ತನ್ನ ಪಾರ್ಟ್ನರ್ ಅನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಯೆಮೆನ್ ದೇಶದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯ ಅವರ ತಾಯಿ ಯೆಮೆನ್ ಗೆ ಹೋಗಲು ಅನುಮತಿ ನೀಡಲು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ.
ಏಕೆಂದರೆ ಪ್ರಸ್ತುತ ಭಾರತೀಯ ರಾಜತಾಂತ್ರಿಕರು ಅಲ್ಲಿ ಇಲ್ಲ. ಹಾಗಾಗಿ ಭದ್ರತಾ ದೃಷ್ಟಿಯಿಂದ ಯೆಮೆನ್ಗೆ ಹೋಗುವುದು ಸರಿಯಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಸಂತ್ರಸ್ತ ವ್ಯಕ್ತಿಯ ಕುಟುಂಬಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮಗಳ ಮರಣ ದಂಡನೆ ಶಿಕ್ಷೆಯನ್ನು ತಪ್ಪಿಸಬೇಕೆಂಬ ಕನಸಿನಲ್ಲಿ ನಿಮಿಷಾ ತಾಯಿ ಇದ್ದಾರೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಮಗೆ ಸಹಾಯ ಮಾಡದಿದ್ದರೆ ನಿಮಿಷಾರನ್ನು ಉಳಿಸಲು ನಮಗೆ ಸಾಧ್ಯವಿಲ್ಲ ಎಂದು ಅವರ ವಕೀಲರು ಹೇಳಿದ್ದಾರೆ.
ಅದಾಗ್ಯೂ, ನಿಮಿಷಾ ತಾಯಿಯನ್ನು ಯೆಮನ್ಗೆ ಕಳುಹಿಸಲು ವಿದೇಶಾಂಗ ಇಲಾಖೆ ನಿರಾಕರಿಸಿದೆ.
ಯೆಮನ್ನಲ್ಲಿ ಅಂತರ್ಯುದ್ಧದ ಕಾರಣ, ಭಾರತೀಯ ರಾಯಭಾರ ಕಚೇರಿಯನ್ನು ಜಿಬೌಟಿಗೆ ಸ್ಥಳಾಂತರಿಸಲಾಗಿದೆ. ಯಮನ್ನ ಹೊಸ ವ್ಯವಸ್ಥೆಯೊಂದಿಗೆ ನಾವು ಯಾವುದೇ ಅಧಿಕೃತ ಸಂಬಂಧವನ್ನು ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಯೆಮೆನ್ಗೆ ಹೋಗಲು ನಿಮಗೆ ಅನುಮತಿಸಲಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.
ನಿಮಿಷಾ ಪ್ರಿಯಾ ಅವರು ತನ್ನ ವ್ಯಾಪಾರಿ ಪಾರ್ಟ್ನರ್ ನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಯೆಮನ್ ಜೈಲಿನಲ್ಲಿದ್ದಾರೆ. ಅಲ್ಲಿನ ನ್ಯಾಯಾಲಯ ಆಕೆಗೆ ಮರಣದಂಡನೆ ವಿಧಿಸಿದೆ.
ಯೆಮೆನ್ ಪ್ರಜೆಯಾದ ತಲಾಲ್ ಅಬ್ದೋ ಮೆಹದಿ ಜೊತೆ ಆಸ್ಪತ್ರೆಯನ್ನು ಆರಂಭಿಸಿದ್ದ ನಿಮಿಷಾ, ಅರಿವಳಿಕೆ ಇಂಜೆಕ್ಷನ್ ಕೊಟ್ಟು ಆತನ ಕೊಲೆ ಮಾಡಿದ್ದರು.
ವ್ಯವಹಾರ ಸಂಬಂಧಿಸಿ ತಲಾಲ್ ಮತ್ತು ನಿಮಿಷಾ ನಡುವೆ ಉಂಟಾದ ಮನಸ್ತಾಪದಿಂದ, ತಲಾಲ್ ಆಕೆ ಪಾಸ್ ಪೋರ್ಟ್ ಕಸಿದುಕೊಂಡಿದ್ದ. ತನ್ನ ಪಾಸ್ಪೋರ್ಟ್ ಪಡೆದು ಭಾರತಕ್ಕೆ ಹಿಂತಿರುಗಬೇಕೆಂದು ಬಯಸಿ, ತಲಾಲ್ ಗೆ ಅರಿವಳಿಕೆ ಚುಚ್ಚುಮದ್ದನ್ನು ನೀಡಿದ್ದರು. ಆದರೆ ತಲಾಲ್ ಮೃತಪಟ್ಟಿದ್ದು, ನಿಮಿಷಾ ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ತಲಾಲ್ ಶವವನ್ನು ವಿಲೇವಾರಿ ಮಾಡಿದ್ದಳು.
ನಾಲ್ಕು ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ. ನಿಮಿಷಾಳಿಗೆ ಮರಣದಂಡನೆಯನ್ನು ವಿಧಿಸಿದ ನ್ಯಾಯಾಲಯ, ಆಕೆಯ ಸಹಚರನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.






