ರಾಜ್ಯ ಸರ್ಕಾರ, ಅದರಲ್ಲೂ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆ ಅನ್ನಭಾಗ್ಯ. ನಾನು ಸಣ್ಣವನಾಗಿದ್ದಾಗ ಅನ್ನ ಊಟ ಮಾಡಲು ಹರಸಾಹಸ ಮಾಡಬೇಕಿತ್ತು. ಕೇವಲ ಹಬ್ಬಗಳಲ್ಲಿ ಮಾತ್ರ ಅನ್ನ ಕೊಡುತ್ತಿದ್ದರು. ನನಗೆ ಬಡವರ ಕಷ್ಟ ಗೊತ್ತು ಎನ್ನುವ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದರು. ಆ ಯೋಜನೆಯಲ್ಲಿ ಸಾಕಷ್ಟು ಲೋಪದೋಷಗಳು ಇವೆ. ಅದೇನೆಂದರೆ ಉಳ್ಳವರೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಆಗಿದ್ದಾರೆ. ಅದರ ಫಲವೇ ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗುವಂತೆ ಮಾಡಿದೆ.
ಎರಡೂವರೆ ಟನ್ ಅನ್ನಭಾಗ್ಯ ಅಕ್ಕಿ-ರಾಗಿ ಜಪ್ತಿ!
ಬೆಂಗಳೂರಿನ ಗಿರಿನಗರದಲ್ಲಿ ಬರೋಬ್ಬರಿ ಎರಡೂವರೆ ಟನ್ ಅಕ್ಕಿ ಹಾಗು ರಾಗಿಯನ್ನು ಜಪ್ತಿ ಮಾಡಿದ್ದಾರೆ. ಟಾಟಾ ಏಸ್ ವಾಹನದಲ್ಲಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಆಹಾರ ಇಲಾಖೆ ಇನ್ಸ್ಪೆಕ್ಟರ್ ದೊಡ್ಡಬಸವೇಗೌಡ ನೇತೃತ್ವದಲ್ಲಿ ದಾಳಿ ಮಾಡಿ ಅಕ್ಕಿಯನ್ನು ಸೀಜ್ ಮಾಡಲಾಗಿದೆ. ಗಿರಿನಗರ ಠಾಣೆಗೆ ದೂರು ನೀಡಿದ್ದು, ಆರೋಪಿಗಳು ಸೇರಿದಂತೆ ವಾಹನವನ್ನು ಜಪ್ತಿ ಮಾಡಿದ್ದಾರೆ. ಹೊಸಕೆರೆಹಳ್ಳಿಯ ಕೆಇಬಿ ಜಂಕ್ಷನ್ ಬಳಿ ಕಾರ್ಯಾಚರಣೆ ನಡೆಸಿದ್ದು, ಅಬು ಸೈಯ್ಯದ್, ತೌಸಿಫ್ ಪಾಷಾ, ಮೊಹಮದ್ ಫಿರೋಜ್ ಬಂಧಿತ ಆರೋಪಿಗಳು. ಬಂಧಿತರು ಬನಶಂಕರಿ ಭಾಗದಿಂದ ನಾಯಂಡಹಳ್ಳಿಗೆ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ.
ಖದೀಮರಿಗೆ ಅಕ್ಕಿ ಮಾರಾಟ ಮಾಡ್ತಿರೋದು ಯಾರು..?
ರಾಜ್ಯದಲ್ಲಿ ಮೂರು ಕೋಟಿಗೂ ಅಧಿಕ ಮಂದಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. ಅದರಲ್ಲಿ ಕೆಲವರು ಅಕ್ಕಿಯನ್ನು ತೆಗೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಕೇವಲ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳಲು ಬಳಸುತ್ತಾರೆ. ಇನ್ನು ಕೆಲವರು ಪಡಿತರ ಚೀಟಿಯ ಅಕ್ಕಿಯನ್ನು ಕೊಂಡುಕೊಳ್ತಾರೆ. ಆದರೆ ಆ ಅಕ್ಕಿ ಅವರ ಗಂಟಲಿನಲ್ಲಿ ಇಳಿಯಲ್ಲ. ಹೀಗಾಗಿ ಅಕ್ಕಿಯನ್ನು ಬೇಕಾಬಿಟ್ಟಿಯಾಗಿ ಸಿಕ್ಕಿದಷ್ಟು ಹಣಕ್ಕೆ ಮಾರಾಟ ಮಾಡುತ್ತಾರೆ. ಈ ಅಕ್ಕಿಯನ್ನು ಕಡಿಮೆ ಬೆಲೆಗೆ ತೆಗೆದುಕೊಳ್ಳುವ ಕಳ್ಳ ಮಾರುಕಟ್ಟೆಯೊಂದು ನಗರದಲ್ಲಿ ನಡೆಯುತ್ತಿದೆ. ಅಲ್ಲಿ ಅಕ್ಕಿ ಖರೀದಿ ಮಾಡಿ, ಮಿಲ್ಗಳಿಗೆ ಕಳುಹಿಸುವ ಖದೀಮರ ತಂಡ ಅಲ್ಲಿ ಪಾಲೀಶ್ ಮಾಡಿಸಿ, ಮತ್ತೆ ಮಾರುಕಟ್ಟೆಗೆ ಬೇರೆ ಬ್ರ್ಯಾಂಡ್ ಚೀಲಗಳಲ್ಲಿ ಕಳುಹಿಸಿ ಆದಾಯ ಮಾಡಿಕೊಳ್ತಾರೆ. ಪಡಿತರ ಅಕ್ಕಿಯನ್ನು ಮಾರಾಟ ಮಾಡುವ ಮೂರ್ಖರೇ ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಾರೆ.
