ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ನಾಯಕ ಇಂಜಮಾಮುಲ್ ಹಕ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನನ ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ, ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿರುವ ಮಾಹಿತಿಯನ್ನು ತಿಳಿಸಿದ್ದಾರೆ.
ಇಂದು ನಾನು ಮಂಡಳಿಯ ಬಳಿಗೆ ಹೋಗಿ ಯಾವುದೇ ಅನುಮಾನಗಳಿದ್ದರೆ ವಿಚಾರಣೆ ನಡೆಸುವಂತೆ ಕೇಳಿದೆ. ಆ ನಂತರ ಅವರು ಐದು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ ಎನ್ನುವ ಮಾಹಿತಿ ನನಗೆ ಬಂದಿತು ಎಂದು ಹಕ್ ಹೇಳಿದರು, ಸಮಿತಿಯು ತನಿಖೆ ಮತ್ತು ಅದರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವವರೆಗೆ ತಾವು ಹುದ್ದೆಯಿಂದ ಕೆಳಗಿಳಿಯಲು ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ವಿಚಾರಣೆ ಮುಗಿದ ನಂತರ ಪಿಸಿಬಿ ಜೊತೆ ಕುಳಿತುಕೊಳ್ಳಲು ಸಿದ್ಧ ಎಂದು ಅವರು ಹೇಳಿದರು.
ನಾವು ಕ್ರಿಕೆಟಿಗರು ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಲು ನಾವು ಎಲ್ಲಾ ಸಮಯದಲ್ಲೂ ಲಭ್ಯರಿದ್ದೇವೆ. ನಾನು ವಿಚಾರಣೆಯನ್ನು ಎದುರಿಸುತ್ತಿರುವ ಕಾರಣ ನಾನು ಈ ಹುದ್ದೆಯನ್ನು ತೊರೆಯಬೇಕು ಮತ್ತು ಅವರಿಗೆ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಅಧ್ಯಕ್ಷ ಇಂಜುಮಾಮ್ ಹೇಳಿದ್ದಾರೆ.
ಜನರು ಯಾವುದೇ ಪುರಾವೆಗಳಿಲ್ಲದೆ ಕಾಮೆಂಟ್‌ಗಳನ್ನು ಮಾಡುತ್ತಿರುವುದು ನೋವಿನ ಸಂಗತಿ ಎಂದು ಅವರು ಹೇಳಿದರು.
ಸತತ ಐದಾರು ವರ್ಷಗಳಿಂದ ಪಾಕಿಸ್ತಾನ್ ಕ್ರಿಕೆಟ್ ತಂಡ ಕೆಟ್ಟ ಪ್ರದರ್ಶನ ನೀಡಿದ್ದು, ಇದಕ್ಕೆ ಆಯ್ಕೆ ಸಮಿತಿಯೇ ಕಾರಣ ಎಂದು ಆರೋಪ ಕೇಳಿ ಬಂದಿತ್ತು.ಈಗ ವಿಶ್ವಕಪ್ ನಲ್ಲೂ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ಕಂಡಿದೆ.