ಏಷಿಯಾ ನೆಟ್ ಸುವರ್ಣ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮ ಹಾಗು ಪೇಜಾವರ ಶ್ರೀಗಳು ಮತ್ತು ಕಾರ್ಯಕ್ರಮದ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ದೂರು ದಾಖಲಾಗಿದೆ. ಡಿಸೆಂಬರ್ 27, 2023 ರಂದು ಪ್ರಸಾರವಾದ ಉಡುಪಿ ಪೇಜಾವರ ಸ್ವಾಮೀಜಿ, ನ್ಯೂಸ್ ಅವರ್ ವಿಶೇಷ ಕಾರ್ಯಕ್ರಮದಲ್ಲಿ ದಲಿತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಯೋಧ್ಯೆಯಲ್ಲಿ ದಲಿತರಿಗೆ ಪೂಜೆ ಮಾಡಲು ಅವಕಾಶವಿದೆಯೇ..? ಎನ್ನುವ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ಇದು ಅಯೋಧ್ಯೆಯ ರಾಮಮಂದಿರದಲ್ಲಿ ದಲಿತರಿಗೆ ಪೂಜೆ ಮಾಡಲು ಅವಕಾಶವಿದೆಯೇ ಎಂದು ಚರ್ಚೆ ಮಾಡಿರುವು ಸಂವಿಧಾನ ಬಾಹಿರ ಎಂದು ಆರೋಪಿಸಲಾಗಿದೆ.

ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಮತ್ತು ಸುವರ್ಣ ಟಿವಿ ವಾರ್ತಾ ವಾಚಕ ಅಜಿತ್ ಹನುಮಕ್ಕನವರ್ ವಿರುದ್ಧ ತಾರತಮ್ಯ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಜಾತಿ ಆಧಾರಿತ ಬಹಿಷ್ಕಾರವನ್ನು ಉತ್ತೇಜಿಸಿದ ಆರೋಪದ ಮೇಲೆ ಜನವರಿ 12, 2024ರ ಶುಕ್ರವಾರದಂದು ಬೆಂಗಳೂರಿನಲ್ಲಿ ದಲಿತ ಸಂಘಟನೆ ದೂರು ದಾಖಲಿಸಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಕೂಡ ಆಗಿರುವ ಪೇಜಾವರ ಶ್ರೀಗಳು ಈ ರೀತಿಯ ಹೇಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ.

ದಲಿತ ಸಂಘಟನೆಯ ವಕ್ತಾರ ನಾಗರಾಜ್ ಎಂಬುವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಯೋಧ್ಯೆಯ ರಾಮ ಮಂದಿರದಲ್ಲಿ ದಲಿತರನ್ನು ಪೂಜೆ ಮಾಡಲು ಅವಕಾಶ ಇದ್ಯಾ..? ಎಂದು ಪ್ರಶ್ನೆ ಇಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀಗಳು, “ದೇವಸ್ಥಾನದಲ್ಲಿ ಒಬ್ಬರೇ ಪೂಜೆ ಮಾಡುತ್ತಾರೆ, ಎಲ್ಲರೂ ಪೂಜೆ ಮಾಡುವುದಿಲ್ಲ. ಕಾಶಿ ದೇವಸ್ಥಾನವನ್ನು ಹೊರತುಪಡಿಸಿ ಬೇರೆ ಎಲ್ಲೂ ಅವಕಾಶವಿಲ್ಲ. ಅದಕ್ಕೆ ನೇಮಕಗೊಂಡವರು ಪೂಜೆಯನ್ನು ಮಾತ್ರ ಮಾಡುತ್ತಾರೆ. ದೇವಸ್ಥಾನ ಮಾತ್ರವಲ್ಲ, ಯಾವುದೇ ಕಚೇರಿ ಅಥವಾ ಸಂಸ್ಥೆಯಲ್ಲೂ ನೇಮಕಗೊಂಡವರು ಮಾತ್ರ ಆ ಹುದ್ದೆಯಲ್ಲಿ ಕುಳಿತುಕೊಳ್ಳಬಹುದು ಎಂದಿದ್ದಾರೆ. ದಲಿತನೂ ಓರ್ವ ಹಿಂದೂ ಅಲ್ಲವೇ..? ಯಾಕೆ ಅವಕಾಶ ಕೊಡಬಾರದು ಎಂದು ಮರು ಪ್ರಶ್ನೆ ಮಾಡಿದ್ದಕ್ಕೆ ದಲಿತ ಸಂಘಟನೆಯಲ್ಲಿ ಬ್ರಾಹ್ಮಣನನ್ನು ಅಧ್ಯಕ್ಷನನ್ನಾಗಿ ಮಾಡುತ್ತೀರಾ..? ಇಲ್ಲಾ ಎಂದಾದರೆ ಇಲ್ಲಿ ಅವಕಾಶ ಕೇಳುವುದು ಸರೀನಾ ಎಂದು ಪೇಜಾವರ ಶ್ರೀಗಳು ಕೇಳಿದ್ದಾರೆ.

