನ ಭಾರತ ಇಂದಿಗೂ ಸಂವಿಧಾನವನ್ನೇ ನಂಬಿದೆ. ಆದರೆ, ಮತ್ತೊಮ್ಮೆ ಅಂಬೇಡ್ಕರರನ್ನು ನೆನೆಯುವುದಾದರೆ, ಈ ಸಂವಿಧಾನವನ್ನು ನಾವು ಯಾರ ಕೈಗೆ ಕೊಡಲಿದ್ದೇವೆ ಎಂಬ ಜಟಿಲ ಪ್ರಶ್ನೆ ನಮ್ಮ ಮುಂದಿದೆ. ಪ್ರಜಾತಂತ್ರದ ಉಳಿವು ಸಂವಿಧಾನದ ಮೌಲಿಕ ರಕ್ಷಣೆಯಲ್ಲಿ ಅಡಗಿದೆಯೇ ಹೊರತು ಗ್ರಾಂಥಿಕ ರಕ್ಷಣೆಯಲ್ಲಿ ಅಲ್ಲ. ಈ ಮೌಲಿಕ ರಕ್ಷಣೆಯ ಜವಾಬ್ದಾರಿ ನಾಗರಿಕರ ಮೇಲಿದೆ.  

2024ರ ಚುನಾವಣೆಗಳು ಈ ಜವಾಬ್ದಾರಿಯನ್ನು ನಮಗೆ ಮತ್ತೆಮತ್ತೆ ನೆನಪಿಸುತ್ತಿವೆ. ಸಂವಿಧಾನ ಪೀಠಿಕೆಯನ್ನು ನಿತ್ಯಪಠಣದೊಂದಿಗೆ ಮನನ ಮಾಡಿಕೊಳ್ಳುತ್ತಲೇ ಅದರ ಮೌಲಿಕ ಬುನಾದಿಯನ್ನು ಶಿಥಿಲವಾಗದಂತೆ ಕಾಪಾಡಬೇಕಿದೆ. ಇದು ಜಾಗೃತ ನಾಗರಿಕರ/ಸಮಾಜದ ಆದ್ಯತೆಯೂ ಹೌದು, ಕರ್ತವ್ಯವೂ ಹೌದು.

Previous Post

ಬಂಡಾಯ ಶಮನಕ್ಕೆ ಭಾರತೀಯ ಜನತಾ ಪಾರ್ಟಿ ಕಸರತ್ತು..!

Next Post

ಮಾಜಿ ಸಿಎಂ ಬಿಎಸ್ ವೈ ಮೇಲೆ ಫೋಕ್ಸೋ (POCSO) ಪ್ರಕರಣ. ಬಿಎಸ್ ವೈ ಬಂಧನ ಸಾಧ್ಯತೆ…!

Related Posts

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
0

ಜೂನಿಯರ್‌ ಚಿತ್ರದ ಡ್ಯಾನ್ಸಿಂಗ್‌ ನಂಬರ್..ಡಿಎಸ್‌ಪಿ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದು, ಚೊಚ್ಚಲ ಚಿತ್ರ ಜೂನಿಯರ್‌ ಟೀಸರ್‌ ಈಗಾಗಲೇ ಭಾರೀ ಸದ್ದು...

Read moreDetails

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
Next Post
ಬಂಡಾಯ ಸಾರಲು ಮುಂದಾದ ಈಶ್ವರಪ್ಪ: ಮನವೊಲಿಸಲು ಆರಗ ಜ್ಞಾನೇಂದ್ರರಿಗೆ ಸೂಚಿಸಿದ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್ ವೈ ಮೇಲೆ ಫೋಕ್ಸೋ (POCSO) ಪ್ರಕರಣ. ಬಿಎಸ್ ವೈ ಬಂಧನ ಸಾಧ್ಯತೆ…!

Please login to join discussion

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada