ಹಿಂದೂ ಕ್ಯಾಲೆಂಡ್ ಪ್ರಕಾರ ಹೊಸ ವರ್ಷ ಇನ್ನೂ ಆರಂಭವಾಗಿಲ್ಲದಿದ್ದರೂ ಕ್ಯಾಲೆಂಡರ್ ವರ್ಷದ ಪ್ರಕಾರ ಹೊಸ ವರ್ಷ ಆರಂಭವಾಗಿದೆ. ಈ ಕ್ಯಾಲೆಂಡರ್ ವರ್ಷದ ಪ್ರಕಾರ ರಾಶಿಗಳ ಪ್ರಕಾರ ಭವಿಷ್ಯ ಹೇಗಿದೆ ಅನ್ನೋದನ್ನು ನೋಡುವ ಜೊತೆಗೆ ಯಾವ ರಾಶಿಯವರು ಯಾವ ದೇವರ ಪೂಜೆ ಮಾಡುವುದರಿಂದ ಸಮಸ್ಯೆ ಪರಿಹಾರ ಆಗುತ್ತೆ ಅನ್ನೋದನ್ನು ಕೂಡ ಖ್ಯಾತ ಜ್ಯೋತಿಷಿ, ಶಾರದಾ ಪೀಠದ ಧರ್ಮಾಧಿಕಾರಿ ದೈವಜ್ಞ ಡಾ. ಸೋಮಯಾಜಿ (TV Interview) ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಮೇಷ ರಾಶಿ
ಮೇಷರಾಶಿಯ ಜನರಿಗೆ ಗುರು ಜನ್ಮದಲ್ಲೇ ಇರುವುದರಿಂದ ಈ ವರ್ಷ ಶುಭ ಕಾರ್ಯಗಳು ಆಗುತ್ತವೆ. ಆರ್ಥಿಕವಾಗಿ, ವ್ಯವಹಾರವಾಗಿ ಏಳ್ಗೆಯನ್ನು ಕಾಣುತ್ತೀರಿ. ಭತ್ತ, ಕಬ್ಬು ಬೆಳೆಯಲು ರೈತರಿಗೆ ಸದಾವಕಾಶ ಒದಗಲಿದೆ. ಮಕ್ಕಳ ಮದುವೆ ಆಗುತ್ತೆ. ಮಂಗಳ ಕಾರ್ಯದಲ್ಲಿ ಸಂತೃಪ್ತಿ ಜೊತೆಗೆ ವಿದೇಶ ಪ್ರಯಾಣ ನೆರವೇರಲಿದೆ. ಆರೋಗ್ಯ ಮಟ್ಟ ಸುಧಾರಿಸಿ ನೆಮ್ಮದಿ ಜೀವನ ಲಬಿಸಲಿದೆ. ಖಾಸಗಿ ಕಂಪನಿ, MNC ಕೆಲಸಗಳಲ್ಲಿ ಕೆಲಸ ಮಾಡುವ ಜನರಿಗೆ ಶುಭದಾಯಕ. ಶೃಂಗೇರಿ ಶಾರದಾಂಬೆ ಪೂಜೆಯಿಂದ ಲಾಭ ಸಿಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಸಣ್ಣಪುಟ್ಟ ಅಡೆತಡೆಗಳು ಕಾಡುತ್ತವೆ. ಆರೋಗ್ಯ ಸಮಸ್ಯೆಗಳು ಭಾದಿಸುತ್ತವೆ. ದೂರದ ಪ್ರಯಾಣ ಮಾಡುವ ಆಸೆಯಿಂದ ನಿರಾಸೆ ಕಾಡಲಿದೆ. ಈ ವರ್ಷ ಅತೃಪ್ತಿ ಕಾಣುವ ಸೂಚನೆ ಸಿಗಲಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವ ಜನರಿಗೆ ಬಡ್ತಿ ಸಿಗಲಿದೆ. ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಆಸ್ತಿ ಖರೀದಿಗೆ ಉತ್ತಮ ಅವಕಾಶ ಸಿಗಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಈ ವರ್ಷ ಶುಭದಾಯಕ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನದಿಂದ ಲಾಭ ಆಗುವ ನಿರೀಕ್ಷೆಯಿದೆ.
ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ವರ್ಷ ಆಸೆ ಪೂರೈಸುವ ಹಾಗು ಹರ್ಷದಾಯಕ ಸಂವತ್ಸರ ಆಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವ ಜನರಿಗೆ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳಿಗೆ ಯಶಸ್ಸು, ಕೀರ್ತಿಯೂ ಲಭಿಸಲಿದೆ. ರೈತರು, ಗಾರ್ಮೆಂಟ್ಸ್ ಹಾಗು ಟೆಕ್ಸ್ಟೈಲ್ಸ್ ಉದ್ಯಮಿಗಳಿಗೆ ಲಾಭ ಸಂಭವವಿದೆ. ದೂರದ ಪ್ರಯಾಣ, ವಿದೇಶ ಪ್ರಯಾಣದ ಲಾಭ ಸಿಗಲಿದೆ. ವಿವಾದ, ಸಂತಾನ, ಮನೆ ನಿರ್ಮಾಣಕ್ಕೆ ಸೂಕ್ತ ಸಮಯ ಇದು. ಗಣಿಗಾರಿಕೆ, ಕಾರು ಚಾಲಕರಿಗೆ ಅನುಕೂಲಕರ ಹಾಗು ವಿದೇಶದಲ್ಲಿ ಉದ್ಯೋಗದ ಕನಸು ನನಸಾಗುತ್ತದೆ.
ಕಟಕ ರಾಶಿ
ಈ ರಾಶಿಯವರಿಗೆ ಸಣ್ಣಪುಟ್ಟ ಸಮಸ್ಯೆಗಳು ಕಾಡುತ್ತವೆ. ಕಿಡ್ನಿ, ಕಣ್ಣಿನ ದೋಷ ಇರುವವರು ಎಚ್ಚರದಿಂದ ಇರುವುದು ಸೂಕ್ತ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಔಷಧ, ಕೆಮಿಕಲ್ಸ್ ಉದ್ಯಮದಲ್ಲಿ ಉನ್ನತಿ ಹಾಗು ಸಿಹಿಹಣ್ಣು ಬೆಳೆಯುವ ರೈತರಿಗೆ ಶುಭದಾಯಕ. ಕೊಲ್ಲೂರು ಮೂಕಾಂಬಿಕೆ, ಶೃಂಗೇರಿ ಶಾರದಾಂಬೆ, ಚಾಮುಂಡೇಶ್ವರಿ ದರ್ಶನದಿಂದ ಲಾಭ ಆಗುವ ಸಾಧ್ಯತೆ ಹೆಚ್ಚು
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಸ್ವಂತ ಮನೆ ಕಟ್ಟುವ ಕನಸು ನನಸು ನನಸಾಗಲಿದೆ. ಭೂಮಿ ಆಸ್ತಿ ಖರೀದಿಗೆ ಅವಕಾಶ, ಹಣಕಾಸು
ವಾಹನ, ಆಭರಣ ಖರೀದಿಗೂ ಅವಕಾಶ ಸಿಗಲಿದೆ. ಆರೋಗ್ಯದಲ್ಲಿ ಸಮಸ್ಯೆಗಳು ಕಾಡುವುದಿಲ್ಲ. ದ್ವಿದಳ ಧಾನ್ಯ ಬೆಳೆಯುವ ರೈತರಿಗೆ ಅನೂಕೂಲ ಆಗಲಿದೆ. ಸಂಘ-ಸಂಸ್ಥೆಗಳ ಶ್ರೇಯೋಭಿವೃದ್ಧಿ ಆಗಲಿದೆ. ರಾಜಕಾರಣಿಗಳಿಗೆ ಚುನಾವಣಾ ಗೆಲುವು ಅದೃಷ್ಟವಿದೆ. ನಂಜನಗೂಡಿನ ನಂಜುಂಡೇಶ್ವರ ದರ್ಶನದಿಂದ ಲಾಭ
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಸಾಕಷ್ಟು ಶುಭಫಲ ಇರಲಿದೆ. ಹೇರಳವಾದ ಧನ, ವೈಭೋಗ ಸಿಗುತ್ತದೆ. ಸೇವಾವಲಯದ ಉದ್ಯಮ ಬೆಳೆಯುತ್ತದೆ. ವಾಹನ ಖರೀದಿಗೆ ಸೂಕ್ತವಾದ ವರ್ಷ 2024, ಟೆಕ್ನಿಕಲ್ ಉದ್ಯಮಿಗಳಿಗೆ, ವಿದೇಶದಲ್ಲಿ ಉದ್ಯೋಗದಲ್ಲಿರುವ ಜನರಿಗೆ ಅನುಕೂಲ ಆಗಲಿದೆ. ಮದುವೆ, ದೂರ ಪ್ರಯಾಣ ಮಾಡುವ ಫಲವಿದೆ. ಗಣಪತಿ ಆರಾಧನೆ, ಸಂಕಷ್ಟಹರ ಆರಾಧನೆಯಿಂದ ಲಾಭ ತರಲಿದೆ.
