ಮಂಡ್ಯದ ಮೇಲುಕೋಟೆಯಲ್ಲಿ (Melukote) ಅತಿಥಿ ಶಿಕ್ಷಕಿಯ ಕೊಲೆ (Murder) ನಡೆದಿದೆ. ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಅತಿಥಿ ಶಿಕ್ಷಕಿಯ ಶವ ಪತ್ತೆಯಾಗಿದೆ. ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿಯ ಮೃತ ದೇಹ ಪತ್ತೆಯಾಗಿದ್ದು. ಕೊಲೆಯಾಗಿರುವ ಶಿಕ್ಷಕಿಯನ್ನು ಮಾಣಿಕ್ಯನಹಳ್ಳಿಯ ದೀಪಿಕಾ (28) ಎಂದು ಗುರುತಿಸಲಾಗಿದೆ. ಮಾಣಿಕ್ಯನಹಳ್ಳಿಯ ವೆಂಕಟೇಶ್ ಎಂಬುವರ ಮಗಳಾದ ದೀಪಿಕಾ. ಅದೇ ಗ್ರಾಮದ ಲೋಕೇಶ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗಳಿಗೆ 8 ವರ್ಷದ ಮಗು ಸಹ ಇದೆ. ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದ ದೀಪಿಕಾ, ಶನಿವಾರ ಮಧ್ಯಾಹ್ನ ತರಗತಿ ಮುಗಿಸಿ ಸ್ಕೂಟರ್ನಲ್ಲಿ ವಾಪಸ್ ಮನೆಗೆ ಹೋಗಿದ್ದರು. ಶನಿವಾರ ಸಂಜೆ ವೇಳೆ ಸ್ಕೂಟರ್ ಬೆಟ್ಟದ ತಪ್ಪಲಿನಲ್ಲಿ ನಿಂತಿರೋದನ್ನ ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಕೂಟರ್ ವಶಕ್ಕೆ ಪಡೆದು ಅದರ ನಂಬರ್ ನೆರವಿನಿಂದ ಶಿಕ್ಷಕಿಯ ಊರು ಪತ್ತೆ ಹಚ್ಚಿದ್ದ ಮೇಲುಕೋಟೆ ಪೊಲೀಸರು, ನಂತರ ಬೆಟ್ಟದ ತಪ್ಪಲಿನಲ್ಲೇ ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿದ್ದ ಶಿಕ್ಷಕಿಯ ಶವವನ್ನೂ ಪತ್ತೆ ಹಚ್ಚಿದ್ದರು. ಆ ಬಳಿಕ ಅತಿಥಿ ಉಪನ್ಯಾಸಕಿ ಹತ್ಯೆ ಮಾಡಿದ್ಯಾರು ಅನ್ನೋ ಬಗ್ಗೆ ತನಿಖೆ ಕೈಗೊಂಡಿದ್ದರು. ಹತ್ಯೆ ದಿನ ದೀಪಿಕಾ ಮತ್ತು ಅವರ ಜೊತೆಗಿದ್ದವನ ನಡುವೆ ಜಗಳ ನಡೆದಿತ್ತು. ಜಗಳ ನಡೆಯುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ಪ್ರವಾಸಿಗರ ಮೊಬೈಲ್ನಲ್ಲಿ ವಿಡಿಯೋ ಸೆರೆ ಸಿಕ್ಕಿದೆ. ವಿಡಿಯೋದಲ್ಲಿ ಗೆಳೆಯ ಮತ್ತು ದೀಪಿಕಾ ಜಗಳ ನಡೆದಿರುವುದು ಪತ್ತೆಯಾಗಿದೆ. ಇದೀಗ ಮೇಲುಕೋಟೆ ಪೊಲೀಸರು ವಿಡಿಯೋ ಸಮೇತ ಮಾಹಿತಿ ನೀಡಿದ್ದಾರೆ ಪ್ರವಾಸಿಗರು.

ಮೇಲುಕೋಟೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ದೀಪಿಕಾ ಹತ್ಯೆ ಮಾಡಿರುವುದು ಮಾಣಿಕ್ಯನಹಳ್ಳಿ ಗ್ರಾಮದ 22 ವರ್ಷದ ಯುವಕ ಅನ್ನೋ ಬಗ್ಗೆ ದೀಪಿಕಾ ಪತಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ದೀಪಿಕಾ ಪತಿ ಲೋಕೇಶ್ ಮಾತನಾಡಿದ್ದು, ನಾವು ಪ್ರೀತಿಸಿ ಮದುವೆ ಆಗಿದ್ದೆವು. ಎಂಟು ವರ್ಷದ ಒಬ್ಬ ಮಗನಿದ್ದಾನೆ. ನಮಗೆ ಯಾವುದಕ್ಕೂ ಕೊರತೆ ಇರಲಿಲ್ಲ. ನನ್ನ ಹೆಂಡತಿ ದೀಪಿಕಾ ನನ್ನ ಹಾಗೂ ಮಗನನ್ನ ಬಿಟ್ಟು ಒಂದು ಗಂಟೆಯೂ ಇರುತ್ತಿರಲಿಲ್ಲ. ನಮ್ಮ ಗ್ರಾಮದ 22 ವರ್ಷದ ಯುವಕನ ಪರಿಚಯ ಇತ್ತು. ಆತ ದೀಪಿಕಾಳನ್ನ ಅಕ್ಕ ಅಕ್ಕ ಎಂದು ಕರೆಯುತ್ತಿದ್ದ. ಆಕೆ ಶಾಲೆಗೆ ಯಾವಾಗಲೂ ಬಸ್ನಲ್ಲೇ ಹೋಗಿ ಬರ್ತಿದ್ದಳು. ಆದರೆ ಅಂದು ಬಸ್ ಮಿಸ್ ಆಗಿದ್ದರಿಂದ ಸ್ಕೂಟರ್ನಲ್ಲಿ ತೆರಳಿದ್ದಳು ಎಂದಿದ್ದಾರೆ.
ಶನಿವಾರ ಮಧ್ಯಾಹ್ನ 12 ಗಂಟೆಗೆ ಶಾಲೆ ಮುಗಿಸಿ 12.30 ರ ವೇಳೆಗೆ ಶಾಲೆಯಿಂದ ಹೊರ ಬಂದಿದ್ದಾಳೆ. ಆ ವೇಳೆ ಆಕೆಗೆ ಒಂದು ಫೋನ್ ಕಾಲ್ ಬಂದಿದೆ. ಫೋನ್ನಲ್ಲಿ ಮಾತಾಡಿಕೊಂಡು ಹೊರ ಬಂದಿದ್ದಾರೆ. ಅವರು ಹೊರ ಬಂದ ಒಂದು ಗಂಟೆ ವೇಳೆಗೆ ನಾನು ಪೋನ್ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಇನ್ನು ದೀಪಿಕಾ ಮೃತ ದೇಹ ಸಿಕ್ಕ ದಿನದಿಂದ ಆ ಯುವಕ ನಾಪತ್ತೆಯಾಗಿದ್ದಾನೆ. ಅವರ ತಂದೆಗೆ ನನ್ನನ್ನು ಹುಡುಕಬೇಡಿ ಎಂದು ಹೇಳಿದ್ದಾನಂತೆ. ಅಕ್ಕನಿಗೆ ಒಳ್ಳೆಯ ಕಡೆ ಗಂಡನ್ನು ಹುಡುಕಿ ಮದುವೆ ಮಾಡಿ ಎಂದು ಹೇಳಿ ಹೋಗಿದ್ದಾನಂತೆ ಎಂದಿದ್ದಾರೆ. ಇನ್ನೂ ನಾನು ಏನೇ ಮಾಡಿದ್ರೂ ನಮ್ಮ ಅಪ್ಪ ಬಿಡಿಸಿಕೊಂಡು ಬರ್ತಾರೆ ಅನ್ನೊ ಧಿಮಾಕು ಆತನಿಗೆ. ದೀಪಿಕಾಳಿಗೆ ಕಡೆದಾಗಿ ಫೋನ್ ಮಾಡಿದ್ದು ಆ ಯುವಕನೇ. ಆತನನ್ನ ಹಿಡಿದು ದಂಡಿಸಬೇಕು. ನನ್ನ ಹಾಗೂ ನನ್ನ ಮಗನ ಜೀವನ ಹಾಳು ಮಾಡಿದ ಆತನಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂದಿದ್ದಾರೆ ಪತಿ ಲೋಕೇಶ್.
