ಮೈಸೂರು: 2023-24ನೇ ಸಾಲಿನ ರಣಜಿ ಟ್ರೋಫಿ(Ranji Trophy Cricket) ಪಂದ್ಯಾವಳಿಯ 3ನೇ ಪಂದ್ಯದಲ್ಲಿ ಗೋವಾ(Goa) ತಂಡದ ಸವಾಲು ಎದುರಿಸಲಿ ಅತಿಥೇಯ ಕರ್ನಾಟಕ(Karnataka) ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಪಂದ್ಯ ಇಂದಿನಿಂದ ಮೈಸೂರಿನ(Mysore) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(SDNRW) ಮೈದಾನದಲ್ಲಿ ನಡೆಯಲಿದೆ.
ಪ್ರಸಕ್ತ ರಣಜಿ ಋತುವಿನಲ್ಲಿ ಪಂಜಾಬ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಕರ್ನಾಟಕ ಗೆಲುವಿನ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಹಾಗೂ ಮನೀಷ್ ಪಾಂಡೆ ಭರ್ಜರಿ ಶತಕ ಹಾಗೂ ವಿ. ಕೌಶಿಕ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕರ್ನಾಟಕ 7 ವಿಕೆಟ್‌ಗಳಿಂದ ಗೆದ್ದುಬೀಗಿತ್ತು. ಆದರೆ ಇದೇ ಉತ್ಸಾಹದೊಂದಿಗೆ ಅಹ್ಮದಾಬಾದ್‌ನಲ್ಲಿ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸುಲಭವಾಗಿ ಗೆಲ್ಲುವ ಅವಕಾಶವನ್ನು ಕೈಚಲ್ಲಿದ್ದ ಕರ್ನಾಟಕ 6 ರನ್‌ಗಳ ಸೋಲಿನೊಂದಿಗೆ ಆಘಾತಕಾರಿ ಸೋಲು ಕಂಡಿತ್ತು. ಹೀಗಾಗಿ ಗೋವಾ ವಿರುದ್ಧದ ಈ ಪಂದ್ಯದ ಮೂಲಕ ಬಲಿಷ್ಠ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯೊಂದಿಗೆ ಕರ್ನಾಟಕ ತಂಡ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.

ಗುಜರಾತ್ ವಿರುದ್ಧದ ಪಂದ್ಯದಲ್ಲಿ ನಾಯಕ ಮಯಂಕ್ ಅಗರ್ವಾಲ್ ಅವರ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದರೂ, 2ನೇ ಇನ್ನಿಂಗ್ಸ್‌ನಲ್ಲಿ ಅನುಭವಿಸಿದ ತಂಡದ ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದ ಆಘಾತಕಾರಿ ಸೋಲು ಕಂಡಿತು. ಹೀಗಾಗಿ ಎಸ್‌ಡಿಎನ್‌ಆರ್ ಒಡೆಯರ್ ಅಂಗಳದಲ್ಲಿ ನಡೆಯುವ ಗೋವಾ ವಿರುದ್ಧದ ಪಂದ್ಯದಲ್ಲಿ ಹಿಂದಿನ ಪಂದ್ಯದ ತಪ್ಪಿನಿಂದ ಎಚ್ಚೆತ್ತು ಆಡಬೇಕಾದ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ. ಪ್ರಮುಖವಾಗಿ ಬ್ಯಾಟ್ಸ್‌ಮನ್ ಮೇಲೆ ಹೆಚ್ಚಿನ ಒತ್ತಡವಿದ್ದು, ಬೌಲರ್‌ಗಳು ಸಹ ಸಂಘಟಿತ ಪ್ರದರ್ಶನ ಕೂಡ ಗೋವಾ ತಂಡದ ವಿರುದ್ಧ ಅತ್ಯಂತ ನಿರ್ಣಾಯಕವಾಗಲಿದೆ.