ತುಲಾ ರಾಶಿ
ತಲಾ ರಾಶಿಯ ಜನರಿಗೆ ಸಂತೋಷ, ಉತ್ತಮ ಆರೋಗ್ಯ ತರುವ ವರ್ಷ 2024. ಆಸ್ತಿ, ವಾಹನ, ಆಭರಣ ಖರೀದಿಗೆ ಉತ್ತಮ ಅವಕಾಶ ಸಿಗಲಿದೆ. ಜಾಹೀರಾತು, ಸಿನಿಮಾ ಉದ್ಯಮದಲ್ಲಿ ಫಲ ಇರಲಿದೆ. ವಿದೇಶ ಪ್ರಯಾಣದ ಫಲ ಸಿಗುತ್ತದೆ. ಹಣ, ಯಶಸ್ಸು, ಕೀರ್ತಿ ಸಿಗುತ್ತದೆ. ಬಂಧು ಬಳಗದ ಭೇಟಿಯಿಂದ ಲಾಭ ಆಗಲಿದ್ದು, ಬಿಪಿ, ಶುಗರ್ ಇದ್ದರೆ ನಿಯಂತ್ರಣದಲ್ಲಿ ಇರಲಿದೆ. ಅಪರೂಪದಲ್ಲಿ ಅಪರೂಪದ ಬೆಳೆ ಬೆಳೆದರೆ ಲಾಭ ಕಟ್ಟಿಟ್ಟ ಬುತ್ತಿ. ದುರ್ಗಾದೇವಿ ಆರಾಧನೆ, ತಿರುಪತಿ ತಿಮ್ಮಪ್ಪನ ದರ್ಶನದಿಂದ ಲಾಭ ಸಿಗಲಿದೆ.
ವೃಶ್ಚಿಕ ರಾಶಿ
ಈ ರಾಶಿಯಲ್ಲಿ ಜನಿಸಿದ ಜನರಿಗೆ ಜೀವನದ ಗೊಂದಲಗಳು ಎಲ್ಲವೂ ನಿವಾರಣೆ ಆಗಲಿದ್ದು, ಸಿಮೆಂಟ್, ಪೇಪರ್ ಉದ್ಯಮದಲ್ಲಿ ಬೆಳವಣಿಗೆ ಕಾಣುತ್ತೀರಿ. ಆಸ್ಪತ್ರೆ, ನರ್ಸಿಂಗ್ ಸಿಬ್ಬಂದಿಗೆ ಉತ್ತಮ ವರ್ಷ. ಕಮ್ಯೂನಿಕೇಶನ್ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಸಾಧನೆ ಮಾಡುವ ಅವಕಾಶ. ಕಾನೂನು ಇಲಾಖೆಯ ಸಿಬ್ಬಂದಿಗೆ ಅನುಕೂಲಕರ. ಆಂಜನೇಯ ಸ್ವಾಮಿ ದರ್ಶನ, ಆರಾಧನೆಯಿಂದ ಲಾಭದಾಯಕ ಆಗಲಿದೆ.
ಧನು ರಾಶಿ
ಈ ರಾಶಿಯ ಜನರಿಗೆ ಹಣಕಾಸು ವ್ಯವಸ್ಥೆ ಸುಧಾರಣೆ ಆಗಲಿದೆ. ನಿರೀಕ್ಷೆಗೂ ಮೀರಿದ ಹಣ ಸಂಪಾದನೆ ಆಗುತ್ತದೆ. ಪ್ರಯತ್ನಗಳೆಲ್ಲವೂ ಯಶಸ್ವಿಗೊಳ್ಳುತ್ತವೆ. ರಾಜಕಾರಣಿಗಳಿಗೆ ಗೌರವ, ಸ್ಥಾನಮಾನ ಲಬಿಸಲಿದೆ. ಮದುವೆ ಕಾರ್ಯಗಳು ಮಂಗಳವಾಗುತ್ತವೆ. ಕೋರ್ಟ್ ವ್ಯಾಜ್ಯಗಳಲ್ಲಿ ನಿಮ್ಮ ಪರವಾದ ತೀರ್ಪುಗಳು ಬರಲಿವೆ. ರೈತರು ರಾಗಿ, ಭತ್ತ, ಗೋಧಿ ಬೆಳೆದರೆ ಉತ್ತಮ ಫಲ ಲಬಿಸಲಿದೆ. ಜಗದೀಶ್ವರನ ಆರಾಧನೆ, ಬಿಲ್ವಪತ್ರೆಯ ಅರ್ಚನೆಯಿಂದ ಲಾಭ ತರಲಿದೆ.
