ಕಾಂಗ್ರೆಸ್ ಇಬ್ಬರು ಘಟಾನುಘಟಿ ನಾಯಕರ ನಡುವೆ ಸಿಲುಕಿ ಒದ್ದಾಡುತ್ತಿದ್ಯಾ..? ಹೀಗೊಂದು ಅನುಮಾನ ಕಾಂಗ್ರೆಸ್ ಕಾರ್ಯಕರ್ತರು ಹಾಗು ಅಭಿಮಾನಿಗಳನ್ನು ಕಾಡುವುದಕ್ಕೆ ಶುರುವಾಗಿದೆ. 135 ಪ್ಲಸ್ ಒಂದು (ರೈತರ ಸಂಘ) 136 ಸ್ಥಾನಗಳಲ್ಲಿ ಭರ್ಜರಿ ಜಯ ದಾಖಲಿಸಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಬೇರೊಂದು ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆ ಇಲ್ಲ. ಆದರೂ ಡಿ.ಕೆ ಶಿವಕುಮಾರ್ ಬಣ ಆಗೊಮ್ಮೆ ಹೀಗೊಮ್ಮೆ ಆಪರೇಷನ್ ಕಮಲ ಅನ್ನೋ ಗುಮ್ಮವನ್ನು ಮಾಧ್ಯಮಗಳ ಎದುರು ಹೇಳುತ್ತಲೇ ಇದೆ. ಇದೀಗ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಇಂತಹದ್ದೇ ಒಂದು ಗುಮ್ಮವನ್ನು ತೋರಿಸಿದ್ದಾರೆ. ಸಮಯ ಬಂದಾಗ ಇದಕ್ಕೆ ಬೇಕಾದ ಸಾಕ್ಷಿಯನ್ನೂ ಕೊಡ್ತೇವೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಬಣ ಮಾತ್ರ ನಮ್ಮ ಸರ್ಕಾರವನ್ನು ಆಪರೇಷನ್ ಮಾಡಲು ಸಾಧ್ಯವೇ ಇಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದೆ.
ಶಾಸಕ ಗಣಿಗ ರವಿ ಹೇಳಿದ್ದೇನು..? ಉದ್ದೇಶ ಏನು..?
ದಾವಣಗೆರೆಯಲ್ಲಿ ಮಾತನಾಡಿರುವ ಮಂಡ್ಯ ಶಾಸಕ ಗಣಿಗ ರವಿಕುಮಾರ್, ಈ ಹಿಂದೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿದ್ದವರೇ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡುವ ಕೆಲಸ ಮಾಡುತ್ತಿದ್ದಾರೆ. ದೆಹಲಿಗೆ ಬನ್ನಿ ವಿಶೇಷ ವಿಮಾನ ಇದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿಸುವ ಭರವಸೆಯನ್ನೂ ನೀಡುತ್ತಿದ್ದಾರೆ. ಯಡಿಯೂರಪ್ಪ ಪಿಎ ಆಗಿದ್ದ ಎನ್.ಆರ್ ಸಂತೋಷ್ ಹಾಗು ನಮ್ಮ ಭಾಗದ ಒಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮೂಲಕ ಸಿ.ಪಿ ಯೋಗೇಶ್ವರ್ ಆಪರೇಷನ್ ಕಮಲದಲ್ಲಿ ಆಕ್ಟೀವ್ ಆಗಿದ್ದಾರೆ ಎಂದಿದ್ದಾರೆ. ನಮ್ಮವರು ಅಂದ್ರೆ ಕಾಂಗ್ರೆಸ್ನಿಂದ ಯಾರು ಹೋಗಲ್ಲ, ಆದರೂ ಬಿಜೆಪಿಗೆ ಬರುವಂತೆ ಕರೆಯಲು ಬಂದಿರುವ ವಿಡಿಯೋ, ಆಡಿಯೋ ಇದೆ ಅವುಗಳನ್ನ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡ್ತೇವೆ ಅಂತಾ ತಿಳಿಸಿದ್ದಾರೆ.
ಆಪರೇಷನ್ ಕಮಲ ಆಗಲ್ಲ.. ಆಪರೇಷನ್ ಮಾಡೋದು ಇಲ್ಲ..!