ಟೂರ್ನಿಯಲ್ಲಿ ಕರ್ನಾಟಕ ಆಡಿರುವ ಎರಡು ಪಂದ್ಯಗಳಲ್ಲಿ ನಾಯಕ ಮಯಂಕ್ ಅಗರ್ವಾಲ್, ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಮನೀಷ್ ಪಾಂಡೆ ಅವರುಗಳು ಬ್ಯಾಟಿಂಗ್ ಲಯ ಕಂಡುಕೊಂಡಿದ್ದರೆ. ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬಂದಿಲ್ಲ. ಹೀಗಾಗಿ ಗೋವಾ ವಿರುದ್ಧದ ಪಂದ್ಯದಲ್ಲಿ ಅತಿಥೇಯ ತಂಡದ ಪ್ರಮುಖ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಉಳಿದಂತೆ ವಿ. ಕೌಶಿಕ್, ವೈಶಾಖ್ ವಿಜಯ್‌ಕುಮಾರ್, ಪ್ರಸಿದ್ಧ ಕೃಷ್ಣ, ರೋಹಿತ್ ಕುಮಾರ್ ಅವರುಗಳು ಬೌಲಿಂಗ್ ವಿಭಾಗದಲ್ಲಿ ತಂಡದ ಬಲ ಹೆಚ್ಚಿಸಿದ್ದಾರೆ.

2023-24ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಗೋವಾ ತಂಡ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ತ್ರಿಪುರ ವಿರುದ್ಧ 237 ರನ್‌ಗಳ ಭಾರೀ ಅಂತರದ ಸೋಲು ಕಂಡಿದ್ದರೆ. ಚಂಢೀಗಡ್ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ಸು ಕಂಡರೂ, ಗೆಲುವು ಸಾಧ್ಯವಾಗಲಿಲ್ಲ. ಹೀಗಾಗಿ ಕರ್ನಾಟಕ ತಂಡದ ವಿರುದ್ಧದ 3ನೇ ಪಂದ್ಯದಲ್ಲಿ ತನ್ನ ಮೊದಲ ಗೆಲುವಿನ ಹುಡುಕಾಟದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಸುಯಾಶ್ ಪ್ರಭುದೇಸಾಯಿ ಹಾಗೂ ದೀಪ್‌ರಾಜ್ ಗಾಂವ್ಕರ್ ಅವರುಗಳು ಬ್ಯಾಟಿಂಗ್ ಫಾರ್ಮ್‌ನಲ್ಲಿರುವುದು ಗೋವಾ ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಸಂಭಾವ್ಯ ತಂಡಗಳು:
ಕರ್ನಾಟಕ: ಮಯಂಕ್ ಅಗರ್ವಾಲ್(ನಾಯಕ), ದೇವದತ್ ಪಡಿಕ್ಕಲ್, ನಿಕಿನ್ ಜೋಸ್, ಶುಭಾಂಗ್ ಹೆಗಡೆ, ಮನೀಷ್ ಪಾಂಡೆ, ಎಸ್. ಸತೇರಿ, ವೈಶಾಖ್ ವಿಜಯ್‌ಕುಮಾರ್, ಆರ್. ಸಮರ್ಥ್, ರೋಹಿತ್ ಕುಮಾರ್, ಕೌಶಿಕ್, ಪ್ರಸಿದ್ಧ ಕೃಷ್ಣ.
ಗೋವಾ: ಇಶಾನ್ ಗಡೇಕರ್, ಸುಯಾಶ್ ಪ್ರಭುದೇಸಾಯಿ, ಕೆ.ವಿ. ಸಿದ್ದಾರ್ಥ್, ಸ್ನೇಹಲ್ ಕೌತಾನ್ಕರ್, ಆರ್. ತ್ರಿಪಾತಿ, ದರ್ಶನ್ ಮಿಸಲ್(ನಾಯಕ), ದೇಪ್‌ರಾಜ್ ಗಾಂವ್ಕರ್, ಅರ್ಜುನ್ ತೆಂಡುಲ್ಕರ್, ಮೋಹಿತ್ ರೆಡ್ಕರ್, ಲಕ್ಷ್ಯಾ ಗಾರ್ಗ್, ವಿಜೇಶ್ ಪ್ರಭುದೇಸಾಯಿ.