ಲಲಿತ ಕಲೆಗಳ ಯಾವುದೇ ಪ್ರಕಾರವಾದರೂ ಅದು ಸಮಾಜದ ಒಡಲಲ್ಲಿ ಸುಪ್ತವಾಗಿರಬಹುದಾದ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯ ತಂತುಗಳನ್ನು ಬಾಹ್ಯ ಸಮಾಜದ ಮುಂದಿರಿಸುವ ಮೂಲಕ ನೋಡುವವರ, ಆಲಿಸುವವರ, ಆಸ್ವಾದಿಸುವವರ ಹೃದಯಗಳಲ್ಲಿ ಹೊಸ ಚಿಂತನೆಯ ಅಲೆಗಳನ್ನು ಸೃಷ್ಟಿಸುತ್ತವೆ. ಸಂಗೀತ, ಕಾವ್ಯ, ಶಿಲ್ಪಕಲೆ, ಚಿತ್ರಕಲೆಗಳೊಂದಿಗೆ ಪ್ರದರ್ಶನ ಕಲೆಯಾಗಿ ಜನಮಾನಸದ ಅಂತರ್ ಪ್ರಜ್ಞೆಯನ್ನು ಸದಾ ಜಾಗೃತಾವಸ್ಥೆಯಲ್ಲೇ ಇರಿಸುವ ಒಂದು ಕಲಾ ಪ್ರಕಾರವಾಗಿ ನಾಟಕರಂಗ ಅಥವಾ ರಂಗಭೂಮಿ ತನ್ನ ಶತಮಾನಗಳ ನಡಿಗೆಯನ್ನು ಇಂದಿಗೂ ಪ್ರಸ್ತುತವಾಗಿರಿಸಿಕೊಂಡಿದೆ. ರಂಗ ಪ್ರಯೋಗಗಳ ಮೂಲಕ ಸಮಾಜದ ಒಳ ಹೊರಗುಗಳನ್ನು, ಅಂತರ್ ಭೇದಗಳನ್ನು, ಆಯಾಕಾಲದ ಪಲ್ಲಟ ಹೊರಳುಗಳನ್ನು ಸಮಾಜದ ಮುಂದೆ ತೆರೆದಿಡುತ್ತಾ, ಮತ್ತಾವುದೋ ಕಾರಣಗಳಿಂದ ಜಡಗಟ್ಟಿರಬಹುದಾದ ಮನುಜ ಪ್ರಜ್ಞೆಯನ್ನು ಪುನಃಪುನಃ ಬಡಿದೆಬ್ಬಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಲೇ ಬಂದಿದೆ. ಐರೋಪ್ಯ ರಾಷ್ಟ್ರಗಳಷ್ಟೇ ಅಲ್ಲದೆ ಭಾರತದಲ್ಲೂ ನಾಟಕ ಪ್ರಯೋಗಗಳು ಕಾಲಾನುಕಾಲದಿಂದ ಇಂತಹ ಪ್ರಯತ್ನಗಳನ್ನು ಮಾಡುತ್ತಲೇ ಉತ್ಕೃಷ್ಟತೆಯನ್ನು ಪಡೆದುಕೊಂಡಿದೆ.
ಕನ್ನಡ ರಂಗಭೂಮಿ ಈ ಉತ್ಕೃಷ್ಟತೆಗೆ ಮತ್ತಷ್ಟು ಔನ್ನತ್ಯವನ್ನು ಕಲ್ಪಿಸುವ ಹಾದಿಯಲ್ಲಿ ನೂರಾರು ಹೊಸ ಪ್ರಯೋಗಗಳಿಗೆ ತೆರೆದುಕೊಂಡು, ನೆಲ-ಜಲ-ಭಾಷಾ ಗಡಿಗಳಿಂದಾಚೆಗಿನ ಕಥಾವಸ್ತುಗಳನ್ನು, ರಂಗವಸ್ತುಗಳನ್ನು ಕನ್ನಡಕ್ಕೆ ಅಳವಡಿಸಿ, ರೂಪಾಂತರಗೊಳಿಸಿ, ಕನ್ನಡದ ಸಾಂಸ್ಕೃತಿಕ ಚಿಂತನಾ ವಾಹಿನಿಗಳಿಗೆ ಅನುಸಾರವಾಗಿ ತನ್ನ ಗಜ ನಡಿಗೆಯನ್ನು ಗುರುತಿಸಿಕೊಂಡಿದೆ. ಈ ದೀರ್ಘನಡಿಗೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾ ಉತ್ಕೃಷ್ಟಗೊಳಿಸುತ್ತಿರುವ ಮೈಸೂರಿನ ರಂಗಕಲಾವಿದರ ವಿಭಿನ್ನ, ವಿಶಿಷ್ಟ ಪ್ರಯೋಗಗಳು ರಂಗಾಸಕ್ತರ, ಸಾಹಿತ್ಯಾಸಕ್ತರ ಹಾಗೂ ಸಂವೇದನಾಶೀಲರ ಮನಸುಗಳನ್ನು ಗೆಲ್ಲುತ್ತಲೇ ಬಂದಿವೆ. ಈ ಹಾದಿಯಲ್ಲೇ ಹೆಮ್ಮೆಯಿಂದ ಸೇರ್ಪಡಿಸಬಹುದಾದ ಒಂದು ಪ್ರಯೋಗ ಶ್ರೀಯುತ ಮಂಡ್ಯ ರಮೇಶ್ ಅವರ ನಿರ್ದೇಶನದಲ್ಲಿ ರೂಪುಗೊಂಡಿರುವ “ಅಂಧಯುಗ” ನಾಟಕ. ನಟನ ರಂಗಮಂದಿರದಲ್ಲಿ ಎರಡನೆ ಪ್ರದರ್ಶನಗೊಂಡ (29-10-2023) ಈ ನಾಟಕ ಒಟ್ಟಾರೆ ರಂಗಪ್ರತಿಭೆಗೆ ಹಿಡಿದ ಕೈಗನ್ನಡಿ ಎಂದರೆ ಅತಿಶಯೋಕ್ತಿಯಾಗಲಾರದು.
ಮೂಲ ಕೃತಿಯ ಸಮಕಾಲೀನ ಆಶಯ
ಖ್ಯಾತ ಕಾದಂಬರಿಕಾರ, ನಾಟಕಕಾರ ಹಾಗೂ ಕವಿ ಧರ್ಮವೀರ್ ಭಾರತಿ(1926-1997) ಅವರಿಂದ 1953-54ರಲ್ಲಿ ರಚಿಸಲ್ಪಟ್ಟ “ಅಂಧಾಯುಗ್” ನಾಟಕ ಮೂಲತಃ ದೇಶದ ವಿಭಜನೆಯ ದುರಂತದ ಹಿನ್ನೆಲೆಯಲ್ಲಿ ರಚನೆಯಾದ ಒಂದು ಸಂವೇನಾಶೀಲ ಕೃತಿ. ವಿಭಜನೆಯ ಸಂದರ್ಭದಲ್ಲಿ ಕಂಡುಬಂದಂತಹ ದ್ವೇಷ, ಸಿಟ್ಟು, ಅಸಹನೆ, ಹಿಂಸೆ, ಕ್ರೌರ್ಯ, ಪ್ರತೀಕಾರ ಹಾಗೂ ಪರಸ್ಪರ ಸೇಡಿನ ಮನಸ್ಥಿತಿಗಳನ್ನು ಹಾಗೂ ಇವುಗಳಿಂದ ಸಮಾಜವೊಂದು ಎದುರಿಸಬೇಕಾಗುವ ಮನುಜ ಸೂಕ್ಷ್ಮ ಸಂಕೀರ್ಣತೆಗಳನ್ನು ನಾಟಕಕಾರ ಧರ್ಮವೀರ್ ಭಾರತಿ ಮಹಾಭಾರತ ಯುದ್ಧದ ಕೊನೆಯ ದಿನದ ತಲ್ಲಣಗಳ ಮೂಲಕ ಗುರುತಿಸುತ್ತಾರೆ. ಮನುಷ್ಯನಲ್ಲಿ ಅಂತರ್ಗತವಾಗಿರಬಹುದಾದ ಅಥವಾ ಪ್ರಭಾವಿತವಾಗಿರಬಹುದಾದ ದ್ವೇಷಾಸೂಯೆಗಳು ಸೇಡು ಪ್ರತೀಕಾರಗಳಿಗೆ ಎಡೆ ಮಾಡಿಕೊಟ್ಟಾಗ ಒಂದು ಸಮಾಜವು ಹೇಗೆ ವಾಸ್ತವಗಳಿಗೆ ಕುರುಡಾಗುತ್ತದೆ, ಭವಿಷ್ಯಕ್ಕೆ ವಿಮುಖವಾಗುತ್ತದೆ ಮತ್ತು ವರ್ತಮಾನದ ಸ್ಥಿತಿಗತಿಗಳಿಗೆ ವ್ಯತಿರಿಕ್ತವಾಗಿ ಸಾಗುತ್ತದೆ ಎನ್ನುವುದನ್ನು ಮಹಾಭಾರತದ ಕಥನದ ಮೂಲಕ ಸಮಕಾಲೀನಗೊಳಿಸುವ ಕೃತಿಕಾರರು “ಅಂಧಯುಗ”ದಲ್ಲಿ ಕಣ್ಣಿದ್ದೂ ಕುರುಡಾಗುವ ಅಸೂಕ್ಷ್ಮ ಮನಸುಗಳನ್ನು ಜಾಗೃತಗೊಳಿಸುತ್ತಾರೆ.
