ವರ್ತೂರು ಸಂತೋಷ್ ಬಂಧನದ ಬಳಿಕ ರಾಜ್ಯದಲ್ಲಿ ಹುಲಿ ಉಗುರು ಮಾಲೆ ಧರಿಸಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಹಲವು ಸೆಲೆಬ್ರಿಟಿಗಳು ಹುಲಿ ಚರ್ಮ ಧರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನಟ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ ಮೊದಲಾದವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ತಮ್ಮ ವಿರುದ್ಧ ಆರೋಪ ಕೇಳಿ ಬಂದ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ಅವರು ಈ ಆರೋಪವನ್ನು ನಿರಾಕರಿಸಿದ್ದು, ಅದು ಅಸಲಿ ಹುಲಿ ಉಗುರಲ್ಲ, ನಕಲಿ ಉಗುರು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, “ತಮ್ಮ ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ” ಎಂದಿದ್ದಾರೆ.
“ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೋರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.