ಪಡಿತರ ಅಂಗಡಿಗಳಲ್ಲೂ ನಡೆಯುತ್ತೆ ಗೋಲ್ಮಾಲ್..!
ಒಂದರ್ಧದಷ್ಟು ಜನರು ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಅಕ್ಕಿಯನ್ನು ತಂದು ಊಟ ಮಾಡುತ್ತಾರೆ. ಆದರೆ ಪಡಿತರ ಅಂಗಡಿ ಮಾಲೀಕರು ಅಕ್ಕಿ ಕಳ್ಳಸಾಗಣೆದಾರರ ಜೊತೆಗೆ ಕೈಜೋಡಿಸಿ ಬಡವರಿಗೆ ಅಕ್ಕಿಯನ್ನೇ ಕೊಡದೆ ಯಾಮಾರಿಸುತ್ತಾರೆ. ಒಮ್ಮೆ ಅಕ್ಕಿ ವಿತರಣೆ ಆರಂಭವಾದ ಬಳಿಕ ಸಂಪೂರ್ಣ ತಿಂಗಳು ಅಕ್ಕಿ ವಿತರಣೆ ಮಾಡಬೇಕು ಎಂದು ನಿಯಮ ಹೇಳುತ್ತದೆ. ಆದರೆ ನಾಮಕಾವಸ್ತೆಗೆ ಎರಡ್ಮೂರು ದಿನ ದಿನ ಅಕ್ಕಿ ಕೊಡುವ ಅಂಗಡಿ ಮಾಲೀಕರು, ಆ ಬಳಿಕ ಅಕ್ಕಿ ಮುಗಿದಿದೆ ಎನ್ನುವ ಉತ್ತರ ಹೇಳುತ್ತಾರೆ. ಅಕ್ಕಿ ಕೇಳಿಕೊಂಡು ಬರುವ ಜನರಿಂದ ಥಂಬ್ ಇಂಪ್ರೆಷನ್ (ಅಕ್ಕಿ ತೆಗೆದುಕೊಳ್ಳುವಾಗ ಕೊಡುವ ಹೆಬ್ಬೆಟ್ಟು ಒಪ್ಪಿಗೆ) ತೆಗೆದುಕೊಂಡು ಮುಂದಿನ ತಿಂಗಳು ಅರ್ಧದಷ್ಟು ಕೊಡುತ್ತೇವೆ ಎನ್ನುತ್ತಾರೆ. ಕಾಳಸಂತೆಗೆ ಅಕ್ಕಿಯನ್ನು ಮಾರಾಟ ಮಾಡುತ್ತಾರೆ. ಮುಂದಿನ ತಿಂಗಳು ಅಕ್ಕಿಯನ್ನು ಕೊಡುವಾಗ ಅರ್ಧದಷ್ಟು ಅಕ್ಕಿಯನ್ನು ಕಡಿತ ಮಾಡಿ ಕೊಡ್ತಾರೆ. ಇನ್ನೂ ಕೆಲವು ಕಡೆ ಅಕ್ಕಿಯನ್ನು ಕೊಡುವುದೇ ಇಲ್ಲ. ಇದು ಕಾಳಸಂತೆಯ ಕರಾಮತ್ತು.

ನ್ಯಾಯಬೆಲೆ ಅಂಗಡಿಯಲ್ಲಿ ಬೇರೆ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಆದರೂ ಬೆಂಗಳೂರಿನಲ್ಲಿ ನೂರಿನ್ನೂರು ರೂಪಾಯಿಗೆ ಬೇರೆ ವಸ್ತುಗಳನ್ನು ಕೊಂಡುಕೊಳ್ಳಬೇಕು ಎಂದು ಒತ್ತಡ ಹೇರುತ್ತಾರೆ. ಒಂದು ವೇಳೆ ಬೇರೆ ವಸ್ತುಗಳನ್ನು ಕೊಂಡುಕೊಳ್ಳದೆ ಹೋದರೆ ಅಕ್ಕಿಯನ್ನು ಕೊಡುವುದೇ ಇಲ್ಲ. ಅನ್ನಭಾಗ್ಯ ಯೋಜನೆ ಉದ್ದೇಶ ಹಳ್ಳ ಹಿಡಿಯುತ್ತಿದೆ. ಪಡಿತರ ಅಂಗಡಿ ಮಾಲೀಕರ ಧನದಾಹಕ್ಕೆ ಕಡಿವಾಣ ಹಾಕದ ಹೊರತು ಬಡವರಿಗೆ ಬರೆ ಹಾಕುವ ಕೆಲಸ ನಿಲ್ಲುವುದಿಲ್ಲ. ಸಿದ್ದರಾಮಯ್ಯ ಅವರ ಕನಸು ನನಸಾಗಬೇಕಿದ್ದರೆ ಬುಡದಲ್ಲೇ ಸಮಸ್ಯೆಗೆ ಚಿಕಿತ್ಸೆ ಕೊಡಬೇಕಿದೆ. ಪಡಿತರ ಅಂಗಡಿಯಲ್ಲಿ ನಡೆಯುವ ಕಳ್ಳಾಟವನ್ನು ಬಲಿ ಹಾಕಬೇಕಿದೆ. ಇಲ್ಲದಿದ್ದರೆ ನುಂಗಣ್ಣರ ಲೋಕದಲ್ಲಿ ಬಡವರು ಬಡವರಾಗಿಯೇ ಜೀವನ ಮಾಡಬೇಕಾಗುತ್ತದೆ.