ಈ ನಾಟಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ತಿಪ್ಪೇಸ್ವಾಮಿ ಅವರು ಯತಾರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಇಡೀ ನಾಟಕವನ್ನು ಕಾವ್ಯಾತ್ಮಕವಾಗಿಸಿದ್ದಾರೆ. ಕಾವ್ಯ ನಾಟಕವೊಂದನ್ನು ಸಾದೃಶ್ಯಗೊಳಿಸುವ ನಿಟ್ಟಿನಲ್ಲಿ ಮಂಡ್ಯ ರಮೇಶ್ ಮತ್ತು ʼ ನಟನ ಮೈಸೂರುʼ ತಂಡ ಕನ್ನಡ ರಂಗಭೂಮಿಗೆ “ ಅಂಧಯುಗ” ದ ಮೂಲಕ ಒಂದು ಅದ್ಭುತ ನಾಟಕವನ್ನು ನೀಡಿದ್ದಾರೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಕೊನೆಯ ಹಂತದಲ್ಲಿ ಬಿಚ್ಚಿಕೊಳ್ಳುವ ಕಥಾವಸ್ತು ಕೌರವ ಸೇನೆಯ ನಾಶ, ದ್ವೇಷಾಗ್ನಿಗೆ ಹೊತ್ತಿ ಉರಿಯುವ ಹಸ್ತಿನಾಪುರ, ಕುರುಕ್ಷೇತ್ರ ರಣಾಂಗಣದಲ್ಲಿ ಚೆಲ್ಲಾಡುವ ಸಾವಿರಾರು ಹೆಣಗಳು, ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳುವ ಅಶ್ವತ್ಥಾಮನ ಕ್ರೊಧಾಗ್ನಿ ಮತ್ತು ಸೇಡು ಪ್ರತೀಕಾರದ ಕ್ರಮ, ಪುತ್ರಶೋಕದಿಂದ ಜರ್ಝರಿತಳಾಗಿ ತನ್ನೊಳಗಿನ ಮಾತೃ ಸಂವೇದನೆಯನ್ನೂ ಮೀರಿ ಕೃಷ್ಣನನ್ನೂ ಶಾಪಗ್ರಸ್ತನನ್ನಾಗಿ ಮಾಡುವ ಗಾಂಧಾರಿ, ಧೃತರಾಷ್ಟ್ರನ ಅಸಹಾಯಕತೆ, ಸಂಜಯನ ಪ್ರಲಾಪ, ನ್ಯಾಯ ಸತ್ಯದ ಪರ ನಿಲ್ಲುವ ಯುಯುತ್ಸು ಎದುರಿಸುವ ಸಮಾಜದ ಕಿಡಿನುಡಿಗಳು ಇವೆಲ್ಲವನ್ನೂ ಐದು ಅಂಕಗಳಲ್ಲಿ ಹೊರಗೆಡಹುತ್ತದೆ. ಸಮಸ್ತ ಮನುಕುಲವನ್ನೇ ಅಂತ್ಯಗೊಳಿಸುವ ಅಶ್ವತ್ಥಾಮನ ಪಾಂಡವ ದ್ವೇ಼ಷ ಅವನನ್ನು ಭ್ರೂಣ ಹತ್ಯೆಯ ಶಾಪಕ್ಕೆ ಈಡಾಗುವಂತೆ ಮಾಡುವುದು ಸಮಕಾಲೀನ ಸಂದರ್ಭದ ಮತಾಂಧತೆಯ ರುದ್ರ ನರ್ತನಗಳ ನಡುವೆ ರೂಪಕದಂತೆ ಕಾಣುತ್ತದೆ.