ಈ ಚರ್ಚೆ ವೇಳೆ ಮಾತನಾಡಿರುವ ಅಜಿತ್ ಹನುಮಕ್ಕನವರ್, “ನೀವು ಧಾರ್ಮಿಕ ಸ್ಥಳಗಳಲ್ಲಿ ಜಾತ್ಯತೀತ ಸ್ಥಳಗಳ ನಿಯಮಗಳನ್ನು ಹಾಕಲು ಸಾಧ್ಯವಿಲ್ಲ. ಎರಡನ್ನೂ ಬೆರೆಸಬೇಡಿ. ನೀವು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ಬಯಸಿದರೆ, ಅಗತ್ಯವಿರುವ ನಿಯಮಗಳಿವೆ ಅವುಗಳನ್ನು ಅನುಸರಿಸಬೇಕು ಎಂದಿದ್ದಾರೆ. ನಿಗದಿತ ನಿಯಮಗಳನ್ನು ಪಾಲಿಸದೆ ಶಬರಿಮಲೆಗೆ ಹೋಗಬೇಕೆಂದು ನೀವು ಹೇಗೆ ಹೇಳುತ್ತೀರಿ..? ಎಂದು ನಾಗರಾಜ್ ಅವರ ಮಾತನ್ನು ನಿಲ್ಲಿಸಲಾಯ್ತು. ಇದೇ ವೇಳೆ ದಲಿತರಿಗೆ ಷರತ್ತಿನ ಮಾರ್ಗವನ್ನು ಸೂಚಿಸಿದ ಕಾಂಗ್ರೆಸ್ ಸಮಿತಿಯ ಸದಸ್ಯರೊಬ್ಬರು, ‘‘ದಲಿತರು ಪೂಜೆ ಮಾಡಬೇಕಾದರೆ ಮಂತ್ರಗಳನ್ನು ಕಲಿತು ‘ಅಖಂಡ ಪಾಂಡಿತ್ಯ’ ಪಡೆದು ಪೂಜೆ ಸಲ್ಲಿಸಲಿ ಎಂದು ಸಲಹೆ ನೀಡಿದ್ದಾರೆ. ನೀವು ಈ ವಿಷಯವನ್ನು ಏಕೆ ತೆಗೆದುಕೊಂಡು ಜಗಳ ಕಾಯುತ್ತಿದ್ದೀರಿ..? ಭೂಮಿ ಪೂಜೆಯ ಸಮಯದಲ್ಲಿ, ದಲಿತ ಕರಸೇವಕ ಕಾಮೇಶ್ವರ ಚೌಪಾಲ್ ಎಂಬುವರು ಉಪಸ್ಥಿತರಿದ್ದರು ಎಂದಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ದಂಡು ಸಲಹೆಗಾರ ಆದರ್ಶ್ ಆರ್.ಅಯ್ಯರ್ ಮಾತನಾಡಿ, ‘ಪ್ರಮುಖ ವ್ಯಕ್ತಿಗಳ ಇಂತಹ ಹೇಳಿಕೆಗಳು ದಲಿತರನ್ನು ಅವಮಾನಿಸುವಂತಿವೆ. ಈ ರೀತಿಯ ಹೇಳಿಕೆಗಳು ಬೇರೆಯವರನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಲಾಗಿದೆ. ದೂರಿನ ಸ್ವೀಕೃತಿಯನ್ನು ಮಾತ್ರ ನೀಡಲಾಗಿದೆ. ಇದುವರೆಗೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಮುಂದಿನ ದಿನಗಳಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.







