ಭಾರತದಲ್ಲಿ 31 ವರ್ಷದ ಹಿಂದೆ ರಾಮಜನ್ಮಭೂಮಿ ಹೋರಾಟದ ಜೋರಾಗಿತ್ತು. ಅದೇ ಸಮಯದಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟ ನಡೆದಿತ್ತು. ಅಂದು ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತರ ಬಂಧನ ಮಾಡಲಾಗಿದೆ. ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತನನ್ನು ಬಂಧಿಸಿ 31 ವರ್ಷಗಳ ಹಳೆ ಪ್ರಕರಣಕ್ಕೆ ಜೀವ ಕೊಟ್ಟಿದ್ದಾರೆ ಹುಬ್ಬಳ್ಳಿ ಪೊಲೀಸರು. ಹುಬ್ಬಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ರಾಮಮಂದಿರ ಹೋರಾಟದ ಸಂದರ್ಭದಲ್ಲಿ ಗಲಭೆ ಸಂಭವಿಸಿತ್ತು. ಕರಸೇವೆಗೂ ಮುನ್ನ ಅಂದರೆ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿತ್ತು. ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಹುಬ್ಬಳ್ಳಿಯ ಶಹರ ಠಾಣೆಯಲ್ಲಿ 9 ಜನರ ವಿರುದ್ಧ FIR ದಾಖಲಾಗಿತ್ತು.
31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಾದಾಗ ಆರೋಪಿಗಳು 30 ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಇದೀಗ ಅವರಿಗೆಲ್ಲಾ 60-70 ವರ್ಷ ವಯಸ್ಸು. ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ, ಗುರುನಾಥ್ ಕಾಟಿಗಾರ, ರಾಮಚಂದ್ರ ಕಲಬುರಗಿ ಹಾಗೂ ಅಮೃತ ಕಲಬುರಗಿ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದು ಬಿಜೆಪಿ ಹಾಗು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ ಗಲಭೆ ಪ್ರಕರಣ ರೀ ಓಪನ್ ವಿಚಾರದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿದ್ದು, ರಾಮ ಭಕ್ತರ ಮೇಲೆ ಸರ್ಕಾರ ದ್ವೇಷ ಸಾಧಿಸುತ್ತಿದೆ ಎಂದಿದ್ದಾರೆ. ಆದರೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ, ಆ ರೀತಿ ಏನು ಇಲ್ಲ, ಹಳೆ ಕೇಸುಗಳನ್ನೆಲ್ಲಾ ಕ್ಲಿಯರ್ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ. ರಾಜ್ಯಾದ್ಯಂತ ಇರುವ ಹಳೆ ಪ್ರಕರಣಗಳನ್ನ ಕ್ಲಿಯರ್ ಮಾಡುವಂತೆ ಸಂದೇಶ ಕೊಟ್ಟಿದ್ದೇವೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕೇಸ್‌ಗಳನ್ನು ಕ್ಲಿಯರ್ ಮಾಡಲು ಹೇಳಿದ್ದೇವೆ. ಅದರಲ್ಲಿ ಹುಬ್ಬಳ್ಳಿಯಲ್ಲಿ 32 ಕೇಸುಗಳು ಪೆಂಡಿಂಗ್ ಇದ್ದವು. ಅದನ್ನು ಓಪನ್ ಮಾಡಿ ಕ್ಲಿಯರ್ ಮಾಡುವ ವೇಳೆ ಈ ಕೇಸ್ ಬಂದಿದೆ. ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿ ಕಸ್ಟಡಿಗೆ ಕೊಟ್ಟಿದಾರೆ. ಎಲ್ಲರಿಗೂ ಹೇಗೆ ಮಾಡಿದ್ದಾರೋ ಇವರಿಗೂ ಹಾಗೆ ಮಾಡಿದ್ದಾರೆ. ಇದರಲ್ಲಿ ಬೇರೆ ಉದ್ದೇಶ ಇಟ್ಕೊಂಡಿಲ್ಲ ಅದು ತಪ್ಪು ಕಲ್ಪನೆ ಎಂದಿದ್ದಾರೆ.