ಭಾರತದ ಸಮಕಾಲೀನ ಇತಿಹಾಸದಲ್ಲಿ ವಿಭಜನೆಯ ಗಾಯಗಳು ಶತಮಾನಗಳವರೆಗೂ ಕಾಡುವ ಒಂದು ವಿದ್ಯಮಾನ. ವಿಭಜನೆ ಎನ್ನುವುದು ಭೌಗೋಳಿಕ ಪ್ರಕ್ರಿಯೆಯಾದರೂ ಆ ಸಂದರ್ಭದಲ್ಲಿ ಎರಡೂ ಬದಿಯಲ್ಲಿ ಕಂಡುಬಂದ ಮತೀಯ ಉನ್ಮಾದ, ಉನ್ಮತ್ತ ರಾಷ್ಟ್ರೀಯತೆ, ಸೇಡು ಪ್ರತೀಕಾರಗಳ ದ್ವೇಷಾಸೂಯೆಗಳು ಹಾಗೂ ಮನುಕುಲವೇ ನಾಚುವಂತೆ ಮಾಡಿದ ಅಮಾನುಷ ಹಿಂಸಾಕೃತ್ಯಗಳು ಈ ಗಾಯಗಳಿಂದ ಸ್ರವಿಸುವ ಕೀವು ನೆತ್ತರನ್ನು ನಮ್ಮ ನಡುವೆ ಶಾಶ್ವತ ರೂಪಕಗಳಾಗಿ ಸ್ಥಾಪಿಸಿಬಿಟ್ಟಿವೆ. ದುರಂತ ಎಂದರೆ ಈ ತೆರೆದ ಗಾಯಗಳೂ ನಮ್ಮ ಸಂವೇದನೆಯನ್ನು ಸೂಕ್ಷ್ಮಗೊಳಿಸಲಾಗಿಲ್ಲ, ನಮ್ಮೊಳಗಿನ ಮನುಜ ಪ್ರಜ್ಞೆಯನ್ನು ಎಚ್ಚರಿಸಲಾಗಿಲ್ಲ ಎನ್ನುವುದನ್ನು ಕಳೆದ ಐದಾರು ದಶಕಗಳ ಕೋಮು ಗಲಭೆಗಳು, ಮತೀಯ ಸಂಘರ್ಷಗಳು, ತತ್ಸಂಬಂಧಿತ ಹತ್ಯಾಕಾಂಡಗಳು ಹಾಗೂ ಈಗ ನಡೆಯುತ್ತಿರುವ ಉಕ್ರೇನ್-ರಷಿಯಾ, ಇಸ್ರೇಲ್—ಹಮಾಸ್ ಯುದ್ಧಗಳು ಸಾಬೀತುಪಡಿಸುತ್ತಿವೆ.
ಯುದ್ಧ ಮತ್ತು ಮಾನವ ಸಂವೇದನೆ
ಯುದ್ಧೋನ್ಮಾದದ ಅಲೆಯಲ್ಲಿ ಸಿಲುಕಿ ಮನುಜ ಸಹಜ ಜೀವಪ್ರೀತಿಯನ್ನೂ ಪ್ರಜ್ಞಾಪೂರ್ವಕವಾಗಿಯೇ ಕಳೆದುಕೊಳ್ಳುತ್ತಿರುವ ಆಧುನಿಕ-ಡಿಜಿಟಲ್ ನಾಗರಿಕ ಜಗತ್ತು ಒಂದು ರೀತಿಯಲ್ಲಿ ಅಂಧಯುಗದತ್ತಲೇ ಸಾಗುತ್ತಿರುವುದನ್ನು ಈ ನಾಟಕವೂ ಸೂಚ್ಯವಾಗಿ ತಿಳಿಸಿಕೊಡುತ್ತದೆ. ಇಂದಿಗೂ ನಮ್ಮ ನಡುವೆ ಧೃತರಾಷ್ಟ್ರರಿದ್ದಾರೆ, ಪುತ್ರಶೋಕದಿಂದ ನರಳುವ ಗಾಂಧಾರಿಯರಿದ್ದಾರೆ, ವಿವೇಕ-ವಿವೇಚನೆಯ ವಿದುರರಿದ್ದಾರೆ, ಹಿಂಸಾತ್ಮಕ ಯುದ್ಧಗಳನ್ನೂ ರೋಚಕವಾಗಿ ವಿವರಿಸಿ ಪರಿತಪಿಸುವ ಸಂಜಯರಿದ್ದಾರೆ, ಸೇಡು ಪ್ರತೀಕಾರದ ಜ್ವಾಲೆಯಲ್ಲಿ ಬೆಂದು ವ್ಯಷ್ಟಿಯ ಪ್ರಮಾದಗಳಿಗೆ ಸಮಷ್ಟಿಯನ್ನೇ ನಾಶಪಡಿಸಲು ಮುಂದಾಗುವ ಅಶ್ವತ್ಥಾಮರಿದ್ದಾರೆ. “ಅಂಧಯುಗ” ನಾಟಕದ ಮೂಲಕ ಮಂಡ್ಯ ರಮೇಶ್ ಈ ಎಲ್ಲ ಸುಡು ವಾಸ್ತವಗಳನ್ನು ಮೂಲ ಕಥಾವಸ್ತುವಿಗೆ ಚ್ಯುತಿ ಬಾರದಂತೆ ಪ್ರೇಕ್ಷಕರ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಯುದ್ಧ ಕೊಲ್ಲುವುದು ಮನುಷ್ಯರನ್ನಲ್ಲ ಮನುಜ ಪ್ರಜ್ಞೆಯನ್ನು, ನಾಶಪಡಿಸುವುದು ಒಂದು ಸಮಾಜವನ್ನಲ್ಲ ಇಡೀ ನಾಗರಿಕತೆಯನ್ನು ಎಂಬ ಮಾರ್ಮಿಕ ಸತ್ಯವನ್ನು “ ಅಂಧಯುಗ ” ತೆರೆದಿಡುತ್ತದೆ.
