ಬೆಂಗಳೂರು: ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು ಎಂದು ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಮನವಿ ಮಾಡಿದೆ. ಸರ್ಕಾರಿ ನೌಕರರಿಗೆ ಈಗಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆಲ್ಲಿ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಸಂಘ ಸಂಪೂರ್ಣ ವರದಿಯೊಂದಿಗೆ ಮನವಿ ಮಾಡಿದೆ. ಸಂಪೂರ್ಣ ಕಾರಣಗಳೊಂದಿಗೆ ಹಳೆಯ ಪಿಂಚಣಿ ಯೋಜನೆಯನ್ನು ಯಾಕೆ ಮುಂದುವರಿಸವೇಕು ಎನ್ನುವುದಕ್ಕೆ ಕಾರಣವನ್ನು ನೀಡಿದ್ದಾರೆ. 7ನೇ ವೇತನ ಆಯೋಗದ ವರದಿಯಲ್ಲಿ ಷೇರು ಮಾರುಕಟ್ಟೆ ಆಧಾರಿತ ರಾಷ್ಟ್ರೀಯ ಪಿಂಚಣಿ ಯೋಜನೆ ಯೋಜನೆಯನ್ನು ರದ್ದುಪಡಿಸಿ, ಈ ಹಿಂದೆ ಇದ್ದಂತೆ ನಿಶ್ಚಿತ ಪೆನ್‌ಷನ್ ಯೋಜನೆಯನ್ನು ಜಾರಿಗೆ ತರುವಂತೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ. ಸರ್ಕಾರವು ತನ್ನ ಖಾಯಂ ನೌಕರರಲ್ಲಿ ಪೆನ್ಷನ್ ಸಹಿತ ನೌಕರರು ನಿಶ್ಚಿತ ಪೆನ್‌ಷನ್ ಯೋಜನೆ ಅಡಿಯಲ್ಲಿ ಹಾಗೂ ನೌಕರರ ವಂತಿಗೆಯಿಂದ ರೂಪಿಸಿದ NPS ಅಡಿಯಲ್ಲಿ ಬರುವ ನೌಕರರು ಎಂಬ ಎರಡು ವರ್ಗಗಳನ್ನು 1/4/2006ರಿಂದ ಈಚೆಗೆ ನೇಮಕವಾದ ನೌಕರರಲ್ಲಿ ಸೃಷ್ಟಿಸಿದೆ ಎಂದು ವರದಿ ಹೇಳಿದೆ.

ನೌಕರರ ಇಳಿವಯಸ್ಸಿನ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿಯನ್ನು ಕೇಂದ್ರ ಸರ್ಕಾರವು 2004ರ ಜನವರಿ 1 ರಿಂದ ಹಾಗೂ ನಮ್ಮ ರಾಜ್ಯ ಸರ್ಕಾರವು 2006ರ ಏಪ್ರಿಲ್ 1 ರ ನಂತರ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ನಿಶ್ಚಿತ ಪಿಂಚಣಿ ಪದ್ಧತಿಯನ್ನು ರದ್ದು ಮಾಡಿತು. ನೂತನ ಪಿಂಚಣಿ ಯೋಜನೆಯಡಿ ನೌಕರರಿಗೆ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರನ ವೇತನದಿಂದ ಶೇ 10ರಷ್ಟನ್ನು ಕಡಿತ ಮಾಡಲಾಗುತ್ತಿದೆ., ಸರ್ಕಾರವು ಅದಕ್ಕೆ ಸಮಾನವಾದ ಮೊತ್ತವನ್ನು ವಂತಿಗೆ ರೂಪದಲ್ಲಿ ನೀಡುತ್ತದೆ. ಹಾಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಷೇರು ಪೇಟೆಯಲ್ಲಿ ಹೂಡಲಾಗುತ್ತಿದೆ. ಅಂದಾಜು 30-35 ವರ್ಷಗಳ ಸೇವೆಯ ನಂತರ ಅದರಿಂದ ಬಂದ ಲಾಭದಲ್ಲಿ ಈ ಹಣವನ್ನು ಉಪಯೋಗಿಸಿದ ಕಂಪನಿಗಳು ನೌಕರರಿಗೆ ಪಿಂಚಣಿಯನ್ನು ನೀಡುತ್ತವೆ. ಇದಕ್ಕಾಗಿ ಯಾವುದೇ ನಿರ್ದಿಷ್ಟ ಕಾನೂನುಗಳನ್ನು ರಚಿಸದೆ, ನೌಕರರ ಹಾಗೂ ಸರ್ಕಾರವು ತೊಡಗಿಸಿದ ಹಣಕ್ಕೆ ಯಾವುದೇ ಭದ್ರತೆ ನೀಡದೆ, ಈ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.