ಹಿಂದೂ ಕಾರ್ಯಕರ್ತರು ಇನ್ನೊಂದು ಕಾರ್ಯಕರ್ತರು ಎನ್ನುವ ಕಾರಣಕ್ಕೆ ಟಾರ್ಗೆಟ್ ಮಾಡಿದ್ದಾರೆ ಎನ್ನುವುದು ಸುಳ್ಳು. ಕಾನೂನಿನ ಪ್ರಕಾರ ಯಾವ ಕ್ರಮ ಆಗಬೇಕು ಪೊಲೀಸ್ ಇಲಾಖೆ ಮಾಡುತ್ತದೆ. ಇದಕ್ಕೆ ಕೋಮು ಬಣ್ಣ ಕಟ್ಟುವುದು ಸೂಕ್ತ ಅಲ್ಲ. ಆಕಸ್ಮಿಕವಾಗಿ ಆಗಿರಬಹುದು ಅಷ್ಟೇ, ಅವರೊಬ್ಬರನ್ನೇ ಮಾಡಿದ್ದಾರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಬೇರೆ ಬೇರೆ ಎಲ್ಲಾ ಹಳೆ ಪ್ರಕರಣಗಳನ್ನು ಕ್ಲಿಯರ್ ಮಾಡುವ ಸಂದರ್ಭದಲ್ಲಿ ಈ ಕೇಸ್ ಕೂಡ ಬಂದಿದೆ. ಇವರೊಬ್ಬರೇ ಅಲ್ಲ ಹಳೇ ಕೇಸ್ ಯಾವುದು ಇದೆ ಎಲ್ಲಾ ಕ್ಲಿಯರ್ ಮಾಡುವಂತದ್ದು ಸೂಚನೆ ಎಂದಿದ್ದಾರೆ. ಈ ಕೇಸ್ ಯಾಕೆ ಪೆಂಡಿಂಗ್‌ನಲ್ಲಿತ್ತು ಎಂಬ ಪ್ರಶ್ನೆಗೆ ಈ ರೀತಿ ಬಹಳ ಕಡೆ ಕೇಸುಗಳನ್ನು ಬಿಟ್ಟು ಬಿಡುತ್ತಾರೆ. ಯಾವಾಗ್ಲೋ ಒಮ್ಮೆ ಕೇಸ್ ರೀ ಓಪನ್ ಆಗುತ್ತದೆ. ಅದೇ ರೀತಿ ಇದು ಒಂದು ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟಗಾರರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಪ್ರತಿಕ್ರಿಯೆ ನೀಡಿದ್ದು, ಲಾಂಗ್ ಪೆಂಡಿಂಗ್ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗಿತ್ತು. ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿರೋ ಆರೋಪಿಗಳನ್ನ ಪತ್ತೆ ಹಚ್ಚಲಾಗಿದೆ. ಇದು ಪ್ರತಿಯೊಂದು ಪ್ರಕರಣದಲ್ಲೂ ಇರುವಂತೆ ಸಾಮಾನ್ಯ ಪ್ರಕ್ರಿಯೆ. ಪ್ರತಿಯೊಂದು ಪ್ರಕರಣದಲ್ಲೂ ಈ ರೀತಿ ಲಾಂಗ್ ಪೆಂಡಿಂಗ್ ಆರೋಪಿಗಳಿರುತ್ತಾರೆ. ಇದು ರೊಟೀನ್ ಪ್ರಕರಣಗಳಂತೆಯೇ ಈ ಪ್ರಕರಣವೂ ಒಂದು. ಒಂಬತ್ತು ಜನರ ಮೇಲೆ ಈ ಕೇಸ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಒಟ್ಟು 9 ಜನರ ಪೈಕಿ ಮೂವರು ಸಾವಿನಪ್ಪಿದ್ದಾರೆ. ಅವರ ಡೆತ್ ನೋಟ್‌ಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಬಂಧಿತ ವ್ಯಕ್ತಿ 30 ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಈಗ ಪತ್ತೆಯಾಗಿದ್ದು, ಬಂಧಿಸಲಾಗಿದೆ. ಇದರಲ್ಲಿ ವಿಶೇಷತೆ ಏನು ಇಲ್ಲ ಸಾಮಾನ್ಯ ಪ್ರಕರಣಗಳಂತೆ ಇದನ್ನು ಸಹ ತನಿಖೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಜನರವರಿ 22ರಂದು ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಕಾರಣಕ್ಕೆ ಈ ಬಂಧನ ಪ್ರಕರಣ ಬಿಜೆಪಿ ಅಸ್ತ್ರವಾಗಿದೆ ಅನ್ನೋದು ಸುಳ್ಳೇನು ಅಲ್ಲ. ಯಾಕೆಂದರೆ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಆಗುವ ಲಾಭವೇನು ಇಲ್ಲ. ಆದರೆ ಬಿಜೆಪಿ ಪಕ್ಷ ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಬಂಧನ ಮಾಡಿದೆ. ರಾಮಮಂದಿರ ಉದ್ಘಾಟನೆ ಆಗುತ್ತಿರುವುದನ್ನು ಸಹಿಸಲು ಸಾಧ್ಯವಾಗದೆ ಹಳೇ ಕೇಸ್‌ಗೆ ಜೀವ ಕೊಟ್ಟಿದೆ ಎಂದು ಪ್ರಚಾರ ಮಾಡಿದರೆ ಕಾಂಗ್ರೆಸ್‌ಗೆ ಕೊಂಚ ಹಿನ್ನಡೆ ಆಗುವ ಸಾಧ್ಯತೆಯೂ ಇದೆ. ಆದರೂ ಪೊಲೀಸ್ ಆಯುಕ್ತರು ಹೇಳಿದಂತೆ ಇಷ್ಟು ವರ್ಷಗಳ ಕಾಲ ಆರೋಪಿಗಳು ನಾಪತ್ತೆ ಆಗಿದ್ದರು ಎನ್ನುವುದನ್ನೂ ಸತ್ಯ ಎಂದು ಒಪ್ಪಲು ಸಾಧ್ಯವಿಲ್ಲ ಅಲ್ಲವೇ..?
ಕೃಷ್ಣಮಣಿ