ತಮ್ಮವರನ್ನು ಕಳೆದುಕೊಳ್ಳುವ ಮನುಷ್ಯ ತನ್ನ ಪ್ರತೀಕಾರ ತೀರಿಸಿಕೊಳ್ಳಲು ಅನ್ಯರನ್ನು ಗುರುತಿಸುವುದೇ ಅಲ್ಲದೆ, ಈ ಕೇಡಿನ ಕೃತ್ಯಗಳಿಗೆ ಎಂತಹ ಅಮಾನುಷತೆಗೂ ಮುಂದಾಗಲು ಹೇಸುವುದಿಲ್ಲ ಎಂಬ ಕಟು ವಾಸ್ತವವನ್ನು “ಅಂಧಯುಗ” ದ ಅಶ್ವತ್ಥಾಮನ ಮುಖೇನ ಬಿಂಬಿಸಲಾಗಿದೆ. ಸಿಟ್ಟು, ಆಕ್ರೋಶ ಮತ್ತು ಸೇಡು ಮನುಷ್ಯನ ವಿವೇಕ ಮತ್ತು ವಿವೇಚನೆಯನ್ನು ಕಸಿದುಕೊಳ್ಳುವ ಹಾಗೆಯೇ ಅನ್ಯರ ಕ್ರೌರ್ಯದಿಂದ ತನ್ನವರನ್ನು ಕಳೆದುಕೊಳ್ಳುವ ತಾಯಿ ಹೃದಯವನ್ನೂ ವಿಚಲಿತಗೊಳಿಸಿ ಕ್ರೌರ್ಯಾವಸ್ಥೆಗೆ ದೂಡಿಬಿಡುತ್ತದೆ. “ ಅಂಧಯುಗ ”ದ ಗಾಂಧಾರಿ ಈ ತಲ್ಲಣ-ತಳಮಳವನ್ನು ಎದುರಿಸುವ ಒಬ್ಬ ತಾಯಿಯಾಗಿ ಕಾಣುತ್ತಾಳೆ. ಪುತ್ರಶೋಕದಿಂದ ತಪ್ತಳಾದ ಗಾಂಧಾರಿ, ಮಕ್ಕಳ ಹಂತಕರೊಡನೆ ಗುರುತಿಸಿಕೊಳ್ಳುವ ತನ್ನ ಬದುಕುಳಿದ ಒಬ್ಬ ಮಗನ ಮುಖ ನೋಡಲೂ ಹಿಂಜರಿಯುವುದು ಆನಂತರ ಅದೇ ಯುಯುತ್ಸು ವಂಶವಾಹಕನಾಗಿ ಒಬ್ಬನಾದರೂ ಉಳಿಯಲಿ ಎಂದು ಬಯಸುವುದು ಯಾವುದೇ ತಾಯಿ ಹೃದಯದಲ್ಲಿ ಸಂಭವಿಸಬಹುದಾದ ಸಹಜ ತಳಮಳ ಮತ್ತು ಅಭೀಪ್ಸೆಗಳನ್ನು ಅಭಿವ್ಯಕ್ತಿಸುತ್ತದೆ.
