ನಾಡಹಬ್ಬ ಮೈಸೂರು ದಸರಾ 2023ರ ವೀಕ್ಷಣೆಗಾಗಿ ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗು ಸಾರ್ವಜನಿಕರ ಅನುಕೂಲಕ್ಕಾಗಿ ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಜಿಲ್ಲಾಡಳಿತ ಇಂದು ಬಿಡುಗಡೆ ಮಾಡಿದ್ದು, ಆನ್‌ಲೈನ್ ಮುಖಾಂತರ ಖರೀದಿ ಮಾಡಬಹುದಾಗಿದೆ.
ಗೋಲ್ಡ್ ಕಾರ್ಡ್ ಬೆಲೆ 6 ಸಾವಿರ ರೂ.ಗಳಾಗಿರುತ್ತದೆ. ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿ ಆನ್‌ಲೈನ್ ಮೂಲಕ ವೆಬ್ಸೈಟ್ನಲ್ಲಿ ಖರೀದಿಸಲು ಮಾತ್ರ ಅವಕಾಶವಿದೆ . ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ್ ಖರೀದಿಸಬಹುದು. ಅದೇ ರೀತಿ ದಿನಾಂಕ ಅ.24ರಂದು ’ದಸರಾ ಜಂಬೂಸವಾರಿ’ ಮತ್ತು ಪಂಜಿನ ಕವಾಯಿತು ವೀಕ್ಷಣೆಗೆ ಟಿಕೆಟ್ಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಬನ್ನಿ ಮಂಟಪದಲ್ಲಿ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ 500 ರೂ. ನಿಗದಿಪಡಿಸಲಾಗಿದೆ.
ಆನ್‌ಲೈನ್ ಮೂಲಕ ಗೋಲ್ಡ್ ಕಾರ್ಡ್, ಟಿಕೆಟ್ ಖರೀದಿಸಿದ ನಂತರ, ಖರೀದಿಸಿದವರಿಗೆ ಗೋಲ್ಡ್ ಕಾರ್ಡ್ ಟಿಕೆಟ್ ಸ್ವೀಕರಿಸುವ ಸ್ಥಳ, ದಿನಾಂಕ, ಸಮಯ ಹಾಗೂ ಇನ್ನಿತರೆ ಮಾಹಿತಿಗಳನ್ನು ಅವರ ಮೊಬೈಲಿಗೆ ಎಸ್‌ಎಂಎಸ್ ಮೂಲಕ ಮತ್ತು ಇ-ಮೇಲ್ ಐಡಿಗೆ ಕಳುಹಿಸಲಾಗುವುದು. ಅದಕ್ಕನುಸಾರವಾಗಿ ಖರೀದಿಸಿದವರು ಅವರ ಭಾವಚಿತ್ರವಿರುವ ಯಾವುದಾದರೂ ಒಂದು ಐಡಿ ಹಾಜರುಪಡಿಸಿ ಗೋಲ್ಡ್ ಕಾರ್ಡ್ ಟಿಕೆಟ್ ಪಡೆದುಕೊಳ್ಳಬಹುದಾಗಿದೆ. ಆನ್‌ಲೈನ್ ಹೊರತುಪಡಿಸಿ ಇತರೆ ಯಾವುದೇ ರೀತಿಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಮಾರಾಟ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

https://www.mysoredasara.gov.in/ ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ.






