ಜಾಗತಿಕ ಹವಾಮಾನ ವೈಪರೀತ್ಯದಿಂದ ಹವಾಮಾನ ಏರುಪೇರಾಗೋದು ಇತ್ತೀಚಿನ ದಿನದಲ್ಲಿ ತುಂಬಾನೆ ಕಾಮನ್ ಆಗಿದೆ. ಸದ್ಯ ಇನ್ನೂ ವರ್ಷದ ಮೊದಲ ತಿಂಗಳಿನಲ್ಲಿ ನಾವಿದ್ದೇವೆ. ಆದ್ರೆ, ತಮಿಳುನಾಡಿನ ಕೆಲವು ಜಿಲ್ಲೆಯಲ್ಲಂತೂ ದಾಖಲೆಯ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಊಟಿಯಲ್ಲಿ ಮನೆಯಿಂದ ಹೊರ ಬರಲು ಜನ ಭಯಪಡುತ್ತಿದ್ದು, ಹೆಪ್ಪುಗಟ್ಟಿದ ಮಂಜಿಗೆ ನಡುಗುತ್ತಿದ್ದಾರೆ.
ಹವಾಮಾನ ಇಲಾಖೆಯ ವರದಿ ಪ್ರಕಾರ ತಮಿಳುನಾಡಿನ ಕಾಂತಲ್, ತಲೈಕುಂಠ, ಉದಗಮಂಡಲಂನಲ್ಲಿ ಕೇವಲ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾದ ಬೊಟಾನಿಕಲ್ ಗಾರ್ಡನ್ನಲ್ಲಿ 2 ಡಿಗ್ರಿ ಉಷ್ಣಾಂಶ, ಊಟಿಯಲ್ಲಿ 1 ಡಿಗ್ರಿಯಿಂದ ಝೀರೋ ಡಿಗ್ರಿಗೆ ತಾಪಮಾನ ಕುಸಿದಿದ್ದು ಆತಂಕವನ್ನು ಹೆಚ್ಚಿಸಿದೆ.ಊಟಿಯ ಗಿರಿಧಾಮದಲ್ಲಿ ಮುಂಜಾನೆಯಂತೂ ಹೆಪ್ಪುಗಟ್ಟಿದ ವಾತಾವರಣ ಕಂಡು ಬಂದಿದೆ.
ಮನೆಯಿಂದ ಹೊರ ಬಂದ ಜನರು ಕೊರೆಯೋ ಚಳಿಯಲ್ಲಿ ನಡುಗುತ್ತಿದ್ದು ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀಲಗಿರಿಯ ಹಲವು ಅರಣ್ಯ ಪ್ರದೇಶದಲ್ಲಿ ಮೊದಲ ಬಾರಿಗೆ 0 ಡಿಗ್ರಿ ಉಷ್ಣಾಂಶ ದಾಖಲಾಗಿದೆ.ಊಟಿ ಸೇರಿದಂತೆ ನೀಲಗಿರಿಯ ಹಲವು ಗಿರಿಧಾಮಗಳು ಪ್ರವಾಸಿಗರಿಗೆ ನೆಚ್ಚಿನ ತಾಣಗಳಾಗಿವೆ. ಆದರೆ ಜನವರಿಯಲ್ಲಿ ಮಂಜಿನ ಜೊತೆಗೆ ಹೆಪ್ಪುಗಟ್ಟಿದ ವಾತಾವರಣ ಕಂಡು ಬಂದಿರೋದಕ್ಕೆ ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.