ವಿವೇಕ ಮತ್ತು ವಿವೇಚನೆಯನ್ನು ಕಳೆದುಕೊಂಡ ಒಂದು ನಾಗರಿಕತೆ ಹೇಗೆ ತನ್ನ ನಾಶಕ್ಕೆ ತಾನೇ ಪ್ರತ್ಯಕ್ಷದರ್ಶಿಯಾಗಬಹುದು ಎನ್ನಲು ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧ ಒಂದು ನಿದರ್ಶನ. ಇಂತಹ ಹಲವು ಘಟನೆಗಳಿಗೆ ಸಾಕ್ಷಿಯಾಗಿರುವ ಸ್ವತಂತ್ರ ಭಾರತದಲ್ಲಿ ಮತಾಂಧತೆಯಿಂದ ಪ್ರೇರಿತವಾದ ಯುದ್ಧೋನ್ಮಾದ ಈಗ ರಣಾಂಗಣಗಳಿಗಿಂತಲೂ ಮನೆಯ ಅಂಗಳಗಳಲ್ಲಿ ಮೊಳಕೆಯೊಡೆಯುತ್ತಿದೆ. ದೂರದ ಯುದ್ಧದಲ್ಲಿ ಅಥವಾ ಸಮೀಪದ ಘರ್ಷಣೆಯಲ್ಲಿ ಸಂಭವಿಸುವ ಸಾವುಗಳನ್ನು ಸಾಪೇಕ್ಷವಾಗಿ ನೋಡುತ್ತಾ, ಸತ್ತವರು ಯಾರು ಎಂಬ ಪ್ರಶ್ನೆಯನ್ನೇ ಪ್ರಧಾನವಾಗಿಸುತ್ತಿರುವ ನಾಗರಿಕ ವಲಯ, ಸಾವುಗಳು ಸಂಭವಿಸುವುದೇಕೆ ಎಂದು ಯೋಚಿಸುವ ವ್ಯವಧಾನವನ್ನೂ ಕಳೆದುಕೊಂಡಿದೆ. ಈ ವಿಕೃತಿಗಳಿಗೆ ಇಡೀ ಸಮಾಜವೇ ಮೂಕ ಪ್ರೇಕ್ಷಕನಂತಿರುವುದು ಅಥವಾ ಜಾಣಕುರುಡಾಗಿರುವುದು ವರ್ತಮಾನದ ವಾಸ್ತವ. “ ಅಂಧಯುಗ ” ಇದನ್ನೇ ಬಿಂಬಿಸುವಂತಿದೆ.
“ಅಂಧಯುಗ” ನಾಟಕದ ಒಂದು ದೃಶ್ಯದಲ್ಲಿ “ಮೂಕನಲ್ಲದೆ ಮತ್ತಾರು ನನಗೆ ಜೈಕಾರ ಹೇಳಲು ಸಾಧ್ಯ” ಎಂದು ಹೇಳುವ ಧೃತರಾಷ್ಟ್ರ ಸಮಕಾಲೀನವಾಗಿ ಇಂತಹುದೇ ಆಳ್ವಿಕೆಯ ಸನ್ನಿವೇಶಗಳನ್ನು ಬಿಂಬಿಸುತ್ತಾನೆ. ಸಾವಿರಾರು ಗಾಂಧಾರಿಯರು ತಮ್ಮ ಪುತ್ರಶೋಕದ ನೋವು ನುಂಗಿಕೊಂಡು ತಾವಾಡುವ ಆಕ್ರೋಶದ ನುಡಿಗಳಿಗಾಗಿ ಪರಿತಪಿಸುತ್ತಿದ್ದರೂ, ನೂರಾರು ಅಶ್ವತ್ಥಾಮರು ಸೇಡಿನ ಕಿಡಿಗಳನ್ನು ಮಹಾಜ್ವಾಲೆಗಳಾಗಿ ಪರಿವರ್ತಿಸುತ್ತಾ ಸಾಗುತ್ತಿದ್ದರೂ, ಈ ನಡುವೆ ಸತ್ಯ, ಧರ್ಮ ಹಾಗೂ ಮಾನವೀಯತೆಯ ಸಂವೇದನಾತ್ಮಕ ಆಶಯಗಳನ್ನು ನುಡಿಯುವ ವಿದುರನೂ ನಮ್ಮ ನಡುವೆ ಕಾಣುತ್ತಾನೆ. ಸತ್ಯದ ಹಾದಿ ಹಿಡಿದು ಬಾಹ್ಯ ಸಮಾಜದ ಅವಹೇಳನ-ಅಪಮಾನಕ್ಕೆ ಈಡಾಗುವ ಯುಯುತ್ಸು ನಮ್ಮ ನಡುವೆ ಓಡಾಡುತ್ತಿರುತ್ತಾನೆ. ಹಾಗೆಯೇ ದ್ವೇಷಾಸೂಯೆಗಳಿಗೆ, ಯುದ್ಧೋನ್ಮಾದ-ಯುದ್ಧಗಳಿಗೆ ಬಲಿಯಾಗುವುದು ಮನುಷ್ಯರಷ್ಟೇ ಅಲ್ಲ, ಸಸ್ಯ-ಪ್ರಾಣಿ ಸಂಕುಲಗಳೂ ಸದ್ದು ಮಾಡದೆ ನಾಶವಾಗುತ್ತಲೇ ಇರುತ್ತವೆ ಎಂಬ ದುರಂತ ವಾಸ್ತವವನ್ನು “ಅಂಧಯುಗ” ನಮ್ಮ ಮುಂದೆ ಹೃದಯಸ್ಪರ್ಶಿಯಾಗಿ ತೆರೆದಿಡುತ್ತದೆ.