ಆಪರೇಷನ್ ಕಮಲದ ಬಗ್ಗೆ ಶಾಸಕ ಗಣಿಗ ರವಿ ಹೇಳಿಕೆ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಬಿಜೆಪಿಯವ್ರು ನಮ್ಮ ಪಕ್ಷದಿಂದ ಕೇವಲ ಐದು ಜನ ಶಾಸಕರನ್ನ ಕರೆದೊಯ್ಯಲು ಸಾದ್ಯವಿಲ್ಲ. ಏನು ಹುಡುಗಾಟನಾ ಇದು..? ನಮ್ಮಲ್ಲಿ 136 ಮಂದಿ ಶಾಸಕರು ಇದ್ದೀವಿ. ಆಪರೇಷನ್ ಉಲ್ಟಾ ಆಗಿದೆ. ಜೆಡಿಎಸ್, ಬಿಜೆಪಿಯಿಂದಲೇ ಕಾಂಗ್ರೆಸ್ಗೆ ಬರುವವ ಸಂಖ್ಯೆ ಜಾಸ್ತಿಯಾಗಿದೆ. ನಮ್ಮ ಐದು ಜನ ಶಾಸಕರನ್ನ ಮುಟ್ಟಿದ್ರೆ, ಬಿಜೆಪಿ, ಜೆಡಿಎಸ್ನಿಂದ ಹತ್ತು ಜನ ನಮ್ಮ ಕಡೆ ಬರ್ತಾರೆ ಎಂದು ಗುಟುರು ಹಾಕಿದ್ದಾರೆ. ಸ್ವತಃ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಕೂಡ ಶಾಸಕ ಗಣಿಗ ರವಿ ಅವರ ಆಪಾದನೆ ತಳ್ಳಿ ಹಾಕಿದ್ದಾರೆ. ಆ ರೀತಿ ಮಾಡೋಕೆ ಸಾಧ್ಯ ಇದೆಯಾ..? ನಾವೇನು ಆಪರೇಷನ್ ಮಾಡುವ ಅಗತ್ಯತೆ ಇಲ್ಲ. ಇವರು ಇವರೇ ಆಪರೇಟ್ ಮಾಡ್ಕೊತ್ತಿದ್ದಾರೆ. ಕಾಂಗ್ರೆಸ್ನವ್ರೇ ಆ ಸರ್ಕಾರದ ಸರ್ವನಾಶ ಮಾಡ್ಕೊತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಸಿಎಂ ಟೀಂನಿಂದ ಡಿಕೆ ಟೀಂಗೆ ಕೌಂಟರ್.. ದುಬೈ ಪ್ರವಾಸ
ಆಪರೇಷನ್ ಕಮಲ ಅನ್ನೋದೇ ಭೋಗಸ್ ಅನ್ನೋದು ಸಿಎಂ ಸಿದ್ದರಾಮಯ್ಯ ಟೀಂನ ಖಡಕ್ ಮಾತು. ಸಿದ್ದರಾಮಯ್ಯ ಟೀಂ ಬೆದರಿಸಲು ಡಿಕೆ ಶಿವಕುಮಾರ್ ಟೀಂ ಈ ರೀತಿ ಆಗಾಗ ಗುಮ್ಮ ಬಿಡುವ ಕೆಲಸ ಮಾಡುತ್ತೆ. ತಮ್ಮ ಬುಡಕ್ಕೆ ಏನಾದರು ಸಂಕಷ್ಟ ಬಂದಾಗ ಮಾಧ್ಯಮಗಳ ದಿಕ್ಕು ತಪ್ಪಿಸಲು ಈ ರೀತಿ ಹೇಳುತ್ತಾರೆ ಅನ್ನೋದು ಕಾಂಗ್ರೆಸ್ ಆಪ್ತ ಮೂಲಗಳ ಮಾಹಿತಿ. ಇನ್ನು ಬೆಳಗಾವಿ ವಿಚಾರದಲ್ಲಿ ಡಿಸಿಎಂ ಸಿಕೆ ಶಿವಕುಮಾರ್ ಹಸ್ತಕ್ಷೇಪ ಹಾಗು ಡಿ.ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಅಕ್ರಮಗಳ ಸರಮಾಲೆಯನ್ನೇ ಬಿಚ್ಚಿಟ್ಟ ಕಾರಣಕ್ಕೆ ಗಣಿಗ ರವಿ ಈ ರೀತಿ ಹೇಳಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಬೆಳಗಾವಿ ಹಸ್ತಕ್ಷೇಪ ವಿರೋಧಿಸಿರುವ ಸಚಿವ ಸತೀಶ್ ಜಾರಕಿಹೊಳಿ, ದುಬೈ ಪ್ರವಾಸ ಹೊರಟಿದ್ದಾರೆ ಎನ್ನಲಾಗ್ತಿದೆ. ಸಿಎಂ ಸಿದ್ದರಾಮಯ್ಯಗೂ ಈ ಬಗ್ಗೆ ಮಾಹಿತಿ ಇದ್ದು, ಆಪ್ತ ವಲಯದ ಈ ನಿರ್ಧಾರವನ್ನು ಮೌನದ ಮೂಲಕ ಸ್ವಾಗತಿಸಿದ್ದಾರೆ ಎನ್ನಲಾಗ್ತಿದೆ. ಯಾರೆಲ್ಲಾ ಹೋಗ್ತಿದ್ದಾರೆ. ಸರ್ಕಾರದಲ್ಲಿ ಸಿಎಂ ಕುರ್ಚಿಗೆ ಡಿ.ಕೆ ಶಿವಕುಮಾರ್ ಟವೆಲ್ ಹಾಕಿದ್ರೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು ಅಷ್ಟೆ.
ಕೃಷ್ಣಮಣಿ