Davanagereಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಆಯೋಜಿಸಿರುವ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಫೆ.3 ಮತ್ತು 4 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಪಟ್ಟಣದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿರುವ ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮೂರು ದಶಕಗಳ ಬಳಿಕ ದಾವಣಗೆರೆಯಲ್ಲಿ ನಡೆಯುತ್ತಿರುವ ಸಮ್ಮೇಳನ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೆ ಈ ಸಮ್ಮೇಳನವು ಪತ್ರಕರ್ತರ ಹಬ್ಬವಾಗಿದೆ. ಎರಡು ದಿನಗಳ ಕಾಲ ಚಿಂತನ-ಮಂಥನ ನಡೆಸುವ ಮೂಲಕ ನಾಡಿನ ಪತ್ರಕರ್ತರು ಈ ಸಮ್ಮೇಳನವನ್ನು ಸಾಕ್ಷೀಕರಿಸಲಿದ್ದಾರೆ ಎಂದು ತಿಳಿಸಿದರು.

ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಉಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸುವರು. ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬಿಡುಗಡೆ ಮಾಡುವರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಅವರು ವಸ್ತುಪ್ರದರ್ಶವನ್ನು, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ವ್ಯಂಗ್ಯ ಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲೆಯ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದಾರೆ ಎಂದು ತಿಳಿಸಿದರು.
ಆಕರ್ಷಕ ಮೆರವಣಿಗೆ
ಫೆಬ್ರವರಿ 3ರ ಬೆಳಿಗ್ಗೆ 9 ಗಂಟೆಗೆ ಹರ್ಡೇಕರ ಮಂಜಪ್ಪ, ಮಹಾತ್ಮಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಂ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಿಂದ ಮೆರವಣಿಗೆ ನಡೆಯಲಿದೆ. ಸಾರೋಟಿನಲ್ಲಿ ಇರಿಸಲಾಗುವ ವೃಕ್ಷದ ಆಕೃತಿಯಲ್ಲಿ ಬರುವ ರೆಂಬೆ-ಕೊಂಬೆಗಳಲ್ಲಿ ಎಲ್ಲ ಪತ್ರಿಕೆಗಳ ಶಿರೋನಾಮೆಗಳನ್ನು ಬಿಂಬಿಸಲಾಗುವುದು. ಮೆರವಣಿಗೆಯಲ್ಲಿ ಕಲಾ ತಂಡಗಳು ಗಮನ ಸೆಳೆಯಲಿವೆ. ಪತ್ರಕರ್ತರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿವಿಧ ಗೋಷ್ಠಿಗಳು: ಮಧ್ಯಾಹ್ನ 2 ಗಂಟೆಗೆ ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’ ಗೋಷ್ಠಿಯನ್ನು ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಕೆ.ರವಿ ಉದ್ಘಾಟಿಸಲಿದ್ದಾರೆ. ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆ ವಹಿಸಲಿದ್ದು, ಶ್ರೀಜಾ ಅವರು ವಿಷಯ ಪ್ರಸ್ತಾವನೆ ಮಾಡುವರು. ಸಂಜೆ 4 ಗಂಟೆಗೆ ’ಪತ್ರಿಕೆಗಳು ಹಿಂದೆ-ಇಂದು-ಮುಂದು ’ವಿಷಯ ಗೋಷ್ಠಿಯನ್ನು ಬಿ.ಎನ್.ಮಲ್ಲೇಶ್ ಉದ್ಘಾಟಿಸಲಿದ್ದು, ಬಸವರಾಜಸ್ವಾಮಿ ಅಧ್ಯಕ್ಷತೆ ವಹಿಸುವರು. ಟಿ.ಗುರುರಾಜ್ ವಿಷಯ ಪ್ರಸ್ತಾವನೆ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಎರಡನೇ ದಿನದ ಗೋಷ್ಠಿಗಳು
ಫೆ.4ರಂದು ಭಾನುವಾರ ಬೆಳಿಗ್ಗೆ 9.45ಕ್ಕೆ ಪ್ರತಿನಿಧಿಗಳ ಸಮಾವೇಶ ಜರುಗಲಿದೆ. ಬೆಳಿಗ್ಗೆ 10.30ಕ್ಕೆ ’ಮಾಧ್ಯಮ ಮತ್ತು ಸರ್ಕಾರ’ ಗೋಷ್ಠಿ ನಡೆಯಲಿದ್ದು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉದ್ಘಾಟಿಸಲಿದ್ದಾರೆ. ಅಬ್ಬೂರು ರಾಜಶೇಖರ್ ವಿಷಯ ಪ್ರಸ್ತಾವನೆ ಮಾಡಲಿದ್ದಾರೆ. ವಾರ್ತಾ ಇಲಾಖೆ ಆಯುಕ್ತರು ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 11.30ಕ್ಕೆ ’ಸಾಮಾಜಿಕ ಮಾಧ್ಯಮ – ವೃತ್ತಿ ವಿಶ್ವಾಸಾರ್ಹತೆ ವಿಷಯಗಳ ಕುರಿತ ಗೋಷ್ಠಿಯನ್ನು ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕಾ ಉದ್ಘಾಟಿಸಲಿದ್ದಾರೆ. ರುದ್ರಣ್ಣ ಹರ್ತಿಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಹಿರಿಯ, ಕಿರಿಯ ಪತ್ರಕರ್ತರು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾರೋಪದ ನುಡಿಗಳನ್ನಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕಸಭಾ ಸದಸ್ಯ ಜಿ.ಎಂಸಿದ್ದೇಶ್ವರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಹಿಳಾ-ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಅರಣ್ಯ – ಪರಿಸರ ಸಚಿವ ಈಶ್ವರ ಖಂಡ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯ ಶಾಸಕರು ವಿಶೇಷ ಆಹ್ವಾನಿತರಾಗಿದ್ದಾರೆ ಎಂದು ಹೇಳಿದರು.
#KUWJ #Journalist #Davanagere #Siddaramaiah