ಹೃದಯಸ್ಪರ್ಶಿ ರಂಗ ಹಂದರ
“ ಅಂಧಯುಗ ” ಮೂಲ ಕನ್ನಡದ್ದೇ ಇರಬಹುದೇನೋ ಎನಿಸುವಂತೆ ಅನುವಾದಿತ ನಾಟಕದ ಕಥಾವಸ್ತುವನ್ನು ಕನ್ನಡಕ್ಕೆ ಅಳವಡಿಸಿರುವ ಮಂಡ್ಯ ರಮೇಶ್ ಮತ್ತು ಅವರ ತಂಡ ಮೂಲ ನಾಟಕದ ಕಾವ್ಯ ಸ್ವರೂಪವನ್ನೂ ಉಳಿಸಿಕೊಂಡಿದೆ. ಯುದ್ಧದ ಭೀಕರತೆ-ಅಮಾನುಷತೆಯನ್ನು ದೃಶ್ಯ ರೂಪಕಕ್ಕಿಂತಲೂ ಶ್ರವ್ಯ ರೂಪಕದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸುವ ಪ್ರಯತ್ನದಲ್ಲಿ ಸಂಗೀತ ನಿರ್ದೇಶನ ಮಾಡಿರುವ (ಗಾಂಧಾರಿ ಪಾತ್ರಧಾರಿ) ದಿಶಾ ರಮೇಶ್, ಗಾಂಧಾರಿಯ ಪಾತ್ರದಲ್ಲಿ ತಮ್ಮ ಭಾವನಾತ್ಮಕ ಅಭಿನಯದ ಮೂಲಕ ವಿಶೇಷ ಗಮನ ಸೆಳೆಯುತ್ತಾರೆ. ಅಶ್ವತ್ಥಾಮ (ಮೇಘ ಸಮೀರ) , ಯುಯುತ್ಸು ( ಅಭಿರಂಜನ್), ಸಂಜಯ (ಆರ್. ಎ. ಹೃತಿಕ್), ವಿದುರ (ಚೇತನ್ ಸಿಂಗಾನಲ್ಲೂರು), ಕೃತವರ್ಮ (ವಿಕಾಸ್ ವಿ.ಕ್ರಿ), ಧೃತರಾಷ್ಟ್ರ (ಸುದರ್ಶನ್ ಡಿ.ಸಿ) ತಮ್ಮ ಸಂಭಾಷಣೆ ಮತ್ತು ಆಂಗಿಕ ಅಭಿನಯದ ಮೂಲಕ ವಿಶಿಷ್ಟವಾಗಿ ನಿಲ್ಲುತ್ತಾರೆ. ಉಳಿದ ಕಲಾವಿದರೂ ತಮ್ಮ ನೈಜ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಸಮರ್ಪಕವಾದ ರಂಗ ಸಜ್ಜಿಕೆ, ಭಾರತ್ ಏಕ್ ಖೋಜ್ ಧಾರಾವಾಹಿಯನ್ನು ನೆನಪಿಸುವ ವಸ್ತ್ರ ವಿನ್ಯಾಸ ಹಾಗೂ ಪರಿಣಾಮಕಾರಿ ಬೆಳಕಿನ ವಿನ್ಯಾಸದೊಡನೆ, ಹೃದಯಸ್ಪರ್ಶಿ ಕಾವ್ಯರೂಪಿ ಹಿನ್ನೆಲೆ ಸಂಗೀತ “ ಅಂಧಯುಗ ” ನಾಟಕವನ್ನು ಗಂಭೀರವಾಗಿಸುವುದೇ ಅಲ್ಲದೆ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸಿ ಹಿಡಿದಿಡುತ್ತದೆ.