ಮಕರ ರಾಶಿ
ಕಷ್ಟಪಟ್ಟು ಮಾಡುವ ಕೆಲಸಗಳೆಲ್ಲವೂ ಸಾಕಾರಗೊಳ್ಳುವ ಮೂಲಕ ಉತ್ತಮ ಲಾಭ ತಂದುಕೊಡಲಿದೆ. ಉತ್ತಮ ಮನಸ್ಸಿನಿಂದ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಸಂತೋಷ, ತೃಪ್ತಿದಾಯಕ ಜೀವನ ನಿಮ್ಮದಾಗುತ್ತದೆ. ಹೋಮ-ಹವನ, ತೀರ್ಥಯಾತ್ರೆಗೆ ಅವಕಾಶವಿದೆ. ಗಣಿಗಾರಿಕೆ ವೃತ್ತಿಯಲ್ಲಿರುವವರಿಗೆ ಹೆಚ್ಚು ಲಾಭ ಸಿಗಲಿದೆ. ವಿದ್ಯುತ್, ನೀರು ಪೂರೈಕೆ ಸಿಬ್ಬಂದಿಗೆ ತೃಪ್ತಿಕರ ಜೀವನ ಸಿಗಲಿದ್ದು, ಮೃತ್ಯುಂಜಯನ ಆರಾಧನೆಯಿಂದ ಲಾಭ ಸಿಗಲಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಜನಿಸಿದವರಿಗೆ ಸಾಡೇಸಾತಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಮಸ್ಯೆಗಳು ಕಾಡುತ್ತವೆ ಬಳಿಕ ನಿವಾರಣೆ ಆಗುತ್ತವೆ. ಚಾಲಕ ವೃತ್ತಿ ಮಾಡುವವರಿಗೆ ಲಾಭವಿದ್ದು, ಆರೋಗ್ಯ, ಕೆಮಿಕಲ್ಸ್ ಉದ್ಯಮದಲ್ಲಿ ಇರುವ ಜನರಿಗೆ ಲಾಭ ಲಭಿಸಲಿದೆ. ಕೋರ್ಟ್ ವ್ಯಾಜ್ಯಗಳು ಇತ್ಯರ್ಥಗೊಳ್ಳುತ್ತವೆ. ಸರ್ಕಾರಿ ಯೋಜನೆಗಳು ಕೈಗೂಡುತ್ತವೆ. ಶ್ರೀ ಶನೇಶ್ವರನ ಪೂಜೆ, ನವಗ್ರಹ ಪೂಜೆಯಿಂದ ಲಾಭ ನಿಮ್ಮದಾಗಲಿದೆ.
ಮೀನ ರಾಶಿ
ಮೀನರಾಶಿಯ ಜನರು ಭಯಪಡುವ ಅಗತ್ಯವೇ ಇಲ್ಲ. ಬಹುದಿನಗಳಿಂದ ಇರುವ ಬೇಡಿಕೆ ಈಡೇರುತ್ತದೆ. ಸೂಕ್ತ ವಯಸ್ಕರಿಗೆ ಮದುವೆ ಭಾಗ್ಯ ಇರುತ್ತದೆ. ವಿದೇಶದ ಶಿಕ್ಷಣ, ಉದ್ಯೋಗ ಲಾಭ ಸಿಗುತ್ತದೆ. ಧರ್ಮಸ್ಥಳ ಮಂಜುನಾಥ, ಗಾಣಗಾಪುರ ದತ್ತಾತ್ರೇಯನ ದರ್ಶನದಿಂದ ಲಾಭ ಸಿಗಲಿದೆ.