ಆದರೆ ಈ ಕೊಲೆ ಕೇಸ್ನಲ್ಲಿ ಸಾಕಷ್ಟು ಅನುಮಾನಗಳು ಸೃಷ್ಟಿಯಾಗುತ್ತಿದ್ದು, ಕೊಲೆಯಾದ ದೀಪಿಕಾ, ಆ ಹುಡುಗ ಕರೆ ಮಾಡಿದ ಎನ್ನುವ ಕಾರಣಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದು ಯಾಕೆ..? ಅನುಮಾನಿತ ಆರೋಪಿ ಹುಡುಗ ಅಕ್ಕ ಎಂದು ಕರೆಯುತ್ತಿದ್ದ ಎಂದು ದೀಪಿಕಾ ಪತಿ ಲೋಕೇಶ್ ಹೇಳಿದ್ದಾರೆ. ಕೊಲೆ ನಡೆದಿರುವ ದಿನ ಆ ಯುವಕನ ಹುಟ್ಟುಹಬ್ಬ ಇತ್ತು ಎನ್ನಲಾಗಿದೆ. ಆ ಹುಡುಗನಿಗೆ ಸಿಗುವ ಉದ್ದೇಶದಿಂದಲೇ ಬಸ್ ಮಿಸ್ ಮಾಡಿಕೊಂಡಂತೆ ಮಾಡಿ ಬೈಕ್ನಲ್ಲಿ ಹೋಗಿದ್ದರ..? ಈ ಬಗ್ಗೆ ಮೊದಲೇ ನಿಶ್ಚಯ ಆಗಿತ್ತಾ..? ಅನ್ನೋ ಬಗ್ಗೆಯೂ ಪೊಲೀಸರಿಗೆ ಅನುಮಾನಗಳು ಕಾಡುತ್ತಿವೆ. ಒಂದು ವೇಳೆ ಮೊದಲು ಬೇರೆ ಎಲ್ಲಿಗೋ ಹೋಗಲು ಅಥವಾ ಬೇರೆ ಅನ್ಯ ಉದ್ದೇಶಗಳಿಗೆ ಪ್ಲ್ಯಾನ್ ಮಾಡಿ ಆ ಬಳಿಕ ಉಲ್ಟಾ ಹೊಡೆದಿದ್ದಾರಾ..? ಗೊತ್ತಿಲ್ಲ. ಆದರೂ ಜಗಳ ಆಗಿರುವುದಕ್ಕೆ ವಿಡಿಯೋ ಸಾಕ್ಷಿ ಇದೆ. ಅದು ಪ್ರೇಮಿಗಳ ಕಲಹ ಎಂದುಕೊಂಡ ಭಕ್ತರು ತಮ್ಮ ಪಾಡಿಗೆ ತಾವು ಹೋಗಿದ್ದಾರೆ. ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ದೀಪಿಕಾ ಕೊಲೆಗೆ ನಿಖರ ಖಾರಣ ತನಿಖೆಯಿಂದ ಅಷ್ಟೇ ಗೊತ್ತಾಗಬೇಕಿದೆ.
ಕೃಷ್ಣಮಣಿ