ಮೂಲ ಕಥಾವಸ್ತುವನ್ನು ಅತಿಯಾಗಿ ಸಮಕಾಲೀನಗೊಳಿಸದೆ ಸೂಚ್ಯವಾಗಿ ಕಾವಲುಗಾರರ ಸಂಭಾಷಣೆಯ ಮೂಲಕ ಸಮಕಾಲೀನ ರಾಜಕೀಯ ಸನ್ನಿವೇಶ ಹಾಗೂ ಕಾಡುತ್ತಿರುವ ಯುದ್ಧೋನ್ಮಾದದ ಮನಸ್ಥಿತಿಯನ್ನು ಬಿಂಬಿಸುವ ಮಂಡ್ಯ ರಮೇಶ್ ಅವರ “ಅಂಧಯುಗ” ನಾಟಕವು , ವಿನಾಶಕಾರಿ ಯುದ್ಧಪರಂಪರೆಯ ವಿಜೃಂಭಣೆಯ ನಡುವೆಯೇ ಮಾನವ ಸಮಾಜಕ್ಕೆ ಇರಬೇಕಾದ ನೈತಿಕತೆ ಹಾಗೂ ಮನುಷ್ಯ ಸಂವೇದನೆಯನ್ನು ನೇರವಾಗಿಯೇ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತದೆ. ಮೂಲ ಕೃತಿಯ ಈ ಆಶಯವನ್ನು ಕಾಪಾಡಿಕೊಂಡೇ ರಮೇಶ್ ಅವರ “ ಅಂಧಯುಗ ” ಕನ್ನಡ ರಂಗಭೂಮಿಗೆ ಒಂದು ಅಪೂರ್ವ ರಂಗ ಪ್ರಯೋಗವನ್ನು ಕೊಡುಗೆಯಾಗಿ ಮೂಡಿಬಂದಿದೆ. ಹಲವು ಯುವ ಕಲಾವಿದರನ್ನೊಳಗೊಂಡ ನಟನ ರಂಗ ತಂಡವು ವರ್ತಮಾನದ ವಿಷಮ ಸನ್ನಿವೇಶದಲ್ಲಿ ಅತ್ಯವಶ್ಯವಾಗಿರುವ ಮಾನವ ಸಂವೇದನೆ ಮತ್ತು ಮನುಜ ಸೂಕ್ಷ್ಮತೆಗಳನ್ನು ತೆರೆದಿಡಲು “ಅಂಧಯುಗ”ವನ್ನು ನಮ್ಮ ಮುಂದಿಟ್ಟಿದೆ. ಒಂದು ರೀತಿಯಲ್ಲಿ ಸುತ್ತಲಿನ ಸಮಾಜವನ್ನು ಕಾಡುತ್ತಿರುವ ಅಂಧತ್ವವನ್ನು ನಿರಾಕರಿಸುತ್ತಲೇ, ಕಣ್ತೆರೆಯಲು ನಿರಾಕರಿಸುವ ಸಮಾಜದ ಒಂದು ವರ್ಗವನ್ನು ಜಾಗೃತಗೊಳಿಸುವ ರಂಗಸಾಧನವಾಗಿಯೂ “ ಅಂಧಯುಗ ” ನಮ್ಮ ನಡುವಿನ ಅಪೂರ್ವ ನಾಟಕವಾಗಿ, ವರ್ತಮಾನದ ಸನ್ನಿವೇಶಕ್ಕೆ ಹೆಚ್ಚು ಪ್ರಸ್ತುತವಾಗಿ ನಿಲ್ಲುತ್ತದೆ.
ಹಲವು ಅಪೂರ್ವ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಇರುವ ಕನ್ನಡ ರಂಗಭೂಮಿಗೆ ನಟನ ರಂಗಶಾಲೆ ಮತ್ತು ಮಂಡ್ಯ ರಮೇಶ್ ತಂಡ ನೀಡಿರುವ ಅಮೂಲ್ಯ ಕೊಡುಗೆ “ಅಂಧಯುಗ”. ಕಣ್ಮುಚ್ಚಿರುವವರು ಕಣ್ತೆರೆಯಲು “ ಅಂಧಯುಗ ” ಪ್ರದರ್ಶನ ಕಲೆಯ ವಾಹಕವಾಗಿ ನಮ್ಮ ಮುಂದಿದೆ. ಎಲ್ಲರೂ ನೋಡಬೇಕಾದ ಪ್ರಯೋಗ. ಮಂಡ್ಯ ರಮೇಶ್ ಮತ್ತು ಅವರ ಸಮಸ್ತ ತಂಡ ಅಭಿನಂದನಾರ್ಹರು.
-೦-೦-೦-೦-